ಒಟ್ಟು ನೋಟಗಳು

Saturday, August 12, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 73
ಗುರು ಕೃಪಾಕಟಾಕ್ಷವೆಂದರೆ....... 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಫೋಟೋ ತೆಗೆದವರನ್ನು ಗುರುನಾಥರು ಕ್ಷಮಿಸಿದರು. ಆ ಹುಡುಗ ತಪ್ಪಾಯಿತೆಂದು ಗುರುನಾಥರ ಕಾಲಿಗೆ ಎರಗಿದ. ಎಲ್ಲ ಒಂದು ಕ್ಷಣದಲ್ಲಿ ಪ್ರಶಾಂತ ವಾತಾವರಣ ನಿರ್ಮಾಣವಾಯಿತಂತೆ. ಭಜನೆ ಎಂದರೆ ಗುರುನಾಥರಿಗೆ ಬಲುಪ್ರಿಯ. ಅದರಲ್ಲೂ ಶಂಕರಲಿಂಗ ಭಗವಾನರ ಬಗ್ಗೆ ಅವರ ಭಜನಾ ಮಂಡಳಿಯವರು ಮಾಡುವ ಭಜನೆಗಳೆಂದರೆ ಇನ್ನೂ ಪ್ರಿಯ. ಒಂದೊಂದೇ ಭಜನೆಗಳ ಹೆಸರು ಹೇಳಿ, ಗುರುನಾಥರು ಭಜನೆ ಮಾಡಿಸುತ್ತಿದ್ದರು. ಸಮಯ ಸರಿದದ್ದೇ ಯಾರಿಗೂ ತಿಳಿಯಲಿಲ್ಲವಂತೆ. ಗುರುಸಾನ್ನಿಧ್ಯವೇ ಅಂತಹುದಲ್ಲವಾ? 

"ಮುಂದೆ ಗುರುನಾಥರು ವೇದಾಂತದ ತಿರುಳನ್ನು ಸವಿವರವಾಗಿ ಎಲ್ಲರಿಗೆ ತಿಳಿಸಿದರು. ಗಂಡ ಎಂದರೇನು? ಹೆಂಡತಿ ಹೇಗಿರಬೇಕು? ಸಂಸಾರದಲ್ಲಿ ಮಕ್ಕಳನ್ನು ಹೇಗೆ ಪಾಲಿಸಬೇಕು? ಗುರು ಎಂದರೆ ಯಾರು? ಗುರುವಿನ ಸ್ಥಾನ ಎಂಭ ಮಹತ್ವದ್ದು ಎಂಬೆಲ್ಲಾ ವಿಚಾರಗಳನ್ನು ಎಳೆಎಳೆಯಾಗಿ ತಿಳಿಸಿದರು. ಬಹುಶಃ ಯಾವಾಗಲೂ ಗುರುನಾಥರನ್ನು ಭಕ್ತರು ಮುತ್ತಿರುತ್ತಿದ್ದುದನ್ನೇ ನಾನು ನೋಡಿದ್ದೆ. ಅಂದು ಮಾತ್ರ ಅವರು ಏಕಾಂಗಿಯಾಗಿದ್ದರು. ನಮಗಾಗಿಯೇ ಅವರು ಬಿಡುವು ಮಾಡಿಕೊಂಡು, ಕಾಯುತ್ತಿದ್ದರೇನೋ ಅನಿಸುವಂತಿತ್ತು. ಮುಂದೆ ಎಲ್ಲರಿಗೂ 'ದಂಪತಿಗಳೊಂದಿಗೆ ಬಂದು ನಮಸ್ಕರಿಸಲು ತಿಳಿಸಿದರು. ಯಾರು ದಂಪತಿ ಸಮೇತ ಬಂದಿಲ್ಲವೋ ಅವರು ನಮಸ್ಕರಿಸುವಂತಿಲ್ಲ' ಎಂದು ಬಿಟ್ಟರು. ನಾವೆಲ್ಲಾ ನಮಸ್ಕರಿಸಿದೆವು. ನನ್ನ ತಂಗಿ ಒಬ್ಬಳೇ ಬಂದಿದ್ದಳು. 'ಅಲ್ಲವ್ವಾ ನಿನ್ನ ಗಂಡನನ್ನು ಆಫೀಸಿಗೆ ಕಳಿಸಿ ನೀನೊಬ್ಬಳೇ ಬಂದಿದ್ದೀಯಲ್ಲಾ' ಎಂದರು. ನಂತರ ಅವಳಿಗೂ ನಮಸ್ಕಾರ ಮಾಡಲು ಹೇಳಿ ಆಶೀರ್ವದಿಸಿದರು. ಗುರುನಾಥರ ನುಡಿಗಳಲ್ಲಿ ಅನೇಕ ಬಾರಿ ಗಂಡ ಹೆಂಡಿರೊಂದಾಗಿ ಪುಣ್ಯ ಕೆಲಸ ಮಾಡಿದರೆ ಸಾರ್ಥಕ, ಎಂಬ ವಿಚಾರಗಳೂ, ಹಾಗೂ ಗಂಡನಿಗೆ ಹೇಳದೇ ಗುರುಸ್ಥಾನಕ್ಕೆ ಆಗಲಿ, ದೇವಾಲಯಕ್ಕೆ ಆಗಲಿ ಹೋಗುವುದು ಸರಿಯಲ್ಲ ಎಂಬ ಮಾತುಗಳು ಬಂದಿವೆ. ಬಹುಶಃ ಈ ಎಲ್ಲಾ ಮಾತುಗಳ ಆಶಯ, ಇಬ್ಬರ ಅನ್ಯೋನ್ಯತೆ ಬೆಳೆಸುವ, ಒಬ್ಬರಿಗೊಬ್ಬರು ಪೂರಕವಾಗಿ ಬಾಳಿ, ಜೀವನ ಉದ್ಧಾರ ಮಾಡಿಕೊಳ್ಳುವ - ಉದ್ದೇಶವೇ ಇದ್ದಿರಬಹುದೇನೋ, ಮುಂದೆ ನಮಗೆಲ್ಲಾ ಊಟದ ವ್ಯವಸ್ಥೆ ಮಾಡಿಸಿದರು. ಹೊಟ್ಟೆ ತುಂಬಾ ಊಟವಾಯಿತು. ಆದರೆ ಗುರುನಾಥರಿಗೆ ತೃಪ್ತಿಯಾಗಿರಲಿಲ್ಲವೇನೋ, ಎಲ್ಲಿಂದಲೋ ಇಡ್ಲಿ ತರಿಸಿ, ಎಲ್ಲರಿಗೂ ಬಡಿಸಿದರು. ಹೊಟ್ಟೆ ತುಂಬಿದ ಮೇಲೂ, ಅದೆಂತಹ ರುಚಿಯಾದ ಇಡ್ಲಿಗಳಾಗಿತ್ತೆಂದರೆ - ಪುನಃ ನಾವು ಈ ದಿನದವರೆಗೆ ಅಂತಹ ಇಡ್ಲಿ ತಿಂದಿಲ್ಲ. ಒಳ್ಳೆ ಸ್ಪಂಜಿನಂತೆ ಇತ್ತು ಆ ಇಡ್ಲಿ. ಅಂದಿನ ಗುರುಬೋಧನೆ - ಗುರುಪ್ರಸಾದ ಇಂದೂ ನೆನಪಿದೆ. ಇಷ್ಟೆಲ್ಲಾ ಆದ ಮೇಲೆ ಗುರುಗಳೇ ನಾವು ಹೋರಾಡುತ್ತೀವಿ - ಎಂದರೆ ಗುರುನಾಥರು ಒಪ್ಪಲಿಲ್ಲ. ಇರಿ... ಇರಿ.... ಎನ್ನುತ್ತಿದ್ದರು. 

ಅಷ್ಟರಲ್ಲಿ ಮಳೆ ಶುರುವಾಯಿತು. ಅದು ನಿಂತ ಮೇಲೆ ಮತ್ತೆ ಅವಲಕ್ಕಿ ತರಿಸಿ, ಗುರುನಾಥರೇ ಎಲ್ಲರಿಗೂ ಹಂಚಿಸಿದರು. ಅದೆಷ್ಟು ಕೊಟ್ಟರೂ, ಅವರಿಗೆ ತೃಪ್ತಿಯಾಗುತ್ತಿಲ್ಲ. ಹಾಗೆ ನಾವು ಅವರು ಕೊಟ್ಟಕೊಟ್ಟಂತೆ ಹೊಟ್ಟೆಗೆ ಇಳಿಸುತ್ತಿದ್ದೆವು. ನಾವು ಹೊರಡಲು ಅನುವಾದೆವು. ಗುರುನಾಥರು ಏನೋ ಕೈ ಹೀಗೆಂದರು. ನಾವಲ್ಲಿ ಇದ್ದವರೆಲ್ಲರಿಗೆ, ಟವೆಲು, ಪಂಚೆಗಳು, ಹೆಣ್ಣು ಮಕ್ಕಳಿಗೆ ಕುಂಕುಮ ಕುಪ್ಪುಸಗಳು ಬಂದವು. ಹೆಣ್ಣು ಮಕ್ಕಳ ಕೈಗೆ ಯಾರೋ ಹೂವು ಕೊಡಲು ಹೋದಾಗ - ಗುರುನಾಥರು 'ಹಾಗಲ್ಲ ನೀವೇ ಅವರಿಗೆ ಹೂವು ಮುಡಿಸಿ' ಎಂದರು. ಗುರುನಾಥರೆದುರು ನಡೆಯುತ್ತಿದ್ದ ಯಾವ ಕೆಲಸವೂ ಬೇಕಾಬಿಟ್ಟಿ ನಡೆಯುವಂತಿರಲಿಲ್ಲ. ಎಲ್ಲವೂ ನಿಷ್ಠೆಯಿಂದ, ಒಂದು ಪೂಜೆಯಂತೆ ನಡೆಯುತ್ತಿತ್ತು. ಇದನ್ನೆಲ್ಲಾ ನೋಡಿ ತಿಳಿಯುವುದು ಬಹಳವಿದೆ ಎಂದು ಅರಿವಾಯಿತು. ಸುಮಾರು ರಾತ್ರಿ ಒಂಭತ್ತೂವರೆಗೆ ನಾವು ಹೊರಡಲು ಅನುಮತಿ ಸಿಕ್ಕಿತು. 'ರಾಮದೇವರ ದರ್ಶನ ಮಾಡಿ ಹೋಗಿ' ಎಂದರು ಗುರುನಾಥರು. ಅಲ್ಲಿಂದ ಬೀಳ್ಕೊಂಡು ಗುರುಸ್ಮರಣೆ ನಾವು ಮಾಡುತ್ತಾ ಸಾಗಿದರೆ - ಗುರುನಾಥರೂ ನಮ್ಮ ಸ್ಮರಣೆಯಲ್ಲಿದ್ದರಂತೆ..... ಎಲ್ಲಿದ್ದೀರಿ... ಎಲ್ಲಿದ್ದೀರಿ' ಎಂದು ಸಖರಾಯಪಟ್ಟಣ ತಲುಪಿದಾಗ, ಬಾಣಾವರ, ಹೊಸದುರ್ಗ, ತಲುಪಿದಾಗಲೆಲ್ಲಾ ಫೋನು ಮಾಡುತ್ತಾ ನಮ್ಮ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದರು. ಬೆಳಗಿನ ನಾಲ್ಕೂ ನಾಲ್ಕೂವರೆಗೆಲ್ಲಾ ಚಿತ್ರದುರ್ಗ ತಲುಪಿ, ಸುಖವಾಗಿ ಬಂದು ತಲುಪಿದೆವೆಂದು ಫೋನು ಮಾಡಿದಾಗಲೂ ಗುರುನಾಥರೇ ರಿಸೀವ್ ಮಾಡಿದರು. ಅದೆಂತಹ ಪ್ರೀತಿ ಭಕ್ತಗಣದ ಮೇಲೆ, ಅದೆಂತಹ ರಕ್ಷಣೆ ತನ್ನನ್ನು ನಂಬಿದವರ ಮೇಲೆ ಗುರುನಾಥರದ್ದು? ಮುಂದೆ ಬೆಳಗಾದ ಮೇಲೆ ಪೇಪರ್ ಬಂತು. ಅದರಲ್ಲಿ ಕಂಡ ವಿಚಾರ ಓದಿ ಬೆರಗಾದೆವು. ನಾವು ಬಂದ ದಾರಿಯಲ್ಲೇ ದರೋಡೆಕೋರರು ಒಂದು ಕಾರನ್ನು ದೋಚಿ, ಪ್ರಯಾಣಿಕರಿಗೆ ತೊಂದರೆ ಮಾಡಿದ ವಿಚಾರವಿತ್ತು. ಗುರುನಾಥರು ಪದೇ ಪದೇ ವಿಚಾರಿಸಿ, ರಕ್ಷಣೆ ನೀಡುತ್ತಿದ್ದರು. ಕೃಪಾಕಟಾಕ್ಷದಲ್ಲೇ ಬದುಕುತ್ತಿರುವುದು" ಎನ್ನುತ್ತಾ ಮಾತು ನಿಲ್ಲಿಸಿ ಗುರುಸ್ಮರಣೆಯಲ್ಲಿ ಗುರುರಾಜರಾಯರು ತೊಡಗಿದರು. 

ಪ್ರಿಯ ನಿತ್ಯ ಸತ್ಸಂಗಾಭಿಮಾನಿಗಳೇ... ಗುರುನಾಥರದು ಅದೆಂತಹ ಪ್ರೀತಿ, ಜವಾಬ್ದಾರಿ ತಮ್ಮ ಶಿಷ್ಯರ ರಕ್ಷಣೆಗಾಗಿ ಬೇರೆಲ್ಲೂ ಇದು ದುರ್ಲಭವೇನೋ. ಇಂತಹ ಗುರುಚರಿತ್ರೆಯ ಅನೇಕ ಆಣಿಮುತ್ತುಗಳು - ಗುರುನಾಥ ಶಿಷ್ಯ ವೃಂದದ ಹೃದಯದೊಳಗೆ ಅದೆಷ್ಟಿದೆಯೋ ಲೆಕ್ಕವಿಲ್ಲ. ತಮ್ಮದನ್ನು ಬಿಟ್ಟುಕೊಡಲು ಗುರುನಾಥರ ಪ್ರೇರಣೆಯಾಗಬೇಕು. ಅದನ್ನಾಳಿಸಲೂ ನಮಗೂ ಭಾಗ್ಯವಿರಬೇಕು. ನಾಳೆ ಮತ್ಯಾವ ದಾನಿಗಳು ಅದೇನು ಮಹತ್ತನ್ನು ಹಂಚುವರೋ..... ತಪ್ಪದೆ ಬನ್ನಿ... ಗುರುಕೃಪಾಸಾಗರದ ದರ್ಶನ ಮಾಡೋಣ....... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment