ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 65
ರಾಮಣ್ಣನ ಕೂಗು... ಅವನು ಕಾಣಿಸಲ್ಲ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಮಾರನೆಯ ದಿನ ಬೆಳಿಗ್ಗೆ ಮತ್ತೆ ನಾನು ಗುರುಗಳು ಆಜ್ಞೆ ಮಾಡಿದ್ದರಿಂದ ಹೊಸನಗರದಿಂದ ಹೊರಟು ಸಖರಾಯಪಟ್ಟಣಕ್ಕೆ ಬಂದೆ. ಗುರುನಾಥರ ಮನೆಗೆ ಬಂದು ಅವರ ದರ್ಶನ ಪಡೆದು, ಅವರಿಗೊಂದು ನಮಸ್ಕಾರ ಮಾಡಿ ಹೊರಡುವುದು ನನ್ನ ಉದ್ದೇಶವಾಗಿತ್ತು. ಆದರೆ ಗುರುನಾಥರ ಮನೆಯ ತುಂಬಾ ಜನರಿದ್ದು, ಒಳ ಮನೆಯಲ್ಲಿ ಅದೇನೋ ಹೋಮ ನಡೆಯುತ್ತಿದ್ದಿರಬಹುದು. ಅದ್ಯಾರನ್ನೋ ಕೇಳಿದಾಗ ನೀವು ಒಳ ಹೋಗುವಂತಿಲ್ಲ. ಇಲ್ಲೇ ಕುಳಿತುಕೊಳ್ಳಿ ಗುರುಗಳು ಬರುತ್ತಾರೆಂದರು. ನನಗೇನು ಸುಮ್ಮನೆ ಕುಳಿತೇ ಒಂದರ್ಧ ಗಂಟೆಯಾಗಿರಬಹುದು. ಒಳ ಮನೆಯಿಂದ ಆ ಹೋಮದಲ್ಲಿ ಭಾಗವಹಿಸಿದವರೆಲ್ಲಾ ನಡು ಮನೆಗೆ ಬಂದರು. ಗುರುನಾಥರೂ ಸಹ ನಡುಮನೆಗೆ ಬಂದರು. ನಡುಮನೆಯ ತುಂಬೆಲ್ಲಾ ಏನೇನೋ ಹೊಸ ವಸ್ತುಗಳು ದವಸ ಧಾನ್ಯಗಳ ಚೀಲಗಳು, ಇತರೆ ವಸ್ತುಗಳು ಇದ್ದವು. ಗುರುನಾಥರು ಬಂದವರೇ ಒಬ್ಬೊಬ್ಬರನ್ನೇ ಕರೆದು ಬಾರಪ್ಪಾ ನೋಡು ಇದು ನಿಮ್ಮನೆಗೆ, ತೊಗೊಂಡು ಹೋಗಪ್ಪ... ಆ ಮೂಟೆ ಅವರಿಗೆ ಹೊರೆಸಿ, ಅಲ್ಲಿ ತನಕ ತಂದು ಕೊಡಿ ಎಂದು ಯಾರಿಗೋ ಹೇಳಿದರು. ಹೀಗೆ ಒಂದೊಂದು ವಸ್ತುವನ್ನು ಕೊಡತೊಡಗಿದರು. ಅಲ್ಲೊಂದೆರಡು ಕುರ್ಚಿಗಳಿತ್ತು. ಮತ್ಯಾರನ್ನೋ ಕರೆದರು. ಏ... ನೀನು ಈ ಕುರ್ಚಿ ತೊಗೊಂಡು ಹೋಗಪ್ಪ ನಿಮ್ಮನೆಗೆ ಎಂದರು. ಗುರುಗಳೇ ನಮ್ಮ ಮನೇಲಿದೆ... ಎಂದರೆ ನಿಮ್ಮನೇಲಿ ಇಲ್ಲ ಅಂತ ನಾನು ಕೊಡ್ತಿದ್ದಿನೇನಪ್ಪಾ.. ಇದನ್ನು ನೀನು ತೊಗೊಂಡು ಹೋಗಬೇಕು ಎಂದಾಗ ಅವರು ಅದನ್ನು ಹೇಗೆ ಒಯ್ಯುವುದು ಎಂದು ಚಿಂತಿಸುತ್ತಾ ನಿಂತಾಗ, ಗುರುನಾಥರೇ ಅಲ್ಲಿದ್ದವರೊಬ್ಬರಿಗೆ ಏಯ್ ಒಂದೆರಡು ಚಳ್ಳೇ ಹುರಿ ತೊಗೊಂಡು ಹೋಗಿ ಕಾರಿನ ಮೇಲೆ ಈ ಕುರ್ಚಿಗಳನ್ನಿಟ್ಟು ಸರಿಯಾಗಿ ಬಿಗಿದುಕಟ್ಟಿ ಕೊಡ್ರಪ್ಪಾ, ಮಧ್ಯೆ ಬಿದ್ದು ಹೋಗಬಾರದು ಎಂದು ಮತ್ಯಾರಿಗೋ ಹೇಳಿದರು. ಶ್ರೀ ರಾಮಚಂದ್ರ ಅಶ್ವಮೇಧ ಯಾಗ ಮಾಡಿದ ನಂತರ, ತನ್ನ ಬಳಿ ಇದ್ದಬದ್ದ ವಸ್ತುಗಳನ್ನೆಲ್ಲಾ ಅಲ್ಲಿದ್ದವರಿಗೆ ದಾನ ಮಾಡಿದಂತೆ.
ಗುರುನಾಥರು ಅಲ್ಲಿದ್ದ ವಸ್ತುಗಳನ್ನೆಲ್ಲಾ ತಮ್ಮ ಬಳಿ ಬಂದ ಆ ಭಕ್ತರಿಗೆಲ್ಲಾ ಕೊಟ್ಟು ಕೊಟ್ಟು ಕಳಿಸುತ್ತಿದ್ದರು. ಯಾವ ವಸ್ತು ಯಾರಿಗೆ ಕೊಟ್ಟರು, ಏಕೆ ಕೊಟ್ಟರು ಒಂದೂ ಲೆಕ್ಕವಿಲ್ಲದಂತೆ ಕೊಡುವುದೊಂದೇ ಸಾಗಿತ್ತು. ನಾನು ಅನೇಕ ಜನ ದಾನ ಧರ್ಮಗಳನ್ನು ಮಾಡುವುದನ್ನು ಕಂಡಿದ್ದೆ. ಆದರೆ ಈ ರೀತಿ ಅಲ್ಲಿದ್ದ ವಸ್ತುಗಳನ್ನೆಲ್ಲಾ ದಾನ ಮಾಡುವ ದಾನವೀರ ಶೂರ ಕರ್ಣನಂತೆ ಗುರುನಾಥರು ದಾನ ಮಾಡುತ್ತಿದ್ದುದನ್ನು ಕಂಡು ಬೆರಗಾಗಿದ್ದೆ. ಯಾರೂ ಏನೂ ಕೇಳುವಂತಿರಲಿಲ್ಲ. ಯಾರಿಗೆ ಏನು ಕೊಡ್ತಾರೋ ಮಹಾ ಪ್ರಸಾದವೆಂಬಂತೆ ಸ್ವೀಕರಿಸುತ್ತಿದ್ದರು. ಬಹುಶಃ ಅಲ್ಲಿದ್ದವರಿಗೆಲ್ಲಾ ಗುರುನಾಥರ ಈ ದಾನಪರತೆಯ ಅನುಭವ ಬಹಳ ದಿನಗಳಿಂದ ಕಂಡ ವಿಷಯವೇ ಆಗಿರಬೇಕು. ನನಗೆ ಮಾತ್ರ ಇದು ಹೊಸದು. ನಾನು ಗುರುನಾಥರ ಬಳಿ ಬಂದದ್ದು ಇದು ಎರಡನೆಯ ಬಾರಿ. ಒಮ್ಮೆ ಬಂದಾಗ ಊರ ತುಂಬಾ ಅವರ ಅದ್ದೂರಿಯ ವೈಭವ ಕಂಡಿದ್ದೆ. ಆದರೆ ಆ ವೈಭವಗಳಿಗೂ ತಮಗೂ ಏನೂ ಸಂಬಂಧವೇ ಇಲ್ಲವೆಂಬಂತೆ ಇದ್ದರು. ನಿನ್ನೆ ಇಂದು ಎಲ್ಲಾ ತೆಗೆತೆಗೆದು ದಾನ ಮಾಡುತ್ತಾ... ತಮಗೂ ಈ ವಸ್ತುಗಳಿಗೂ ಏನೂ ಸಂಬಂಧವಿಲ್ಲದಂತೆ ಇದ್ದ ನಿರ್ಲಿಪ್ತ ಭಾವದ ಗುರುನಾಥರನ್ನು ಕಾಣುವ ಸದವಕಾಶ ಹಾಗೂ ಹೇಗೆ ದಾನ ಮಾಡಬಹುದೆಂಬ ವಿಚಾರವನ್ನು ಕಂಡೆ. ಹತ್ತು ರೂಪಾಯಿ ನೀಡಿ ಐವತ್ತು ರೂಪಾಯಿಯ ಹೊಗಳಿಕೆ ಪ್ರಚಾರ ಪಡೆಯುವ ನಮ್ಮ ರೀತಿಗೂ ಗುರುನಾಥರ ರೀತಿಗೂ ಎಂತಹ ಅಜಗಜಾಂತರವಿದೆ ಎಂಬುದರ ಅರಿವಾಯಿತು. ಅಲ್ಲಿದ್ದುದೆಲ್ಲಾ ಖಾಲಿಯಾಯಿತು. ಏನೂ ಉಳಿಯಲಿಲ್ಲ. ಎಲ್ಲ ಖಾಲಿಯಾಯಿತು. ನಾನು ಕಾದಿದ್ದೆ. ಈ ಮಹಾದಾನ ಯಜ್ಞ ಮುಗಿದ ಮೇಲೆ ಹೋಗಿ ನಮಸ್ಕರಿಸಿದೆ. ಮತ್ತದೇ ಮಾತುಗಳು. 'ಈಗ ಏನೂ ಹೇಳಲ್ಲ ಕಣೋ.... ಇನ್ನೊಂದು ಸಾರಿ ಬರ್ತೀಯಪ್ಪಾ ನೀನು. ಈಗ ಏನೂ ಬೇಡ. ಮೊದಲು ಊಟ ಮಾಡಿರಿ. ಅಲ್ಲೇನು ಕೊಡ್ತಾರೋ ತೆಗೆದುಕೊಳ್ರಿ. ಆಮೇಲೆ ಮತ್ತೊಮ್ಮೆ ನೀನು ಬರ್ತಿಯಾಪ್ಪಾ.... ಆವಾಗ ಬಾಕಿ ಮಾತುಗಳು. ನಡಿ ಊಟ ಮಾಡು' ಅಲ್ಲಿದ್ದವರಿಗೆಲ್ಲಾ ಇದೆ ಆಜ್ಞೆ. ಸರಿ ನಾನಿನ್ನೇನು ಮಾಡಲು ಸಾಧ್ಯ. ಗುರುಪ್ರಸಾದ ಸೇವಿಸಿ, ಗುರುನಾಥರಿಗೆ ನಮಸ್ಕರಿಸಿ ಅಲ್ಲಿಂದು ಹೊರಟು ಬಿಟ್ಟೆ. ನಿನ್ನೆ ನೋಡಿದರೆ ನಾಳೆ ಬಾ ಎಂದರು. ಇವತ್ತು ನೋಡಿದರೆ ಇನ್ನೊಂದು ಸಲ ಎನ್ನುತ್ತಿದ್ದಾರಲ್ಲ, ಗುರುಚಿತ್ತವೆಂದು ಸುಮ್ಮನಾಗಿ ಬಿಟ್ಟೆ" ಎಂದು ತಮ್ಮ ಅನುಭವವನ್ನು ಅಶೋಕ್ ಹೇಳಿದರು.
ಒಂದು ಹತ್ತು ದಿನಗಳಾದ ಮೇಲೆ ಅಶೋಕ್ ಅವರಿಗೆ ಗುರುನಾಥರನ್ನು ಕಾಣುವ ಅವಕಾಶ ಸಿಕ್ಕಿತಂತೆ. ನಮಸ್ಕಾರ ಮಾಡಿದರೆ, ಕುಳಿತುಕೊಳ್ಳಲು ಹೇಳಿದರು. ಅದ್ಯಾರೋ ಒಂದಿಷ್ಟು ದೋಸೆ ಪ್ಯಾಕೆಟ್ ತಂದರಂತೆ. ಗುರುನಾಥರಿಗೆ ಕೊಟ್ಟಾಗ ನಾನು ತಿನ್ನುತ್ತೀನಾ... ಮುಟ್ಟಿದ್ದೀನಿ. ಎಲ್ಲರಿಗೂ ಕೊಡಪ್ಪಾ ಎಂದರು. ಎಲ್ಲರಿಗೂ ಹಂಚಿ ಒಂದು ಪ್ಯಾಕೆಟ್ ಉಳಿದಾಗ ಗುರುಗಳಿಗೆ ಕೊಟ್ಟರೆ, ಇನ್ನೊಬ್ಬರಿಗೆ ಕೊಟ್ಟಿಲ್ಲಾ ನೋಡು ಎಂದರು. ದೋಸೆ ತಂದವರು ಎಲ್ಲರಿಗೂ ಕೊಟ್ಟಾಯಿತು ಗುರುಗಳೇ ಇದು ನಿಮಗೆ ಎಂದಾಗ ಅಶೋಕ್ ಗೆ ಹೇಳಿದರಂತೆ. ರಾಮಣ್ಣನಿಗೆ ಕೊಟ್ಟಿಲ್ಲ, ಅವನಿಗೆ ಕೊಡಿ, ಅವನು ಕಾಣಿಸಲ್ಲಪ್ಪಾ, ಕೂಗಿ ಕರೀಬೇಕು ಎಂದರಂತೆ. ಅಶೋಕ್ ಹೊರ ಬಂದು ಯಾರಪ್ಪಾ ರಾಮಣ್ಣ ರಾಮಣ್ಣ ಯಾರು? ಎಂದು ಕೂಗಿದಾಗ ಒಬ್ಬ ನಾನು ರಾಮಣ್ಣ ಗುರುವೇ ಏನಾಗಬೇಕಾಗಿತ್ತು ಎಂದು ಬಂದನಂತೆ. ನಾನು ಗುರುವಲ್ಲಪ್ಪಾ, ಗುರುನಾಥರು ಒಳಗಿದ್ದರೆ ಬಾ ಎಂದು ಕರೆದಾಗ ಆತನಿಗೆ ಆ ದೋಸೆ ಪ್ಯಾಕೆಟ್ ಸೇರಿತು. ಎಲ್ಲರೂ ದೋಸೆ ಪ್ರಸಾದವನ್ನು ಸ್ವೀಕರಿಸಿದರು.
ನನ್ನ ಸರದಿ ಬಂತು. ಒಂದು ಕರ್ಚೀಪು ಉಡುದಾರ ತರಲು ಹೇಳಿದರು. ತಂದು ಕೊಟ್ಟೆ. ಅದನ್ನು ಮಂತ್ರಿಸಿ ಕೊಟ್ಟು ನೀನು ಸ್ಮಶಾನದಲ್ಲಿ ಬೇಕಾದರೂ ಇರು, ನಿನಗೇನೂ ಆಗಲ್ಲ ನಡಿ ನಿಂದು ಆಯಿತು, ಎಂದು ಅನುಗ್ರಹಿಸಿ ಕಳಿಸಿಬಿಟ್ಟರು. ಗುರುನಾಥರ ಭೇಟಿ ಮೂರಕ್ಕೆ ಮುಕ್ತಾಯವಾದರೂ ಸದಾ ನನ್ನ ಮನಸ್ಸಿನಲ್ಲಿ ಗುರುನಾಥರ ಶಂಕರಲಿಂಗಪ್ಪನ ಸ್ಮರಣೆ ನಡೆಯುತ್ತಲೇ ಇದೆ ಎಂದು ಧನ್ಯತೆಯಿಂದ ಸ್ಮರಿಸುತ್ತಾರೆ ಹಿರೇಗುಂಟೂರಿನ ಅಶೋಕ್ ಅವರು.
ಗುರುಬಂಧುಗಳೇ ಗುರುನಾಥರ ಮಾತನ್ನಿಲ್ಲಿ ನೋಡಿ, ರಾಮಣ್ಣನಿಗೆ ಕೊಡು ಅವನು ಕಾಣಲ್ಲ ಅವನ ಹೆಸರು ಹಿಡಿದು ಕೂಗಪ್ಪಾ ಎನ್ನುತ್ತಾ ರಾಮನಾಮ ಜಪಿಸೆಂದರೆ ತಮ್ಮ ಭಕ್ತನಿಗೆ? ಎಲ್ಲಾ ಗುರುನಾಥರೇ ಬಲ್ಲರು. ನಿತ್ಯ ಸತ್ಸಂಗಾಭಿಮಾನಿಗಳೇ ನಾಳೆಯೂ ಬರುವಿರಲ್ಲಾ... ಗುರುಗೋಪ್ಯ ಎಂದರೆ ಇದೇ ಏನು? ಗುರುನಾಥರ ಒಂದೊಂದು ಮಾತನ್ನೂ ಭಕ್ತಿಯಿಂದ ಸೂಕ್ಷ್ಮವಾಗಿ ನೋಡಿದರೆ ಅಗಾಧವಾದದ್ದೇ ಅದರಲ್ಲಿ ಇರುತ್ತದೆ. ಇದನ್ನು ಅರಿಯಲೂ ಗುರುನಾಥರೇ ಮತಿ ನೀಡಬೇಕು. ಅದಕ್ಕೇ ಹೇಳುವುದು ನೀನೆ ಮತಿ, ನೀನೆ ಗತಿ, ನೀನೆ ಸ್ವಾಮಿ ಎಂದು.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment