ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 62
ಅನಂತ ಶಯನನ ಕಂಡೆ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ನಾಗರಾಜರಿಂದ ಕೆಲ ಗಂಟೆಗಳ ಕೆಳಗೆ ದೂರ ಓಡುತ್ತಿದ್ದ, ಅವರನ್ನು ಬೈಯುತ್ತಿದ್ದ ಗುರುನಾಥರು ಕರುಣಾಮೂರ್ತಿಯಾಗಿ ಒಲಿದು ಬಿಟ್ಟಿದ್ದರು. ಅವರ ಪರೀಕ್ಷೆಗಳಲ್ಲಿ ನಾಗರಾಜರ ತಾಳ್ಮೆ, ಭಕ್ತಿ, ಸಹನೆಗಳು ಅವರನ್ನು ಗೆಲ್ಲಿಸಿತ್ತು. ಅದಕ್ಕೆ ಹೊಟ್ಟೆ ತುಂಬಾ ಊಟ ನೀಡಿ, ಕಣ್ತುಂಬಾ ಮಲಗಲು ತಿಳಿಸಿದರು. ಯಾರಿಗೇ ಸುಖ... ಅದೂ ಗುರುನಾಥರನ್ನು ಕಂಡ ಮೊದಲ ಭೇಟಿಯಲ್ಲಿ, ಮೈಕೈಗಳು ಮುಳ್ಳಿನ ಕಂಟಿಯಿಂದ ತರಚಿ ಗಾಯವಾದರೇನು ಮತ್ಯಾವುದೋ ಅವಘಡವನ್ನು ಈ ರೀತಿ ಸರಳ ನೋವಿನಲ್ಲಿ ಗುರುನಾಥರ ಕರುಣೆ ದೂರ ಮಾಡಿತ್ತು. ಗುರುನಾಥರು ಒಂದು ಹತ್ತು ನಿಮಿಷ ಸಿಗುವುದೇ ಅನೇಕರಿಗೆ ದುರ್ಲಭವಾದದ್ದಿದೆ. ಇವರಿಗೆ ಗಂಟೆಗಟ್ಟಲೇ ಅವರ ಹಿಂದೆ ಅನೇಕ ದೇವತೆಗಳ ದರ್ಶನ ಮಾಡುತ್ತಾ ಸಾಗುವ ಭಾಗ್ಯ ಸಿಕ್ಕಿತು. ಇದಕ್ಕೆ ಗುರು ಮಮತಾಮಯಿ ಎನ್ನುವುದೇನೋ? ಏನಾದರೂ ಆಗಲೆಂದು ಒಂದು ಪರಿಶುದ್ಧ ಮನದಲ್ಲಿ ಪೂರ್ಣ ಒಪ್ಪಿಸಿಕೊಂಡರೆ ಎಲ್ಲ ಕೆಲ ಘಳಿಗೆಯಲ್ಲೇ ಆಗುವ, ಮಾಡಿಸುವ ಶಕ್ತಿ, ಪ್ರೀತಿ... ಗುರುನಾಥರದಲ್ಲವೇ?.... ನಾಗರಾಜರ ಮುಂದಿನ ಕಥೆ ಏನೆಂದು ಆಲಿಸೋಣ.
"ಮಧ್ಯಾನ್ಹ ಕಳೆಯುತ್ತಿತ್ತು. ಅನೇಕ ಜನ ಆಗಲೇ ಮನೆ ಒಳಗೆ ಬಂದು ಕುಳಿತಿದ್ದರು. ನನಗೆ ಮುಜುಗರವಾಗಿ ಎದ್ದುಬಿಟ್ಟೆ. ಗುರುನಾಥರು ಎಲ್ಲಿ? ಎಂದು ಸುತ್ತಮುತ್ತ ನೋಡಿದರೆ ಎಲ್ಲೂ ಇಲ್ಲ. ಕೊನೆಗೆ ಅದೇಕೋ ಹಿತ್ತಲಿಗೆ ಹೋಗಿ ಕೊಟ್ಟಿಗೆಯಲ್ಲಿ ನೋಡಿದರೆ ಅನಂತ ಶಯನನಂತೆ ಏನು ಅನಂತಶಯನನಾಗಿಯೇ ಗುರುನಾಥರು ಪವಡಿಸಿದ್ದರು. ಹುಲ್ಲು ಕಸಗಳ ಪರಿವೆ ಇಲ್ಲ, ಸಗಣಿ ಗಂಜಲಗಳ ಮುಜುಗರವಿಲ್ಲ. ಅರವತ್ತನಾಲ್ಕು ಕೋಟಿ ದೇವತೆಗಳನ್ನೇ ತನ್ನ ಒಡಲೊಳಗೆ ಇಟ್ಟುಕೊಂಡ ಆ ಗೋಮಾತೆಯ ಜಾಗ ಗುರುನಾಥರಿಗೆ ಸ್ವರ್ಗತುಲ್ಯವೇನೋ ಎಂಬಂತೆ ನಿಶ್ಚಿಂತರಾಗಿ ಸುಖ ನಿದ್ರೆ ತಂದಿತ್ತು. ನಾನು ಹೋಗಿ ನಿಂತು ಕೈಮುಗಿದೆ. 'ಏನಯ್ಯಾ ಎದ್ದುಬಿಟ್ಟೆಯಾ ಇಷ್ಟು ಬೇಗ ಹೋಗಬೇಕಾ, ತಾಳು ಬಂದೆ ಎಂದು ಹೇಳಿ, 'ನೀನು ಶಂಕರಲಿಂಗನನ್ನು ಬಿಡಬೇಡ. ಅವನನ್ನು ಬಿಗಿಯಾಗಿ ಹಿಡಿ. ನಾನೂ ಅಲ್ಲಿಗೆ ಬರ್ತೀನಿ' ಎಂದು ಹೇಳಿ ಕೈಯಲ್ಲಿ ಆರಿಸಿದ ಸಮಿತ್ತುಗಳನ್ನು, ನಾನು ತಂದುಕೊಟ್ಟ ದಾರದಿಂದ ಸುತ್ತುತ್ತಾ, ಅದೇನೋ ಮಂತ್ರ ಜಪಿಸಿದರು. ಮತ್ತೆ ನನ್ನ ಕೈಯಲ್ಲಿ ಒಂದು ಕೊಳಲನ್ನು ತರಿಸಿ, ಅದನ್ನೂ ಮಂತ್ರಿಸಿ, ನನಗೆ ಕೊಡುತ್ತಾ ಇವನ್ನೆಲ್ಲ ಮನೆಯಲ್ಲಿ ಇಟ್ಟುಕೋ, ಎಲ್ಲಾ ಒಳ್ಳೆಯದಾಗುತ್ತದೆ. ನಿನ್ನ ಕಷ್ಟ ತಾಪತ್ರಯಗಳನ್ನೆಲ್ಲಾ ನೀನೇನೂ ಹೇಳುವುದು ಬೇಡ. ನನಗೆಲ್ಲಾ ಗೊತ್ತಿದೆ... ಎಲ್ಲ ಸರಿಯಾಗುತ್ತದೆ. ಊರಿಗೆ ಸುಖವಾಗಿ ಹೋಗಿ ಬಾ' ಎಂದರು. ದೊಡ್ಡ ಹೊರೆಯನ್ನು ಹೊತ್ತಿದಂತಿರುತ್ತಿದ್ದ ನನ್ನ ಮನಸ್ಸು ನನ್ನ ಜೀವನ ಗುರುನಾಥರ ಈ ದರ್ಶನದಿಂದ ಆನಂದಮಯವಾಯಿತು. ಈಗಾಗಲೇ ಹದಿನೆಂಟು ಇಪ್ಪತ್ತು ವರ್ಷಗಳೇ ಕಳೆದಿರಬಹುದು. ಗುರುನಾಥರಿಗೆ ಎಷ್ಟು ಋಣಿಯಾಗಿದ್ದರೂ ಕಡಿಮೆಯೇ" ಎನ್ನುತ್ತಾರೆ ನಾಗರಾಜ್.
ಮುಂದೆ ಇದೇ ರೀತಿ ಗುರುನಾಥರ ಸಂಪರ್ಕ ಸಂದರ್ಶನಗಳು ಈ ಭಕ್ತರಿಗೆ ಆಗುತ್ತಿತ್ತು. ಚಿಕ್ಕಮಗಳೂರಿಗೆ ಒಮ್ಮೆ ಇವರು ಹೆಂಡತಿಯೊಂದಿಗೆ ಹೋಗಿದ್ದರು. ಅವರ ಚಿಕ್ಕಮ್ಮನ ಮನೆಯಲ್ಲಿ ಅದ್ಯಾವುದೋ ಸಮಾರಂಭ. ಸಮಾರಂಭದಲ್ಲಿ ಎರಡು ಬೆಳ್ಳಿಯ ದೀಪಗಳನ್ನು ಅವರು ಬಳುವಳಿಯಾಗಿ ನೀಡಿದ್ದರು. ಚಿಕ್ಕಮಗಳೂರಿನಿಂದ ಸಖರಾಯಪಟ್ಟಣಕ್ಕೆ ಬಂದು, ಬಸ್ ಸ್ಟ್ಯಾಂಡಿನ ಒಂದು ಅಂಗಡಿಯಲ್ಲಿ ಚೀಲವನ್ನಿಟ್ಟು, ಗುರುನಾಥರಿಗೆಂದು ಬಂದರಂತೆ. ಒಳಗೆ ಬರುತ್ತಿದ್ದಂತೆ, ಗುರುನಾಥರ ದರ್ಶನವಾಯಿತು. ಈ ಸಾರಿ ಆದರದಿಂದ ಸ್ವಾಗತಿಸಿದ ಗುರುನಾಥರು 'ಓಹೋ ಹೋಳಿಗೆಯನ್ನು ಮಾಡಿಕೊಂಡು ತಂದಿದ್ದೀಯಾ? ಎಂದು ಪ್ರೀತಿಯಿಂದ ತೆಗೆದುಕೊಂಡು ಅಲ್ಲಿದ್ದವರಿಗೆಲ್ಲಾ ನೀಡಲು ಹೇಳಿ ತಾವೂ ಒಂದು ಚೂರು ತಿಂದು ಸಂತೃಪ್ತರಾಗಿ 'ಅಲ್ಲಯ್ಯಾ, ಚೀಲವನ್ನು ಇಲ್ಲಿಗೆ ತರದೇ ಅಂಗಡಿಯಲ್ಲಿಟ್ಟು ಬಂದೆಯಲ್ಲಾ ಹೋಯ್ತು ಬಿಡು ಎಂದರು. ಏನು ಎಂದು ಇವರಿಗೆ ಅರಿವಾಗದೇ ಇದ್ದಾಗ, ಅಲ್ಲಯ್ಯಾ, ನಿಮಗೆ ಅವರು ಯಾರೋ ಬೆಳ್ಳಿಯ ದೀಪ ನೀಡಿದ್ದರಲ್ಲ ಅದು ಹೋಯಿತು ನಿನಗೆ ಸಿಗಲ್ಲ ಮತ್ತೆ ಹೋಗಿ ಪರದಾಡಬೇಡ ಎಂದು ಸಮಾಧಾನ ಪಡಿಸಿದರಂತೆ. ಅಲ್ಲಿ ಹೋಗಿ ನೋಡಿದಾಗ, ಚೀಲವಿತ್ತು. ಚೀಲದ ಒಳಗಿನ ಬೆಳ್ಳಿಯ ದೀಪಗಳು ಮಾತ್ರ ಇರಲಿಲ್ಲವಂತೆ.
ಮೊದಲ ಬಾರಿ ನಾಗರಾಜ್ ಗುರುನಾಥರ ದರ್ಶನ ಮಾಡಿ ವಾಪಸ್ಸು ಊರಿಗೆ ಹೊರಡಲು ಸಿದ್ಧವಾಗಿದ್ದಾರೆ. ಜೇಬಿನಲ್ಲಿ ಬರೀ ಏಳು ರೂಪಾಯಿ ಇದೆ. ಧ್ಯಾಸವಿಲ್ಲವೋ, ಕೆಲವು ಸಂಕೋಚವೋ? ಬಸ್ ಸ್ಟ್ಯಾಂಡ್ ಕಡೆ ಹೊರಟ ಇವರನ್ನು ಯಾರೋ ಕರೆದಂತಾದಾಗ... ತಿರುಗಿ ನೋಡಿದರೆ ಗುರುನಾಥರು, ತಲೆಯ ಮೇಲೊಂದು ಪ್ರೀತಿಯಿಂದ ಮೊಟಕಿ 'ಅಲ್ಲಯ್ಯಾ ಜೇಬಿನಲ್ಲಿ ದುಡ್ಡಿಲ್ಲದೇ ಹೆಂಗೆ ಹೋಗುತ್ತಿ. ಟ್ರೈನ್ ಸಮಯ ಬೇರೆ ಆಗಿದೆ... ತಗೋ ಐವತ್ತು ಎಂದು ಪ್ರೀತಿಯಿಂದ ನೀಡಿದ್ದರಂತೆ. ಅದ್ಯಾರೋ ಉತ್ಸವ ಮಾಡಬೇಕೆಂದು ಮಾತನಾಡುತ್ತಿದ್ದಾಗ ಗುರುನಾಥರ ಕೈ ಸೊಂಟದ ಕಡೆಗೆ ಸಾಗಿತು. ನೋಟಿನ ಕಂತೆಯೊಂದನ್ನು ತೆಗೆದು ಕೊಟ್ಟುಬಿಟ್ಟರಂತೆ... ನಾಗರಾಜರಿಗೆ ಒಂದೇ ಚಿಂತೆ ಎಲ್ಲಿತ್ತೀ ಹಣ... ಎಲ್ಲಿಂದ ಬಂತು? ನನ್ನ ಬಳಿ ಹಣವಿಲ್ಲದ್ದು ಹೇಗೆ ತಿಳಿಯಿತು. ಗುರುನಾಥರ ಮಹಿಮೆ ಅರ್ಥವಾಗುತ್ತಾ ಹೋದಂತೆ ಸಮರ್ಥ ಗುರುವಿಗೆ ಅದೇನು ತಿಳಿಯದ್ದಿದ್ದೆ? ವಿಶ್ವಾತ್ಮನಾದ ಗುರುನಾಥರಿಗೆ ಯಾರ ನೋವು ತಿಳಿಯದೆ ಇರುತ್ತದೆ ಹೇಳಿ.... ಪ್ರಿಯ ಗುರುಬಂಧು ಸತ್ಸಂಗಾಭಿಮಾನಿಗಳೇ... ನಾಳೆಯೂ ಬನ್ನಿರಿ ಗುರುಕಥಾಕ್ಕೆ.... ಮತ್ತೆ ಭೇಟಿಯಾಗೋಣ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment