ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 68
ಮಹಾನವಮಿಯ ಅನುಭವ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಮತ್ತೊಮ್ಮೆ ಒಬ್ಬ ಭಕ್ತರಾದ ಗಣೇಶಣ್ಣನವರು ಸಖರಾಯಪಟ್ಟಣಕ್ಕೆ ಹೋದರು. ಈ ಸಾರಿ ಅವರು ಸಖರಾಯಪಟ್ಟಣಕ್ಕೆ ಹೊರಟಾಗ ತುಂಬಾ ಉದ್ವಿಗ್ನರಾಗಿದ್ದರು. ಅವರು ಕೇಳಿದ ಸುದ್ದಿ ಅವರನ್ನು ತಲ್ಲಣಗೊಳಿಸಿತ್ತು. ನಂಬಲಾದಂತೆ ಆಗಿಸಿತ್ತು. ಮನೋವೇಗದಲ್ಲಿ ಹೋಗಬಯಸಿದರೂ ಕ್ಷಣಗಳು ಯುಗಗಳಾದಂತೆ ಅನಿಸುತ್ತಿತ್ತು. ಅಂತೂ ಅವರು ಸಖರಾಯಪಟ್ಟಣ ತಲುಪಿದಾಗ, ಅವರಿಗಾದ ಅನುಭವಗಳು ಹೇಗಿತ್ತೆಂದರೆ....
'ಶರಣರಿಗೆ ಮರಣವೇ ಮಹಾನವಮಿ ಎಂಬ ಮಾತನ್ನು ಕೇಳಿದ್ದೆನಾದರೂ ಕಂಡಿರಲಿಲ್ಲ, ಇಲ್ಲಿ ಕಂಡಂತಾಯಿತು. ನಾವು ಗುರುನಾಥರ ಇಹಲೀಲೆ ಸಮಾಪ್ತ ಮಾಡಿದ ವಿಚಾರ ಕೇಳಿ ದುಃಖಿತರಾಗಿ ಧಾವಿಸಿ, ಇಲ್ಲಿಗೆ ಬಂದಿದ್ದೆವು. ಸಾವಿನ ಮನೆಯಲ್ಲಿ ಅಳಬಾರದು ಎಂಬ ಮಾತಿದ್ದರೂ ಅಳುವುದನ್ನು ತಡೆಯುವುದು ಅಸಾಧ್ಯ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಗುರುನಾಥರ ಭಕ್ತವೃಂದ ಧಾವಿಸಿ ಬರುತ್ತಿತ್ತು. ಮಳೆಯ ಅಡೆತಡೆಗಳನ್ನೂ ಲೆಕ್ಕಿಸಿದಂತಿರಲಿಲ್ಲ. ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಭಜನೆ, ಸಂಕೀರ್ತನ, ರುದ್ರಾಭಿಷೇಕ, ಅನ್ನದಾನ... ಒಂದೇ ಎರಡೇ ಎಲ್ಲವೂ, ಮರಣದಲ್ಲೂ ಮಹಾನವಮಿಯನ್ನು ತಂದಿಟ್ಟಿತು. ನಮ್ಮ ಕಡೆಯಲ್ಲಿ ಹೆಂಗಸರು, ಮಕ್ಕಳು ದಹನ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಇಲ್ಲಿ ಗುರುನಾಥರ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಅವರೇ ಅಧಿಕವಾಗಿದ್ದರು. ಯಾರಿಗೂ ಒಂದಿಷ್ಟೂ ಅಳುಕಿಲ್ಲ, ಭಯವಿಲ್ಲ, ಎಲ್ಲರಲ್ಲಿ ಕಂಡು ಬರುತ್ತಿದ್ದುದು ಗುರುನಾಥರ ಪ್ರೇಮಮಯ ಭಾವ ಒಂದೇ. ಆ ಹಸಿರು ತೋಟದ ನಡುವೆ, ಅಡಿಕೆಯ ತೋಟದಲ್ಲಿ ಕಂಡು ಬರುವ ಅಡಿಕೆ ಕಂಬಗಳಿಗಿಂತ ಅಧಿಕ ಜನ ಭಕ್ತರು ನೆರೆದಿದ್ದರು. ಗುರುನಾಥರ ವಿಯೋಗದ ನೋವು ಅಳಿಸಿ, ಅಳಿಸಿ, ಭಕ್ತರ ಕಣ್ಣೆರನ್ನು ಬತ್ತಿಸಿತ್ತೋ, ಅವಿನಾಶಿ ಗುರುನಾಥರಿಗೆಂತ ಸಾವು? ಗುರುವೆಂದರೆ ಭಾವವೇ ಹೊರತು ದೇಹವಲ್ಲ ಎಂಬ ಗುರುನಾಥರ ವಚನಗಳನ್ನು ಉಪದೇಶವನ್ನು ಪದೇ ಪದೇ ಕೇಳಿದ ಭಕ್ತರ ಮನಸ್ಸು ಗಟ್ಟಿಯಾಗಿತ್ತೋ ಎಲ್ಲವನ್ನೂ ಗುರುನಾಥರೇ ಬಲ್ಲರು. ನಮಗಂತೂ ಗುರುನಾಥರನ್ನು ಕಾಣಲು ಹೋದಾಗಲೆಲ್ಲಾ ಒಂದು ರೀತಿ ಪಾಠ ಸಿಗುತ್ತಿತ್ತು. ಈ ಸಾರಿ ಭಕ್ತವತ್ಸಲ ಜೀವನವೆಂದರೆ ಇಷ್ಟೇ ಎಂಬುದನ್ನು ತೋರಿಸಿದರೋ, ರೋಗಿಯಾದವನಿಗೆ ಎಲ್ಲವೂ ಒಂದೇ. ನಿರಂತರ ಆತ್ಮಾನಂದದಲ್ಲಿರುವವನಿಗೆ ಅಂತ್ಯವೆಲ್ಲಿ? ಅದರಲ್ಲಿ ಅವನಿಗೆ ಅವನನ್ನು ನಂಬಿದವರಿಗೆ ದುಃಖವೆಲ್ಲಿ? ಎಂದು ಪ್ರಶ್ನಿಸಲು ಈ ಲೀಲೆ ಮಾಡಿದರೋ ತಿಳಿಯಲಿಲ್ಲ. ನಾವೂ ಆ ಮಹಾ ಯಜ್ಞದಲ್ಲಿ ಭಾಗಿಯಾದೆವು. ಮಡಿ ಮೈಲಿಗೆಯ ವಿಚಾರದ ಬಗ್ಗೆ ಗುರುನಾಥರ ಅನಿಸಿಕೆಗಳೇ ಬೇರೆ. ಮರಣವು ಮಹಾನವಮಿಯಾಗಿ ಮಾರ್ಪಟ್ಟಿದ್ದರಿಂದ ರುದ್ರಾಭಿಷೇಕವಾದುದರಿಂದ ನಾವು ಸ್ನಾನ ಮಾಡಲಿಲ್ಲ. ಶುಭ ಕಾರ್ಯ ಒಂದರಲ್ಲಿ, ಮಹಾಯಜ್ಞ ಒಂದರಲ್ಲಿ ಭಾಗಿಗಳಾದ ಭಾಗ್ಯ ನಮ್ಮದಾಗಿತ್ತು. ಅಂತಹ ಭಾಗ್ಯ ಅದೆಷ್ಟು ಜನರಿಗೆ ಲಭ್ಯ? ಹೇಳುವವರ ಕಣ್ಣಲ್ಲಿ ನೀರು ಕಂಡಿತು. ಅದು ಆನಂದಾಶ್ರುವೋ... ಅಶ್ರುತರ್ಪಣವೋ ಬಲ್ಲವರಾರು?
ಪ್ರಿಯ ಗುರುಬಾಂಧವ ನಿತ್ಯ ಸತ್ಸಂಗಾಭಿಮಾನಿಗಳೇ... ಶರಣರ ರೀತಿಯೇ ಹೀಗೇನೋ? ಜೀವಿತಾವಿದ್ದಾಗಲೂ, ಇಲ್ಲದಾಗಲೂ ಅವರಿದ್ದಲ್ಲೆಲ್ಲಾ ಆನಂದವೇ ಆನಂದ. ಅಲ್ಲಿ ದುಃಖಕ್ಕೆ ಕೊರಗಿಗೆ ಅವಕಾಶವಿಲ್ಲ. ಇಂತಹ ಸದ್ಗುರುನಾಥರ ಸತ್ಸಂಗ ಕಥಾನಕ ನಿರಂತರವಾಗಿ ಸಿಗಲಿ. ನಾಳೆಯೂ ಪುರುಸೊತ್ತಿದೆಯಲ್ಲಾ... ನಿತ್ಯ ಸತ್ಸಂಗಕ್ಕೆ... ಬನ್ನಿ, ಚಿಂತೆಯಿಲ್ಲದೆ ಸಂತೆ ಎಂಬ ಈ ಸಂಸಾರದಲ್ಲಿ ಬದುಕುವ ರೀತಿ ನಮಗೆಲ್ಲಾ ಸಿಗಲಿ, ಗುರುನಾಥರ ದಯೆಯೊಂದು ನಿರಂತರವಿರಲಿ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment