ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 79
ಅಯಾಚಿತ ಗುರು ದರ್ಶನ ಲಾಭ....
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಶಂಕರಲಿಂಗ ಭಗವಾನರ ಅನನ್ಯ ಭಕ್ತರೂ, ಮಲೇಬೆನ್ನೂರು ನಿವಾಸಿಗಳೂ ಆದ ಹನುಮಣ್ಣನವರು ನಮಗೆ ಇಂದಿನ ನಿತ್ಯ ಸತ್ಸಂಗಕ್ಕೆ, ತಮಗೆ ಗುರುನಾಥರ ಮೊದಲ ಭೇಟಿ ಹೇಗೆ ವಿಚಿತ್ರ, ವಿಶಿಷ್ಟ ರೀತಿಯಲ್ಲಿ ಆಯಿತೆಂಬುದನ್ನು, ಸತ್ಯ ನಿಷ್ಠುರರಾದ ಗುರುನಾಥರ ನೇರ ನುಡಿಗಳನ್ನು, ನೆನಪಿಸಿಕೊಂಡು ನಮಗೆ ಗುರುಕಥಾಮೃತವನ್ನು ಪಾನ ಮಾಡಿಸಲಿದ್ದಾರೆ. ಗುರುನಾಥರಿಗೆ ಜೈ ಎನ್ನುತ್ತಾ ಅದನ್ನಾಲಿಸೋಣ ಬನ್ನಿ, ಗುರು ಬಾಂಧವರೇ.
"ಅಂದು ನಾನು ಎಂದಿನಂತೆ ಮಲೇಬೆನ್ನೂರಿನಿಂದ ಕೋಮಾರನಹಳ್ಳಿಯ ಆಶ್ರಮಕ್ಕೆ ಹೋಗಲು, ನಮ್ಮ ಮನೆಯವರೊಂದಿಗೆ ಹೊರಟಿದ್ದೆ. ನಾವು ರಸ್ತೆಯ ಒಂದು ತುದಿಯಲ್ಲಿದ್ದರೂ ಕಾರೊಂದು ಹಾರನ್ ಮಾಡಿತು. ಇನ್ನೂ ತುದಿಗೆ ಸರಿದೆವು ನಾವು. ಆದರೂ ಕಾರು ಹಾರನ್ ಮಾಡುತ್ತಾ... ನಮ್ಮ ಸನಿಹ ಬಂದು ನಿಂತಿತು. ಇದೇನು ವಿಚಿತ್ರ ಎಂದು ಅತ್ತ ನೋಡಿದಾಗ - ಬಾಗಿಲು ತೆಗೆದು ಒಳಗೆ ಕೂರಲು ಅವರು ಹೇಳಿದರು. ಏಕೆ, ಏನು ಎಂದು ವಿಚಿತ್ರವಾಗಿ ಅಪರಿಚಿತನನ್ನು ನೋಡುತ್ತಿದ್ದಾಗ, ನಮ್ಮ ಮನಸ್ಸಿನ ಮಾತನ್ನು ಅರಿತಂತೆ, 'ಬನ್ನಿ, ಕೂತ್ಕೊಳ್ಳಿ. ನೀವು ಅವಧೂತರ ದರ್ಶನ ಮಾಡಬೇಕಲ್ಲ... ತಡವಾದರೆ ಅವರ ದರ್ಶನವಾಗದು. ನಾನೂ ಕೋಮಾರನಹಳ್ಳಿಯ ಕಡೆಯೇ ಹೋಗುತ್ತಿದ್ದೇನೆ. ಬನ್ನಿ ಪರವಾಗಿಲ್ಲ' ಎನ್ನುತ್ತಾ ಕಾರು ಓಡಿಸಿಕೊಂಡು ಆಶ್ರಮದ ಬಳಿ ತಂದು ನಿಲ್ಲಿಸಿದರು. ಅವರೂ ಸಹ ಇಳಿದು ಬಂದು ಗುರುನಾಥರಿಗೆ ನಮಸ್ಕರಿಸಿ ಮುಂದೆ ಪ್ರಯಾಣ ಹೊರಟುಬಿಟ್ಟರು. ಹೀಗೆ ಗುರುನಾಥರ ಮೊದಲ ಭೇಟಿಯಾದದ್ದು. ನಾವು ಕನಸು ಮನಸಿನಲ್ಲೂ ಈ ಸೌಭಾಗ್ಯ ದೊರೆಯುತ್ತದೆ ಎಂದು ಭಾವಿಸಿರಲಿಲ್ಲ. ಅತ್ಯಂತ ಸರಳ ಉಡುಗೆಯ, ಧೀಮಂತ ವ್ಯಕ್ತಿತ್ವದ ಗುರುನಾಥರನ್ನು ನೋಡಿ ಮನಕ್ಕೆ ಅದೇನೋ ಆನಂದ, ಧನ್ಯತೆ ಭಾವ ಬಂದಿತ್ತು. ಹೋಗಿ ನಮಸ್ಕರಿಸಿ ದೂರವೇ ನಿಂತೆವು. ಗುರುನಾಥರ ಬಗ್ಗೆ ಕೇಳಿದ್ದೆನಾದರೂ ಕಂಡಿರಲಿಲ್ಲ. ಅವರು ರಂಗನಾಥ ಆಶ್ರಮದ ಕೆಳಗಿನ ಮೆಟ್ಟಿಲುಗಳ ಮೇಲೆ ಕುಳಿತಿದ್ದರು. ಕುಶಲೋಪರಿಯಾಯಿತು. ಬಹಳ ಸಂತಸವಾದನರಾಗಿದ್ದರು. ನನ್ನ ಮನದಲ್ಲಿ ಕಾಡುತ್ತಿದ್ದ ಆ ಕಾರಿನವರ ವಿಚಾರವನ್ನು ಮೆಲುದನಿಯಲ್ಲಿ ಅತ್ಯಂತ ವಿನಮ್ರವಾಗಿ - 'ಗುರುಗಳೇ ಈಗ ಬಂದು ಹೋದರಲ್ಲ, ಅವರಿಗೆ ನನ್ನ ಪರಿಚಯವಿಲ್ಲ, ನನಗೆ ಅವರ ಪರಿಚಯವಿಲ್ಲ. ಇಲ್ಲಿಯವರೆಗೆ ಕರೆದುಕೊಂಡು ಬಂದು ನಿಮ್ಮ ದರ್ಶನ ಭಾಗ್ಯ ಸಿಗುವಂತೆ ಮಾಡಿದರಲ್ಲ ಯಾರವರು?' ಎಂದು ಕೇಳಿದೆ. ಅದಕ್ಕೆ ಗುರುನಾಥರು ನಗುತ್ತಾ 'ಅದಕೇ ಯಾಕೆ ಅಷ್ಟು ತಲೆ ಕೆಡಿಸಿಕೊಳ್ತೀಯಾ... ಯಾರೋ ಒಬ್ಬರು ಬಂದ್ರಪ್ಪಾ.... ನಿಮ್ಮನ್ನು ಕರೆದುಕೊಂಡು ಬಂದರು. ಅದಕ್ಕೆಲ್ಲಾ ಜಾಸ್ತಿ ಚಿಂತೆ ಮಾಡಬೇಡ' ಅಂದುಬಿಟ್ಟರು. ಅಷ್ಟು ಹೊತ್ತಿಗೆ ಆಶ್ರಮದ ಇನ್ನೂ ಅನೇಕ ಜನ ಭಕ್ತರಿಗೆ ಗುರುನಾಥರು ಇಲ್ಲಿಗೆ ಬಂದಿರುವ ವಿಚಾರ ತಿಳಿದು, ಬೆಲ್ಲಕ್ಕೆ ಇರುವೆ ಮುತ್ತಿದಂತೆ - ಗುರುನಾಥರ ಬಳಿ ಬಂದು ಸೇರಿದರು"....
ಒಳಗೆ ಕೂತಿದಾರಲ್ಲ ಅವರಿಗೆ ಪಾದ ಪೂಜೆ ಮಾಡಿ
ಗುರುನಾಥರ ರೀತಿ ನೀತಿಗಳನ್ನು, ಅವರ ಮನಸ್ಥಿತಿಯನ್ನು ಅರಿಯುವುದು ಸಾಮಾನ್ಯರಿಗೆ ಸುಲಭವಾಗಿ ಇರಲಿಲ್ಲವೆನ್ನುತ್ತಾರೆ ನಮ್ಮ ಹನುಮಣ್ಣನವರು. ಹಾಗಾಗಿ ಅಂದು ಗುರುನಾಥರ ದರ್ಶನ ತಮಗೆ ಆದುದೇ ಪುಣ್ಯವೆಂದು ದೂರವೇ ನಿಂತಿದ್ದರು. ಆದರೂ ಕೆಲವರು ಬಂದು "ದಯಮಾಡಿ ಮೇಲೆ ಆಶ್ರಮಕ್ಕೆ ಬನ್ನಿ... ನಿಮಗೊಂದು ಪಾದ ಪೂಜೆಯನ್ನಾದರೂ ಮಾಡಬೇಕೆಂದಿದ್ದೇವೆ" ಎಂದು ಅಲ್ಲಿ ನೆರೆದ ಶಂಕರಲಿಂಗ ಭಗವಾನರ ಭಕ್ತರು, ಅತ್ಯಂತ ಪ್ರೀತಿಯಿಂದ ಬೇಡಿದರಂತೆ. ಗುರುನಾಥರಿಂದ ಬಂದ ಉತ್ತರವೆಂದರೆ: "ಒಳಗೆ ಕೂತಿದಾರಲ್ಲಪ್ಪ. ಅವರಿಗೆ ಪಾದ ಪೂಜೆ ಮಾಡಿರಿ. ಇವತ್ತು ನೀವು ಪಾದ ಪೂಜೆ ಮಾಡ್ತೀರಿ ಅಂದ್ರೆ ನಾನು ಆ ಸ್ಥಿತೀಲಿ ಇಲ್ಲಾ... ಒಳಗಿದಾರಲ್ಲ ಮಹಾನುಭಾವರು ಅವರಿಗೆ ಪೂಜೆ ಮಾಡಿ ಸಾಕು" ಎಂದು ನಯವಾಗಿ ಆದರೆ ಅಷ್ಟೇ ಧೃಡವಾಗಿ ಗುರುನಾಥರು ಹೇಳಿದರಂತೆ. 'ಆಶ್ರಮದ ಒಳಗಾದರೂ, ಈ ಮೆಟ್ಟಿಲುಗಳಿಂದ ಮೇಲೆ ಬನ್ನಿ ಸ್ವಾಮಿ, ಒಂಚೂರು ಏನಾದರೂ ಪ್ರಸಾದ ತೊಗೊಳ್ಳಿ' ಎಂಬ ಮತ್ತೊಂದು ಬೇಡಿಕೆ ಅಲ್ಲಿ ನೆರೆದ ಭಕ್ತರಿಂದ ಬಂದಿತು. ಆದರೆ, ಗುರುನಾಥರು ಅದೇನು ನಿರ್ಧರಿಸಿದ್ದರೋ, ಅವರೇ ಬಲ್ಲರು. "ಯಾರಪ್ಪಾ ಅಲ್ಲಿ... ಓ ನೀನು ಮಠದವನಲ್ಲವೇನಪ್ಪ.. ಅದೇನು ಅಡಿಗೆ ಮಾಡಿದ್ದೀರೋ ಎಲ್ಲಾ ಇಲ್ಲಿಗೇ ತೊಗೊಂಬಾರಪ್ಪ. ಬನ್ನಿ ನೀವು ಎಲ್ಲಾ ಈ ಮೆಟ್ಟಿಲ ಮೇಲೆ ಕೂತ್ಕೊಳ್ಳಿ. ನನಗೂ ಇಲ್ಲೇ ಬಡಿಸಿ... ತನ್ನಿ ತನ್ನಿ ಇಲ್ಲಿಗೆ ಎಲ್ಲಾ" ಎಂದರಂತೆ. ಗುರುವಾಕ್ಯವನ್ನು, ಅದರಲ್ಲೂ ಅವಧೂತರ ಮಾತನ್ನು ಮೀರುವವರು ಯಾರಿದ್ದಾರೆ? ಎಲ್ಲಾ ಊಟದ ಪದಾರ್ಥಗಳೂ ಮೆಟ್ಟಿಲಿನ ಬಳಿಗೇ ಬಂದಿತು. ಅತ್ತ ನಾಲ್ಕು, ಇತ್ತ ನಾಲ್ಕಾರು ಎಲೆಗಳನ್ನು ಮೆಟ್ಟಿಲಿನ ಮೇಲೆ ಹಾಕಿದರಂತೆ. ಎಲ್ಲರಿಗೂ ಬಡಿಸಲಾಯಿತು. ಗುರುನಾಥರ ಸಂಗಡ ರಂಗಪ್ಪನ ಪಾದತಳದಲ್ಲಿ ಪ್ರಸಾದ ಭುಂಜಿಸುವ, ಆ ಸುಯೋಗ - ಅದು ಯಾರು ಯಾರಿಗೆ ಅಂದು ಸಿಕ್ಕಿತೋ, ಅವರೇ ಧನ್ಯರು. ಇಂತಹ ಅವಕಾಶ ದೊರೆಯುವುದು ದುರ್ಲಭ. ಮತ್ತೆ ಕೆಲವರು ಗುರುನಾಥರಿಗೆ ಮೇಲೆ ಆಶ್ರಮಕ್ಕೆ ಬರಲು ಒತ್ತಾಯಿಸಿದಾಗ, ಗುರುನಾಥರೆಂದರಂತೆ. "ಏನಪ್ಪಾ ಮೇಲೆ ಹತ್ತಿ ಬಂದು ಶಂಕರಲಿಂಗ ಭಗವಾನರ ಆಶ್ರಮದಲ್ಲಿ ಕುಳಿತುಬಿಟ್ಟರೆ, ನಾವೇನು ಅವರ ಸರಿಸಮಾನರಾಗಿ ಬಿಡ್ತೀವೇನಪ್ಪಾ. ಇದೇ ನಮ್ಮ ಜಾಗ ಇಲ್ಲಿ ಎಲ್ಲಾ ಸರಿಯಾಗಿದೆ".
ಗುರುನಾಥರ ಬಳಿ ಇರುವ ಒಂದೊಂದು ಕ್ಷಣಗಳೂ, ಗುರುವಿನಿಂದ ಬರುವ ಉಪದೇಶಗಳು ಅನರ್ಘ್ಯ, ಹಾಗೂ ಅಪರೂಪವಾದವು. ಅದು ಯಾರಿಗೋ, ಏನೋ ಅಥವಾ ತಮಗೆ ಎಂಬಂತೆ ಅವರು ಮಾತನಾಡುತ್ತಿದ್ದರೂ, ನಿಜ ಭಕ್ತರಿಗೆ ಬಹಳಷ್ಟನ್ನು ಗುರುನಾಥರು ಪ್ರಸಾದಿಸಿರುತ್ತಾರೆ. ಆದರೆ, ಅದನ್ನರಿತು, ಅಳವಡಿಸಿಕೊಳ್ಳುವ ಭಾಗ್ಯವೂ ಅವರ ಕೃಪೆಯಿಂದಲೇ ದೊರೆಯಬೇಕಿದೆ.
ಗುರುವಿನ ಬಳಿ ಸಾರಲು, ನಾವವರ ಜೊತೆ ಒಡನಾಡಲು ನಮ್ಮ ಸಾಧನೆ, ಸಂಸ್ಕಾರಗಳು ಅದೆಷ್ಟು ಪುನೀತವಾದುದು, ಗಟ್ಟಿಯಾದುದಿರಬೇಕೆಂಬುದನ್ನು ಬಹುಶಃ ಗುರುನಾಥರಲ್ಲಿ ಎಲ್ಲರಿಗೂ ತೋರಿಸಿದರೇನೋ. ಗುರುವೆಂದರೆ ಬಹು ದೊಡ್ಡದು. ಅವರ ಜೊತೆ, ಯಾವ ಜನ್ಮದ ಪುಣ್ಯ ಫಲದಿಂದ ನಮಗೆ ನಮನ, ಸಂಸರ್ಗ, ದರ್ಶನ ಪುಣ್ಯ ಭಾಗ್ಯ ಒದಗಿದೆಯೋ. ಆದರೆ, ಅದನ್ನು ಗಟ್ಟಿಮಾಡಿಕೊಂಡು, ನಿರಂತರ ಆ ಸದ್ಗುರುವಿನ ಸಹವಾಸದಲ್ಲಿರಲು, ಎಂತಹ ಭಕ್ತಿ, ಸಂಯಮ, ತ್ಯಾಗ, ಆರಾಧನೆಗಳು ಅನಿವಾರ್ಯವೆಂಬುದನ್ನು, ಗುರುವೆಂದರೆ ಒಂದು ಹುಡುಗಾಟದ ವಸ್ತುವಲ್ಲವೆಂಬುದನ್ನು ಮನದಟ್ಟು ಮಾಡಿಕೊಡಲೆಂದೇ ಅಂದು ಗುರುನಾಥರು, ನಿತ್ಯ ಲೀಲಾ ವಿನೋದ ವಿಹಾರಿಗಳು ಹೀಗೆ ವರ್ತಿಸಿದರೇನೋ?
ನಮ್ಮೊಂದಿಗೆ ಗುರುಕಥಾಮೃತ ಹಂಚಿಕೊಂಡ ಭಾರತ ಸುಬ್ಬರಾಯರ ಮಗ ಹನುಮಣ್ಣನವರು ತಮ್ಮ ಮಾತನ್ನು ಹೀಗೆ ಮುಂದುವರೆಸಿದರು.... "ಇದನ್ನೆಲ್ಲಾ ನೋಡುತ್ತಿದ್ದ ನಾನು ಅದೇನೋ ಪ್ರೀತಿ, ಗೌರವ ತೋರುತ್ತಾ ಗುರುನಾಥರ ಬಳಿ ಬಂದು - ಗುರುದೇವಾ ಇದೆಲ್ಲಾ ಇಲ್ಲೇ... ಹೀಗೆ.. ಏಕೆ.... ನಾನಂತೂ ಸಣ್ಣವನು. ನನಗೇನೂ ಅರ್ಧವಾಗಲಿಲ್ಲ.... ಎಂದು ಬಿಟ್ಟೆ. ಅದಕ್ಕವರು 'ಅಲ್ಲಪ್ಪಾ ಮೇಲೆ ಆಶ್ರಮಕ್ಕೆ ಬಂದು ಪ್ರಸಾದ ತಿಂದರೆ ನಾವೇನು ಶಂಕರಲಿಂಗ ಭಗವಾನರ ಸಮಾನರಾಗಿ ಬಿಡ್ತೀವೇನು?" ಎಂದು ಮತ್ತೆ ಮಾರ್ಮಿಕವಾಗಿಯೇ ನುಡಿದರು. ಅಲ್ಲ ಗುರುಗಳೇ ನೀವು ದೊಡ್ಡವರು ಮೇಲೆ ಬಂದಿದ್ದರೆ... ಎಂದು ಮತ್ತೆ ನಾನು ರಾಗ ತೆಗೆದಾಗ ಗುರುನಾಥರು "ನೀನೇನು.... ನಾನೇನು ಎಲ್ಲರೂ ಅಪ್ಪ ಅವರಿಗೆ ಶಿಷ್ಯರೇ, ನಮ್ಮ ಜಾಗ ಇದೇ.... ಅವರ ಪಾದದ ಬುಡದ ತುದಿಯಲ್ಲೇ ನಾವಿರಬೇಕಾದ್ದು" ಎಂದುಬಿಟ್ಟರು. ಮತ್ತೆ ಮುಂದೆ ನನಗೆ ಅವರ ಜೊತೆ ಮಾತನಾಡುವ ಧೈರ್ಯ ಬರಲಿಲ್ಲ. ಗುರುವಾಣಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಮೌನಕ್ಕೆ ಶರಣಾಗಿಬಿಟ್ಟೆ. ಗುರುನಾಥರು ಎಲ್ಲವನ್ನೂ ನೇರವಾಗಿ ಹೇಳಿಬಿಡುವವರೆಂಬುದು ನಾನು ಕೇಳಿದ್ದೆ. ಸದ್ಯ ಶಾಂತ ರೂಪ ದರ್ಶನ ಕೊಟ್ಟರಲ್ಲಾ ಎಂದು ಸಂತಸವಾಗಿತ್ತು. ಅವರು ಹೇಳದೆ, ಕರೆಯದೇ, ಯಾರೂ ಅವರ ಬಳಿ ಹೋಗುವಂತಿರಲಿಲ್ಲ. ಅಂತಹದರಲ್ಲಿ ಒಬ್ಬ ಹೆಣ್ಣು ಮಗಳು, ಇತರರು ಬೇಡ ಬೇಡವೆಂದರೂ ಅವರ ಬಳಿಗೆ ಹೋಗಿ ಏನೋ ಕೇಳಲು ನೋಡಿದರೇನೋ, ಗುರುನಾಥರಿಗೆ ಅದೆಲ್ಲಿತ್ತೋ ಸಿಟ್ಟು. ಒಂದೇ ಸಾರಿಗೆ "ನೀನಿಲ್ಲಿ ಯಾಕಿದೀ. ನಿನಗಿಲ್ಲಿ ಇರೋದಕ್ಕೆ ಅರ್ಹತೆ ಏನಿದೆ. ನೀನೆಂತಹ ತಪ್ಪು ಮಾಡುತ್ತಿದ್ದೀ" ಎಂದರಲ್ಲದೇ ಇನ್ನೂ ಕೆಲವರ ಬಗ್ಗೆಯೂ ಖಂಡ ತುಂಡಾಗಿ ಮಾತನಾಡಿದಾಗ, ಅಲ್ಲಿ ನೆರೆದಿದ್ದವರೆಲ್ಲಾ ಸ್ತಬ್ಧರಾಗಿ ಬಿಟ್ಟರು. ಅಷ್ಟು ಹೊತ್ತಿಗೆ ಆಶ್ರಮದ ಕೆಲ ಪ್ರಮುಖರು ಮೇಲೆ ಬಂದು ಹೋಗಬಹುದಿತ್ತಲ್ಲಾ ಗುರುನಾಥರೇ, ಎಂದು ಕೇಳಿದಾಗ, ತತ್ ಕ್ಷಣದಲ್ಲಿ ಶಾಂತ ಮೂರ್ತಿಯಾಗಿ "ಬೇಡಪ್ಪಾ ಇವತ್ತು ಬೇಡ... ಮುಂದೆ ಒಂದು ಕಾಲ ಬರುತ್ತದೆ. ಆಗ ಬರುತ್ತೇನೆ.. ನೀವೇನೂ ಯೋಚನೆ ಮಾಡಬೇಡಿ" ಎಂದು ಎಲ್ಲರಿಗೂ ಆಶೀರ್ವದಿಸಿ ಕಾರು ಹತ್ತಿ ಗುರುನಾಥರು ಹೊರಟೇಬಿಟ್ಟರು. ಅದೆಷ್ಟೋ ಸಾರಿ ಗುರುನಾಥರು ಆಶ್ರಮಕ್ಕೆ ಬಂದು ಹೋಗಿದ್ದಾರೆ. ಒಂದು ತುಂಡು ಪಂಚೆಯುಟ್ಟು, ಎಲ್ಲೆಂದರಲ್ಲಿ ಅಲೆವ ಆ ಮಹಾತ್ಮರು ಬಂದದ್ದು ತಿಳಿಯುವುದು - ಅವರು ಅಲ್ಲಿಂದ ಹೊರಟು ಹೋದ ಮೇಲೆಯೇ.... ಏನೋ ಅಂತಹ ಮಹಾತ್ಮರನ್ನು ಕಾಣುವ ಸೌಭಾಗ್ಯವಿತ್ತು. ಕಾರಿನಲ್ಲಿ ಕರೆಸಿ ಕರುಣಿಸಿದರು. ಅದೆಷ್ಟು ಹೇಳಿದರೂ ಗುರುನಾಥ ಕಥಾಮೃತಕ್ಕೆ ಕೊನೆಯಿಲ್ಲ. ಸದ್ಗುರುನಾಥ ಮಹಾರಾಜ್ ಕೀ ಜೈ... " ಎನ್ನುತ್ತಾ ಒಂದು ಕ್ಷಣ ಈ ಭಕ್ತರು ಸುಮ್ಮನಾದರು.
ಸನ್ಮಾನ್ಯ ನಿತ್ಯ ಸತ್ಸಂಗಾಭಿಮಾನಿ ಗುರುಬಂಧುಗಳೇ - ಗುರುನಾಥರ ಲೀಲೆಗಳು ಅವರ ಲಕ್ಷಾಂತರ ಭಕ್ತರಿಗೂ, ಒಬ್ಬೊಬ್ಬರಿಗೆ ಒಂದೊಂದು ರೀತಿ ದರ್ಶಿತವಾಗಿದೆ. ನಾವುಗಳು ಕೆಲವರು ಗುರುನಾಥರ ದರ್ಶನವೇ ಆಗದೆ ಇದ್ದವರಿಗೆ - ಅನುಭವದ ಅವರನ್ನು ಕಂಡವರ ಹೃದಯಂಗತ ಮಾತುಗಳೇ ಗುರುನಾಥ ದರ್ಶನ ಸಮಾನ... ಇದು ನಿತ್ಯ ನಿರಂತರ ಸಾಗಲೀ... ನಾಳೆಯೂ ಬನ್ನಿರಿ ನಿತ್ಯ ಸತ್ಸಂಗಕ್ಕೆ, ಗುರು ಸಂಕೀರ್ತನಕ್ಕೆ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment