ಒಟ್ಟು ನೋಟಗಳು

Saturday, August 19, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 80
ಗುರುವಿನ ಅಗಲುವಿಕೆಯ ಕಾಣದ ತಳಮಳ 


॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


"ಸಂಜೆಯ ಏಳೂವರೆಯ ಸಮಯ. ಮಲೇಬೆನ್ನೂರಿನ ನನ್ನ ಮನೆಯಲಿ ನಾನಿದ್ದೆ. ಯಾರೋ ನನ್ನ ಕಿವಿಗೆ ಅವಧೂತರು, ಕೋಮಾರನಹಳ್ಳಿ ಮಠಕ್ಕೆ ಬಂದಿದ್ದಾರೆಂದಾಗ, ನಾನು ಹೊರಟೇಬಿಟ್ಟೆ. ನನ್ನ ಮನೆಯವರೂ ಬರುತ್ತೇನೆಂದರು. ಈ ಸಮಯದಾಗ ಗಾಡಿ ಇರಲ್ಲ, ನಿನ್ನ ಕೈಲಿ ನಡೆದು ಬರುವುದಾಗಲ್ಲ - ಎಂದರೆ ಆಕೆ ಕೇಳಲೇ ಇಲ್ಲ... ಇಲ್ಲಾ ನಾನೂ ಅವರ ದರ್ಶನ ಮಾಡಿ ಬರಬೇಕು ಎಂದು ಹಠ ಹಿಡಿದು ಹೊರಟೇ ಬಿಟ್ಟಳು. ಇನ್ನೇನು ಮಾಡುವುದು ಬಾ... ಎಂದೆ. ಅವಧೂತರು ಈಗಲ್ಲಿದ್ದಾರೆ.... ಮರುಕ್ಷಣ ಎಲ್ಲಿರುತ್ತಾರೋ? ಯಾರಿಗೂ ಗೊತ್ತಿಲ್ಲ. ಸ್ವಾಮಿ ನಾವು ಅಷ್ಟು ದೂರ ನಡೆದು ಬರಬೇಕು. ನಿನ್ನ ದರ್ಶನ ಭಾಗ್ಯ ಸಿಗಲೆಂದು ಮನದಲ್ಲೇ ಬೇಡಿದೆ. ಹೇಗೋ ನಮ್ಮಪ್ಪ ಶಂಕರಲಿಂಗನ ಆಶ್ರಮ, ಅವನ ದರ್ಶನವಂತೂ ಆಗೇ ಆಗುತ್ತದೆ. ಅವನ ಕರುಣೆ ಇರುವುದರಿಂದ ಗುರುನಾಥರ ದರ್ಶನವೂ ಆಗೇ ಆಗುತ್ತದೆಂಬ- ಒಂದು ಒಳದನಿ ಹೇಳುತಿತ್ತು. ಮುಂದೆ ನಡೆದದ್ದೆಲ್ಲವೂ ಅವನ ಚಿತ್ತ. ವಿಚಿತ್ರ ರೀತಿಯಲ್ಲಿ ಅಲ್ಲಿ ತಲುಪಿ ಗುರುನಾಥರ ದರ್ಶನ ನಾವಿಬ್ಬರೂ ಪಡೆದೆವು. ಭಕ್ತರ ಅಭಿಲಾಷೆಯನ್ನು ಈಡೇರಿಸುವ ಕಾಮಧೇನು ಗುರುನಾಥರು" ಎನ್ನುತ್ತಾರೆ ಮಲೇಬೆನ್ನೂರಿನ ಆ ಭಕ್ತ ಶ್ರೇಷ್ಠರು ಹನುಮಣ್ಣನವರು. 

ಮತ್ತೆ ಅನೇಕ ಬಾರಿ ಈ ಭಕ್ತರು ಗುರುನಾಥರನ್ನು ಕಂಡಿದ್ದರು. ಗುರುನಾಥರು ಜಗದ್ಗುರುಗಳನ್ನು ಕರೆಸಿದ್ದಾಗ, ಮಲೇಬೆನ್ನೂರಿನ ಎಲ್ಲ ಭಕ್ತರನ್ನು ಕರೆಸಿದ್ದರಂತೆ. ಸನ್ಮಾನ, ಸ್ವಾಗತ, ದಾನಗಳು ಜಗದ್ಗುರು ಪೀಠಕ್ಕೆ ಸಿಕ್ಕಂತೆಯೇ ಶಂಕರಲಿಂಗ ಭಗವಾನರ ಈ ಭಕ್ತರಿಗೂ ಸಿಕ್ಕಿತ್ತು. ರಸ್ತೆಯುದ್ದಕ್ಕೂ ನಮಿಸುವವರೇ, ತೆಗೆತೆಗೆದು ಇವರ ಮಡಿಲಿಗೆ ಹಣ್ಣು ಹಂಪಲು, ಕಾಯಿ, ಬಟ್ಟೆ ನೀಡುವವರೇ. ಕೊನೆಗೆ ಅದೆಷ್ಟಾಗಿತ್ತೆಂದರೆ ಇವರೆಲ್ಲಾ "ಸಾಕ್ರಪ್ಪಾ... ನಾವು ತಗೊಂಡು ಹೋಗೋಕಾಗೋದಿಲ್ಲ, ಕೊಡುವುದನ್ನು ಸಾಕು ಮಾಡ್ರಿ" ಎಂದು ಹೇಳುವ ಪರಿಸ್ಥಿತಿ ಬಂದಿತು. "ಇಡೀ ಸಖರಾಯಪಟ್ಟಣ ಸಂಭ್ರಮಗೊಂಡಿರುವ ಹಿನ್ನಲೆಯಲ್ಲಿ ಗುರುನಾಥರ ವ್ಯವಸ್ಥೆ, ಶ್ರದ್ಧೆ, ಯಾವುದಕ್ಕೂ ಕಮ್ಮಿ ಇಲ್ಲದಂತೆ ಎಲ್ಲವನ್ನೂ ಹೊಂದಿಸಿದ ಅವರ ರೀತಿಗೆ ಅವರೇ ಸಮಾನರು - ಯಾವ ರಾಜ ಮಹಾರಾಜರೂ ಹೀಗೆ ಮಾಡಲಿಕ್ಕಾಗದು. ಇಷ್ಟೆಲ್ಲಾ ನಡೆಯುತ್ತಿದ್ದರೂ ಸೂತ್ರಧಾರರಾದ ಗುರುನಾಥರು ಯಾವುದೋ ಮೂಲೆಯಲ್ಲಿ ಇರುತ್ತಿದ್ದರು. ಇದು ಜೀವನದಲ್ಲಿ ಮತ್ತೆಂದೂ ನಾವು ಕಾಣದ ಅವಿಸ್ಮರಣೀಯ ಘಳಿಗೆ" ಎಂದು ಸ್ಮರಿಸುತ್ತಾರೆ ಅವರು. 

ಅಂದು ಏಕೋ ಮನಸ್ಸಿಗೆ ತುಂಬಾ ಕಸಿವಿಸಿಯಾಗುತ್ತಿತ್ತು. ರಾತ್ರಿಯೆಲ್ಲಾ ನಿದ್ರೆಯಿಲ್ಲ. ಏನೋ ಕಳೆದುಕೊಂಡ ಭಾವ, ಯಾವುದೋ ನೋವಿನ ಸುದ್ದಿ ತಲುಪಲಿದೆ ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಬೆಳಗಿನ ಹೊತ್ತಿಗೆ ಗುರುನಾಥರು ಮಹಾನಿರ್ವಾಣ ಪಡೆದ ಘೋರ ಸುದ್ಧಿ ಬಂದಿತು. ಸರಿಯಾದ ಬಸ್ಸುಗಳಿಲ್ಲ, ಏನೇನೋ ಮಾಡಿ ಶಿವಮೊಗ್ಗ ತಲುಪಿ, ಅಲ್ಲಿಂದ ಸಖರಾಯಪಟ್ಟಣ ತಲುಪುವುದರಲ್ಲಿ ಸಮಯ ಬಹಳವಾಗಿತ್ತು. ಎತ್ತ ಹೋಗಬೇಕೆಂದು ತಿಳಿಯದೇ ನಿಂತಾಗ, ಅದ್ಯಾರೋ ಕಾರಿನವರು ನಮ್ಮನ್ನು ತೋಟದ ಬಳಿ ಕರೆದೊಯ್ದರು. ಅಲ್ಲಿ ರಾತ್ರಿಯವರೆಗೆ ಇದ್ದು ಅವರಿಗೆ, ಅಂತಿಮ ನಮನ ಸಲ್ಲಿಸುವ ಅವಕಾಶ ಒದಗಿಸಿದರು ಗುರುನಾಥರು. ಅವರ ಮೊದಲ ದರ್ಶನದಲ್ಲೂ ಅಪರಿಚಿತ ಕಾರಿನವರು ನಮ್ಮನ್ನು ಗುರುನಾಥರ ದರ್ಶನಕ್ಕೆ ಕರೆದೊಯ್ದಿದ್ದರು. ಈಗ ಅಂತಿಮ ನಮನದಲ್ಲೂ ಅಪರಿಚಿತ ಕಾರಿನವರು ನಮ್ಮನ್ನು ಅಲ್ಲಿಗೆ ತಲುಪಿಸಿದ್ದರು. ಗುರುನಾಥರು ಭಕ್ತ ಕರುಣಾಸಾಗರರು. ಒಂದು ಹೆಜ್ಜೆ ನಾವು ಅವರ ಕಡೆ ಭಕ್ತಿಯಿಂದ ನಡೆದರೆ, ಅವರು ಹತ್ತು ಹೆಜ್ಜೆ ನಮ್ಮೆಡೆಗೆ ಬಂದು ನಮ್ಮ ಕೈಹಿಡಿದು ಪ್ರೀತಿಯಿಂದ ಸಲಹುವ ಕರುಣಾನಿಧಿ ಎನ್ನುತ್ತಾ ಮಾತನ್ನು ನಿಲ್ಲಿಸಿದರು. 

ಪ್ರಿಯ ಭಕ್ತ ಮಹಾಶಯರೇ ಗುರುನಾಥರ ಕರುಣೆ ಪ್ರೀತಿ ಒಬೊಬ್ಬರಿಗೆ ಒಂದೊಂದು ರೀತಿ ಸಿಕ್ಕಿದೆ. ಆ ಕರುಣೆ ನಮ್ಮ ನಿಮ್ಮೆಲ್ಲರ ಮೇಲೂ ಇರುವುದರಿಂದಲೇ ಎಲ್ಲರ ವಿಚಾರಗಳೂ ಹೀಗೆ ನಿತ್ಯ ಸತ್ಸಂಗದ ಮುಖಾಂತರ ನಮನಿಮಗೆಲ್ಲಾ ಸಿಕ್ಕುತ್ತಿದೆಯಲ್ಲಾ, ನಾವೇ ಧನ್ಯರು. ನಾಳೆಯೂ ಬನ್ನಿ, ನಿತ್ಯ ಸತ್ಸಂಗದಲ್ಲಿ ಗುರುನಾಥರೊಂದಿಗೆ ಇರೋಣ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment