ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 71
ಅಲ್ಲೇ ಆರಾಮಾಗಿದೆ - ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಶಂಕರಲಿಂಗ ಭಗವಾನರ ಆಶ್ರಮದ ಭಕ್ತರೂ ಹಾಗೂ ಟ್ರಸ್ಟಿಗಳೂ ಆದ ಗುರುರಾಜ ರಾಯರ ಭೇಟಿ, ಈ ಸಾರಿಯ ಶಂಕರಲಿಂಗ ಭಗವಾನರ ಆರಾಧನೆಯ ಸಂದರ್ಭದಲ್ಲಿ ಕೋಮಾರನಹಳ್ಳಿಯಲ್ಲಿ ಆಯಿತು. ನಮ್ಮ ಗುರುಗಳು, ಗುರುನಾಥರ ವಿಷಯಗಳನ್ನು ನನಗೆ ಭಿಕ್ಷೆಯಾಗಿ ನೀಡಲೆಂದೇ ಒಂದು ದಿನ ಮುಂಚಿತವಾಗಿ ಕರೆಸಿಕೊಂಡಿದ್ದಾರೇನೋ? ಅಂದು ಭಗವಾನರ ಜೋಳಿಗೆಗೆ ಗುರುಭಿಕ್ಷೆ ನೀಡಿ, ಬಂದ ನನಗೆ ಗುರುನಾಥರ - ಅವರ ಶಿಷ್ಯರ ಮಧ್ಯೆ ನಡೆದ ಅನೇಕ ಲೀಲಾ ವಿನೋದಗಳ ಭಿಕ್ಷೆಯ ಮಹಾಪೂರವೇ ದೊರೆಯಿತು. ಒಂದೊಂದು ಘಟನೆಯೂ ಅದ್ಭುತ - ಆನಂದದಾಯಕ. ಗುರುರಾಜ ರಾಯರ ಅನುಭವಗಳನ್ನಿಲ್ಲಿ ಕೇಳೋಣ, ಬನ್ನಿ ನಿತ್ಯ ಸತ್ಸಂಗಾಭಿಮಾನಿ ಭಕ್ತರೇ.
"ಸುಮಾರು ವರ್ಷಗಳ ಹಿಂದಿನ ಮಾತು. ಅಪ್ಪನ ಭಕ್ತರಾದ ನಾವು ಗುರುನಾಥರ ಬಗ್ಗೆ ಕೇಳಿದ್ದೆವೇ ಹೊರತು ಕಂಡಿರಲಿಲ್ಲ. ಕೋಮಾರನಹಳ್ಳಿಯ ಆಶ್ರಮದಲ್ಲೊಂದು ಸಮಾರಂಭವಿದ್ದಿರಬೇಕು. ನಾನು ರಾತ್ರಿಯ ಊಟ ಮಾಡುವವರಿಗೆಲ್ಲಾ ಬಡಿಸುತ್ತಿದ್ದೆ. ಸುಮಾರು ಹತ್ತು ಹನ್ನೊಂದು ಗಂಟೆಯಾಗಿರಬಹುದು. ನನ್ನ ಸ್ನೇಹಿತರೊಬ್ಬರ ಫೋನು ಬಂದಿತು. ಅವರು ಇಲ್ಲಿಗೆ ಬರಲಿದ್ದರು. ಅವರು ಹೊಸಬರಾಗಿದ್ದರಿಂದ ನಾನು ಕೆಳಗಿಳಿದು ಹೋಗಿ, ಅವರನ್ನು ಕರೆತರಲು ಹೋದೆ. ಅಲ್ಲೊಂದು ಆಶ್ಚರ್ಯವನ್ನು ಕಂಡೆ. ಒಬ್ಬ ಗಡ್ಡಧಾರಿ ವ್ಯಕ್ತಿಗಳು, ಒಂದು ಪಂಚೆಯನ್ನುಟ್ಟಿದ್ದವರು, ರಸ್ತೆಯಿಂದ ಮೇಲೆ ಬರುವ ನಾಲ್ಕನೆಯದೋ, ಐದನೆಯದೋ ಮೆಟ್ಟಿಲಮೇಲೆ ಆರಾಮವಾಗಿ ಮಲಗಿಬಿಟ್ಟಿದ್ದರು. ಆ ಹಾಸುಗಲ್ಲುಗಳೇ ಅವರಿಗೆ ಹಂಸತೂಲಿಕಾತಲ್ಪವಾಗಿರಬೇಕು. ಬಹುಶಃ ಶಂಕರಲಿಂಗರು ಪಾದವಿಟ್ಟ ಜಾಗ, ಅವನ ಭಕ್ತರು ನಡೆದಾಡಿದ ಜಾಗಕ್ಕಿಂತ ಉತ್ತಮ ಜಾಗ ಅಲ್ಲಿ ಮಲಗಿದ್ದವರಿಗೆ ಮತ್ತೆಲ್ಲೂ ಸಿಕ್ಕಿರಲಿಲ್ಲವೇನೋ. ಏಕೆಂದರೆ ಅವರು ಅಂತಹ ಅಪ್ಪನ ಪರಮ ಆರಾಧಕರು. ಅವರಾರೆಂದು ಬಹಳ ಜನಕ್ಕೆ ಗೊತ್ತಾಗಿರಲಿಕ್ಕಿಲ್ಲ. ನನಗೂ ತಿಳಿದಿರಲಿಲ್ಲ. ಮುಂದೆ ಇನ್ನೊಂದೆರಡು ಜನ ಅಲ್ಲಿ ಬಂದು ಸೇರಿದರು. ಯಾರೋ ಒಬ್ಬರು 'ಸಖರಾಯಪಟ್ಟಣದ ಗುರುನಾಥರು' ಎಂದು ಆಶ್ಚರ್ಯದ ಉದ್ಗಾರ ತೆಗೆದು, ಬಂದು ಕಾಲಿಗೆ ನಮಿಸಿ ಎಬ್ಬಿಸಿ, 'ಒಳಬನ್ನಿ ಗುರುಗಳೇ, ಇಲ್ಯಾಕೆ ಹೀಗೆ ಕಲ್ಲು ಮೇಲೆ ಮಲಗಿದ್ದೀರಿ?' ಎಂದು ಪ್ರೀತಿಯಿಂದ ಒತ್ತಾಯಿಸಿದರು. ಅದಕ್ಕವರು 'ಇಲ್ಲೇ ಆರಾಮವಾಗಿದೆಯಪ್ಪಾ.... ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ, ಮೇಲೆ ಅಲ್ಲಿ ಬಂದರೇನು, ಇಲ್ಲಿ ಅವನ ಪದತಲದಲ್ಲಿ ಕೂತರೇನು... ಬಹಳ ಆರಾಮವಾಗಿದೆಯಪ್ಪಾ' ಎಂದುಬಿಟ್ಟರು. ಹೀಗೆ ಆಶ್ಚರ್ಯಕರವಾಗಿ ನನಗೆ ಆ ದಿನ ನಮ್ಮಪ್ಪ ಶಂಕರಲಿಂಗನ ಪದತಳದಲ್ಲಿ, ಅವನ ಕೃಪೆಯಿಂದ ಗುರುನಾಥರಂತಹ ಮಹಾಮಹಿಮರ ದರ್ಶನವಾಯಿತು. ಮುಂದೆ ಬಹಳ ಪ್ರಯತ್ನಪಟ್ಟು ಅವರನ್ನು ಮೇಲೆ ಆಶ್ರಮಕ್ಕೆ ಕರೆದೊಯ್ದರೂ ಅವರೇನೂ ತಿಂದಂತೆ ಕಾಣಲಿಲ್ಲ. ಇದು ನನ್ನ ಮೊದಲ ಪರಿಚಯವಾದರೂ ಅವರ ನಿರ್ಲಿಪ್ತತೆ, ಸರಳತೆ - ನಾವು ಮನಸ್ಸಿನಲ್ಲಿ ಗುರುನಾಥರ ಬಗ್ಗೆ ರೂಪಿಸಿಕೊಂಡಿದ್ದಕ್ಕಿಂತ ಇನ್ನೂ ಸರಳವೂ ಮೋಹಕವೂ ಆಗಿತ್ತು. ಅಂದಿನಿಂದಲೇ ಗುರುನಾಥರ ಆರಾಧಕರ ಗುಂಪಿನಲ್ಲಿ ನಾನೂ ಒಬ್ಬನಾಗಿಬಿಟ್ಟೆ. 1992 ರಲ್ಲಿ ಭರಮಸಾಗರದಲ್ಲಿ ಎ.ಆರ್.ಸಿ. ರಾವ್ ಅವರು ಲಲಿತಾ ಹೋಮದ ಆಯೋಜನೆ ಮಾಡಿ ಆಹ್ವಾನಿಸಿದ್ದರು. ಆಗಂತೂ ಗುರುನಾಥರ ನಿಕಟ ಸಹವಾಸ ದೊರೆಯಿತು. ಅವರು ಅಲ್ಲಿ ಬಂದಾಗ ಸೊಗಸಾದ ಆಶೀರ್ವಾದ ಉಪದೇಶವನ್ನು ಮಾಡಿದರು. ಅವರ ಒಂದೊಂದು ಮಾತುಗಳೂ ಅಳವಡಿಸಿಕೊಳ್ಳುವಂತಹದ್ದಾಗಿತ್ತು. ಎಲ್ಲ ಭಕ್ತರೂ ಮುಗ್ಧರಾಗಿ ಕೇಳಿದ್ದರು. ಈ ಮಧ್ಯದಲ್ಲಿ ನನ್ನ ಕಾರ್ಯಭಾರಗಳೋ, ಅಥವಾ ನನ್ನ ಗ್ರಹಚಾರವೋ ಗುರುನಾಥರ ದರ್ಶನ ಅನೇಕ ವರ್ಷಗಳು ನನಗೆ ಆಗಿರಲಿಲ್ಲ. ಆದರೆ ದರ್ಶನ ಮಾಡುವ ಹಂಬಲ ಇದ್ದೇ ಇತ್ತು. ಮುಂದೆ ಸಖರಾಯಪಟ್ಟಣಕ್ಕೆ ನಾವೆಲ್ಲಾ ಶಂಕರಲಿಂಗ ಭಗವಾನರ ಭಕ್ತರೆಲ್ಲಾ, ಜಗದ್ಗುರುಗಳು ಬಂದಾಗ ಹೋಗಿದ್ದೆವು. ಹತ್ತಾರು ಸಾವಿರ ಜನಗಳ ಗುಂಪು, ಅನೇಕ ಜವಾಬ್ದಾರಿಯ ನಡುವೆಯೂ ನಮ್ಮಗಳನ್ನು ನೋಡುತ್ತಲೇ 'ಶಂಕರಲಿಂಗನ ಭಕ್ತರು.... ಎಲ್ಲಾ ಬನ್ರಪ್ಪಾ' ಎಂದು ಆತ್ಮೀಯವಾಗಿ ಕರೆದು ಸ್ವಾಗತಿಸಿದರು. ಅಲ್ಲೇ ಕೂರಿಸಿಕೊಂಡು 'ಹಾಡು ಹೇಳಿ' ಎಂದರು. ನಾವು ಯಾವುದೋ ಹಾಡು ಹಾಡಲು ಪ್ರಾರಂಭಿಸಿದರೆ 'ಶಂಕರ ಲಿಂಗನ ಹಾಡುಗಳನ್ನೂ ಹೇಳಿ, ಭಜನೆಗಳನ್ನೂ ಹೇಳಿ' ಎಂದರು. ಅಷ್ಟು ಹೊತ್ತಿಗೆ ಅದ್ಯಾರೋ ಕ್ಯಾಸೆಟ್ ತಂದರು. ಗುರುನಾಥರು ಅದನ್ನು ಮುಟ್ಟಿ 'ಇಲ್ಲಿ ಇರುವ ಎಲ್ಲರಿಗೂ ಕೊಟ್ಟುಬಿಡಿರಪ್ಪಾ' ಎಂದರು. ನಮಗೆಲ್ಲಾ ಒಂದೊಂದು ಕ್ಯಾಸೆಟ್ ಕೊಡಿಸಿದರು. ಭಜನೆ ಸಾಗುತ್ತಿತ್ತು. ಯಾರೋ ಭಕ್ತರು ಎರಡು ಬುಟ್ಟಿ ಕಿತ್ತಳೆ ಹಣ್ಣು ತಂದು ಗುರುನಾಥರಿಗೆ ಅರ್ಪಿಸಿದರು. ಅದನ್ನು ಮುಟ್ಟಿ 'ಎಲ್ಲರಿಗೂ ಹಂಚಿಬಿಡಿ' ಎಂದರು. ಬಂದದ್ದೆಲ್ಲಾ ಬಂದಂತೆ ಹಂಚುತ್ತಾ, ಅಷ್ಟು ದೊಡ್ಡ ಸಮಾರಂಭದ ಮೂಲ ಕಾರಣ ಪುರುಷರಾಗಿದ್ದರೂ ಗುರುನಾಥರು ಎಳ್ಳಷ್ಟೂ ಗಡಿಬಿಡಿ ಮಾಡದೆ ಶಾಂತವಾಗಿ ಶಂಕರಲಿಂಗನ ಭಜನೆ ಕೇಳುತ್ತಾ ಶಾಂತಚಿತ್ತರಾಗಿ ಕುಳಿತಿದ್ದರು.
ಮಾಡುವವನೂ, ಮಾಡಿಸುವವನೂ ಅವನೇ ಆದಾಗ, ಎಷ್ಟು ದೊಡ್ಡ ಜವಾಬ್ದಾರಿ ಹೆಗಲ ಮೇಲೆ ಇದ್ದರೇನು - ಮಾಡಿಸುವವನು ಅವನಿದ್ದಾನೆ, ನೋಡಿಕೊಳ್ಳುವವನು ಅವನಿದ್ದಾನೆ ಎಂಬ ಧೃಢಭಾವವಿದ್ದಾಗ - ಎಲ್ಲಾ ನಿರಾತಂಕ, ನಮ್ಮಿಂದಾಗುತ್ತದೆ ಎಂಬ ಕ್ವಚಿತ್ತು ಭಾವ ನಮ್ಮಲ್ಲಿ ಬಂದಿತೆಂದರೆ ಎಷ್ಟು ಸರ್ಕಸ್ ಮಾಡಿದರೇನು, ಎಷ್ಟು ಶ್ರಮ ಪಟ್ಟರೇನು, ಒಂದಲ್ಲ ಒಂದು ಅವಘಡಗಳ ಸಾಲು ಸಾಲನ್ನೇ ಎದುರಿಸಬೇಕಾದೀತು.
ಇದೆಲ್ಲವನ್ನೂ ಗುರುನಾಥರು ಆಡದೇ ಮಾಡಿ ತೋರಿಸಿದ್ದಾರೆ. ಈ ಲೀಲಾ ವಿನೋದಗಳೆಲ್ಲಾ ಭಾವುಕ ಭಕ್ತ ಜನರಿಗೆ ಒಂದು ಪಾಠವೇ ಆಳವಾಗಿ ಅರಿತರೆ, ಗುರುಕೃಪಾಕಟಾಕ್ಷವಾದರೆ - ಗುರುನಾಥರ ಒಂದೊಂದು ಸಾಮೀಪ್ಯವೂ ಸ್ವರ್ಗ ಸಮಾನ. ಇದನ್ನೆಲ್ಲಾ ನಮಗೆ ಕಾಣುವ ಅವಕಾಶವಿರದಿದ್ದರೂ, ಸದ್ಗುರು ಭಕ್ತರ ಅನುಭವ ಸಿಕ್ಕಿದೆಯಲ್ಲಾ.... ನಾಳೆಯೂ ಬನ್ನಿ ಮುಂದಿನದನ್ನು ಅರಿಯಲು..... 'ಒಂದು ಕೊಟ್ಟರೆ ನೂರು ನೀಡುವ ಗುರು' ರೀತಿಯನ್ನು ಮನಗಾಣಲು... ನಾಳೆಯೂ ಸತ್ಸಂಗಕ್ಕೆ ಬರುವಿರಲ್ಲಾ ಗುರುಬಾಂಧವರೇ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment