ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 74
ನಾನು ಮೊದಲು .... ನಾನು ಮೊದಲು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ನಿತ್ಯ ಸತ್ಸಂಗಾಭಿಮಾನಿ ಗುರು ಬಂಧುಗಳೇ, ಇಂದಿನ ನಿತ್ಯ ಸತ್ಸಂಗಕ್ಕೆ ಆಂಧ್ರದ ಗುರುಗಳೊಬ್ಬರು ಸ್ವಾರಸ್ಯಕರವಾದ ವಿಚಾರವೊಂದನ್ನು ಕೃಪೆ ಮಾಡಿದರು. ದತ್ತಾತ್ರೇಯನ ಔಪಾಸಕರಾಗಿ, ಯಾರ ಸಹಾಯವನ್ನು ಅಪೇಕ್ಷಿಸಿದೇ, ಪ್ರಪಂಚ ಪರ್ಯಟನೆ ಮಾಡುತ್ತಾ, ಭಕ್ತರುದ್ಧಾರಗೈದ ಆ ಏಕಾಂಗಿ ಮಹಾಸ್ವಾಮಿಗಳು ಜ್ಞಾನ ವೃದ್ಧರೂ, ವಯೋ ವೃದ್ಧರೂ, ಹಿರಿಯ ಸಾಧಕರೂ ಆಗಿದ್ದು, ಅವರ ವಿಚಾರ ಇಂತಿದೆ.
"ಅಂದು ನಾನು ಗುಬ್ಬಿಯ ಚಿದಂಬರಾಶ್ರಮದಲ್ಲಿದ್ದೆ. ನಾಲ್ಕೈದು ಜನ ಸುಮಂಗಲಿಯರು ಬಂದು ನಮಿಸಿದರು. ನನಗವರಾರು, ಎಲ್ಲಿಂದ ಬಂದರು ಎಂಬುದೇನೂ ತಿಳಿದಿರಲಿಲ್ಲ. ಬಂದವರು ನಮಿಸಿ ಹಣ್ಣು ಹಂಪಲುಗಳನ್ನಿಟ್ಟರು. ನಾನು ಅವರ ಬಗ್ಗೆ ವಿಚಾರಿಸಿದಾಗ ತಿಳಿದಿದ್ದೇನೆಂದರೆ, ಅದರಲ್ಲಿ ಒಬ್ಬರು ಗುರುನಾಥರ ಸಹೋದರಿಯವರು. ಅವರೆಲ್ಲಾ ಗಾಣಗಾಪುರಕ್ಕೆ ಪ್ರವಾಸ ಹೋಗಬೇಕೆಂಬ ಇಚ್ಛೆಯನ್ನು ಅವರ ಅಣ್ಣಂದಿರಾದ ಗುರುನಾಥರಲ್ಲಿ ಇಟ್ಟಾಗ, ಆ ದತ್ತನನ್ನು ಹುಡುಕಿಕೊಂಡು ಅಷ್ಟು ದೂರವೇಕೆ ಹೋಗುತ್ತೀರಿ. ಸೀದಾ ನಿಮ್ಮ ಗುಬ್ಬಿಯ ಚಿದಂಬರಾಶ್ರಮಕ್ಕೆ ಹೋಗಿರಿ. ಅಲ್ಲಿಗೆ ಆಂಧ್ರದ ದತ್ತೋಪಾಸಕ ಸನ್ಯಾಸಿಗಳೊಬ್ಬರು ಬಂದಿದ್ದಾರೆ. ಅವರನ್ನು ದರ್ಶನ ಮಾಡಿ ಬನ್ನಿ ಎಂದಾಗ ಈ ಎಲ್ಲ ಸುಮಂಗಲಿಯರೂ ಇಲ್ಲಿಗೆ ಬಂದಿದ್ದು, ಆದರೆ ನನಗರಿಯದ ವಿಚಾರವೆಂದರೆ ಅದುವರೆವಿಗೂ ನಾನು ಗುರುನಾಥರನ್ನು ಕಂಡಿರಲಿಲ್ಲ, ಕೇಳಿರಲಿಲ್ಲ - ನಾನಿಲ್ಲಿ ಚಾತುರ್ಮಾಸ್ಯಕ್ಕೆ ಬಂದಿರುವುದು, ಅವರಿಗೆ ಹೇಗೆ ತಿಳಿಯಿತೋ ಒಂದೂ ನನಗೆ ಗೊತ್ತಿಲ್ಲ. ಇಂದು ನನಗವರಿಂದ ಆಗಿರುವ ಸಹಾಯ ಅದೆಷ್ಟೆಂದರೆ ಹೇಳುವಂತಿಲ್ಲ. ಒಂದು ರೀತಿ ಈ ಮಹಾಪುರುಷರು ನನ್ನ ತಂದೆಯ ಸ್ಥಾನದಲ್ಲಿ ನನಗಿದ್ದರು.
ಮತ್ತೊಂದು ಘಟನೆಯನ್ನು ಆಂಧ್ರ ಗುರೂಜಿಯವರು ವಿವರಿಸಿದರು. ಬಹುಶಃ ಇಂತಹ ಘಟನೆ ನಮ್ಮ ಸತ್ಸಂಗಕ್ಕೆ ದೊರೆತಿರುವುದು ಬಲು ಅಪರೂಪವೇ.
"ಆಮೇಲೆ ನಾನು ಒಂದು ದಿವಸ ಗುರುನಾಥರ ಊರಿಗೆ ಹೋಗಿ ಅವರನ್ನು ಕಂಡು ನಮಿಸಿ ಬರಬೇಕೆಂದು ಹೊರಟೆ. ಗುಬ್ಬಿಯಿಂದ ಸಖರಾಯಪಟ್ಟಣವನ್ನು ಬಸ್ಸಿನಲ್ಲಿ ತಲುಪಿ, ಒಂದೆರಡು ಬಾಳೆಯ ಗೊನೆಗಳನ್ನು ಅಂಗಡಿಯಲ್ಲಿ ಕೊಂಡುಕೊಂಡು, ಗುರುನಾಥರ ಮನೆ ವಿಳಾಸವನ್ನು ವಿಚಾರಿಸುತ್ತಾ, ಅವರ ಮನೆ ಬಾಗಿಲಿಗೆ ಹೋದೆ. ನಾನೇನು ಬರುವ ವಿಚಾರವನ್ನು ಅವರಿಗೆ ತಿಳಿಸಿರಲಿಲ್ಲ. ಬಾಗಿಲಿನ ಬಳಿ ಹೋಗುವುದರಲ್ಲಿ ಗುರುನಾಥರು, ಅವರ ಮಡದಿಯವರು, ಕೈಯಲ್ಲಿ ನೀರು ತಂಬಿಗೆ, ಹೂವು ಹಣ್ಣು ಹಿಡಿದು ನಿಂತಿದ್ದರು. ಜನರೆಲ್ಲಾ ನೋಡು ನೋಡುತ್ತಿದ್ದಂತೆಯೇ ನಮ್ಮಿಬ್ಬರ ಮಧ್ಯೆ ದೊಡ್ಡ ಜಗಳವೇ ನಡೆಯಿತು. ಯಾರೂ ಸೋಲುವಂತಿರಲಿಲ್ಲ. ಕೈಯಿಂದ ಕಿತ್ತುಕೊಳ್ಳುವ ಹಂತಕ್ಕೆ ಹೋಯಿತು. ಕೊನೆಗೆ ವಿಜಯ ಸಿಕ್ಕಿದ್ದು ನನಗೇ.... ಜಗಳವಾಗಲು ಕಾರಣವಾದ ವಿಚಾರವೆಂದರೆ - ನಾನು ಮೊದಲು ಅವರ ಕಾಲು ತೊಳೆದು ನಮಸ್ಕರಿಸಬೇಕೆಂದು ನಾನು, ಆದರೆ ಅವರೇ ಮೊದಲು ನನ್ನ ಕಾಲು ತೊಳೆದು ನಮಸ್ಕರಿಸಬೇಕೆಂದು ಅವರ ಹಠ, ನನ್ನ ಆರಾಧ್ಯ ದೈವವಾದ ಸಾಕ್ಷಾತ್ ದತ್ತನನ್ನು ಅಲ್ಲಿ ಕಾಣುತ್ತಿರುವಾಗ ಅವನಿಗೆ ನಮಿಸದೇ ನಾನೆಂತು ಸುಮ್ಮನಿರಲಿ? ಅವರ ಕೈಲಿದ್ದ ಚೊಂಬನ್ನು ಪ್ರೀತಿಯ ಜಗಳವಾಡಿ ಕಿತ್ತುಕೊಂಡೆ. ಅವರ ಕಾಲು ತೊಳೆದು, ನಮಸ್ಕರಿಸಿ, ದಟ್ಟ ಪ್ರಭುವನ್ನು ಕಂಡ ಧನ್ಯತೆಯಲ್ಲಿ ನಾನು ತನ್ಮಯನಾಗಿದ್ದಾಗ ಅವರೂ ನನ್ನ ಪಾದ ತೊಳೆದು ನಮಸ್ಕರಿಸಿದರು. ನೋಡುವವರಿಗೆ ಏನು ಅನಿಸಿತೋ ಏನೋ - ನನಗದರ ಚಿಂತೆಯಿಲ್ಲ. ಅವಧೂತರೆಂದರೆ ಅವರೇ ಸಾಕ್ಷಾತ್ ದತ್ತ ಸ್ವರೂಪಿಗಳು ... ಅಂದಿನ ಘಟನೆಯನ್ನು ನೆನೆದರೆ ನನಗೆ ಮೈ ರೋಮಾಂಚನವಾಗುತ್ತದೆ"... ಗುರುಗಳೂ ಭಾವುಕರಾದರು.... ಅವರ ಕಂಠ ಗದ್ಗದಿತವಾಯಿತು. ಕೆಲ ಕ್ಷಣ ಮೌನದ ರಾಜ್ಯಭಾರವೇ.....
"ಎಲ್ಲ ಕಳೆದು ಹೋದ ದಿನಗಳು....ಅಂತಹ ಮಹಾತ್ಮರ ಆಸರೆ ಎಲ್ಲಿದೆ ಈಗ.... ಅವರ ಬಾಂಧವ್ಯ ಎಷ್ಟರ ಮಟ್ಟಿಗೆ ಇತ್ತೆಂದರೆ, ಅನೇಕ ಸಾರಿ ನಾನಲ್ಲಿಗೆ ಹೋಗುತ್ತಿದ್ದೆ. ನನಗೆ ಒಮ್ಮೆ ಅಟ್ಟದ ಮೇಲೆ, ಅವರ ಮನೆಯಲ್ಲಿ ವಾಸ್ತವ್ಯ ಮಾಡಿಸಿದ್ದರು. ಇದ್ದಕ್ಕಿದ್ದಂತೆ ಗುರುನಾಥರಿಗೆ ಸಿಕ್ಕಾಪಟ್ಟೆ ಮೈ ಸುಡತೊಡಗಿತು. ಐದಡಿ ದೂರದಲ್ಲಿ ಕುಳಿತವರಿಗೆ ಅವರ ಮೈನ ಜ್ವರದ ಶಾಖ ತಗಲುತ್ತಿತ್ತು. ಗುರುನಾಥರು ಒಮ್ಮೆಲೇ ಜೋರಾಗಿ ನನ್ನನ್ನು ಕೂಗಿದರು. ನಾನು ಕೆಳಗಿಳಿದು ಬೇಗ ಬೇಗ ಬಂದೆ.... "ಗುರುಗಳೇ ನನಗೆ ನೀವು ಈ ಔಷಧಿ ಕೊಡುತ್ತೀರೋ ಇಲ್ಲವೋ? ತಡೆಯಲು ಆಗುತ್ತಿಲ್ಲ" ಎಂದರು. ನಾನು ಸ್ವಾಮಿ ತಾವೇ ಭವರೋಗ ವೈದ್ಯರು, ನಿಮಗೆ ನಾನೆಂತಹ ಔಷಧಿ ಕೊಡಲಿ? ಎಂದಾಗ - ಅದೆಲ್ಲಾ ಬೇಡ, ಈಗ ಕೊಡ್ತೀಯೋ ಇಲ್ಲವೋ' ಎಂದು ಗುರುನಾಥರು ಪ್ರೀತಿಯ ಆಜ್ಞೆ ಮಾಡಿದಾಗ ನಾನು ಎದ್ದು ಹೋಗಿ ನನಗೆ ತಿಳಿದ ಔಷಧಿ ತಂದು ನೀಡಿದೆ. ಬೆಳಗಿನ ಹೊತ್ತಿಗೆ ಗುರುನಾಥರು ಆರೋಗ್ಯದಿಂದ ಕುಣಿದಾಡುತ್ತಿದ್ದರು".
ಪ್ರಿಯ ನಿತ್ಯ ಸತ್ಸಂಗಾಭಿಮಾನಿಗಳೇ, ಗುರುನಾಥರು ಸಾಮಾನ್ಯ ಭಕ್ತರೊಂದಿಗೆ ವ್ಯವಹರಿಸುವುದಕ್ಕೂ, ಅವರ ಅಂತರಂಗದ ಸಾಧಕರೊಂದಿಗಿನ ಸಮಾವೇಶಕ್ಕೂ ಅದೆಷ್ಟು ಅಂತರಗಳಿವೆ. ಸಾಧಕರಿಗೆ ತಾವಾರೆಂದು ತೋರಿದ ಮಹಾನುಭಾವ ಗುರುನಾಥರ ಒಂದೊಂದು ಅನುಭವವೂ ಆನಂದದಾಯಕವೇ. ಈ ಆನಂದ ನಿತ್ಯ ಸತ್ಸಂಗದ ಮುಖಾಂತರ ಎತ್ಕಿಂಚಿತ್ ನಮ್ಮೆಲ್ಲರಿಗೂ ತಲುಪಲಿ - ನಾಳೆಯೂ ಈ ರಸಾನುಭವಕ್ಕೆ ಬರುವಿರಲ್ಲವಾ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment