ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 75
ಸಂಶಯ ನಿವಾರಿಸಿದ ಸದ್ಗುರುಗಳು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಸದ್ಗುರುನಾಥ ಲೀಲಾಮೃತದ ಎರಡನೇ ಭಾಗ, ನಿತ್ಯ ಸತ್ಸಂಗ ಪೂರ್ಣಗೊಂಡು ಬಿಡುಗಡೆಗೆ ಮುನ್ನ, ಮೊದಲು ಸಖರಾಯಪಟ್ಟಣದ ವೇದಿಕೆಗೆ ಹೋದೆ. ಅಷ್ಟು ಹೊತ್ತಿಗೆ ಸಾಮಾನ್ಯ ಯಾರೂ ಅಲ್ಲಿ ಇರುವುದಿಲ್ಲ. ಆದರೂ ಯಾರಾದರೂ ಗುರುನಾಥರ ಶಿಷ್ಯರಿಗೆ ಪುಸ್ತಕವನ್ನು, ವೇದಿಕೆಯ ಮೇಲಿಟ್ಟು, ಶಿಷ್ಯರಿಗೆ ಕೊಟ್ಟರೆ ಅದೇ ನಿಜವಾದ ಲೋಕಾರ್ಪಣೆ ಎಂಬ ಭಾವನೆಯಿಂದ ಅಲ್ಲಿಗೆ ಹೋದೆವು. ಮೊದಲು ಯಾರೂ ಕಾಣಲಿಲ್ಲ. ಸ್ವಲ್ಪ ಹೊತ್ತಿಗೆ ದೂರದಲ್ಲಿ ಒಬ್ಬರು ಪೊರಕೆ ಹಿಡಿದು ಗುರುನಾಥರ ಅಂಗಳ ಗುಡಿಸುತ್ತಿದ್ದರು. ಸದ್ಯ ಗುರುಬಂಧು ಒಬ್ಬರು ಸಿಕ್ಕರೆಂದುಕೊಂಡು ವೇದಿಕೆಗೆ ಪೂಜೆ ಮಾಡಿ ಪುಸ್ತಕವನ್ನು ಅರ್ಪಿಸಿ, ಆ ವ್ಯಕ್ತಿಗಳನ್ನು ಮಾತನಾಡಿಸಿ, ಪುಸ್ತಕ ಕೊಟ್ಟೆ. ಭಕ್ತಿಯಿಂದ ಅವರು ಅದನ್ನು ತೆಗೆದುಕೊಂಡು ಧಾರವಾಡದ ಪೇಡಾ ನೀಡಿದರು. ಅಲ್ಲಿಗೆ ಗುರುನಾಥರೇ ಪುಸ್ತಕ ಬಿಡುಗಡೆಯ ಸಿಹಿಯನ್ನು ಹಂಚಿದ್ದಾರೆಂದು ಸಂತಸವಾಯಿತು. ಮತ್ತೊಂದಾರು ತಿಂಗಳ ನಂತರ ಆ ವ್ಯಕ್ತಿ ಸಿಗಬೇಕೇ - ಅವರೇ ಪರಿಚಯಿಸಿಕೊಂಡರು. "ಗುರುನಾಥರು ಇದ್ದಾಗ ಬಂದಾಗಲೆಲ್ಲಾ ಪೇಡಾ ತರುತ್ತಿದ್ದೆ. ಅವರಿನ್ನೇನೂ ಕೇಳುತ್ತಿರಲಿಲ್ಲ. 'ಪೇಡಾ ತಂದಿದ್ದೀಯಪ್ಪಾ' - ಎಂದು ಕೇಳುತ್ತಿದ್ದರು, ಎನ್ನುತ್ತಾ ಗುರುನಾಥರ ಕುರಿತು ಸತ್ಸಂಗ ಪ್ರಾರಂಭಿಸಿದರು. ಎಲ್ಲೆಲ್ಲಿ ಹೋದರೂ ಗುರುನಾಥರ ವಿಚಾರವನ್ನು ಬಾಯ್ತುಂಬಾ ಹೇಳುತ್ತಾ ತಾವೂ ಸಂತಸಪಟ್ಟು ಇತರರನ್ನೂ ಸಂತಸ ಪಡಿಸುವ ಆ ಎರಡು ದಿನಗಳು ಮನಸಾರೆ ಗುರುಕಥನ ಕೇಳುವ ಸದವಕಾಶ ಒದಗಿತು - ಅದೇ ಗುರುಕರುಣೆ - ಬನ್ನಿ ಕೇಳೋಣ.
"ನಾನು ತುಂಬಾ ಜಿಜ್ಞಾಸೆಯ ಸ್ವಭಾವದವನು. ಎಲ್ಲದಕ್ಕೂ ವೈಜ್ಞಾನಿಕ ಕಾರ್ಯ ಕಾರಣ ಸಂಬಂಧವಿಲ್ಲದೇ ಒಪ್ಪಿಕೊಳ್ಳದ ಮನ ನನ್ನದು. ಜೊತೆಗೆ ಅಂತಿಮ ಸತ್ಯ ಎಂದರೇನು? ಅದನ್ನಾರು ತೋರಿಸುತ್ತಾರೆ? ಎಂದು ಜೀವನವಿಡೀ ಹೀಗೆಯೇ ಅಲೆದಾಟದಲ್ಲಿ ಮುಗಿದು ಬಿಡುತ್ತದೆಯೋ ನನ್ನ ಜೀವನ, ಎಂದು ಚಿಂತಿಸುತ್ತಿರುವಾಗ, ಅದ್ಯಾರೋ 'ನೀವು ಸಖರಾಯಪಟ್ಟಣದ ಗುರುಗಳ ಬಳಿ ಹೋಗಿ.. ನಿಮ್ಮ ಪ್ರಶ್ನೆಗಳಿಗೆಲ್ಲಾ ಅಲ್ಲಿ ಉತ್ತರ ಸಿಗಬಹುದು' ಎಂದರು. ನಾನು 1998 ರ ಕೊನೆಯಲ್ಲಿ ಗುರುನಾಥರನ್ನು ಭೇಟಿಯಾದೆ. ನಾನು ಮೊದಲ ಸಾರಿ ಅಲ್ಲಿಗೆ ಹೋದೆ. ಗುರುನಾಥರು ಬಹಳ ಪ್ರೀತಿಯಿಂದ ಬರಮಾಡಿಕೊಂಡು ನನ್ನ ಊರು, ಕೆಲಸ, ಸ್ವಭಾವಗಳೆಲ್ಲದರ ಬಗ್ಗೆ ವಿಚಾರಿಸಿದ್ದಲ್ಲದೇ, ನನ್ನನ್ನು ಒಬ್ಬ ಯಾವುದೋ ಕಾರ್ಯಕ್ರಮಕ್ಕೆ ಬಂಡ ಮುಖ್ಯ ಅತಿಥಿಯಂತೆ ಕಂಡು, ಮಾತನಾಡಿಸಿದರು. ಅವರ ಸರಳತೆ, ಪ್ರೀತಿ, ಅವರು ಇತರರನ್ನು ಗೌರವಿಸುವ ರೀತಿ ಇವುಗಳೆಲ್ಲಾ ನನ್ನ ಮೇಲೆ ಬಹಳ ಪ್ರಭಾವ ಬೀರಿದವು. ಹದಿನೈದೇ ದಿನಗಳಲ್ಲಿ ಮತ್ತೆ ಗುರುನಾಥರನ್ನು ನೋಡಬೇಕು. ಅವರಿಂದ ಏನಾದರೂ ಪಡೆಯಬೇಕೆಂಬ ತುಡಿತ ಅಧಿಕವಾಗಿ ಮತ್ತೆ ಸಖರಾಯಪಟ್ಟಣಕ್ಕೆ ಬಂದೆ. ಪ್ರತಿ ಸಾರಿಯೂ ನಾನು ಧಾರವಾಡ ಪೇಡಾವನ್ನೇ ಗುರುನಾಥರಿಗೆ ತೆಗೆದುಕೊಂಡು ಹೋಗುತ್ತಿದ್ದೆ. ಅವರು ಅದನ್ನೇ ತಂದಿದ್ದೀಯಾ ಅಂತ ಕೇಳುತ್ತಿದ್ದರು. ಸುಮ್ಮನೆ ಒಂದು ಪೀಸು ತೆಗೆದುಕೊಂಡು ಬಾಕಿಯಾದನ್ನು 'ಎಲ್ಲರಿಗೂ ಕೊಟ್ಟು ಬಿಡು' ಎನ್ನುತ್ತಿದ್ದರು.
ಅದೇ ರೀತಿ ನಾನು ಹಂಚುತ್ತಿದ್ದೆ. ಈ ಸಾರಿಯೂ ಗುರುನಾಥರನ್ನು ಕಂಡು ನಮಿಸಿ, ಕುಶಲ ಸಮಾಚಾರವಾದ ಮೇಲೆ, ನಾನು ತಂದ ಪೇಡಾವನ್ನು ಹಂಚುತ್ತಿದ್ದೆ. ಅದರಲ್ಲಿ ಕೆಲವರು ಅತ್ತ ಇತ್ತ ಬಂದು ಹೋಗುತ್ತಿದ್ದರು. ಗುರುನಾಥರು ಪೂಜಾಗೃಹದಿಂದ ಎಲ್ಲೋ ಹೊರಗೆ ಹೋಗಿದ್ದರು. ಆ ಸಾರಿ ನನ್ನ ಕೆಲಸವಾದ ಮೇಲೆ ನಾನು ಊರಿಗೆ ಬಂದೆ. ಮತ್ತೆ ಮೂರನೇ ಸಾರಿ ಅಲ್ಲಿಗೆ ಹೋದಾಗ ಗುರುಗಳು ಅರ್ಧ ಪೇಡಾವನ್ನು ಮಾತ್ರ ಹಂಚಿ, ಬಾಕಿಯಾದನ್ನು ಹಾಗೆ ಇಟ್ಟುಕೊಳ್ಳಿ' ಎಂದರು. ನಾನು ಅದೇ ರೀತಿ ಮಾಡಿದೆ. ಸಂಜೆಯ ಹೊತ್ತಿಗೆ ನನ್ನ ಕಡೆ ನೋಡಿ, 'ನನ್ನ ಜೊತೆ ಬನ್ನಿ. ಜೊತೆಗೆ ಆ ಪೇಡಾವನ್ನು ತೆಗೆದುಕೊಂಡು ಬನ್ನಿ' ಎಂದು ಹೇಳಿ ಮನೆಯ ಮೆಟ್ಟಿಲಿನಿಂದ ಕೆಳಗಿಳಿದು ಬೀದಿಯಲ್ಲಿ ನಡೆಯತೊಡಗಿದರು. ನಾನೂ ಹಿಂದೆ ಹೊರಟೆ. ಒಂದು ಮನೆಯ ಒಳಹೊಕ್ಕು 'ನೀವು ಇವರಿಗೆ ಅವತ್ತು ಪೇಡ ಕೊಟ್ಟಿರಲಿಲ್ಲವಲ್ಲ. ಈಗ ಅವರಿಗೆ ಕೊಡಿ' ಎಂದರು. ನಾನು ನೋಡಿದೆ. ಅಂದು ನಾನು ಪೇಡಾ ಹಂಚುವುದರಲ್ಲಿ ಈ ಹೆಣ್ಣು ಮಗಳು ಅಲ್ಲಿಂದ ಎದ್ದು ಹೋದದ್ದು ನೆನಪಿಗೆ ಬಂತು. ಆಗ ಅಲ್ಲಿ ಗುರುನಾಥರು ಇರಲಿಲ್ಲ.... ಇಂತಹ ಅದೆಷ್ಟೋ ವಿಚಿತ್ರಗಳು ನಡೆದಿದೆ. ಮತ್ತೊಮ್ಮೆ ಅದು, ಬೇಸಿಗೆಯ ದಿವಸ. ಹಾಗಾಗಿ ಹಣ್ಣು ಹಂಪಲುಗಳನ್ನು ಕೊಂಡೊಯ್ದರೆ ಬಾಯಾರಿಕೆ ಕಡಿಮೆಯಾದೀತೆಂದು ಭಾವಿಸಿ, ಹಣ್ಣು ಹಂಪಲುಗಳನ್ನು ತೆಗೆದುಕೊಂಡು ಹೋಗಿ ಗುರುನಾಥರಿಗೆ ಅರ್ಪಿಸಿದೆ. ಅವರು 'ನಿನಗೊಂದು ಚೀಲ ಒಣದ್ರಾಕ್ಷಿ ಕೊಡಲೇನು?' ಎಂದು ಪ್ರಶ್ನಿಸಿದ್ದು ನಾನಿಲ್ಲಿ ಬರುವಾಗ ಪೇಡಾವನ್ನೇ ತರಬೇಕೆಂಬ ಅಂತರಂಗದ ಆಣತಿಯನ್ನು ನನಗೆ ಕರುಣಿಸಿದ್ದರು. ಅಂದಿನಿಂದ ಎಂದೆಂದೂ ಭಗವಂತನಿಗೆ ಪೇಡಾ ಸೇವೆ ಮಾಡುವ ಸದವಕಾಶ ನನಗೆ ಒದಗಿಸಿಕೊಟ್ಟಿದ್ದಾರೆ. ಅವರ ಮಹಾ ನಿರ್ವಾಣದ ಸಂದರ್ಭದಲ್ಲಿ ಪೇಡಾವನ್ನೇ ಒಯ್ದಿದ್ದೆ. ಮುಂದೆ ಆ ನಂತರವೂ ನಾನು ಬಂದು ಗುರುನಾಥರ ವೇದಿಕೆಯ ಬಳಿ ಪೇಡಾವನ್ನು ಒಳಗಡೆ ಇಡುತ್ತಿದ್ದೆ. ಯಾವುದೋ ರೂಪದಲ್ಲಿ ಅದು ಅವರಿಗೆ ಅರ್ಪಿತವಾಗುತ್ತಿತ್ತು. ಒಮ್ಮೆಯಂತೂ ನಾನು ವೇದಿಕೆಯ ಬಳಿ ಹೋಗಿ ಪೇಡಾ ಇಟ್ಟು ಪಕ್ಕದಲ್ಲಿ ಕೆಲಸದಲ್ಲಿ ನಿರತನಾಗಿದ್ದೆ. ಇನ್ಯಾರೂ ಅಲ್ಲಿ ಇರಲಿಲ್ಲ. ಆದರೆ ಪೇಡಾಗಳು ಅಲ್ಲಿ ಕಾಣಲಿಲ್ಲ. ಆನಂತರ ಎರಡು ನಾಯಿಗಳು ಬಂದು ನಿಂತಿದ್ದವು. ಹೇಗೋ ಗುರುನಾಥರಿಗೆ ನಾನು ತಂದ ನೈವೇದ್ಯ ತಲುಪಿತೆಂಬ ಸಮಾಧಾನ ಬಂತು. ಇದೀಗ ಯಾವ ತೊಳಲಾಟ ಹುಡುಕಾಟದಲ್ಲಿ ನಾನಿಲ್ಲ. ನನಗೀಗ ಈಶ್ವರ ಸ್ವರೂಪಿಯಾದ ಗುರುಗಳು ಸಂಶಯ ನಿವಾರಿಸಿ ನೆಮ್ಮದಿಯನ್ನು ನೀಡಿದ್ದಾರೆ. ಸತ್ಯದ ಆ ಮಹಾನ್ ಅಸ್ತಿತ್ವದ ಇರುವನ್ನು ಸಾಬೀತು ಪಡಿಸಿ, ನನ್ನ ಗುರು ನನ್ನ ಗುರಿಯನ್ನು ಕಾಣಿಸಿಕೊಟ್ಟಿದ್ದಾರೆ. ನಾನವರಿಗೆ ಎಷ್ಟು ನಮಿಸಿದರೂ ಸಾಲದು" ಎನ್ನುತ್ತಾರೆ ಶ್ರೀಯುತ ಮಧುಕರ ಪ್ರಭುಗಳು.
ಪ್ರಿಯ ಸತ್ಸಂಗಾಭಿಮಾನಿ ಗುರುಬಂಧುಗಳೇ, ಅನೇಕರ ಮನಸ್ಸಿನಲ್ಲಿ ನಾನು ಗುರುನಾಥರನ್ನು ಕಾಣಲಾಗಲಿಲ್ಲವಲ್ಲ, ಅವರೊಂದಿಗೆ ಮಾತನಾಡುವ ಅವಕಾಶ ಸಿಗಲಿಲ್ಲವಲ್ಲ, ಅವರ ಕರುಣೆ ದೊರೆಯಲಿಲ್ಲವಲ್ಲ ಎಂಬ ಕೊರಗಿದೆ. ಖಂಡಿತಾ ಆ ಕೊರಗನ್ನು ಬಿಟ್ಟುಬಿಡಿ - ನಿತ್ಯ ಸತ್ಯನಾದ ಸದ್ಗುರುನಾಥರ ಕೃಪೆ ನೋಡಿ ಹೇರಳವಾಗಿ ಆಗುತ್ತಿದೆ. ಸತ್ಸಂಗ ಬಂಧುಗಳೇ ನಾಳೆಯೂ ಬರುವಿರಲ್ಲಾ. ಮತ್ತಷ್ಟು ಕರುಣಾಸಾಗರರ ಸವಿಯನ್ನು ಅನುಭವಿಸೋಣ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment