ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 64
ನಾವು ಶಂಕರಲಿಂಗನ ಭಕ್ತರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
'ವೆಂಕಟಾಚಲ ಅವಧೂತ ಗುರುಗಳ ಬಗ್ಗೆ ಬಹಳಷ್ಟನ್ನು ಪದೇ ಪದೇ ಕೇಳುತ್ತಿದ್ದೆ. ಹೋಗಿ ನೋಡಬೇಕೆಂದು ಹಂಬಲವಿದ್ದರೂ ಅಷ್ಟು ಸುಲಭವಾಗಿ ನನಗಾಗಿರಲಿಲ್ಲ. ಒಮ್ಮೆ ನಮ್ಮ ಭಾವ ಫೋನು ಮಾಡಿ 'ನೀ ಏನು ಮಾಡ್ತೀ, ಬಿಡ್ತೀ ನನಗೆ ಗೊತ್ತಿಲ್ಲ. ಗುರುನಾಥರ ದರ್ಶನ ಮಾಡಬೇಕೆಂದಿದ್ದರೆ, ಇದ್ದುದ್ದನ್ನು ಇದ್ದಲ್ಲಿ ಬಿಟ್ಟು ಹೊರಟು ಬಾ.. ಇನ್ನು ಮತ್ತೆ ನಾನಿನ್ನೇನು ಹೇಳೋಲ್ಲಾ.. ಅಂತ ನಂಗೆ ಖಡಕ್ಕಾಗಿ ಒಂದು ದಿನ ಫೋನು ಮಾಡಿದರು. ನೋಡುವ ಹಂಬಲವಿದ್ದರೂ ಆಗಿರಲಿಲ್ಲ. ಹೀಗೆ ನಮ್ಮ ಭಾವನ ಒತ್ತಾಯದ ಮೇಲೆ ಗುರುನಾಥರ ದರ್ಶನದ ಸುಯೋಗ ನನಗೆ ಒದಗಿ ಬಂತು. ಬಿಟ್ಟ ಕೆಲಸ ಬಿಟ್ಟು ರೈಲು ಹಿಡಿದು, ಸಖರಾಯಪಟ್ಟಣಕ್ಕೆ ಹೋದೆ. ನಮ್ಮ ಶಂಕರಲಿಂಗ ಭಗವಾನರ ಆಶ್ರಮದ ಚಪ್ಪರ, ಅನ್ನಸಂತರ್ಪಣೆಗಳನ್ನು ಕಂಡು ಅದೇ ದೊಡ್ಡದೆಂದು ಭಾವಿಸಿದ ನಮಗೆ, ಸಖರಾಯಪಟ್ಟಣದಲ್ಲಿ ಗುರುನಾಥರ ಮನೆಯನ್ನು ಕೇಳುತ್ತಾ... ಅಲ್ಲಿ ಹೋಗಿ ನೋಡಿದಾಗ ದಂಗು ಬಡಿದಂತಾಯಿತು. ಊರಿಗೆ ಊರೇ ಚಪ್ಪರ, ತಳಿರು ತೋರಣಗಳಿಂದ ಶೃಂಗಾರವಾಗಿತ್ತು. ಅಷ್ಟೊತ್ತಿಗೆ ಸರಿಯಾಗಿ ಶೃಂಗೇರಿ ಜಗದ್ಗುರುಗಳು, ವೆಂಕಟಾಚಾಲ ಅವಧೂತರು ಬಂದರು. ದೂರದಿಂದಲೇ ನಮಸ್ಕಾರ ಮಾಡಿದೆವು. ಆದರೆ ಅವರ ಬಳಿ ಹೋಗಿ ನಮಸ್ಕಾರ ಮಾಡಿ ಮಾತನಾಡಿಸಬೇಕೆಂಬ ಆಸೆ ನಮ್ಮದು. ಹತ್ತಾರು ಸಾವಿರಗಳ ಜನಜಂಗುಳಿಯಲ್ಲಿ ಖಾಸಾ ದರ್ಶನಕ್ಕಾಗಿ ಕಾಯುತ್ತಾ ಕುಳಿತೆ. ಸುಮ್ಮನೆ ಅತ್ತ ಇತ್ತ ಕಣ್ಣು ಹಾಯಿಸಿದೆ. ಸಂತೆ ಮಾಳದಲ್ಲಿ ಕಂಡು ಬರುವಂತೆ ತರಕಾರಿಯ ರಾಶಿಗಳು ಬಂದು ಬೀಳುತ್ತಿದ್ದವು. ಈ ವಸ್ತುಗಳನ್ನು ಯಾರು ಕಳಿಸಿದರು, ಏಕೆ ಕಳಿಸಿದರು, ದುಡ್ಡೆಷ್ಟು, ಯಾರು ಕೊಡುತ್ತಾರೆ ಎಂದು ಲಾರಿಯವರನ್ನು ಕೇಳಿದಾಗ, ಅದ್ಯಾರೋ ಒಂದು ಲಾರಿಯನ್ನು ಇಂಥ ಕಡೆ ಇಳಿಸಿ ಬಾ ಎಂದು ಯಾರೋ ಈ ಚೀಟಿ ಕೊಟ್ಟರು, ಇಳಿಸುತ್ತಿದ್ದೇವೆ, ಇನ್ನೇನೂ ನಮಗೆ ಗೊತ್ತಿಲ್ಲ ಎಂದರು.
ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಭಕ್ಷ್ಯಭೋಜ್ಯಗಳು ತಯಾರಾಗುತ್ತಿದ್ದವು. ಅದ್ಯಾರಾರೋ ಬಂದು, ಬಂಧು-ಬಾಂಧವರಿಗೆಲ್ಲಾ ಬಡಿಸುತ್ತಿದ್ದರು. ಬಡಿಸುವವರನ್ನು ಕೇಳಿದಾಗ ನಾನು ಹಿಂಗೇ ಬಂದಿವಿ... ಎಲ್ಲಾ ಬಡಿಸುತ್ತಿದ್ದರು, ನಾವೂ ಬಡಿಸುತ್ತಿದ್ದೀವಿ, ನಾವೂ ಪ್ರಸಾದ ತೊಗೊಂಡು ಹೋಗ್ತೀವಿ ಎಂದರು. ಅದ್ಯಾವ ಶಕ್ತಿ ಇಷ್ಟನ್ನೆಲ್ಲಾ ನಡೆಸುತ್ತಿದೆ, ಯಾರಿಗೆ ಯಾರು ನಿರ್ದೇಶನ ಆಜ್ಞೆ ಮಾಡುತ್ತಾರೆಂಬುದು ಅಷ್ಟು ಸುಲಭವಾಗಿ ಎಲ್ಲೂ ಕಂಡು ಬರುತ್ತಿರಲಿಲ್ಲ. ಯಾರೋ ಒಂದೆಡೆ ಹಣ್ಣು ಹಂಪಲುಗಳು ರಾಶಿ ಹಾಕಿದ್ದರು. ಬಂದ ಬಂದವರಿಗೆಲ್ಲಾ ತೆಗೆದು ತೆಗೆದು ಕೊಡುತ್ತಿದ್ದರು. ಇನ್ನ್ಯಾರೋ ಅಲ್ಲಿ ಬಂದವರಿಗೆ ಅದ್ಯಾವುದೋ ಸ್ತೋತ್ರದ ಪುಸ್ತಕ ನೀಡಿದರೆ, ಮತ್ಯಾರೋ ಕರ್ಚೀಫು ನೀಡುತ್ತಿದ್ದರು.... ಒಟ್ಟಿನಲ್ಲಿ ಕೊಡು... ಕೊಡು.. ಕೊಡು ಕೊಡುವಿಕೆಯೇ ಎಲ್ಲೆಡೆ ತಾಂಡವವಾಡುತ್ತಿತ್ತು. ಗುರುನಾಥರೆಂದರೆ ದಾನ ಮಾಡುವಿಕೆ, ಮನದಣಿಯೇ ಕೊಡುವಿಕೆ ಎಂಬುದರ ದರ್ಶನವಿಲ್ಲಿ ಆಗುತ್ತಿತ್ತು'. ನಮಗೆ ಹೀಗೆ ತಮ್ಮ ಮೊಟ್ಟ ಮೊದಲು ಗುರುನಾಥರ ದರ್ಶನಕ್ಕೆ ಶೃಂಗೇರಿಯ ಶ್ರೀಗಳೂ ಬಂದಾಗ ಸಖರಾಯಪಟ್ಟಣಕ್ಕೆ ಹೋದಾಗ ಆದ ಅನುಭವವನ್ನು ಶ್ರೀಯುತ ಅಶೋಕರವರು ನಿತ್ಯ ಸತ್ಸಂಗಕ್ಕಾಗಿ ಹಂಚಿಕೊಂಡ ರೀತಿ ಇದು.
ಅಂತೂ ಜನ ಜಂಗುಳಿಯ ಮಧ್ಯೆಯೇ ತೂರಿಕೊಂಡು ಹೋಗಿ, ತಾವು ಯಾವ ಮೂಲ ಉದ್ದೇಶ ಇಟ್ಟುಕೊಂಡು ಬಂದಿದ್ದಾರೋ ಅದನ್ನು ಸಾಧಿಸಲು ನುಗ್ಗಿದ ಗುರು ಭಕ್ತರಾದ ಅಶೋಕ ಅಂತೂ, ಗುರುನಾಥರ ಸನಿಹ ಬಂದು ಕಾಲಿಗೆ ಬಿದ್ದರು. ಮನದ ಹಂಬಲಗಳನ್ನೆಲ್ಲಾ ತೋಡಿಕೊಳ್ಳುವ ಆಸೆ, ಸಾವಿರಾರು ಜನಗಳ ಮಧ್ಯೆ ಆ ದಿನದಲ್ಲಿ ಎಲ್ಲಿಂದ ಸಿಗಬೇಕು ಸಮಯ. ಇವರ ಮುಖ ನೋಡುತ್ತಲೇ, ಎಲ್ಲ ಅರಿತ ಗುರುನಾಥರು ನಾಳೆ ಬರುವ ಮೊದಲು ಊಟ ಮಾಡು, ಹೋಗು ಮೊದಲು, ನಾಳೆ ಬಾ ಎಂದು ಖಡಕ್ಕಾಗಿ ಹೇಳಿಬಿಟ್ಟರು.
ಒಂದೆರಡು ಮಾತನಾಡಲೂ ಆಗಲಿಲ್ಲವಲ್ಲ ಎಂಬ ದುಗುಡದಲ್ಲಿ ಆ ಗುಂಪಿನಿಂದ ಹೊರಬಂದು, ಪರಿಚಿತರೊಬ್ಬರ ಬಳಿ ಹೀಗಾಯಿತೆಂದು ಹೇಳಿಕೊಂಡಾಗ, ಅವರು 'ಅಯ್ಯೋ ಮಹಾರಾಯ, ನೀನೇ ಪುಣ್ಯವಂತ. ಗುರುನಾಥರು ನಿನ್ನ ಹತ್ತಿರ ಮಾತನಾಡಿ ನಾಳೆ ಬಾ' ಅಂತಲೂ ಹೇಳಿದ್ದಾರೆ. ನಾವು ಬೆಳಗಿನಿಂದ ಕಾದಿದ್ದೀವಿ. ಹತ್ತಿರಾನೇ ಹೋಗಲಾಗಲಿಲ್ಲ... ಅವರು ನಮ್ಮ ಕಡೇನೇ ನೋಡಿಲ್ಲ... ನೀನೇ ಪುಣ್ಯವಂತ' ಎಂದರಂತೆ. ಆಗ ಅಶೋಕರ ಶೋಕ ದೂರವಾಗಿ ಒಂದಿಷ್ಟು ಮನಸ್ಸಿಗೆ ಮುದ ಸಿಕ್ಕಿರಬಹುದು.
'ಈ ವಿಚಾರವನ್ನು ನಮ್ಮ ಭಾವನ ಬಳಿ ಹೇಳಿದೆ. ಆ ಮೇಲೆ ನಮ್ಮ ಶೇಷ ಮಾವ, ಗಣೇಶ ಮಾವ, ಅತ್ತಿಗೆ ಇವರೆಲ್ಲರ ಜೊತೆ ಗುರುನಾಥರಿಗೆ ನಮಸ್ಕಾರ ಮಾಡಿ ಬರುತ್ತೇವೆ, ಎಂದು ಹೇಳಿ ಬರಲು ಹೋದೆವು. ಗುರುನಾಥರು ಹೇಳಿದಂತೆ ನಾಳೆ ಬರುವುದೆಂದು ಮನಸ್ಸಿನಲ್ಲಿ ತೀರ್ಮಾನಿಸಿದ್ದೆ. ಎಲ್ಲರೂ ಒಳ ಹೋಗಿ ಅದ್ಯಾರೋ ಗುರುನಾಥರ ಬಳಿ ಪರಿಚಯ ಹೇಳಿಕೊಂಡರು. ನಾವು ಶಂಕರಲಿಂಗ ಭಗವಾನರ ಭಕ್ತರು, ಇವರು ಚಿತ್ರದುರ್ಗ, ಇವರು ಹೊಳಲ್ಕೆರೆಯವರು... ಎಂದರು. ಶಂಕರಲಿಂಗ ಭಗವಾನರ ಭಕ್ತರೆಂದ ಕೂಡಲೇ 'ಅಯ್ಯೋ ತಡೀರಿ ತಡೀರಿ' ಎಂದು ರಸ್ತೆಯಲ್ಲೇ ಕೂರಿಸಿದರು. ಆರತಿ ಮಾಡಿಸಿದರು. 'ಶಂಕರಲಿಂಗರ ಭಕ್ತರು ನೀವು ಇಲ್ಲೇ ಕುಳಿತುಕೊಳ್ಳಿ, ಬಹಳ ಸಂತೋಷ, ನನಗಾಗಿ ಒಂದಷ್ಟು ಭಜನೆ ಮಾಡ್ರಪ್ಪಾ" ಎಂದು ಗುರುನಾಥರೆಂದರು.
ಯಾವ ಘನಕಾರ್ಯ ಇದ್ದರೇನು, ಎಷ್ಟು ಜನರ ಜಂಗುಳಿ ನೆರೆದಿದ್ದರೇನು?, 'ಶಂಕರಲಿಂಗ' ನ ಭಕ್ತರೆಂದರೆ ಗುರುನಾಥರು ತೋರಿದ ಸಡಗರ, ಸಂಭ್ರಮ, ಭಕ್ತಿ, ಶ್ರದ್ಧೆಗಳನ್ನು ಕಂಡಾಗ ನಮ್ಮ ಶಂಕರಲಿಂಗಪ್ಪನ ವಿಶೇಷ ಹಾಗೂ ಗುರುನಾಥರು ಗುರುವಿಗೆ ಎಂತಹ ಭಕ್ತಿ ತೋರಬೇಕೆಂಬುದನ್ನು ಆಡದೇ ಮಾಡಿದ್ದು ನಮಗೆ ಸಾರ್ಥಕ್ಯ ತಂದಿತ್ತು. ನಿತ್ಯಸತ್ಸಂಗಾಭಿಮಾನಿಗಳೇ.... ನಾಳೆ ಬಾ ಎಂದಿದ್ದಾರೆ. ನೀವೂ ಬನ್ನಿ... ನಾಳೆ ಗುರುನಾಥರೇನು ಲೀಲಾನಾಟಕವಾಡುತ್ತಾರೋ, ಆನಂದದಿಂದ ಸವಿಯೋಣ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment