ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 67
ಅಲ್ಲಿ ಕೂರಲೂ ಅರ್ಹತೆ ಬೇಕು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಎಂದಿನಂತೆ ಗುರುನಾಥರ ದರ್ಬಾರು ನಡೆದಿತ್ತು. ಅನೇಕ ಜನ ಆರ್ತರು ಗುರು ದರ್ಶನಕ್ಕಾಗಿ ಅದೆಷ್ಟು ಹೊತ್ತಿನಿಂದ ಕಾದು ಕುಳಿತಿದ್ದರೋ, ಗುರುನಾಥರ ಒಳ ಮನೆಯಲ್ಲಿ ಅದೇನೋ ದೈವಕೈಂಕರ್ಯ ನಡೆದಿತ್ತು. ಒಂದು ಒಂದೂವರೆ ಗಂಟೆಗಳವರೆಗೆ ಗುರುನಾಥರನ್ನು ಕಾಣಲು ಬಂಡ ಭಕ್ತರು ತಾಳ್ಮೆಯಿಂದ ಕಾಯ್ದಿದ್ದರು. ಗುರು ಕರುಣೆ ಈ ಕಾದ ಭಕ್ತರಿಗೆ ಸಿಗುವ ಘಳಿಗೆ ಬಂದಿತ್ತು. ಗುರುನಾಥರು ತಮ್ಮ ಒಳಮನೆಯ ಕೆಲಸವನ್ನು ಮುಗಿಸಿ, ಆರ್ತರಾಗಿ ಕಾಯುತ್ತಿರುವ ಭಕ್ತರ ಅಹವಾಲುಗಳನ್ನು ಕೇಳಿ, ಅವರ ಮನಸ್ಸಂತೋಷಗೊಳಿಸುವುದರಲ್ಲಿ ತೊಡಗಿದ್ದರಂತೆ.
ಇದ್ದಕ್ಕಿದಂತೆ ಒಂದು ಕಾರಿನಲ್ಲಿ ಬಿಳಿ ವಸ್ತ್ರಗಳನ್ನು ಧರಿಸಿದ ಶ್ರೀಮಂತರಂತೆ ಕಾಣುವ ಒಂದಿಬ್ಬರು ಗುರುಗಳ ಎದುರು ಬಂದು ನಿಂತರಂತೆ. ಇದುವರೆಗೆ ಪ್ರಶಾಂತಮೂರ್ತಿಯಾಗಿದ್ದ ಗುರುನಾಥರು ಸಿಟ್ಟಾದರು. ಬೇಡ ಬೇಡ್ರಪ್ಪ, ನೀವು ನಮಸ್ಕಾರ ಮಾಡಬೇಡಿ ನಡೀರಿ.... ಹೊರ ನಡೀರಿ. ಇಲ್ಲಿ ನಿಮಗೆ ಕುಳಿತುಕೊಳ್ಳೋಕೆ ಜಾಗವೇ ಇಲ್ಲ. ಭಾರಿ ದೊಡ್ಡವರಪ್ಪ ನೀವು. ಛೇ, ನೀವಿಲ್ಲಿ ಕುಳಿತರೆ ನಿಮ್ಮ ಬಟ್ಟೆಗಳು ಕೊಳಕಾಗುತ್ತೆ. ನಿನ್ನೆ ಬಸ್ ಸ್ಟ್ಯಾಂಡಿನಲ್ಲಿ ಏನು ಹೇಳಿದ್ರಪ್ಪಾ... ನಡೀರಿ ಹೊರಟು ಬಿಡಿ... ನೀವಿಲ್ಲಿದ್ದರೆ ನಾನು ಮಾತೂ ಆಡಲ್ಲ...... ಇಲ್ಲಿ ಇರುವುದೂ ಇಲ್ಲ. ಒಂದೇ ಸಮನೆ ಗುರುನಾಥರು ಈ ರೀತಿ ಮಾತನಾಡಿದ್ದು... ಎಲ್ಲರಿಗೂ ಆಶ್ಚರ್ಯವಾಗಿತ್ತು.
ಕೊನೆಗೆ ಅಲ್ಲಿದ್ದವರೆಲ್ಲಾ ಬಂದವರನ್ನು 'ಗುರುಗಳು ಬೇಡ ಅಂದಮೇಲೆ ಹೊರಟು ಬಿಡಿ ಸಾರ್... ನಿಮ್ಮಿಂದಾಗಿ ಇದುವರೆಗೆ ಕಾದ ನಮಗೂ ತೊಂದರೆ ಆಗುತ್ತೆ. ದಯಮಾಡಿ ಹೊರಟುಬಿಡಿ. ನಿಮ್ಮಿಂದಾಗಿ ಬೇರೆಯವರಿಗೆ ತೊಂದರೆ ಯಾಕೆ?' ಎಂದು ಎಲ್ಲರೂ ಅಲ್ಲಿ ಕುಳಿತ ಭಕ್ತರೆಲ್ಲಾ ಒಂದಾಗಿ ಬೆನ್ನು ಹತ್ತಿದಾಗ ಅದ್ಯಾವ ಮನುಷ್ಯ ಭಂಡ ಧೈರ್ಯ ಮಾಡಲು ಸಾಧ್ಯ? ಬಂದವರು ಹಾಗೆಯೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊರಟು ಹೋದರಂತೆ. ಈ ಘಟನೆಯನ್ನು ಕಂಡ ಅಶೋಕ್ ತಬ್ಬಿಬ್ಬಾದರಂತೆ. ಮುಂದೆ ಎಲ್ಲ ಭಕ್ತರಿಗೆ ಅವರವರ ಸಂಕಟಗಳಿಗೆ ಪರಿಹಾರ ನೀಡಿ ಮತ್ತೆ ಕರುಣಾಮಯಿ ರೂಪವನ್ನು ಮೆರೆದರಂತೆ ಗುರುನಾಥರು.
ಗುರು ಬಾಂಧವರೇ, ಗುರುನಾಥರ ದರ್ಶನವಾಗಲೀ, ಅವರ ಆಶೀರ್ವಾದವಾಗಲೀ ಅವರಿಗೊಂದು ನಮಿಸುವುದಾಗಲೀ, ಗುರುನಾಥರ ಮನೆಯಲ್ಲಿ ಒಂದು ಕ್ಷಣ ಕೂರಲಾಗಲೀ, ಪಡೆದುಕೊಂಡು ಬಂದಿರಬೇಕು. ಎಲ್ಲಿಯೋ ಇದ್ದವರನ್ನು ಇಲ್ಲಿಂದಲೇ ಹರಸುವ ಅವರು ಕೆಲವರು ತಮ್ಮ ಮನೆಯ ಒಳಬಾರದಂತೆ ತಡೆದಿದ್ದೆ. ಗುರು ಪರೀಕ್ಷೆ ಅಷ್ಟು ಸುಲಭವಲ್ಲ. ತಿಳಿಯಲೂ ಅಸಾಧ್ಯ ಅವರ ಲೀಲೆಗಳು. ಕರ್ಮ ಸವೆಯದವರನ್ನು, ಗುರುಭಕ್ತಿ, ಶ್ರದ್ಧೆ, ಇಲ್ಲದ ಡಾಂಭಿಕರನ್ನು ಅವರು ಎಂದೂ ಸಹಿಸರು. ಅಂತಹವರಿಗೆ ಅಲ್ಲಿ ಜಾಗವಿರುತ್ತಿರಲಿಲ್ಲ. ಅವರೆಷ್ಟು ದೊಡ್ಡವರಾಗಿದ್ದರೂ ಸರಿ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment