ಒಟ್ಟು ನೋಟಗಳು

Tuesday, August 15, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 76
ಆನಂದದಿ ಕುಣಿದಾಡಿದ ಗುರುನಾಥರು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ಈ ದಟ್ಟ ಸಾಧಕರ, ಯತಿಗಳ ಅನುಭವ ಹೀಗಿದೆ ನೋಡಿ. ಆನಂದ, ದಿವ್ಯಾನಂದದಲ್ಲಿ ಇರುವವರಿಗೆ ಸಿಗುವುದೆಲ್ಲಾ ಆನಂದವೇ? ಆಂಧ್ರದ ಗುರೂಜಿಯವರು ಮತ್ತೊಂದು ಗುರುಕಾಥಾಮೃತವನ್ನು ನಿಮಗೆ ನೀಡಲಿದ್ದಾರೆ. 

"ಮಾರನೆಯ ದಿವಸ ನಾನು ತುಮಕೂರಿಗೆ ಹೋಗಬೇಕಿತ್ತು. ಅವತ್ತು ಏಕಾದಶಿ. ಗುರುನಾಥರು ಇನ್ನೂ ವಿಶ್ರಾಂತಿಯಲ್ಲಿದ್ದರು. ನಾನೇನೂ ಹೇಳದೆ ಇದ್ದರೂ ಗುರುನಾಥರು ತಮ್ಮ ಮನೆಯವರಿಗೆ ಕರೆದು 'ನಾಳೆ ಬೆಳಿಗ್ಗೆ ಸ್ವಾಮಿಗಳು ತುಮಕೂರಿಗೆ ಹೋಗಲಿದ್ದಾರೆ. ಬೆಳಿಗ್ಗೆಯೇ ಅಡಿಗೆ ಮಾಡಿರಿ' ಎಂದರು. ನಾಳೆ ಏಕಾದಶಿ ಇದೆಯಲ್ಲಾ... ಎಂದು ಮನೆಯವರು ಅಂದರೂ ಗುರುನಾಥರು 'ನೀವು ಅಡಿಗೆ ಮಾಡುತ್ತೀರೋ, ಇಲ್ಲಾ ನಾಳೆ ಮುಂಚೆ ನಾನೇ ಅಡಿಗೆ ಮಾಡಲೋ' ಎಂದು ಮಲಗಿದ್ದಲ್ಲಿಂದಲೇ ತಿಳಿಸಿದರು. ಬೆಳಗಾಯಿತು. ನನ್ನ ಅನುಷ್ಠಾನಗಳನ್ನೆಲ್ಲಾ ಪೂರೈಸಿಕೊಂಡು ರೆಡಿಯಾದೆ. 

ನಾನು ತುಮಕೂರಿಗೆ ಹೋಗುವ ವಿಚಾರ ಗುರುನಾಥರ ಬಳಿ ಪ್ರಸ್ತಾಪ ಮಾಡದೆ ಇದ್ದರೂ ಅವರೇ ಅರಿತು, ಅದಕ್ಕೆಲ್ಲಾ ವ್ಯವಸ್ಥೆ ಮಾಡಿದ್ದರು. ಪ್ರಸಾದಕ್ಕೆ ಕುಳಿತೆ. ಆಪೋಶನ ಹಾಕಿರೆಂದು ಗುರುನಾಥರಿಗೆ ಕೇಳಿದೆ.... 'ನಾನು ಸ್ನಾನ ಮಾಡಿಲ್ಲ. ನೀವೇ ಪ್ರಾರಂಭಿಸಿ ಬಿಡಿ' ಎಂದರು. ನಾನು, ನೀವು ಹಸ್ತೋದಕ ಹಾಕದಿದ್ದರೆ ಊಟ ಬಿಟ್ಟು ಎದ್ದು ಹೋಗಿ ಬಿಡುತ್ತೇನೆ ಎಂದಾಗ... ಗುರುನಾಥರು ಎದ್ದು ಬಂದು ಹಸ್ತೋದಕವನ್ನು ಹಾಕಿದರು. ಎಲ್ಲ ಬಲ್ಲ ಗುರುವು ಪರೀಕ್ಷೆ ಮಾಡುತ್ತಿದ್ದ ರೀತಿಯೇ ವಿಚಿತ್ರವಾಗಿರುತ್ತಿತ್ತು. ಸ್ನಾನ, ಶುದ್ಧಿ, ಖಾಯಿಲೆ ಗುಣಮುಖರಾಗುವುದು ಇವೆಲ್ಲಾ ಸಾಮಾನ್ಯರಿಗೆ. ಎಲ್ಲ ಮೀರಿದ ಅತೀತ ಸ್ಥಿತಿ ತಲುಪಿದ ಗುರುನಾಥರಿಗೆ ಇವೆಲ್ಲಾ ಬಂಧನಗಳೆಲ್ಲಿ? ಗುರುನಾಥರು ಎದ್ದು ಬಂದು ಆಲಿಂಗನ ಮಾಡಿಕೊಂಡರು. ನಾನು ಹೊರಡಲು ಅನುವಾಗಿ 'ತುಮಕೂರಿಗೆ ಹೋಗೋಣ, ಬನ್ನಿ.... ಎಂದೆ. ವಲ್ಲೀಶನೆಂಬುವರನ್ನು ಕರೆಸಿ 'ಇವರಿಗೆ ಬಾಣಾವರಕ್ಕೆ ಕರೆದುಕೊಂಡು ಹೋಗಿ ದರ್ಶನ ಮಾಡಿಸಿ, ತುಮಕೂರಿಗೆ ಬಿಟ್ಟು ಬಾ... ಎಂದರು. ನನ್ನ ಬಳಿ ಬಂದು 'ನೀವು ಕೃಷ್ಣ ಯೋಗಿಂದ್ರರ ವೇದಿಕೆಯಲ್ಲಿ ಒಂದು ತಿಂಗಳು ಇರಬೇಕು. ಅಲ್ಲಿ ತಪಸ್ಸು ಮಾಡಬೇಕು. ಯಾರ ಬಳಿಯೂ ಏನೂ ಕೇಳಬೇಡಿರಿ' ಎಂದು ತಿಳಿಸಿದರು. ಈಗಿನಂತೆ ಬಾಣಾವರದ ಆ ಪುಣ್ಯಸ್ಥಳ ವ್ಯವಸ್ಥಿತವಾಗಿರಲಿಲ್ಲ. ಓಡಾಡಲಾಗದಂತೆ ಮುಳ್ಳು, ಕಂಠಿಗಳಿಂದ ತುಂಬಿತ್ತು. 'ನೀವು ಯಾರ ಮನೆಯಲ್ಲೂ ಭಿಕ್ಷೆ ಬೇಡಬಾರದು. ನಿತ್ಯ ಆ ಕೊಳದಲ್ಲಿ ಸ್ನಾನ ಮಾಡಿ, ತಪಸ್ಸು ಮಾಡಬೇಕು' ಎಂದಾಗ - ನನಗೆ ಸ್ವಲ್ಪ ದಿವಸ, ಮೊದಲೇ ಗೊತ್ತಾದ ಕೆಲಸವಿದೆ ಎಂದಾಗ, ಅದನ್ನು ಮುಗಿಸಿಕೊಂಡು ನೀವು ಬಂದು ಅಲ್ಲಿ ಒಂದು ತಿಂಗಳು ಇದ್ದು, ತಪವಾಚರಿಸಬೇಕು ಎಂದು ಆಹ್ವಾನಿಸಿದರು. ನಮ್ಮ ಕಾರು ಮುಂದೆ ಹೊರಟಿತು. ಸ್ವಲ್ಪ ದೂರ ಹೋಗುವಲ್ಲಿ - ಗುರುನಾಥರು ಇನ್ನೊಂದು ಕಾರಿನಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದುದನ್ನು ಕಂಡು ಕಾರು ನಿಲ್ಲಿಸಿದೆವು. ಕಾರಿನ ಬಳಿ ಬಂದ ಗುರುನಾಥರು, ಒಂದು ಪ್ಯಾಕೇಟು ಕೊಡುತ್ತಾ 'ಇದೀಗ ಯಾರೋ ದುಬಾಯಿಯಿಂದ ಅತ್ಯುತ್ತಮವಾದ ಖರ್ಜೂರ ತಂದಿದ್ದಾರೆ - ಬಹಳ ಒಳ್ಳೆಯದು... ನಿಮಗೆ ಕೊಡಬೇಕಾಗಿತ್ತು' ಎಂದು ನೀಡಿದರು. ಗುರುನಾಥರು ಆ ಉತ್ತಮ ಖರ್ಜೂರದ ಪ್ಯಾಕೇಟನ್ನು ತಂದುಕೊಟ್ಟರು. ಅತ್ಯುತ್ತಮವಾದುದು ಏನಿದೆಯೋ ಅದನ್ನೆಲ್ಲಾ ಇತರರಿಗೆ ದಾನ ಮಾಡಿ ಸಂತಸ ಪಡುವುದು ಗುರುನಾಥರ ಒಂದು ಸಹಜ ಸ್ವಭಾವವಾಗಿತ್ತು. ಮತ್ತೆ ನಾನು ಬನ್ನಿ ತುಮಕೂರಿಗೆ ಹೋಗೋಣ ಎಂದು ಕರೆದೆ - 'ಇಲ್ಲ ಬರ್ತೀನಿ. ಈಗಲ್ಲ ಇನ್ನೊಂದು ಸಲ' ಎಂದು ಹೇಳಿದ ಗುರುನಾಥರು ನನ್ನನ್ನು ಅರಸೀಕೆರೆಗೆ ಕರೆದೊಯ್ದರು. ಅರಸೀಕೆರೆಯಲ್ಲಿ ನಿರ್ಮಿಸಲಿರುವ ಜಾಗವನ್ನು ತೋರಿಸಿ 'ಇಲ್ಲಿ ವೇದಿಕೆ ಮಾಡಬೇಕೆಂದಿದೆ' ಎಂದರು. ಮುಳ್ಳು ಕಂಠಿಗಳಿಂದ ತುಂಬಿದ್ದ ಆ ಜಾಗವನ್ನು ಕ್ಲೀನ್ ಮಾಡಿ ನನ್ನ ಕೈಯಲ್ಲಿ ಗುದ್ದಲಿ ಪೂಜೆ ಮಾಡಿಸಿದರು... ಮತ್ತೊಮ್ಮೆ ಅರಸೀಕೆರೆಯಲ್ಲಿ ಚಾತುರ್ಮಾಸ್ಯಕ್ಕೆ ಬರಬೇಕೆಂದಿದ್ದರು. 

ನಾನೊಂದು ದಿವಸ ಮುಂಚೆ ಬಂದು, ಆಗಬೇಕಿರುವ ವ್ಯವಸ್ಥೆಗಳ ಪರಿಶೀಲನೆ ಮಾಡಲು ಬಂದಿದ್ದೆ. ಅಷ್ಟರಲ್ಲಿ ಗುರುನಾಥರಿಂದ ದೂರವಾಣಿ ಬಂದಿತು ಸಖರಾಯಪಟ್ಟಣಕ್ಕೆ ಬರಬೇಕೆಂದು. ಆ ದಿನಗಳಲ್ಲಿ ಗುರುನಾಥರು ತುಂಬಾ ಬಳಲಿ ಹಾಸಿಗೆ ಹಿಡಿದಿದ್ದರು. ಕಾಲಿನ ಗಾಯ ನೋವು ಕೊಡುತ್ತಿತ್ತು. ನಿಲ್ಲುವುದು ಕಷ್ಟವಾಗುತ್ತಿತ್ತು. ನಾನು ಸಖಾರಾಯಪಟ್ಟಣಕ್ಕೆ ಅವರಿದ್ದಲ್ಲಿಗೆ ಹೋದೆ. ಗುರುನಾಥರು ಕೈಲಾಗದಿದ್ದರೂ ಎದ್ದು ಬಂದರು. ನನ್ನ ಪಾದುಕೆಗಳನ್ನು ತಲೆಯ ಮೇಲಿಟ್ಟುಕೊಂಡು ಕುಣಿದಾಡಿದರು. ಏನಾಶ್ಚರ್ಯ, ಯಾವ ದೇಹ ಬಾಧೆಯೂ ಆ ಪರಮಾತ್ಮನನ್ನು ಏನೂ ಮಾಡಲಾಗುತ್ತಿರಲಿಲ್ಲ. ಎಲ್ಲ ಸ್ಥಿತಿಯಲ್ಲಿಯೂ ಆನಂದಮಯವಾಗಿರುವ ಅವಧೂತ ಸ್ಥಿತಿ ಎಂದರೆ ಇದೇ ಏನೋ - ನಂತರ ನನಗೆ ಪಾದ ಪೂಜೆ ಮಾಡಿಸಿ, ತರಕಾರಿ ಹಾಕಿದ ಉಪ್ಪಿಟ್ಟು ಮಾಡಿಸಿದ್ದರು. ಅದೆಂಥಹ ರುಚಿಕರವಾಗಿತ್ತೆಂದರೆ, ಅಮೃತವಾಗಿತ್ತು. 

ನಂತರ ನಾಲ್ಕಾರು ವಾಹನಗಳ ತುಂಬಾ ಚಾತುರ್ಮಾಸ್ಯಕ್ಕೆ ಬೇಕಾದ ಎಲ್ಲ ವಸ್ತುಗಳನ್ನೂ ತುಂಬಿ, ನಿಶ್ಚಿಂತೆಯಿಂದ ಚಾತುರ್ಮಾಸ್ಯ ಮಾಡಿರಿ - ಎಲ್ಲಾ ಒಳ್ಳೆಯದಾಗುತ್ತದೆ ಎಂದು ಆಶೀರ್ವಾದ ಮಾಡಿ ಕಳಿಸಿದರು. ಚಾತುರ್ಮಾಸ್ಯ ಹಿಡಿದು ಒಂದು ವಾರವಾಗಿತ್ತು. ಗುರುನಾಥರ ಮಹಾ ನಿರ್ವಾಣದ ಸುದ್ಧಿ ಬಂದಿತು. ನನಗೆ ಹೋಗಲಾರದ ಪರಿಸ್ಥಿತಿ. ಇದನ್ನರಿತ ಗುರುನಾಥರು ನನ್ನನು ಚಾತುರ್ಮಾಸ್ಯಕ್ಕೆ ಕೂರುವ ಮುನ್ನ ಕರೆಯಿಸಿ, ದರ್ಶನ ನೀಡಿ, ಚಾತುರ್ಮಾಸ್ಯದ ಎಲ್ಲ ವಸ್ತುಗಳನ್ನೂ ಹೊಂದಿಸಿಕೊಟ್ಟು ತಮ್ಮ ಅಗಾಧ ಮಮತೆ, ಪ್ರೀತಿಯನ್ನು ಮೆರೆದರು. ಅಂತಹ ದಿವ್ಯ ಚೇತನದ, ದತ್ತ ಸ್ವರೂಪಿಯ ಒಡನಾಟ ಇಷ್ಟು ಬೇಗ ನಿಮ್ಮಿಂದ ದೂರವಾಗುತ್ತದೆಂದು ಎಂದೂ ನಾನೆಣಿಸಿರಲಿಲ್ಲ. ದೇಹವಳಿದರೂ ಅವಸರದ ಶ್ರೀರಕ್ಷೆ ನನಗೆ ನಿರಂತರವಾಗಿದೆ. ನನ್ನ ದತ್ತ ನನ್ನ ಕೈಬಿಟ್ಟಿಲ್ಲ - 'ಮುಂದಿನ ವಾರ ಬರುತ್ತೀನಿ. ಶುರು ಮಾಡಿ" ಎಂದ ಗುರುನಾಥರು ಅಶರೀರವಾಗಿದ್ದರು - ಚಾತುರ್ಮಾಸ್ಯ ಪೂರ್ತಿ ನನ್ನೊಂದಿಗೆ ಇದ್ದಾರೇನೋ ಎಂದೆನಿಸುತ್ತದೆ'..... 

ಪ್ರಿಯ ಸತ್ಸಂಗಾಭಿಮಾನಿಗಳೇ, ಯತಿಗಳೊಬ್ಬರು, ಗುರುನಾಥರ ಬಗ್ಗೆ ತಮ್ಮ ಸ್ವ ಅನುಭವವನ್ನು ವ್ಯಕ್ತಪಡಿಸಿ, ನಮ ನಿಮಗೆಲ್ಲಾ ಅದ್ಭುತ ಸಂಗತಿಗಳನ್ನು ನೀಡಿದ್ದಾರೆ. ಆ ಯತಿಗಳಿಗೂ ಎಲ್ಲರ ಪರವಾಗಿ ಹೃದಯಪೂರ್ವಕ ನಮನಗಳನ್ನು ಅರ್ಪಿಸುತ್ತಾ, ನಾಳೆಯೂ ಸತ್ಸಂಗ ನಡೆಯಲಿ, ಸುಧೆ ಹರಿಯಲಿ ಎಂದಾಶಿಸುವ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment