ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 72
ವಾಪಸ್ಸು ಕಳಿಸಿಬಿಡು ಎಂದು ಕರೆಸಿಕೊಂಡು ಆಶೀರ್ವದಿಸಿದರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಮತ್ತೊಮ್ಮೆ ಇದೇ ಭಕ್ತರು ಗುರುದರ್ಶನಕ್ಕೆ ಹೊರಟಾಗ, ಬ್ರಹ್ಮಾನಂದ ಗುರೂಜಿಯವರು 'ಸರಿಯಾಗಿ ಪ್ರಾರ್ಥನೆ ಮಾಡಿಕೊಂಡು ಹೊರಡಿರಪ್ಪ. ಗುರುದರ್ಶನ ಪ್ರಾಪ್ತಿಯಾಗಲು ಅದು ಅಷ್ಟು ಸುಲಭವಲ್ಲ'ಎಂದಾಗ ಎಲ್ಲ ಸೇರಿ ಭಕ್ತಿಯಿಂದ ಪ್ರಾರ್ಥನೆ ಮಾಡಿ, ದಾರಿಯುದ್ದಕ್ಕೂ ಗುರುನಾಥರ ಸ್ಮರಣೆ ಮಾಡುತ್ತಲೇ ಹೊರಟರಂತೆ. ದಾರಿ ಮಧ್ಯದಲ್ಲಿ 'ಅವರನ್ನೆಲ್ಲಾ ವಾಪಸ್ಸು ಕಳಿಸಿಬಿಡು' ಎಂದು ಗುರುವಾಜ್ಞೆ ಬಂದಾಗ ಏನಾಯಿತು? ನಿರಾಶೆಯಿಂದ ವಾಪಸ್ಸು ಹೋದರೆ? ಗುರುರಾಜರಾಯರಿಗೂ ಅವರ ಮಿತ್ರರಿಗೂ ಗುರುಕೃಪೆ ಹೇಗೆ ದೊರೆಯಿತೆಂಬುದನ್ನು ಅವರಿಂದಲೇ ಕೇಳೋಣ ಬನ್ನಿ.
'ಗುರುನಾಥರನ್ನು ಆಗಾಗ್ಗೆ ಕಾಣಬೇಕು. ಅವರ ಮಾತುಗಳನ್ನು ಕೇಳಬೇಕೆಂಬ ಹಂಬಲ ನಮ್ಮ ಭಜನಾ ಮಂಡಳಿಗೆ ಆಗಾಗ್ಗೆ ಆಗುತ್ತಿತ್ತು. ಬ್ರಹ್ಮಾನಂದ ಗುರೂಜಿಯವರು ಹೇಳಿದಂತೆ ಭಜನೆ ಮಾಡಿಕೊಂಡು ಗುರುನಾಥರ ಧ್ಯಾನ ಮಾಡಿಕೊಂಡೇ ನಮ್ಮ ಗುಂಪು ಒಂದು ವಾಹನ ಮಾಡಿಕೊಂಡು ಗುರುದರ್ಶನಕ್ಕಾಗಿ ಸಖರಾಯಪಟ್ಟಣಕ್ಕೆ ಹೊರಟೆವು. ಮಾರ್ಗ ಮಧ್ಯದಲ್ಲಿ ಮೊದಲು ಬಾಣಾವರಕ್ಕೆ ಹೋಗಿ ಕೃಷ್ಣ ಯೋಗಿಂದ್ರರ ದರ್ಶನ ಪಡೆದೆವು. ಅಲ್ಲಿದ್ದ ಭಕ್ತರಾದ ವಿದ್ಯಾ ಅವರು ಅದನ್ನು ನೋಡಿಕೊಳ್ಳುತ್ತಿದ್ದರು. ನಮಗೆಲ್ಲಾ ಆದರ ಸತ್ಕಾರಗಳನ್ನು ಮಾಡಿದರು. ನಾವು ಗುರುನಾಥರ ದರ್ಶನಕ್ಕೆ ಹೊರಟಿರುವ ವಿಚಾರವನ್ನೂ ಅವರಿಗೆ ತಿಳಿಸಿದೆವು. ಒಂದು ಸ್ವಲ್ಪ ಹೊತ್ತಿಗೆ ವಿದ್ಯಾ ಅವರಿಗೆ ಗುರುನಾಥರಿಂದ ದೂರವಾಣಿ ಬಂದಿತು. ಅದು ಹೇಗೆ ನಾವು ಸಖರಾಯಪಟ್ಟಣಕ್ಕೆ ಹೊರಟಿರುವುದು ತಿಳಿಯಿತೋ ಚಿತ್ರದುರ್ಗದಿಂದ ಬಂದವರಿಗೆ.... ಇಂದು ದರ್ಶನವಾಗುವುದಿಲ್ಲ ವಾಪಸ್ಸು ಹೋಗಿ ಬಿಡಲು ತಿಳಿಸು' ಎಂದು ಫೋನು ಬಂದಿತು. ವಿಚಾರ ನಮ್ಮವರೆಲ್ಲರಿಗೂ ತಿಳಿದಾಗ ಎಲ್ಲರೂ ಬಹಳ ನಿರಾಶೆ, ದುಃಖಗಳಿಗೆ ಒಳಗಾದೆವು. ಬ್ರಹ್ಮಾನಂದರು ಹೇಳಿದಂತೆ ನಾವು ಪ್ರಾರ್ಥಿಸಿ, ಧ್ಯಾನಿಸಿ ಹೊರಟರೂ ಗುರು ದರ್ಶನವಾಗಲಿಲ್ಲವಲ್ಲ.... ನಮ್ಮದೆಂತಹ ಅದೃಷ್ಟ ಎಂದು ಅನೇಕರು ಪೇಚಾಡಿಕೊಂಡೆವು. ಈ ಮಧ್ಯೆ ವಿದ್ಯಾರವರು 'ಬೇಗ ಅಡಿಗೆ ಸಿದ್ಧ ಮಾಡಿಬಿಡುತ್ತೇನೆ - ಎಲ್ಲಾ ಪ್ರಸಾದ ತೆಗೆದುಕೊಂಡು ಹೋಗಿರಿ.... ಹಾಗೆ ಹೋಗಬೇಡಿ' ಎಂದರೂ ನಮಗ್ಯಾರಿಗೂ ಮನಸ್ಸಿಲ್ಲ. ಹೇಗೋ ಬಂದಿದ್ದೀವಿ.... ಅರಸೀಕೆರೆಯ ಆಶ್ರಮ ನೋಡಿ ಹೋಗುವುದೆಂಬ ನಿರ್ಧಾರ ಮಾಡಿ ನಮ್ಮ ವಾಹನಕ್ಕೆ ಏರಲು ಹೋದರೆ, ಅದು ತಕರಾರು ಮಾಡಿತು. ಅದಕ್ಕೆ ಈ ಪುಣ್ಯ ಸ್ಥಳ ಬಿಟ್ಟು ಜರಗುವ ಮನಸ್ಸಿರಲಿಲ್ಲವೇನೋ, ಕೊನೆಗೆ ನೋಡಿದಾಗ ಟೈರ್ ಪಂಚರ್ ಆಗಿತ್ತು. ಅವತ್ತು ಭಾನುವಾರ ಬೇರೆ. ಎಲ್ಲರನ್ನೂ ಇಳಿಸಿ - ಗಾಡಿ ತೆಗೆದುಕೊಂಡು ಹೋಗಿ ಸರಿಮಾಡಿಸಿ ತರುವಲ್ಲಿ ಸಾಕಷ್ಟು ಹೊತ್ತು ಹಿಡಿದಿತ್ತು. ಕೃಷ್ಣ ಯೋಗಿಂದ್ರರು ಬಂದವರನ್ನು ವಾಪಸ್ಸು ಕಲಿಸುತ್ತಾರಾ, ನಮ್ಮದೆಲ್ಲಾ ಪ್ರಸಾದವಾಯಿತು. ಗುರುಮಂದಿರದಲ್ಲಿ ಊಟ ಮಾಡಿ ಹೊರಡಿ ಎಂದರೆ, ಅದು ಸಾಮಾನ್ಯ ಊಟವಲ್ಲ - ಅದು ಪ್ರಸಾದ - ಅದು ನಮಗೆ ಲಭ್ಯವಿರುವಾಗ - ನಾವು ಬೇಡವೆಂದರೆ ಆದೀತೇ? ನಂತರ ಬಂದ ನಮ್ಮ ಡ್ರೈವರ್ ಊಟ ಮಾಡುವಲ್ಲಿ ಮತ್ತಷ್ಟು ಸಮಯ ಹಿಡಿಯಿತು. ಆಗೊಂದು ವಿಚಿತ್ರ ನಡೆಯಿತು. ಗುರುನಾಥರಿಂದ ಮತ್ತೆ ಫೋನ್ ಬಂದಿತು. 'ಚಿತ್ರದುರ್ಗದಿಂದ ಬಂದಿರುವ ಎಲ್ಲ ಭಕ್ತರನ್ನೂ ಚಿಕ್ಕಮಗಳೂರಿಗೆ ಕಳಿಸಬೇಕೆಂದು'. ಬೆಳಿಗ್ಗೆ ದರ್ಶನವಾಗಲಿಲ್ಲ ಎಂದು ಕೊರಗಿದ ನಮ್ಮ ಕೂಗು ಗುರುನಾಥರಿಗೆ ತಲುಪಿತೇನೋ, ಅವರೇ ಮತ್ತೆ ಬನ್ನಿರೆಂದು ಆಹ್ವಾನ ನೀಡಿದರು. 'ಬನ್ನಿ' ಎಂದದ್ದೇ ಸಾಕಾಯಿತು. ನಾವೆಲ್ಲಾ ಚಿಕ್ಕಮಗಳೂರಿನತ್ತ ವಾಹನದಲ್ಲಿ ಧಾವಿಸಿದೆವು. ಚಿಕ್ಕಮಗಳೂರಿನಲ್ಲಿ ಎಲ್ಲಿ ಹೋಗಬೇಕು? ಯಾರ ಮನೆಗೆ? ಗುರುಗಳು ಎಲ್ಲಿದ್ದಾರೆ? ಚಿಂತೆಗೀಡಾದೆವು. ಕೋಟೆ ದೇವಾಲಯದ ಬಳಿ ಇರುವ ಒಬ್ಬ ಅಯ್ಯಂಗಾರ್ ಮನೆಗೆ ಬರುವುದೆಂದು ಮತ್ತೆ ಫೋನು ನನಗೇ ಬಂದಿತು. ಸರಿ ಅಂತೂ ನಾವು ಜಾಗ ಗುರುತು ಹಚ್ಚಿಕೊಂಡು ಹೋದೆವು. ದೊಡ್ಡಮನೆ, ಮನೆಯ ಬಾಗಿಲು ಮುಂದೂಡಿದ್ದರು. ಯಾರೂ ಜನವಿದ್ದಂತೆ ಕಾಣುತ್ತಿರಲಿಲ್ಲ. ನಾನೂ ಮತ್ತು ನನ್ನ ತಂಗಿ ಧೈರ್ಯ ಮಾಡಿ ಬಾಗಿಲು ತಟ್ಟಿದೆವು. ಒಂದೆರಡು ನಿಮಿಷದಲ್ಲಿ ಯಾರೋ ಬಂದು ಬಾಗಿಲು ತೆರೆದು ಬರಮಾಡಿಕೊಂಡರು. ವಾಹನದಲ್ಲಿ ಇದ್ದವರೆಲ್ಲ ಇಳಿದು ಒಳಗೆ ಬಂದರು. 'ಯಾಕೆ ಲೇಟಾಯಿತು. ಗುರುಗಳು ನಿಮಗೋಸ್ಕರ ಕಾಯುತ್ತಿದ್ದಾರೆ' ಎಂದರು. ಒಳ ಹೋಗಿ ನೋಡಿದರೆ ಅಂದು ಅಲ್ಲಿ ಚಂದ್ರಶೇಖರ ಭಾರತಿ ಸ್ವಾಮಿಗಳ ಆರಾಧನೆ ನಡೆದಿದೆ. ಗುರುನಾಥರನ್ನು ಕಂಡೆವು. ಅವರು ಪ್ರೀತಿಯಿಂದ ಬನ್ನಿರಾಪ್ಪಾ ಬನ್ನಿ, ಎಷ್ಟೊತ್ತಿಂದ ಕಾಯುತ್ತಾ ಇದ್ದೀನಿ. ಏಕೆ ತಡವಾಯಿತು.. ಬನ್ನಿ ಎಲ್ಲಾ... ಅಲ್ಲಿ ಹೋಗಿ ಚಂದ್ರಶೇಖರ ಭಾರತಿ ಸ್ವಾಮಿಗಳ ಬೃಂದಾವನಕ್ಕೆ ನಮಸ್ಕಾರ ಮಾಡಿ ಬನ್ನಿರಾಪ್ಪಾ ಎಂದರು. ಗುರುನಾಥರ ದರ್ಶನದ ಜೊತೆಗೆ ಚಂದ್ರಶೇಖರ ಭಾರತಿ ಸ್ವಾಮಿಗಳ ಆರಾಧನೆಯ ಪ್ರಸಾದ ಲಭ್ಯವೂ ನಮಗೆ ಗುರುಕರುಣೆಯಿಂದ ಇಂದಾಗಿತ್ತು. ಗುರುನಾಥರು ಬಂದು ಒಂದು ಕುರ್ಚಿಯ ಮೇಲೆ ಕುಳಿತರು. ನಾವೆಲ್ಲಾ ಸುತ್ತಾ ಕುಳಿತುಕೊಂಡಿದ್ದೆವು. ನನ್ನ ಮಗ ಸುಮ್ಮನಿರದೇ.... ಯಾವಾಗಲೋ ಒಂದು ಗುರುನಾಥರ ಫೋಟೋ ತೆಗೆದುಬಿಟ್ಟ.
ಇದ್ದಕ್ಕಿದಂತೆ ಗುರುಗಳು ತುಂಬಾ ಸಿಟ್ಟಾಗಿಬಿಟ್ಟರು. 'ಏನೋ ನನ್ನ ಕಣ್ಣು ತಪ್ಪಿಸಿ ನೀನು ನನ್ನ ಫೋಟೋ ತೆಗೀತೀಯಾ... ನೋಡ್ಕೋ ಹೋಗು ಏನು ಬಂದಿದೆ ಕ್ಯಾಮರಾದಲ್ಲಿ' ಎಂದು ಸಿಟ್ಟಾಗಿಬಿಟ್ಟರು. ಪ್ರಶಾಂತವಾದ ವಾತಾವರಣ ಒಂದು ಕ್ಷಣ ಪ್ರಕ್ಷುಬ್ಧವಾಗಿತ್ತು. ಕ್ಯಾಮರಾದಲ್ಲಿ ನೋಡಿದರೆ ಯಾವ ಚಿತ್ರವೂ ಮೂಡಿರಲಿಲ್ಲ.... ಬರಿಯ ಕಪ್ಪು ತುಂಬಿತ್ತು'.
ಗುರುನಾಥರಿಗೆ ಹೇಳದೆ ಏನು ಮಾಡಿದರೂ ಅದನ್ನು ಅವರು ಒಪ್ಪುತ್ತಿರಲಿಲ್ಲ.... ಆದರೆ ಅಚಾನಕ್ ಆಗಿ ಹೋದ ಕಾರ್ಯಕ್ಕೆ ಕ್ಷಮೆ ಯಾಚಿಸಿದರೆ ಬಹು ದೊಡ್ಡ ಕರುಣಾನಿಧಿಯಾದ ಗುರುನಾಥರು ಮನ್ನಿಸಿಬಿಡುತ್ತಿದ್ದರು. ಈ ಹಿಂದೆ ಅವರ ಭಕ್ತರೊಬ್ಬರು ಅವರ ಚಿತ್ತ ಹೇಳದೇ ತೆಗೆದಾಗ 'ಫ್ಲಾಶ್ ಮಾಡ್ಡೆಯಾ ಎಲ್ಲಾ ಬರ್ನಾಗಿ ಬಿಡ್ತು' ಎಂದಿದ್ದರಂತೆ. ಅವರ ಅಂಗಡಿ ಅಂದು ವಿಚಿತ್ರವಾಗಿ ಭಸ್ಮವಾಗಿ ಲಕ್ಷಾಂತರ ರೂಪಾಯಿಗಳು ಲಾಸಾಗಿತ್ತು. ಮುಂದೆ ಆ ಭಕ್ತರು ಅನನ್ಯವಾಗಿ ಗುರುನಾಥರನ್ನು ಬೇಡಿಕೊಂಡರು. ಈಗವರು ಕೋಟಿಗಳ ಒಡೆಯರು. ಗುರುನಾಥರು ತಮ್ಮ ಭಕ್ತರ ಬಗ್ಗೆ ಮೇಲೆ ಸಿಟ್ಟಾದರೂ, ಒಳಗೊಳಗೇ ಕರುಣೆ ತೋರಿ ಉದ್ಧರಿಸುವವರೇ.
ಪ್ರಿಯ ಸತ್ಸಂಗಾಭಿಮಾನಿಗಳೇ, ಗುರುರಾಜರ ಅನುಭವ ನಾಳೆಗೂ ಮುಂದುವರೆಯಲಿದೆ. ಇದು ಗುರುಕೃಪಾಕಟಾಕ್ಷ, ಭಕ್ತರಿಗಿತ್ತ ರಕ್ಷಣೆ.. ನಮಗೂ ಅದು ಸಿಗಲಿ.... ನಾಳೆಯೂ ನಮ್ಮೊಂದಿಗೆ ಇರಿ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment