ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 81
ಭಕ್ತನಿಗಾಗಿ ಕಾದು ದರುಶನವಿತ್ತ ಪರಮಾತ್ಮ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಹೊಳಲೂರಿನ ಹನುಮಂತಪ್ಪನವರ ಪರಮ ಭಕ್ತರಾದ ಗುರುರಾಜ ಜೋಯಿಸರು ಗುರುನಾಥರನ್ನು ಕಾಣಬೇಕೆಂದು ಸಖರಾಯಪಟ್ಟಣಕ್ಕೆ ಒಮ್ಮೆ ಹೋದರಂತೆ. ಮೊದಲ ಬಾರಿಯಾದುದರಿಂದ ಮನೆ ಕೇಳಿಕೊಂಡು ಮನೆಯೊಳಗೆ ಹೋದರು. ಆಗಾಗಲೇ ಏಳೆಂಟು ಜನ ಬಂದು ಅಲ್ಲಿ ಕುಳಿತಿದ್ದರಂತೆ. ಜೋಯಿಸರು ಒಳ ಹೋಗಿ ಗುರುನಾಥರ ದರ್ಶನ ಪಡೆದು ಸಂತೃಪ್ತರಾಗಿ ನಮಿಸಿ - ಆ ತುದಿಯಲ್ಲಿ ಕುಳಿತರಂತೆ.
ಗುರುನಾಥರು ಬಹುಶಃ ಇವರಿಗೆ ದರ್ಶನ ಕೊಡಲೆಂದೇ ಅಲ್ಲಿ ಅದುವರೆವಿಗೆ ಕುಳಿತಿದ್ದರೇನೋ ಎಂಬಂತೆ, ತತ್ ಕ್ಷಣ ಎದ್ದು ಎದುರಿಗಿನ ರೂಮಿಗೆ ಹೊರಟು ಹೋದರಂತೆ. ರೂಮಿನ ಒಳ ಹೋದವರು ಹೇಗೋ ಮತ್ತೆ ಬರಬೇಕಲ್ಲ ಎಂದು ಬಾಕಿಯವರು ಕಾಯುತ್ತಲೇ ಇದ್ದರು.
ಇದ್ದಕ್ಕಿದ್ದಂತೆ ನಾಲ್ಕೈದು ಕಾರುಗಳು ಬಂದವು. ಅದರೊಳಗಿಂದ ಶ್ರೀಮಂತರಂತೆ ಕಾಣುವ ಕೆಲ ಜನ ಇಳಿದು ಒಳಬಂದರಂತೆ. ಬಂದವರಿಗೆ ಕೂಡಲೇ ಗುರುಗಳು ದರ್ಶನ ಕೊಟ್ಟು ಬಿಡಬೇಕೆಂಬ ಭಾವ ಸಾಮಾನ್ಯವಾಗಿ ಎಲ್ಲರಲ್ಲಿ ಇರುತ್ತದೆ. ಹಾಗೆಯೇ ಸ್ವಲ್ಪ ಹೊತ್ತು ಕಾಯ್ದು ಆ ಮಂದಿ ಗುರುಗಳ ಬಗ್ಗೆ ವಿಚಾರಿಸಿದರು. ಯಾರು ಏನು ಹೇಳಲು ಸಾಧ್ಯ.... "ಕೊನೆಗೆ ಯಾರೋ ಆ ರೂಮಿನೊಳಗೆ ಹೋದರು" ಎಂದರು. ಆದರೆ, ಆ ರೂಮಿನೊಳಗೆ ಹೋಗಿ ಗುರುನಾಥರನ್ನು ಕರೆದುಕೊಂಡು ಬರುವ ಧೈರ್ಯ ಮಾಡುವವರು ಯಾರು? ಕೊನೆಗೆ ಒಬ್ಬರು ಅಲ್ಲಿ ಆ ಮನೆಯಲ್ಲಿ, ಓಡಾಡುವವರಿಗೆ, "ಸ್ವಲ್ಪ ನೋಡಿ ಸ್ವಾಮಿ ಗುರುಗಳನ್ನು ನೋಡೋಕೆ ಬಂದಿದ್ದೀವಿ" ಎಂದಾಗ, ಆ ವ್ಯಕ್ತಿಯು ಹೆದರುತ್ತಾ, ಆ ರೂಮಿನೊಳಗೆ ಹೋಗಿ ನೋಡಿದರೆ ರೂಮಿನಲ್ಲಿ ಯಾರೂ ಇರಲಿಲ್ಲ. ನಂತರ ಆ ಬಂದ ವ್ಯಕ್ತಿಗಳು ನಿಧಾನವಾಗಿ ಹೋಗಿ ನೋಡಿದರೆ ಗುರುನಾಥರ ಸುಳಿವಿಲ್ಲ... ಇನ್ನೇನು ಮಾಡುವುದು, ತಮಗೆ ಬೇರಾವುದೋ ಕೆಲಸದ ತರಾತುರಿ ಇದೆ ಎಂದು ಆ ಕಾರಿನವರು - ಅಲ್ಲಿದ್ದ ನಾಯಿಗಳಿಗೆ ಬಿಸ್ಕತ್ತು ಹಾಕಿ, ತಾವು ತಂದ ವಸ್ತುಗಳನ್ನಲ್ಲಿಟ್ಟು ಹೊರಟು ಹೋದರಂತೆ.
"ಗುರುನಾಥರ ಬಗ್ಗೆ ಬಹಳಷ್ಟು ಕೇಳಿದ್ದೆ. ಅವರನ್ನು ನೋಡಲು ನನಗೆ ಅದೆಷ್ಟು ದಿನಗಳು ಬೇಕಾಯಿತು. ಆದರೆ, ಹೋದ ಕೂಡಲೇ ದರ್ಶನ ನೀಡಿ ಹರಸಿದರು. ನನ್ನ ಹಿಂದೆ, ಒಂದೆರಡು ನಿಮಿಷದಲ್ಲೇ ಬಂದ ಕಾರಿನವರಿಗೆ ಗುರು ದರ್ಶನ ಭಾಗ್ಯ ಸಿಗಲಿಲ್ಲ. ಅದೂ ಅಲ್ಲದೇ ಆ ರೂಮಿನಲ್ಲಿ ಹೋದವರು ಎಲ್ಲಿ ಹೋದರು? ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಅಷ್ಟು ಹೊತ್ತಿಗೆ ಆ ಮನೆಯವರಿಗೆ ತರೀಕೆರೆಯಿಂದ ಫೋನು ಬಂದಿತು. ಅದರಲ್ಲಿ 'ಗುರುನಾಥರು ತರೀಕೆರೆಯಲ್ಲಿದ್ದಾರೆ. ಸಧ್ಯ ಮನೆಯಲ್ಲಿ ಯಾರೂ ತಮಗಾಗಿ ಕಾಯುವುದು ಬೇಡ' ಎಂಬ ನಿರೂಪವಿತ್ತು. ಅದನ್ನು ಆ ಮನೆಯವರು ಅಲ್ಲಿ ಕುಳಿತಿದ್ದ ನಮಗೆಲ್ಲಾ ತಿಳಿಸಿದರು. ವ್ಯಕ್ತ ಅವ್ಯಕ್ತನಾಗಿ ಎಲ್ಲೆಡೆ ತಾನಿದ್ದೇನೆಂದು ನಮಗೆಲ್ಲಾ ಭೋದೆ ನೀಡಿದ ಗುರುನಾಥರಿಗೆ ಮತ್ತೊಮ್ಮೆ ವಂದಿಸಿ, ನಾನು ಅಲ್ಲಿಂದ ಹೊರಟು ಬಂದೆ. ಎಲ್ಲೋ ಒಂದೆಡೆ ನನ್ನ ಮನಸ್ಸಿನಲ್ಲಿ ನಾನು ಗುರುವನ್ನೂ ಕಾಯಿಸಿ ಬಿಟ್ಟೆನಾ ಎಂಬ ಅಪರಾಧಿ ಭಾವವು ಒಂದು ಕ್ಷಣ ತಲೆ ಎತ್ತಿದರೆ ಎಲ್ಲ ಅವನಿಚ್ಛೆಯಂತೆ ನಡೆಯುವುದು. ತಮಗೆ ಗುರುನಾಥರು ಕಾದಿದ್ದು ದರ್ಶನ ಕೊಡುವ ಹಿನ್ನೆಲೆಯಲ್ಲಿ ಹೊಳಲೂರಿನ ಶ್ರೀ ಹನುಮಂತಪ್ಪ ಗುರುನಾಥರ ಕೃಪೆಯ ಮೂಲವೇನೋ, ಏಕೆಂದರೆ ಗುರುನಾಥರು ಅನೇಕ ಸಾರಿ ಹೊಳಲೂರಿಗೆ ಬಂದು ನಮ್ಮ ಗುರುಗಳ ಜೊತೆ ಅಪ್ಯಾಯಮಾನವಾಗಿ ಇದ್ದುದನ್ನು ಇಲ್ಲಿ ಸ್ಮರಿಸಬಹುದು. ಆ ಕರುಣಾಸಾಗರ ಗುರುನಾಥರು ನನಗಿಷ್ಟು ದರ್ಶನ ಭಾಗ್ಯ ನೀಡಿದರಲ್ಲಾ ಎಂದು ಧನ್ಯತಾ ಭಾವವೂ ಬಂದಿತು ಎನ್ನುತ್ತಾರೆ ಭದ್ರಾವತಿಯ ಗುರಣ್ಣನವರು.
ಪ್ರಿಯ ಸದ್ಗುರುನಾಥ ಬಾಂಧವ ನಿತ್ಯ ಸತ್ಸಂಗಾಭಿಮಾನಿಗಳೇ.... ಗುರುನಾಥರ ಮೂರನೆಯ ಪುಸ್ತಕವು, ಮೇ ತಿಂಗಳಿನಲ್ಲಿ ಬಿಡುಗಡೆಯಾಗಬೇಕೆಂದು ಗುರುವಾಜ್ಞೆಯಾಗಿರುವುದರಿಂದ ಬಹುಶಃ ಈ ಮೂರನೆಯ ಪುಸ್ತಕದ ನಿತ್ಯ ಸತ್ಸಂಗವು ಇಂದಿಲ್ಲಿಗೆ ಗುರುನಾಥರೇ ಸಂಪನ್ನಗೊಳಿಸುತ್ತಿದ್ದಾರೇನೋ. ಮೇ ಒಂದನೇ 2016 ರಿಂದ ಈವರೆಗೆ ಒಂದು ವರ್ಷಗಳು ನಿರಂತರ ಸತ್ಸಂಗ ಭಿಕ್ಷೆ ನೀಡಿ ನಮ್ಮನ್ನೆಲ್ಲಾ ಹರಸಿದ ಸಖರಾಯಪಟ್ಟಣದ ಕರುಣಾನಿಧಿ, ಭಕ್ತಪ್ರೇಮಿ ನಿತ್ಯ ಸತ್ಯರು, ಮಹಾ ಅವಧೂತ ಶಿಖಾಮಣಿಗಳೂ, ಪರಿವ್ರಾಜಕಾಚಾರ್ಯವರ್ಯರೂ ಆದ ಗುರುನಾಥರಿಗೆ ವಂದಿಸುತ್ತಾ ನಮ್ಮೊಂದಿಗೆ ಇದ್ದ ಎಲ್ಲಾ ಭಕ್ತ ಕೋಟಿಗೂ, ಸತ್ಸಂಗದ ಪಕ್ವಾನ್ನದ ಭಿಕ್ಷೆ ನೀಡಿದ ಗುರು ಬಂಧುಗಳಿಗೂ ನಮಿಸುತ್ತೇನೆ. ವಂದನೆಗಳು, ನಿಮ್ಮ ವಿನಮ್ರ ಸೇವಕ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment