ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 66
ನಮ್ಮ ಗುರು ಶಂಕರಲಿಂಗನೇನೆಂದುಕೊಂಡಾನು?
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಶಂಕರಲಿಂಗ ಭಗವಾನರ ಭಕ್ತರೆಲ್ಲ ಸಖರಾಯಪಟ್ಟಣದ ಅವಧೂತರ ಬಗ್ಗೆ ತುಂಬಾ ಗೌರವ ಹೊಂದಿದವರೇ. ಶಂಕರಲಿಂಗ ಭಗವಾನರ ಅತ್ಯಂತ ಪ್ರಿಯ ಆರಾಧಕರಾದ ಗುರುನಾಥರು, ತಮಗೆ ಇಷ್ಟ ಬಂದಾಗಲೆಲ್ಲಾ ಕೋಮಾರನಹಳ್ಳಿಗೆ ಬಂದಿದ್ದಿದೆ. ತಮ್ಮ ಸಹಸ್ರಾರು ಭಕ್ತರನ್ನು ಕಳಿಸಿದ್ದಿದೆ. ಭಗವಾನರ ವಿವಿಧ ಆಶ್ರಮಗಳಲ್ಲಿ ಗುರುನಾಥರ ಸೇವೆ ಸಂದಿರುವ ವಿಚಾರ ಬಹಳ ಜನಗಳ ಅರಿವಿಗೆ ಬಂದಿರದೇ ಇರಬಹುದು. ಅನೇಕರು ಅಪ್ಪ ಬೇರೆಯಲ್ಲಾ ಗುರುನಾಥರು ಬೇರೆಯಲ್ಲವೆಂಬ ಭಾವದಿಂದಲೇ ಇಂದಿಗೂ ಇಬ್ಬರನ್ನೂ ಸೇವಿಸುತ್ತಿದ್ದಾರೆ. ಪ್ರಿಯ ನಿತ್ಯ ಸತ್ಸಂಗಾಭಿಮಾನಿ ಗುರು ಬಾಂಧವರೇ, ಗುರುವೆಂದರೆ ಒಂದೇ ಅಲ್ಲವೇ ಅದೊಂದು ಭಾವವಷ್ಟೇ... ಅದರಲ್ಲಿ ಬೇಧವೆಣಿಸುವುದು ತರವಲ್ಲ.
ಇಂದಿನ ಸತ್ಸಂಗದಲ್ಲಿ ಶಂಕರಲಿಂಗ ಭಗವಾನರ ಭಕ್ತರೊಬ್ಬರಾದ ಭರಮಸಾಗರದ ಗಣೇಶಣ್ಣನೆಂಬ ಭಕ್ತವರೇಣ್ಯರು ಗುರುನಾಥರ ಕಾರುಣ್ಯಾ ಲೀಲೆಯನ್ನು ಸ್ಮರಿಸಿದ ರೀತಿಯನ್ನು ಕೇಳೋಣ ಬನ್ನಿ.
"ಒಮ್ಮೆ ನನ್ನಣ್ಣನ ಮಗಳು ಪದ್ಮಿನಿ ಎಂಬುವರು ಗುರುನಾಥರನ್ನು ನೋಡಲು ಸಖರಾಯಪಟ್ಟಣಕ್ಕೆ ಹೋಗಿದ್ದರು. ನಾನಾಗ ತುಂಬಾ ಕಷ್ಟದ ದಿನಗಳಲ್ಲಿದ್ದೆ. ನಿರಂತರ ಗುರುನಾಥರ ಶಂಕರಲಿಂಗಪ್ಪನ ನಾಮಸ್ಮರಣೆಯಲ್ಲದೇ ಆ ಬಡತನದಲ್ಲಿ ನಾನೇನು ಮಾಡಲು ಸಾಧ್ಯ? ಧನಕನಕಗಳಿಗೆ ಬಡತನವಿದ್ದರೂ ನಾಮಸ್ಮರಣೆ ಮಾಡುವುದಕ್ಕೂ ಬಡತನವೇ. ನಾನು ಅಲ್ಲಿಗೆ ಹೋಗಲಾಗಿರಲಿಲ್ಲ. ನನ್ನಣ್ಣನ ಮಗಳು ಕಷ್ಟ ಸುಖಗಳನ್ನು ವಿಚಾರಿಸುವ ಸಂದರ್ಭದಲ್ಲಿ ಗುರುನಾಥರು 'ನಿಮ್ಮ ಮನೆಯಲ್ಲಿ ಗಣೇಶ ಎಂಬುವರು ಇದ್ದಾರಲ್ಲವೇನಮ್ಮಾ' ಎಂದು ಈ ಪಾಮರನನ್ನು ವಿಚಾರಿಸಿದ ಸಂಗತಿ ಆಮೇಲೆ ನನಗೆ ತಿಳಿಯಿತು. ಅಪಾರ ಕೋಟಿ ಭಕ್ತ ವೃಂದದಲ್ಲಿ ಬಡತನದಲ್ಲಿದ್ದ ನನ್ನನ್ನು ವಿಚಾರಿಸಿದ ಗುರುನಾಥರು ಅಲ್ಲಿಂದಲೇ ನನ್ನ ಮೇಲೆ ಕೃಪೆ ತೋರಿದರೇನೋ... ಕಷ್ಟಗಳನ್ನೆದುರಿಸುವ ಶಕ್ತಿ ನೀಡಿದರೇನೋ... ಜೊತೆಗೆ ಕೆಲವೇ ದಿನಗಳಲ್ಲಿ ಗುರುನಾಥರ ದರ್ಶನ ಮಾಡುವ ಅವಕಾಶವನ್ನೂ ನೀಡಿದರು ಆ ಕರುಣಾಮಯಿಗಳು. ಆಗ್ಲಿ ಹೋಗು ಒಳ್ಳೆಯದಾಗುತ್ತದೆಂದು ನನ್ನ ಬಗ್ಗೆ ಹೇಳಿ ಕಳಿಸಿದರಂತೆ. ಮುಂದೆ ನಮ್ಮ ಊರಿನ ಹತ್ತು ಹನ್ನೆರಡು ಜನ ಗುರುಭಕ್ತರು ಶೃಂಗೇರಿ ಹೋಗಿ ನಂತರ ಗುರುನಾಥರ ದರ್ಶನ ಪಡೆಯಲು ಸಖರಾಯಪಟ್ಟಣಕ್ಕೆ ಬಂದೆವು. ನಮಗೂ ಹಸಿವಾಗಿತ್ತು. ಅಲ್ಲಿಯೇ ಒಂದು ಹೋಟೆಲಿಗೆ ಹೋಗಿ ಮಸಾಲೆ ದೋಸೆ ಇದೆಯೇ? ಎಂದು ಕೇಳಿದಾಗ ಮೂರು ಗಂಟೆಯ ಮೇಲೆ ದೋಸೆ ಸಿಗುವುದಿಲ್ಲ ಎಂದರು ಹೋಟೆಲ್ ಒಡೆಯರು. ಒಂದಷ್ಟು ಮೆಣಸಿನಕಾಯಿ ಅದು ಇದು ಕಟ್ಟಿಸಿಕೊಂಡು ಗುರುನಾಥರ ಬಳಿ ಬಂದ ನಾವೆಲ್ಲಾ ನಮಸ್ಕರಿಸಿ ಭಕ್ತಿಯಿಂದ ಗುರುನಾಥರ ದರ್ಶನ ಮಾಡಿ, ನಾವು ತಂದ ತಿಂಡಿಗಳನ್ನು ಅವರ ಮುಂದಿಟ್ಟು ನಾವು ಶಂಕರಲಿಂಗ ಭಗವಾನರ ಭಕ್ತರು ತಮ್ಮ ದರ್ಶನಕ್ಕೆ ಬಂದಿದ್ದೀವಿ ಎಂದು ತಿಳಿಸಿದೆವು. ಗುರುನಾಥರು ಒಂದು ಮೆಣಸಿನಕಾಯಿ ಸ್ವೀಕರಿಸಿ, ಇತರರಿಗೆಲ್ಲಾ ಹಂಚಿಬಿಡಲು ಹೇಳಿದರು. ನಾವು ಶಂಕರಲಿಂಗ ಭಗವಾನರ ಭಕ್ತರೆಂದು ತಿಳಿಯುತ್ತಿದ್ದಂತೆಯೇ ಒಂದು ಸಿಹಿ ಪಾಯಸದ ಜೊತೆಗೆ ಅಷ್ಟು ಹೊತ್ತಿನಲ್ಲಿ ಎಲ್ಲರಿಗೂ ಭರ್ಜರಿ ಊಟ ಬಡಿಸಿಸಿದರು. ಹೇಳಿ ಒತ್ತಾಯ ಮಾಡಿ ಹಾಕಿಸಿದರು. ಹೊಟ್ಟೆ ತುಂಬಿತ್ತು. ಇನ್ನೇನು ಆಪೋಶನ ತೆಗೆದುಕೊಳ್ಳಲು ಸಿದ್ಧರಾಗಿದ್ದೆವು. ಗುರುನಾಥರು ಆಪೋಶನ ತೆಗೆದುಕೊಳ್ಳಬೇಡಿ. ನಮ್ಮ ಊರಿಗೆ ಬಂದು ದೋಸೆ ತಿನ್ನಬೇಕೆಂಬ ಆಸೆ ಪಟ್ಟ ನೀವು ಅದನ್ನು ತಿನ್ನದೇ ಹೋದರೆ ನಮ್ಮ ಗುರು ಶಂಕರಲಿಂಗ ಏನೆಂದುಕೊಂಡಾನು? ಎಂದು ಹೇಳುತ್ತಾ ಎಲ್ಲರಿಗೂ ಒಂದೊಂದು ದೋಸೆ ಬಡಿಸಿಸಿದರು. ಹೊಟ್ಟೆ ತುಂಬಿದೆ ಎಂದರೂ ಕೇಳಲಿಲ್ಲ. ಕೊಡುಗೈ ಗುರುವಿನ ಮಮತೆಯ ಒತ್ತಾಯದ ಮುಂದೆ ನಮ್ಮದೇನೂ ನಡೆಯಲಿಲ್ಲ. ತುಂಬಿದ ಹೊಟ್ಟೆಗೆ ಆ ಮಸಾಲೆ ದೋಸೆಯೂ ಒಳ ಸೇರಿತು. ಅದು ಹೇಗೆ ಕರಗಿತೋ ತಿಳಿಯಲಿಲ್ಲ. ದೋಸೆ ಸಿಗುವುದಿಲ್ಲ ಅಂದದ್ದು ಅದು ಹೇಗೆ ತಯಾರಾಗಿ ಬಂದಿತೋ..... ಎಲ್ಲವೂ ಚಿದಂಬರ ರಹಸ್ಯ. ಮುಂದೆ ನಾವು ಊಟ ಮಾಡಿ ಎದ್ದಾಗ, ನಾವು ಬಂದವರಿಗೆಲ್ಲಾ ಪಂಚೆ, ಕುಪ್ಪಸಗಳನ್ನೆಲ್ಲಾ ನೀಡಿ ಹರಸಿದ್ದಲ್ಲದೇ ಒಳಗೆ ಶಂಕರಲಿಂಗನ ಹಾಗೂ ಜಗದ್ಗುರುಗಳ ಪಾದುಕೆಗಳಿಗೆ ಆರತಿ ಮಾಡಿ ತಂದು, ನಮ್ಮನ್ನೆಲ್ಲಾ ಸಾಲಾಗಿ ನಿಲ್ಲಿಸಿ ಆರತಿ ಮಾಡಲು ತೊಡಗಿದಾಗ ಗಾಭರಿಯಾದ ನಾವು ಇದೇನು ಮಾಡುತ್ತಿದ್ದೀರಿ ಗುರುದೇವ? ಎಂದಾಗ ನೋಡ್ರಪ್ಪಾ ನೀವು ಏನೂ ಮಾತನಾಡುವಂತಿಲ್ಲ. ಶಂಕರಲಿಂಗನ ಭಕ್ತರೆಂದರೆ ಮುಗಿದು ಹೋಯಿತು ಸುಮ್ಮನಿರಬೇಕು. ಮಾತನಾಡಬಾರದು ಎಂದು ಹೇಳಿ ಆರತಿ ಮಾಡಿದರು. ಎಲ್ಲರಲ್ಲಿ ಅವರು ಆ ವಿಶ್ವಾತ್ಮನನ್ನು ಕಾಣುವುದು ಶಂಕರಲಿಂಗನ ಹೆಸರು ಹೇಳಿದವರನ್ನೂ ಶಂಕರಲಿಂಗನಷ್ಟೇ ಭಕ್ತಿಭಾವದಲ್ಲಿ ಸೇವಿಸುವ ಗುರುನಾಥರ ರೀತಿಗೆ ನಾವು ಬೆರಗಾದೆವು. ಇಂತಹ ಮಹಾತ್ಮರ ನಡೆನುಡಿ ನಮ್ಮ ಮೇಲೆಲ್ಲಾ ಅಪಾರ ಪ್ರಭಾವ ಬೀರಿತ್ತು. ಇಂತಹವರ ದರ್ಶನ ಮಾಡಿದ ನಮ್ಮ ಜನ್ಮ ಸಾರ್ಥಕ.
ಮತ್ತೆ ಜಗದ್ಗುರುಗಳನ್ನು ಕರೆಸಿದಾಗಲೂ ನಾವು ಹೋಗಿದ್ದೆವು. ಲಾರಿಗಟ್ಟಲೆ ಹಣ್ಣು ಹಂಪಲುಗಳು ಬಂದವನ್ನು ಬಂದಂತೆ ಹಂಚುತ್ತಿದ್ದುದು, ಆ ದಾನದ ರೀತಿಗೆ ಬೆರಗಾಗಿದ್ದೆವು. ಮುಂದೆ ನಮ್ಮ ಊರಲ್ಲಿ ರಾಮತಾರಕ ಹೋಮಕ್ಕೆ ಅವರಿಗೆ ಆಮಂತ್ರಣವಿತ್ತು. ಗುರುನಾಥರ ದೇಹಾಲಸ್ಯವಿದ್ದುದರಿಂದ ಬಂದಿರಲಿಲ್ಲ. ನಾವುಗಳೇ ಹೋಗಿ ಗುರುನಾಥರ ಆರೋಗ್ಯ ಸುಧಾರಿಸಲೆಂದು ಪ್ರಾರ್ಥಿಸಿ, ಗುರುನಾಥರಿಗೆ ಅರ್ಪಿಸಿ ಬಂದೆವು. ನೋವಿನ ಖಬರಿದ್ದಂತೆಯೇ ಇರಲಿಲ್ಲ. ನಿರಂತರ ಸ್ವಾನಂದದಲ್ಲಿ ಮುಳುಗಿದ ಗುರುನಾಥರಿಗೆ ದೇಹಭಾದೆಯೇನು ಬಾಧಿಸೀತು". ಗಣೇಶ ಅವರ ಮನೋಮಂದಿರದಲ್ಲಿ ಗುರುನಾಥರ ಚಿತ್ರ ಮೂಡಿ ಅವರು ಮೌನಿಯಾದರು.
ಏನೆಲ್ಲವನ್ನೂ ಸೃಷ್ಟಿ ಮಾಡಬಲ್ಲ ಗುರುನಾಥರಿಗೆ ಯಾವ ಶಿಷ್ಯರ ಮನದಲ್ಲಿ ಏನಿದೆ ಎಂದು ಅರಿತು ವರ್ತಿಸುವ ಕರುಣಾಶಾಲಿಗೆ ತನ್ನ ಬಗ್ಗೆ ಯೋಚಿಸಲು ಸಮಯವೆಲ್ಲಿ? ಭಕ್ತರಿಗೆ ತಮಗೆ ಅವಶ್ಯಕವಾದಾಗ ಗುರುವಿನ ಚಿಂತೆ ಬಂದರೆ ಗುರುನಾಥರಿಗೆ ಎಲ್ಲ ಸ್ಥಿತಿಯಲ್ಲೂ ತಮ್ಮ ಭಕ್ತರ ಉದ್ಧಾರದ ಚಿಂತೆಯೇ. ಇಂತಹ ಸದ್ಗುರುನಾಥರನ್ನು ಕಂಡವರು, ಸೇವಿಸಿದವರು ಅವರ ಬಗ್ಗೆ ಕೇಳಿದವರು, ಓದಿದವರೇ ಧನ್ಯರು. ಇದೇ ಗುರು ಮಹಿಮೆ. ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment