ನಿನ್ನಂತರಂಗದೊಳಿಹ ಗುರುನಾಥನು
ನಿನ್ನತನ ಕಳೆದುಕೊಂಡಾಗ ಅವ ಕಾಣ್ವನು
ಸತ್ ಚಿತ್ ಆನಂದ ರೂಪನು ಅವನು
ನಿತ್ಯ ನಿರ್ಮಲ ಮನದಾರಾಧನೆಗೆ ಒಲಿವನು ||
ಡಾಂಭಿಕತೆ ಆಡಂಬರವನೆಂದಿಗೂ ಸಹಿಸನು
ಧರ್ಮಮೀರಿದವರಿಗೆಲ್ಲಾ ಅವ ನಾರಸಿಂಹನು
ಶುದ್ಧಮನದಿ ಕೂಗಿ ಕರೆಯೆ ಓಗೊಡುವನು
ತಾಯಿಯಂತೆ ಒಡಲಿನಲ್ಲಿ ಇರಿಸಿ ಪೊರೆವನು ||
ನೀನೇ ಎಲ್ಲಾ ಎಂದಾಗ ಕರವ ಪಿಡಿವನು
ಭವಸಾಗರ ದಾಟಿಸೊ ನಾವೀಕನಾಗುವನು
ಸಗುಣನು ನಿರ್ಗುಣನು ಅವ ಸ್ವಾತ್ಮಾರಾಮನು
ಆತ್ಮಾರಾಮನಾ ಆರಾಧಿಪ ಅವಧೂತನು ||
ಸಂತಸೇವೆ ಮಾಡಿ ತೋರಿ ಹೀಗಿರಬೇಕೆಂದನು
ಸ್ವಂತಿಕೆ ಇದ್ದಾಗಲೇ ನೀ ಸೋಲುವುದು ಎಂದನು
ಚಿತ್ ಅಂಬರವಾಗಿಸೊ ಮಂತ್ರದೀಕ್ಷೆ ನೀಡಿಹನು
ಎಮ್ಮಗೆಲ್ಲ ಚಿದಂಬರನಾಗಿಯೇ ಕಂಡಿಹನು ||
ಮಾನಸಪೂಜೆಯ ಮಹತ್ವವನ್ನೇ ಪೇಳಿದವನು
ಪರಮಹಂಸಾಶ್ರಮಿಗಳಿಗೂ ಧರ್ಮಬೋಧೆ ಮಾಡಿದನು
ಪುಣ್ಯಚರಿತ ಪುಣ್ಯನಾಮ ಪುಣ್ಯರೂಪನು ಇವನು
ನಮ್ಮ ಪಾಲಿಸುವ ಪರಬ್ರಹ್ಮ ಮೂರುತಿಯಾಗಿಹನು ||
ನಕ್ಕರಿವನು ಶ್ರೀಹರಿ ಮುನಿದಾದ ನರಸಿಂಹ
ನಾದ ವೇದ ಬೋಧರೂಪ ಎಮಗವನು ಪುರುಷಸಿಂಹ
ಪಾಲ್ಗಡಲ ಸಂಜಾತೆ ಇವನ ಮಾತ ಕೇಳಿಹಳು
ಶೃಂಗೇರಿ ಪುರವಾಸಿ ಇವನೊಳು ನಲಿದಾಡಿಹಳು ||
ಅನ್ನಪೂರ್ಣೆಯ ಅಖಂಡತೆ ಇವನಿರುವಲ್ಲಿ
ಅನ್ನ ನೀರು ಇವನಿಂದಲೇ ಎಮಗೆ ಈ ಭುವಿಯಲಿ
ಕೊಟ್ಟು ಕೊಂಡು ಮತ್ತೆ ಕೊಟ್ಟು ನಮ್ಮ ಪರೀಕ್ಷಿಸುವನು
ಸೋತ ಜೊಳ್ಳನೆಲ್ಲ ತೂರಿ ಗಟ್ಟಿಕಾಳ ಬೇಯಿಸುವನು ||
ಭಾವಚಿತ್ರ ಬೇಡಿದಾಗ ಭಾವವೇ ಮೇಲೆಂದನು
ಭಾಗಿಸುವುದ ಬಿಟ್ಟು ಬಾಗಿ ನೆಡೆಯಿರಿ ಎಂದನು
ಭೋಗವೇ ಭಾಗ್ಯವಲ್ಲ ಬಾಧೆ ಅದರಿಂದಲೆಲ್ಲ
ತ್ಯಾಗ ಮಾಡು ಯೋಗ ಹೊಂದು ಎಂದು ಸದಾ ಅಂದಿರಲ್ಲ ||
ಪೊಗಳಲು ಅಸಾಧ್ಯ ಸಾಧಕರಿಗೆ ಇವ ಸಾಧ್ಯ
ಸಾತ್ವಿಕರ ಮನದಾಳದ ಮಾತೊಳು ಇವ ವೇದ್ಯ
ಮಾನಸ ಸಂಚಾರಿ ಇವನು ಮುನಿದರೆ ದುಸ್ಸಾಧ್ಯ
ಮಾತಿನೊಳು ಮಂತ್ರವಿಟ್ಟು ಎಮಗಿತ್ತಿಹ ಖಾದ್ಯ ||
ದರುಷನಗೈದವರಾ ಪುಣ್ಯಕಿಲ್ಲ ಸರಿಸಾಟಿ
ಕಾಣದವರ ಮನವೆಂದರೆ ಅದು ಸಂಸಾರದ ಕಟಕಟಿ
ಸೋತು ನಿಂತರವನ ಮಂದೆ ಗೆಲ್ಲಿಸುವನು ಮುಂದೆಂದು
ಬೀಗಿ ಬಾಗದಿದ್ದರೆ ಬಾಧಿಸುವನು ಎಂದೆಂದು ||
ಈಶ್ವರ ಇಚ್ಚೆಯಂತೆ ನೆಡೆವುದೆಲ್ಲ ಎಂದವನು
ಗ್ರಹತಾರೆಗಳ ಸಂಚಾರವ ಹಿಡಿದಿಹನವನು
ಬ್ರಹ್ಮಭಾವ ನೀಡಿ ಭಕ್ತರ ಉದ್ಧಾರ ಮಾಡಿದವನು
ಸತ್ಯವೇ ಬ್ರಹ್ಮವೆಂದು ಸರ್ವರಿಗೂ ತೋರಿದವನು||
ಮೇಘ ಕರಗಿತು ಸಾಗರ ಶಾಂತವಾಯಿತು
ಇವನ ಕಣ್ರಪ್ಪೆಯ ಸಂಚಾರಕೆ ತಲೆದೂಗಿತು
ಸಕಲ ಜೀವ ರಾಶಿಯೂ ಇವಗೆ ತಲೆಬಾಗಿತು
ಸಕಲೈಶ್ವರ್ಯವೂ ಇವನ ಮಾತ ಕೇಳಿತು ||
ಗುರುವೆನ್ನಲೇ ಇವನಾ ಅರಿವೆನ್ನಲೆ ಇವನಾ
ತಂದೆ ತಾಯಿ ಆತ್ಮಬಂಧು ಎನ್ನಲೇ ಇವನಾ
ಸಖರಾಯ ಸಖರಾಯ ಎನ್ನಲೇ ಇವನಾ
ನಿಜ ಅಂತರಂಗದೊಡೆಯ ಎನ್ನಲೇ ಇವನಾ ||
ಹಾಡಿದೊಡೆ ಕಿವಿಗೆ ಇಂಪು ಅನುಭವಿಸೇ ಇವನ ಕಂಪು
ಕಾಡಿ ಬೇಡಿ ಅವನ ಕರುಣೆ ಪಡೆದಾಗಲೇ ಮನತಂಪು
ಮನದ ಮಡಿಯಿಂದ ಮೆಲುದನಿಯೊಳವನ ನಾಮ ನುಡಿಯೆ
ಕಾಡಿಸಿ ಬೇಡಿಸಿಕೊಳ್ಳದೆ ಬರುವನವ ನಿನ್ನ ಹರಸೆ ||
ತಾಳಕೆ ಸಿಗದಾ ಪದವಿದು ಭಾವದ ಬಾಗಿನವು
ಭಕ್ತಿಯಿಂದ ಮನನ ಮಾಡೆ ನಿಜಭಾಗ್ಯವಾ ಕೊಡುವುದು
ಪಲ್ಲವಿ ಚರಣಗಳೆಂಬ ಆದಿ ಅಂತ್ಯ ಇದರಲಿಲ್ಲ
ಕಾರಣ ಗುರು ಆದ್ಯಂತರಹಿತ ಮರೆಯೊ ಹಾಗಿಲ್ಲ ||
ಅಂಬಾಸುತನ ಅಸ್ಥಿತ್ವ ಇವನ ಪದಗಳಿಂದ
ಪದಕೆ ಕಾರಣ ಗುರುವರನ ಕರುಣೆಯಿಂದ
ಲೋಪದೋಷಗಳಿಗೆಲ್ಲಾ ಕಾರಣವಿಲ್ಲಿ ನಾನು
ಲೋಕಮಾನ್ಯ ಲೋಕದೊಡೆಯ ಗುರುನಾಥನವನು ||