ಗುರುನಾಥ ಗಾನಾಮೃತ
ಗುರು ನಿನ್ನ ಶ್ರೀಚರಣದಡಿಯೊಳೆನ್ನ ಮನ
ರಚನೆ: ಅಂಬಾಸುತ
ಗುರು ನಿನ್ನ ಶ್ರೀಚರಣದಡಿಯೊಳೆನ್ನ ಮನ
ಸ್ಥಿರವಾಗಿ ನಿಲುವಂತೆ ನೀ ಹರಸಲೇ ಬೇಕೋ
ಎನ್ನ ನೀ ಕಾಯಲೇ ಬೇಕೊ ||ಪ||
ಹಣ ಕುಣಿದಾಡಿಹುದು ಹಸಿವ ಹೆಚ್ಚಿಸಿಹುದು
ಹುಚ್ಚು ಹಿಡಿಸಿ ಎನ್ನ ಬೀದಿಯೊಳಿಟ್ಟಿಹುದೋ
ಗುರುವೆ ನೀ ಎನ್ನ ಕಾಯಲೇ ಬೇಕೊ ||೧||
ಮಣ್ಣಿನ ವ್ಯಾಮೋಹ ಮಮತೆಯ ಮುರಿದಿಹುದೊ
ಮನ ಮನೆಯ ಮೂರು ಪಾಲು ಮಾಡಿ ಮೆರೆದಿಹುದೋ
ಗುರುವೆ ನೀ ಎನ್ನ ಕಾಯಲೇ ಬೇಕೊ ||೨||
ದೇಹದ ದುಷ್ಟ ತೃಷೆಯು ಮನವಾ ಕೊಳೆಸಿಹುದೊ
ನಾರುತಿಹುದೊ ನಾಲ್ವರೊಳ್ ತಲೆ ತಗ್ಗಿಸುವಂತಾಗಿಹುದೊ
ಗುರುವೆ ನೀ ಎನ್ನ ಕಾಯಲೇ ಬೇಕೊ ||೩||
ಆರು ವೈರಿಗಳು ಹಾರಾಡಿ ಮೆರೆದಿಹರೊ
ನಿನ್ನ ಬಿಟ್ಟು ಆರನು ನಾ ಮೊರೆ ಹೊಕ್ಕಲೊ
ಗುರುವೆ ನೀ ಎನ್ನ ಕಾಯಲೇ ಬೇಕೊ ||೪||
ಹಿಡಿ ಅನ್ನ ಪುಟ್ಟ ಗೂಡು ಮಾನಮುಚ್ಚುವ ಬಟ್ಟೆ ಸಾಕು
ಬೆಟ್ಟವಾದರು ಸರಿ ನಾ ನಿನ್ನ ಧ್ಯಾನದೊಳಿರುವಂತೆ
ಗುರುವೆ ನೀ ಎನ್ನ ಕಾಯಲೇ ಬೇಕೊ ||೫||
ಶಕ್ತಿ ಬೇಡೆನು ನಾನು ಯುಕ್ತಿ ಬೇಡೆನು ನಾನು
ಮುಕ್ತಿಯ ಬೇಡಲು ಬಂದಿಲ್ಲ ನಾನೂ
ಗುರುವೆ ನೀ ಎನ್ನ ಕಾಯಲೇ ಬೇಕೊ ||೬||
ಅಂಬಾಸುತನಾ ಅತಿ ವಿನಯದಾ ಬೇಡಿಕೆ ಇದು
ಎನ್ನ ಮನಮಂದಿರದಿ ನೀ ಸ್ಥಿರವಾಗಿರುತಾ
ಗುರುವೆ ನೀ ಎನ್ನ ಕಾಯಲೇ ಬೇಕೊ ||೭||
No comments:
Post a Comment