ಗುರುನಾಥ ಗಾನಾಮೃತ
ಅಣಿಯಾದೆನು ನಾ ಗುರುಪೂಜೆಗೆ
ರಚನೆ: ಅಂಬಾಸುತ
ಅಣಿಯಾದೆನು ನಾ ಗುರುಪೂಜೆಗೆ
ಅಣಿಗೊಳಿಸಿ ಎಲ್ಲಾ ಪರಿಕರಗಳನು||ಪ||
ದಿವ್ಯ ಸದ್ಗುರು ಧರಿಸಿದ್ದ ಪಾದುಕವಾ
ಭವ್ಯವಾದ ಬೆಳ್ಳಿ ಮಂಟಪದೊಳಗಿಟ್ಟು
ಸುತ್ತಲು ತುಪ್ಪದ ದೀಪವನಿಟ್ಟು
ಒಪ್ಪವಾಗಿ ರಂಗೋಲಿ ಬಿಟ್ಟು ||೧||
ಶುದ್ಧಗಂಗೆಯಾ ನೀರನು ತಂದೆ
ಪಂಚಾಮೃತ ಅಭಿಷೇಕಕೆ ಎಂದೆ
ನಾನಾ ಒಡವೆ ರೇಶಿಮೆ ವಸ್ತ್ರ
ನಾನಾ ಪುಷ್ಪ ತುಳಸಿ ಬಿಲ್ವಪತ್ರ ||೨||
ಧೂಪ ದೀಪ ಸಡಗರದಿಂದೆ
ಭಕ್ಷ್ಯಭೋಜ್ಯದಾ ನೈವೇದ್ಯವೆಂದೆ
ಏಕಾರತಿ ಪಂಚಾರತಿ ಮುಂದೆ
ನಾನಾ ವಾದ್ಯವ ಬಾರಿಸು ಎಂದೆ ||೩||
ಇಷ್ಟೆಲ್ಲಾ ಅಣಿಗೊಳಿಸಿ ಕುಳಿತೆ
ಗುರುಪಾದದಿ ಎನ್ನ ಚಿತ್ತವನಿಟ್ಟೆ
ಅರಿವಿನ ಗುರು ಆಗ ನಕ್ಕು ನುಡಿದಾ
ಅಹಂಭಾವ ಕಾಣುತಿದೆ ಎಂದ ||೪||
ನಾ ಇಹೆ ನಿನ್ನ ಮನಮಂದಿರದಿ
ನಾನಿಲ್ಲ ಆ ಬಾಹ್ಯ ಬಿಂಬದಿ
ಮಾಡೋ ಮಾನಸ ಪೂಜೆಯನು
ನಾನಾಗಲೇನೇ ಒಲಿಯುವೆನು ||೫||
ಬೇಕಿದು ಬಾಹ್ಯಪೂಜೆ ಮೊದಮೊದಲು
ಭಕ್ತಿಯ ಎನ್ನೊಳು ಸ್ಥಿರಗೊಳಿಸಲು
ಮೆಟ್ಟಿಲು ಏರುತ ಮೇಲಕೆ ಹೋಗಬೇಕು
ಅಕ್ಕ ಪಕ್ಕದ ಕಟ್ಟೆಯ ಹಿಡಿದಿರಬೇಕು ||೬||
ಇಂತೆಂದನು ಸದ್ಗುರುಮಹಾರಾಜ
ಮಾನಸಮಂದಿರವಾಸಿ ರವಿತೇಜ
ಅಂಬಾಸುತನೊಳು ಅರಿವಾಗಿ ನಿಂತು
ಬರೆಸುತ ಈ ಪದಪುಂಜಗಳಾ ||೭||
No comments:
Post a Comment