ಗುರುನಾಥ ಗಾನಾಮೃತ
ಬಾರೋ ಗುರುರಾಯ ಕರುಣದಿ ಕಾಯೋ ಮಹನೀಯಾ
ರಚನೆ: ಅಂಬಾಸುತ
ಬಾರೋ ಗುರುರಾಯ ಕರುಣದಿ ಕಾಯೋ ಮಹನೀಯಾ||ಪ||
ಮರೆವಿಗೆ ಮರೆವು ಕೊಟ್ಟು ಅರಿವಿನೊಳೆನ್ನನಿಟ್ಟು
ಆರನ್ನು ಬಿಡುವಂತೆ ನೀ ಹರಸೇ||೧||
ಬೇಧಕ್ಕೇ ಬಾಧೆಯಾಗಿ ಬೋಧರೂಪನಾಗಿ
ಬಾರಿ ಬಾರಿಗು ಎನ್ನ ಎಚ್ಚರಿಸೇ ||೨||
ಸಂಶಯವನ್ನಳಿಸೊ ಸ್ಥಿರತೆಯ ಉಳಿಸೊ
ಸರ್ವರೊಳು ನೀನಿಹೆ ಎಂಬುದ ತಿಳಿಸೇ ||೩||
ನಿಜಮೌನ ಮೆರೆದಾಡಲಿ ಮಾತು ಮರೆಯಾಗಲಿ
ಅನುಭವದಿಂದಲೇ ಸರ್ವವು ವೇದ್ಯವಾಗಿಸೆ ||೪||
ಆಕಾರವೊ ನಿರಾಕಾರವೊ ಆನಂದವ ತರಲಿ
ಅಜ್ಞಾನದಾ ಅರಿಯ ಎಂದೂ ಸೋಲಿಸಲು ||೫||
ಸಖರಾಯಪುರವಾದಿ ಸದ್ಗುರುನಾಥ
ಅಂಬಾಸುತ ನಿನ್ನ ದಾಸಾನುದಾಸಾ ||೬|
No comments:
Post a Comment