ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 21
ಬೈದು ಹೇಳುವ ಬದುಕ ತೋರಿಸಿದ ಗುರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಎಲ್ಲಾ ಮುಖ ಸ್ತುತಿಗೆ ಮರುಳಾಗುವುದಿದೆ. ಸತ್ಯ ಕಠೋರವಾಗಿರುತ್ತದೆ. ಅದನ್ನು ಯಾರ ಹಂಗಿಲ್ಲದೆ ಸತ್ಯ ಪ್ರತಿಪಾದಕರು ಮಾತ್ರ ಆಡಬಲ್ಲರು. ಪತಿಯನ್ನು ಕಳೆದುಕೊಂಡ ಆರ್ತೆಯೊಬ್ಬರು ಗುರುನಾಥರ ಬಳಿ ಬಂದರು. ಎಂದೂ ಗುರುನಾಥರನ್ನು ಕಂಡಿರದ, ಕೇವಲ ಗುರುನಾಥರ ಹೆಸರು ಮಾತ್ರಾ ಕೇಳಿದ್ದ ಆಕೆ, ಇಲ್ಲಿ ಬಂದಾಗ ಸಿಕ್ಕಿದ್ದು ಸಾಂತ್ವನವಲ್ಲ, ಕಠೋರವಾದ ಮಾತುಗಳು. ಸತ್ಯದ ಜಾಡು ಹಿಡಿದ ಪ್ರಶ್ನೆಗಳು, ಗತಜೀವನದಲ್ಲಿ ನಡೆದು ಬಂದ ದಾರಿಯ ಕಹಿ ಸತ್ಯಗಳು. "ಹೊರಡಿ ಹೊರಡಿ...." ಎಂಬುದೇ ಅನುರಣನಗೊಂಡ ನುಡಿಗಳು. ಆದರೆ ಬಂದ ತಾಯಿ ನಿರ್ಧರಿಸಿದ್ದೇನು? ಆಕೆಯು ಇಲ್ಲಿ ಕಂಡು ಕೊಂಡದ್ದು ಯಾರನ್ನ? ಸುಟ್ಟಗಾಯದ ಮೇಲೆ ಬರಿಯ ಇಟ್ಟಂತಹ ಮಾತುಗಳಿಂದ ಅವರು ತೆಗೆದುಕೊಂಡ ನಿರ್ಧಾರವೇನು? ಇಂದಿನ ಸತ್ಸಂಗದ ವಿಚಾರಗಳನ್ನು ಗುರುನಾಥರೊಂದಿಗಾದ ಸಂವಾದಗಳನ್ನು ಆ ತಾಯಿಯ ನುಡಿಗಳಲ್ಲಿ ಕೇಳೋಣ... ಬನ್ನಿ ನಿತ್ಯ ಸತ್ಸಂಗ ಪ್ರಿಯರೇ....
"ಗುರುನಾಥರ ಮನೆಗೆ ನಾನು ಬಂದದ್ದು ಅದೇ ಮೊದಲು. ಗುರುನಾಥರ ಹೆಸರು ಕೇಳಿದ್ದೆನಾದರೂ ಕಾಣಲಾಗಿರಲಿಲ್ಲ. ಆನಂದದಿಂದಿದ್ದ ನಮ್ಮ ಸಂಸಾರದಲ್ಲಿ ಒಂದು ದೊಡ್ಡ ಆಘಾತವಾಯಿತು. ನಮ್ಮ ಯಜಮಾನರು ಐವತ್ಮೂರು ವರ್ಷದ ಆಯುವಿನಲ್ಲಿಯೇ ಒಂದು ಸಣ್ಣ ಖಾಯಿಲೆಯ ನೆಪದಿಂದ ಕೈಬಿಟ್ಟು ಹೋದರು. ನನಗಿದು ಡಾಕ್ಟರುಗಳ ಅಚಾತುರ್ಯದಿಂದ ಏನಾದರೂ ಆಗಿರಬಹುದಾ? ಎಂಬ ಚಿಂತೆ ಇತ್ತು.... ಯಾರನ್ನು ಕೇಳಬೇಕು, ಎತ್ತ ಹೋಗಬೇಕೆಂಬ ದಿಕ್ಕು ಕಾಣದಾದ ಪರಿಸ್ಥಿತಿ. ಪತಿಯನ್ನು ಅಕಾಲಿಕವಾಗಿ ಕಳೆದುಕೊಂಡ ದುಃಖ ಬೇರೆ. ಬೆಳಗಿನ ಜಾವ ನಮ್ಮ ಮನೆಯ ಸಮೀಪದಲ್ಲಿ ಹಕ್ಕಿ ಶಾಸ್ತ್ರ ನುಡಿಯುವವನೊಬ್ಬನು ಅದು ಏನೋ ಹೇಳಿಕೊಂಡು ಹೋಗುತ್ತಿದ್ದುದು ಕೇಳಿ ಬಂತು. ತಮಿಳಿನಲ್ಲಿ ಅವನು ಮಾತನಾಡುತ್ತಿದ್ದ. ಒಟ್ಟಿನಲ್ಲಿ ನನಗೆ ಅರ್ಥವಾದುದು "ಗುರುವಿನ ಬಳಿಗೆ ಹೋಗು ಗುರು ದರ್ಶನ ಮಾಡು" ಅಷ್ಟೇ. ದುಃಖದ ಮಾಡುವಿನಲ್ಲಿದ್ದ ನನಗೆ, ನನ್ನ ಪತಿಯನ್ನು ಕಳೆದುಕೊಂಡು ಹದಿನೈದು ದಿನಗಳಾಗಿತ್ತಷ್ಟೆ... ಕೂಡಲೇ ನೆನಪು ಬಂದಿದ್ದು ಗುರುನಾಥರದ್ದು. ಬೆಳಗೆದ್ದು ನೇರವಾಗಿ ಸಖರಾಯಪಟ್ಟಣದ ಗುರುನಾಥರ ಮನೆಗೆ ಬಂದಿದ್ದೆ. ನಮ್ಮಕ್ಕನೂ ಜೊತೆಗೆ ಬಂದಿದ್ದರು. ಮೊದಲೇ ಬರಬೇಕಿದ್ದ ನನಗೆ ಇದೀಗ ಗುರುದರ್ಶನದ ಕಾಲ ಒದಗಿ ಬಂದಿತ್ತೇನೋ. ಗುರುನಾಥರ ಭವ್ಯ ಮೂರ್ತಿಯ ಎದುರು ಹೋಗಿ ನಿಂತು ನಮಸ್ಕರಿಸಿದಾಗ, ಬಾಣದಂತೆ ಪ್ರಶ್ನೆಗಳು ಬಂದವು. ಏನು ಬಂದಿದ್ದೀಯಾ? ಎಂದು ಕೇಳಿದರು. ಆ ಧ್ವನಿ ಕೇಳಿ ಮೊದಲ ಸಲ ಹೆದರಿಕೆಯೇ ಆಗಿತ್ತು. ನಾನು ವಿನಯದಿಂದ ನಡುಗುತ್ತಾ, ನಮ್ಮ ಯಜಮಾನರು ಹೋಗಿಬಿಟ್ಟರು. ಇನ್ನೂ ಐವತ್ಮೂರು ವರ್ಷವಾಗಿತ್ತು ಎಂದಾಗ ಅವರು 'ಇವತ್ತು ಅವನು ನಾಳೆ ನಾನು ಎಲ್ಲರೂ ಹೋಗುವವರೇ ಎಂದಾಗ'.... ನನ್ನ ಮನಸ್ಸಿನ ಶಂಕೆ ದೂರವಾಯಿತು. ಓಹೋ, ನಮ್ಮ ಮನೆಯವರ ಆಯಸ್ಸು ಅಷ್ಟೇ ಇತ್ತೇನೋ... ನಾನೇ ಬೇಡದುದೆಲ್ಲಾ ಚಿಂತೆ ಮಾಡುತ್ತಾ ಯಾರ ಯಾರ ಮೇಲೋ ಅಪವಾದ ಹಾಕುವುದು ಸರಿಯಲ್ಲ ಎನಿಸಿತು. ಗುರುದರ್ಶನ ಮಾತ್ರದಿಂದ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ, ಬೇಡದ ಆಲೋಚನೆಗಳನ್ನು ಎಬ್ಬಿಸುತ್ತಿದ್ದ ವಿಚಾರಗಳೆಲ್ಲಾ ದೂರವಾಗಿ... ಒಂದು ರೀತಿಯ ನೆಮ್ಮದಿ ಬಂತು. ನಾನು ಸ್ತ್ರೀ ಸಮಾನತೆಯ ಬಗ್ಗೆ ಬಹಳ ವಾದಿಸುತ್ತಿದ್ದೆ. ಅದನ್ನು ಗುರುನಾಥರು ಹೇಗೆ ಅರಿತುಕೊಂಡರೋ "ಸ್ತ್ರೀ ಸಮಾನತೆಯ ಬಗ್ಗೆ ಬಹಳ ವಾದಿಸುತ್ತಿದ್ದೀಯಲ್ಲಾ. ಸ್ತ್ರೀ ಧರ್ಮವನ್ನು ಏನು ನಡೆಸಿದೀಯಾ?" ಎಂದು ಪ್ರಶ್ನಿಸಿದ್ದಷ್ಟೇ ಅಲ್ಲದೆ ಸಿಕ್ಕಾಪಟ್ಟೆ ನೇರವಾಗಿ ಬೈದರು. ಅದೇಕೋ ಅವರು ಎಷ್ಟು ಬೈದರೂ ನನಗೇನೂ ಕೆಟ್ಟದ್ದು ಅನಿಸಲೇ ಇಲ್ಲ. ಅದರ ಬದಲು ನಾನು ಸರಿಯಾದ ಜಾಗಕ್ಕೆ ಬಂದಿದ್ದೀನಿ, ಇವರೇ ನನ್ನ ನಿಜವಾದ ಗುರುಗಳು. ಇವರ ಪಾದಗಳನ್ನು ಗಟ್ಟಿಯಾಗಿ ಹಿಡಿಯುವುದೇ ನನಗುಳಿದ ಮಾರ್ಗವೆಂದು ಮನಸ್ಸಿನಲ್ಲಿ ನಿರ್ಧಾರ ಮಾಡಿಬಿಟ್ಟೆ. ಬೈದು ಹೇಳುವವರೇ ಬದುಕಿಗೆ ಹೇಳುವವರು ಎಂಬುದನ್ನು ನಾನು ಮನಗಂಡಿದ್ದೆ. ಗುರುನಾಥರು ಬೈದಷ್ಟೂ ನನಗವರ ಮೇಲೆ ಅಪಾರ ಪ್ರೀತಿ, ಗೌರವಗಳು ಹೆಚ್ಚಾಗತೊಡಗಿತು. ಸಿಕ್ಕ ಗುರುವನ್ನು ಕೈ ಬಿಡಬಾರದು. ಇಂತಹ ಗುರುಗಳು ಸಿಕ್ಕಿದ್ದು ನನ್ನ ಪುಣ್ಯವೆಂದು ಮನಸ್ಸಿನಲ್ಲಿ ನಿರ್ಧರಿಸಿಬಿಟ್ಟೆ. ಗುರುನಾಥರು ಬೈಯುತ್ತಲೇ ಇದ್ದರು. "ನಿನ್ನ ಪತ್ನಿ ಧರ್ಮವನ್ನು ಏನು ಪರಿಪಾಲಿಸಿದ್ದೀಯೆ.. ನಡಿ.... ನಡಿ" ಎನ್ನುತ್ತಿದ್ದರು. ಎಲ್ಲರೆದುರು ಹೀಗೆ ಗುರುನಾಥರು ಅಂದಾಗಲೂ ಬಹಳ ಹೊತ್ತು ಅಲ್ಲಿಂದ ನಾನು ಕದಲಲೇ ಇಲ್ಲ. ಆನಂತರ ಗುರುವೆಂದು ಭಾವಿಸಿದವರ ಮಾತುಗಳನ್ನು ಮೊದಲು ಪಾಲಿಸಬೇಕೆಂಬ ಅರಿವಾಗಿ ನಾನೂ ಅಲ್ಲಿಂದ ಹೊರಟು ಬಂದೆ. ಈ ದೇಹ ಗುರುಮನೆಯಿಂದ ಆ ಕ್ಷಣಕ್ಕೆ ಹೊರ ಬರುತ್ತಿದ್ದರೂ, ನನ್ನ ಮನದಲ್ಲಿ ಗುರುನಾಥರೇ ನನ್ನ ಹೃದಯ ಮಂದಿರಲ್ಲಿ ಪ್ರತಿಷ್ಠಾಪನೆಗೊಂಡಿದ್ದರು". ಒಂದು ಕ್ಷಣ ಬೆಂಗಳೂರಿನ ಆ ತಾಯಿ ಸುಮ್ಮನಾದರು. ಗುರುನಾಥರ ಜಯಂತಿಯ ಪ್ರಯುಕ್ತ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕವರು ಬಂದಿದ್ದರು.
ಪ್ರಿಯ ಸತ್ಸಂಗಾಭಿಮಾನಿ ಗುರುಬಂಧುಗಳೇ.... ಇನ್ನೇನು ದುಃಖದ ಮಡುವಿನಲ್ಲಿ ಮುಳುಗಿ ಹೋಗಿ ಬಿಡುತ್ತೇವೆಂದು ಭಯ ಭೀತರಾಗಿ, ದಾರಿ ಕಾಣದೇ, ಆದರೆ ಗುರುನಾಥರ ಸ್ಮರಣೆ ಮಾತ್ರಾ ಮಾಡಿದವರಿಗೂ ನಮ್ಮ ಸಖರಾಯಪಟ್ಟಣದ ವೆಂಕಟಾಚಲ ಅವಧೂತರು ಎಂತಹ ಕೃಪೆ ತೋರುತ್ತಾರೆಂಬುದನ್ನಿಲ್ಲಿ ನಾವು ನೋಡಬಹುದು.
ಗುರುನಾಥರ ಒಂದೊಂದು ಕಠೋರ ವಚನಗಳೂ ನಮ್ಮ ಪಾಪ ತೊಳೆಯುವ ಪರಿಶುದ್ಧ ಗಂಗೆ ಎಂಬುದನ್ನು ಅರಿತವರು ಪಾರಾದರು. ಇದನ್ನು ಅರಿಯಲೂ ಅವರೇ ಕರುಣಿಸಬೇಕು.. ಮುಂದೆ ಏನಾಯಿತೆಂಬುದನ್ನರಿಯಲು ನಾಳಿನ ನಿತ್ಯ ಸತ್ಸಂಗಕ್ಕೆ ಬರುವಿರಲ್ಲಾ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment