ಒಟ್ಟು ನೋಟಗಳು

Thursday, June 29, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 29
ನಿರಾಕಾರನಿಗಿವೆ ಅನೇಕ ಆಕಾರಗಳು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಗುರುನಾಥರು ಸಾಮಾನ್ಯರ ದೃಷ್ಟಿಗೆ ಇಹಲೀಲೆಯನ್ನು ಮುಗಿಸಿದ್ದರೂ, ತಮ್ಮ ಅನೇಕ ಭಕ್ತರಿಗೆ ಅವರ ಇರುವನ್ನು ತೋರಿಸುತ್ತಿದ್ದಾರೆ. ತಮ್ಮ ಶಕ್ತಿಯ ಬೇರೊಂದು ರೂಪವನ್ನು ದೇಹವೇ ಪ್ರಾಧಾನ್ಯವೆಂದು ಭಾವಿಸುವ ಭಕ್ತರ ಮನಕ್ಕೊಂದು ನೆಮ್ಮದಿಕೊಡಲು ಹಲವು ರೂಪಗಳಲ್ಲಿ ಗುರುನಾಥರ ಪ್ರೀತಿ, ಶಕ್ತಿ.... ಅಗಾಧ ಸಾಮರ್ಥ್ಯಗಳು ಪ್ರಕಟವಾಗುತ್ತಿದೆ. ಮಾನ್ಯ ಪ್ರಿಯ ಗುರು ಬಾಂಧವ ಸತ್ಸಂಗ ಪ್ರೇಮಿಗಳೇ, ಗುರುನಾಥರು ಪದೇ ಪದೇ ಹೇಳುತಿದ್ದ "ದೇಹ ಪ್ರಮಾಣವಲ್ಲ.. ಪದ ಪ್ರಮಾಣ, ಗುರುವಾಕ್ಯ ಪ್ರಮಾಣ, ಗುರುವಿಗೆ ಹುಟ್ಟು ಸಾವುಗಳಿಲ್ಲ" ಎಂಬಂತಹ ಅನೇಕ ನುಡಿಗಳು ಈಗ ಹಲವರಿಗೆ ಪ್ರಮಾಣವಾಗಿ ಗುರುನಾಥರ ಪ್ರಭಾವದ ಅರಿವಾಗಿಸುತ್ತಲೇ ಸಾಗಿದೆ. 

ಗುರುನಾಥರನ್ನು ಹಲವು ಬಾರಿ ಕಂಡ ಭಕ್ತೆಯೊಬ್ಬರಿಗೆ ಇಂದೂ ಅವರ ಉಸಿರಾಟ, ಓಡಾಟ, ಜೀವನಗಳೆಲ್ಲದರ ಮೂಲ ಗುರುನಾಥರೇ ಎಂಬ ಬಿಗಿಯಾದ ಭಾವನೆ ಇದೆ. ಒಮ್ಮೆ ಅವರು ಗುರುನಾಥರ ಬಳಿ ಹೋದಾಗ ತಮ್ಮ ಸ್ನೇಹಿತೆಯ ವಿಚಾರವನ್ನು ಕೇಳಲು ಪ್ರಯತ್ನಿಸಿದಾಗ ಗುರುನಾಥರೆಂದಿದ್ದರಂತೆ: "ನೋಡಮ್ಮ, ಕರ್ಮ ಸವೆಯದೇ ಏನೂ ಆಗದು. ಮಾಡಿದ ಕರ್ಮಗಳನ್ನು ನಾವು ಅನುಭವಿಸಿಯೇ ತೀರಿಸಬೇಕು". ನಿನ್ನ ಫೈಲೇ ಬೇರೆ. ನಿನ್ನ ಸ್ನೇಹಿತೆಯ ಫೈಲೇ ಬೇರೆ. ಸುಮ್ಮಸುಮ್ಮನೆ ನಾವು ಮತ್ತೊಬ್ಬರದನ್ನು ಮೈಮೇಲೆ ಹಾಕಿಕೊಳ್ಳಬಾರದು. ಕರ್ಮ ಸವೆದಾಗ ಎಲ್ಲ ಸರಿಯಾಗುತ್ತದೆ. ಸೇವೆ ಜೀವನದಲ್ಲಿ ಪ್ರಮುಖವಾಗಿರಬೇಕು" ಎಂಬೆಲ್ಲಾ ವಿಚಾರಗಳನ್ನು ತಿಳಿಸಿ ಸೂಚ್ಯವಾಗಿ ಎಚ್ಚರಿಸಿದ್ದರಂತೆ. 

ಆ ಗುರು ಭಕ್ತೆಗೆ ಒಂದು ರೀತಿಯ ವಿಚಿತ್ರ ನೋವು ಒಂದು ಪಾಯಿಂಟ್ ನಲ್ಲಿ ಯಾವಾಗಲಾದರೂ ಕಾಣಿಸಿಕೊಳ್ಳುತ್ತಿತ್ತಂತೆ. ಅದೆಂತಹ ಅಸಾಧ್ಯ ನೋವು ಅದಾಗಿತ್ತೆಂದರೆ ಅಳುವ ಪ್ರಯತ್ನ ಮಾಡಬೇಕಿಲ್ಲ. ತನ್ನ ತಾನೇ ಕಣ್ಣಿನಿಂದ ಅಳುವು ಧಾರಾಕಾರವಾಗಿ ಹರಿಯುತ್ತಿತ್ತು. ಅಂತಹ ಯಮಯಾತನೆಯದು. ಎಲ್ಲ ವೈದ್ಯರುಗಳನ್ನು ಕಂಡಾಯಿತು. ಹಲವು ಚಿಕಿತ್ಸೆಗಳನ್ನು ಮಾಡಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಗುರುನಾಥರೇ ಭವರೋಗ ಪರಿಹಾರಕ ಮಹಾ ವೈದ್ಯರೆಂದು ನಂಬಿದ ಇವರು ಮನದಲ್ಲೇ ಗುರುವನ್ನು ಆ ನೋವಿನಲ್ಲಿಯೂ ನೆನೆಯುತ್ತಿದ್ದರೇನೋ, ಕರ್ಮ ಸವೆಸಿಯೇ ತೀರಬೇಕು ಎಂಬ ಗುರುವಾಣಿಯೂ ಅವರಿಗೆ ಆಗಾಗ್ಗೆ ನೆನಪಾಗುತ್ತಿದ್ದಿರಬಹುದು. 

ಗುರುನಾಥರ ಮಹಾನಿರ್ವಾಣದ ಸಂದರ್ಭದಲ್ಲಿಯಂತೂ ಈ ಭಕ್ತೆಗೆ ಒಂದು ಸುವರ್ಣ ನಿಧಿಯನ್ನು ಕಳೆದುಕೊಂಡು ಬಿಟ್ಟೆವಲ್ಲ. ಇದ್ದಾಗ ಆದಷ್ಟೂ ಅವರ ಸಾನ್ನಿಧ್ಯವನ್ನು ಪಡೆಯಬೇಕಿತ್ತು. ಅವರ ಕೃಪೆಯನ್ನು ಹೊಂದಬೇಕಿತ್ತು ಎಂಬ ತುಡಿತವಂತೂ ಮನದಲ್ಲಿ ಇದ್ದೆ ಇತ್ತಂತೆ. 

ಕೆಲವು ಕಾಲಾ ನಂತರ ಅದೆಂತೋ ಮತ್ತೊಬ್ಬ ಗುರುವರ್ಯರ ದರ್ಶನ ಲಾಭ ಇವರಿಗಾಯಿತಂತೆ. ಯಾವ ಶಿಷ್ಯರು ಬಂದರೂ "ನಾನಿದ್ದೇನಮ್ಮಾ ಹೆದರಬೇಡ. ಒಳ್ಳೆಯದನ್ನೇ ಮಾಡ್ತೀನಿ" ಎನ್ನುವ ಇವರ ವಾಕ್ಯಗಳು ಪದೇ ಪದೇ ಗುರುನಾಥರನ್ನು ಇವರಲ್ಲಿ ಕಾಣುವಂತೆ ಮಾಡುತ್ತಿತ್ತಂತೆ. 

ಒಂದು ದಿನ ಭೇಟಿಯಾದ ಆ ಗುರುವರ್ಯರು "ನಿನಗೆ ಇವತ್ತು ಬಹಳ ಸಂತಸದ ಒಂದು ವಿಚಾರ ಗೋಚರವಾಗುತ್ತೆ" ಎಂದಿದ್ದರಂತೆ. ಅಂದು ತಮ್ಮವರೊಬ್ಬರ ಮನೆಗೆ ಹೋದಾಗ ಬಹು ದೊಡ್ಡ ಗಾತ್ರದ ಗುರುನಾಥರ ಚಿತ್ರವನ್ನಲ್ಲಿ ಕಂಡ ಇವರಿಗಾದ ಆನಂದ ಅಷ್ಟಿಷ್ಟಲ್ಲ. ಮತ್ತೊಮ್ಮೆ ಗುರುನಾಥರನ್ನೇ ಕಂಡ ಅನುಭವವಾಯಿತಂತೆ. ಮುಂದೊಂದು ದಿನ ಬಂದ ಆ ಯತಿವರ್ಯರು "ಬಹಳ ನೋವಾಗುತ್ತಿದೆಯಲ್ಲವೇನಮ್ಮಾ. ಬಹಳ ನೊಂದು ಬವಣೆ ಪಟ್ಟಿದ್ದೀಯಲ್ಲಾ. ಎಲ್ಲ ಮುಗಿಯಿತು ಬಿಡು. ನಿಶ್ಚಿಂತವಾಗಿರು. ಈ ತಿಂಗಳ ಹತ್ತೊಂಬತ್ತರ ರಾತ್ರಿ ಗುರುನಾಥರು ಬರುತ್ತಾರೆ. ನಿನ್ನ ಬೆನ್ನು ನೋವನ್ನೆಲ್ಲಾ ಅವರು ಪರಿಹರಿಸಿ ತೆಗೆದುಕೊಂಡು ಹೋಗುತ್ತಾರೆ ಚಿಂತೆ ಬಿಡು" ಎಂದಾಗ ಇವರು ಅವಾಕ್ಕಾದರು. 

"ಹತ್ತೊಂಬತ್ತು ದಾಟಿತು. ಅಂದು ಹುಟ್ಟಿದ ಹಬ್ಬದ ದಿನ. ಬೆಳಗಿನ ಕನಸಿನಲ್ಲಿ ಗುರುನಾಥರು ಬಂದಂತಾಯಿತು. ಒಮ್ಮೆ ಅತ್ತಲಿಂದ ಇತ್ತಲವರೆಗೆ ದೃಷ್ಟಿ ಹಾಯಿಸಿದಂತಾಯಿತು. ಮುಂದೆ ದಿನಗಳು ಉರುಳಿದವು. ಬೆನ್ನು ನೋವು ಹೇಳಹೆಸರಿಲ್ಲ. ಗುರುನಾಥರ ಕೃಪೆಗೆ ಅಸಾಧ್ಯವಾದುದೇನಿದೆ. ಆ ಹಿಂದಿನ ಹದಿನೈದು ದಿನಗಳು ನನ್ನ ಬೆನ್ನು ನೋವು ಅದೆಷ್ಟಿತ್ತೆಂದರೆ ಹೇಳಲಸಾಧ್ಯ. ಗುರುನಾಥರು ಅಂದೂ ಇಂದೂ ಎಂದೆಂದಿಗೂ ಇದ್ದಾರೆ. ಭಕ್ತರ ಬವಣೆಗಳನ್ನು ದೂರ ಮಾಡಲು ಹಲವು ರೂಪಗಳನ್ನು ನಮಗಾಗಿ ಧರಿಸುತ್ತಾರೆಂಬುದು.. ನಾನು ಅನುಭವಿಸಿದ ಸತ್ಯ" ಎನ್ನುತ್ತಾರೆ ಬೆಂಗಳೂರಿನ ಆ ಭಕ್ತೆ. "ನಾನಿದೀನಿ ನಾನು ನಿನ್ನ ನೋಡ್ಕೋತೀನಿ, ನಿತ್ಯ ಸತ್ಸಂಗದಲ್ಲಿ ನಿನ್ನಿಟ್ಟಿದ್ದೀನಿ" ಎಂದು ಭರವಸೆ ನೀಡುವ ಆ ಗುರುವರ್ಯರೂ ಗುರುನಾಥರ ಪ್ರೇಮಾಶೀರ್ವಾದ ಪೋಷಿತರೆಂಬುದು ಎಲ್ಲರು ಅರಿತ ಸತ್ಯ. ಅವರು ಮತ್ತಾರೂ ಅಲ್ಲ ಶ್ರೀಕಾಂತ ಗುರೂಜಿಯವರು. ಮಗು ಸ್ವಭಾವದ, ನಿರಂತರ ಆನಂದದಲ್ಲೇ ಇದ್ದು ಎಲ್ಲರಿಗೂ ಆನಂದವನ್ನೇ ನೀಡುವ ಸರಳ ಸದ್ಗುರುಗಳು. 

ಪ್ರಿಯ ಸತ್ಸಂಗಾಭಿಮಾನಿ ಗುರುನಾಥ ಬಾಂಧವರೇ, ಅದೆಷ್ಟೋ ಭಕ್ತರಿಗೆ ನಾವು ಗುರುನಾಥರನ್ನು ಕಾಣಲಾಗಲಿಲ್ಲವಲ್ಲಾ ಎಂಬ ಕೊರಗಿದೆ. ಈ ರೀತಿ ಕೊರಗುವುದಕ್ಕಿಂತ ಗುರುನಾಥರನ್ನು ಅನನ್ಯವಾಗಿ ಬೇಡಿದರೆ, ಯಾವುದೋ ರೀತಿಯಲ್ಲಿ ನಮ್ಮ ಆಶಯವನ್ನು ಅವರು ಪೂರ್ಣ ಮಾಡಿಯಾರು. ದೃಢ ಚಿತ್ತವಿರಲಿ. ನಾಳೆಯೂ ಪುನಃ ಬರುವಿರಲ್ಲ. ನಿತ್ಯ ಸತ್ಸಂಗಕ್ಕೆ ಗುರುನಾಥರ ಚರಿತೆಯ ಸವಿಯಲಿಕ್ಕೆ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment