ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 25
ಎಂಟು ವರ್ಷಗಳು ಗುರುದರ್ಶನಕ್ಕಾಗಿ......
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಸಖರಾಯಪಟ್ಟಣದ ಗುರುನಾಥರೆಂದರೆ, ಅದೇನೋ ಚುಂಬಕದಂತೆ. ಅವರನ್ನು ಕಾಣಲು, ಅವರ ಸಾನ್ನಿಧ್ಯದಲ್ಲಿರಲು ತವಕಿಸುವವರು ಅನೇಕ. ಆದರೆ ನಮ್ಮ ತವಕಗಳಿಗೆ ಕೂಡಲೇ ಗುರುನಾಥರು ಸಿಕ್ಕುವುದು ಅಪರೂಪ. ಇಲ್ಲೇ ಇದ್ದಾರೆ ಎಂದು ಹೋದರಲ್ಲಿ ಗುರುನಾಥರು ಸಿಗದೇ ನಿರಾಶೆಗೊಂಡವರು ಎಷ್ಟೋ ಮಂದಿ. ಅನನ್ಯವಾಗಿ ಪರಿತಪಿಸಿ, ಕೊನೆಗೆ ನಿನ್ನಿಚ್ಛೆ ಇಲ್ಲದೆ, ನನ್ನ ಪ್ರಾರಬ್ಧವೇ ಕಳೆಯದಿದ್ದಾಗ ದರ್ಶನವು ಹೇಗಾಗುತ್ತದೆ ಎಂದು ನೊಂದುಕೊಂಡ ಭಕ್ತರೊಬ್ಬರಿಗೆ ಎಂಟು ವರ್ಷಗಳ ಮೇಲೆ ದರ್ಶನವಿತ್ತು ಅನುಗ್ರಹಿಸಿದ ಹಾಗೂ 'ದೇನೇವಾಲಾ ದೇತಾ ಹೈ ತೋ ಛಪ್ಪರ್ ಪಾಡಕೇ ದೇತಾ ಹೈ' ಎಂಬುವ ಗಾದೆಯಂತೆ ಪರಿಪೂರ್ಣ ಅನುಗ್ರಹ ಮಾಡಿ, ಆ ಎಂಟು ವರ್ಷಗಳ ಕಾಯುವಿಕೆಗೆ ಫಲ ನೀಡಿದ, ಗುರುಪರೀಕ್ಷೆಯ ವಿಚಾರವೇ ಇಂದಿನ ನಿತ್ಯ ಸತ್ಸಂಗದ ವಸ್ತುವಾಗಿದೆ. ಮಾಳೇನಹಳ್ಳಿಯ ಮಂಜುನಾಥ್ ರವರ ಈ ಅನುಭವವನ್ನು ಕೇಳೋಣ ಬನ್ನಿ ಗುರು ಬಾಂಧವರೇ.
"ಶಂಕರಲಿಂಗನೇ ಸರ್ವಸ್ವವೆಂದು ನಂಬಿದವರು ನಾವು. ದೊಡ್ಡವರೆಂದರೆ ಒಂದು ನಮಸ್ಕಾರ ಮಾಡುವ, ಅವರ ಸಾನ್ನಿಧ್ಯದಲ್ಲಿ ಒಂದಿಷ್ಟು ಹೊತ್ತಿದ್ದು, ಅವರ ಆಶೀರ್ವಾದ ಪಡೆಯಬೇಕೆಂಬ ಹಂಬಲ ಎಲ್ಲರಂತೆ ನನ್ನಲ್ಲಿಯೂ ಇತ್ತು. ಆ ದಿನಗಳಲ್ಲಿ ಗುರುನಾಥರ ವಿಚಾರಗಳು ತುಂಬಾ ಪ್ರಚಲಿತವಾಗಿತ್ತು. ಆ ಮಹಾ ಪುರುಷರನ್ನು ಕಾಣಬೇಕೆಂಬ ಹಂಬಲ ದಿನೇ ದಿನೇ ಬಲವತ್ತರವಾಗಿರುವಾಗ, ಒಂದು ದಿನ ಪಾರ್ವತಕ್ಕ ನನಗೆ ಬರಲು ಫೋನು ಮಾಡಿ ನೋಡಿ ವಿಜಯಮ್ಮನ ಮನೆಗೆ ಗುರುನಾಥರು ತಮ್ಮ ಮಗಳನ್ನು ಕರೆದುಕೊಂಡು ಬರುತ್ತಿದ್ದಾರೆ. ನೀನೂ ಅಮ್ಮನೂ ಬೇಗ ಬಂದು ಬಿಡಿ. ಗುರುನಾಥರ ದರ್ಶನ ಮಾಡಿಬರೋಣ ಎಂದಾಗ ನಮಗಾದ ಆಶ್ಚರ್ಯ ಸಂತಸ ಅಷ್ಟಿಷ್ಟಲ್ಲ. ಬೆಳಿಗ್ಗೆ ಬೇಗನೇ ಎದ್ದು ಗುರುವಿಗಾಗಿ ಸಿಹಿ ಪದಾರ್ಥಗಳನ್ನು ಸಿದ್ಧ ಮಾಡಿಕೊಂಡು ಸ್ವಲ್ಪ ಹೆಚ್ಚಾಗಿಯೇ ದ್ರಾಕ್ಷಿ, ಗೋಡಂಬಿಗಳನ್ನು ಹಾಕಿ ಪಕ್ವವಾಗಿ ಮಾಡಿಕೊಂಡು ಗುರು ದರ್ಶನಾಕಾಂಕ್ಷಿಗಳಾಗಿ ಪಾರ್ವತಕ್ಕನ ಮನೆ ತಲುಪಿ ಅಲ್ಲಿಂದ ಅವರ ಜೊತೆ, ಗುರುನಾಥರ ತಂಗಿಯ ಮನೆಗೆ ಬಂದಿಳಿದೆವು. ಇದುವರೆಗೆ ಕೇವಲ ಗುರುನಾಥರ ಬಗ್ಗೆ ಕೇಳಿದ್ದ ನನಗೆ ಅವರನ್ನು ಕಾಣುವ ಸಂದರ್ಭ ದೊರೆಯಿತಲ್ಲ ಎಂಬ ಅಪಾರ ಆನಂದ. ವಿಜಯಮ್ಮನವರಿಂದ ಬಂದ ಉತ್ತರ ಕೇಳಿದ ನಾನು ದೊಡ್ಡ ಉಸಿರು ತುಂಬಿದ ಬೆಲೂನಿನೊಂದಿಗೆ ಆಟವಾಡುತ್ತಿದ್ದ ಮಗು ತನ್ನ ಕೈನ ಬೆಲೂನು ಒಡೆದು ಹೋದಾಗ ಹೊಂದುವ ನಿರಾಸೆಯಂತೆ ನನ್ನ ಸ್ಥಿತಿಯಾಗಿತ್ತು. ಇಲ್ಲ ಅವರು ನಿನ್ನೆ ರಾತ್ರಿಯೇ ನಮಗ್ಯಾರಿಗೂ ಹೇಳದೆ ಮಗಳನ್ನು ಕರೆದುಕೊಂಡು ಊರಿಗಿ ಹೋಗಿ ಬಿಟ್ಟಿದ್ದಾರೆ. ನಮಗೂ ಗೊತ್ತಾಗಲಿಲ್ಲ. ಗುರುನಾಥರ ರೀತಿ ನೀತಿಗಳನ್ನು ಅರಿಯುವುದು ಯಾರಿಗೂ ಸಾಧ್ಯವಿರುತ್ತಿರಲಿಲ್ಲ. ಅವರ ಒಂದೊಂದು ನಡೆಗಳಲ್ಲೂ ಏನೋ ವಿಶೇಷವೇ ಇರುತ್ತಿತ್ತು. ನನಗಂತೂ ಅಗಾಧವಾದ ನಿರಾಶೆಯಾಗಿತ್ತು. ಹಿಂದಿನ ದಿನದಿಂದ ಮಾಡಿಕೊಂಡ ತಯಾರಿಗಳೆಲ್ಲಾ ವ್ಯರ್ಥವಾದಂತೆ ಅನಿಸಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ನನಗೆ ಅನ್ನಿಸಿದ್ದೆಂದರೆ ನನ್ನ ದುರ್ಭಾಗ್ಯವಿನ್ನೂ ಸವೆದಿಲ್ಲ. ಹಾಗಾಗಿ ಗುರು ದರ್ಶನವಾಗಲಿಲ್ಲ. ಗುರುವಿನ ಮನಸ್ಸಿಗೆ ಬರದೇ ಹೋದ ಮೇಲೆ ನಾವೆಷ್ಟು ಪ್ರಯಾಸ ಮಾಡಿದರೆ ಏನು ಸಾಧ್ಯ. ಸುಲಭವಾಗಿ ನಮಗೆ ಶಂಕರಲಿಂಗ ಸಿಕ್ಕಂತೆ ಎಲ್ಲ ಮಹಾತ್ಮರೂ ಸಿಗುವರೇ? ಎಂಬ ಭಾವ ಬಂದಿತು. ಕೂಡಲೇ ನನ್ನ ಮನಸ್ಸೊಂದು ನಿರ್ಧಾರಕ್ಕೆ ಬಂದಿತು. ನನ್ನ ಕರ್ಮ ಹರಿದಾಗ ಅವನೇ ದರ್ಶನ ಕೊಡುತ್ತಾನೆ. ಅಲ್ಲಿಯವರೆಗೆ ತಾಳ್ಮೆ, ಭಕ್ತಿಯಿಂದ ಕಾಯುವುದೊಂದೇ ನನ್ನ ಕೆಲಸ. ಇದಕ್ಕಾಗಿ ಸುಮ್ಮನೆ ಪರಿತಪಿಸುವುದರಲ್ಲಿ, ವ್ಯರ್ಥ ಪ್ರಯತ್ನ ಮಾಡುವುದರಲ್ಲಿ ಏನೂ ಅರ್ಥವಿಲ್ಲವೆಂದು ಸುಮ್ಮನಾಗಿಬಿಟ್ಟೆ. ಅನೇಕರು ಆಗಾಗ್ಗೆ ಗುರುನಾಥರ ದರ್ಶನ ತಮಗೊದಗಿದ ಬಗ್ಗೆ ಹೇಳುತ್ತಿದ್ದರು. ಕೇಳುತ್ತಿದ್ದೆ. ನಾನಾಗಿ ಪ್ರಯತ್ನ ಮಾಡುವುದನ್ನೇ ಬಿಟ್ಟು ಇದ್ದಲ್ಲಿಂದಲೇ ಒಂದು ನಮನ ಮಾಡುತ್ತಿದ್ದೆ. ಏಳೆಂಟು ವರ್ಷಗಳೇ ಹೀಗೆ ಕಳೆದು ಹೋಗಿತ್ತು. ಒಂದು ದಿನ ಮತ್ತೀಕೆರೆಯ ಒಬ್ಬ ಭಕ್ತರ ಮನೆಗೆ ಗುರುನಾಥರು ಬಂದಿರುವ ವಿಚಾರ ತಿಳಿಯಿತು. ಹಿಂದಿನ ದಿನವಷ್ಟೇ ಬ್ರಹ್ಮಾನಂದ ಗುರೂಜಿಯವರನ್ನು ಕಂಡು ಬಂದಿದ್ದೆ. ಬೆಳಿಗ್ಗೆಯೂ ಅವರ ದರ್ಶನವಾಗಿತ್ತು. ನಂತರ ಮತ್ತೀಕೆರೆಯ ಭಕ್ತರ ಮನೆಗೆ ಫೋನು ಮಾಡಿ ಕೇಳಿದಾಗ ಸರಿಯಾದ ನಿಖರ ವಿಚಾರವೂ ತಿಳಿಯಲಿಲ್ಲ. ಆದರೂ ಬ್ರಹ್ಮಾನಂದಜೀಯವರ ಸಂಗಡ ನಾವೆಲ್ಲಾ ಹೊರಟೆವು. ಅಂದೇಕೋ ಮನಸ್ಸಿನಲ್ಲಿ ಗುರುನಾಥರ ದರ್ಶನವಿಂದು ಆಗೇ ಆಗುತ್ತದೆಂಬ ಪ್ರಬಲವಾದ ಭಾವನೆ ಮೂಡಿತ್ತು. ಒಂದು ದೊಡ್ಡ ಬಾಕ್ಸ್ ನಲ್ಲಿ ದ್ರಾಕ್ಷಿಯನ್ನು ತೆಗೆದುಕೊಂಡು ಮತ್ತೀಕೆರೆಯ ಮನೆಯನ್ನು ತಲುಪಿದೆ. ಬ್ರಹ್ಮಾನಂದ ಗುರುಗಳನ್ನು ಮುಂದಿಟ್ಟುಕೊಂಡು ಒಳಹೋದೆವು. ಅಷ್ಟು ಹೊತ್ತಿಗೆ ಅನೇಕರು ತಮ್ಮ ಅನುಭವಗಳನ್ನು ನನಗೆ ತಿಳಿಸುತ್ತಾ ಗುರುನಾಥರು ಯಾರು ಏನು ತಂದರೂ ಮುಟ್ಟುವುದಿಲ್ಲ. ಏಕೆ ತಂದಿರೀ.... ಏನೂ ಬೇಡ, ಬೇಡ.... ಅಂದು ಬಿಡುತ್ತಾರೆ ಎಂದಿದ್ದರು. ಅದಕ್ಕೆ ನಾನು ಗುರುನಾಥರಿಗೆ ವಂದಿಸಿ, ಬ್ರಹ್ಮಾನಂದ ಗುರುಗಳಿಗೆ ದ್ರಾಕ್ಷಿಯನ್ನು ಗುರುನಾಥರಿಗೆ ಕೊಡಲು ಕೇಳಿಕೊಂಡೆ. ಅದಕ್ಕವರು ಅಲ್ಲಪ್ಪಾ ನೀನು ತಂದಿರುವುದು ಗುರುನಾಥರಿಗೆ ನೀನೆ ಅದನ್ನು ಕೊಟ್ಟುಬಿಡು. ನಾನು ಕೊಡುವುದೇನು ಸರಿ ಎಂದುಬಿಟ್ಟರು. ಕೂಡಲೇ ಗುರುನಾಥರು ನನ್ನ ಕಡೆ ತಿರುಗಿದರು. 'ಏನಪ್ಪಾ ಏನು ಅದು ಯಾಕೆ ಹಿಂದೆ ಮುಂದೆ ನೋಡುತ್ತಿದ್ದೀ... ನನಗೆ ಕೊಡೋಕೆ ಏನು ತಂದಿದೀರಿ ಕೊಡಿ. ತನ್ನಿ ಇಲ್ಲಿ" ಎಂದು ದ್ರಾಕ್ಷಿಯ ಬಾಕ್ಸ್ ಅನ್ನು ತೆಗೆದುಕೊಂಡರು. ಪ್ರೀತಿಯಿಂದ ಎರಡು ದ್ರಾಕ್ಷಿಯನ್ನು ಬಾಯಿಗೂ ಹಾಕಿಕೊಂಡರು. ನಂತರ ಅಲ್ಲಿದ್ದವರಿಗೆ ಬಾಕ್ಸ್ ಅನ್ನು ಕೊಡುತ್ತಾ ಇದು ನೋಡಿ ತೀರ್ಥನಾರಾಯಣರ ಪೂಜೆಯಾದ ನಂತರ ಎಲ್ಲರಿಗೂ ಪ್ರಸಾದವಾಗಿ ಹಂಚಿಬಿಡಿ ಎಂದರು. ಗುರುನಾಥರ ಆಶೀರ್ವಾದ ದರ್ಶನ ನನಗೆ ಈ ರೀತಿಯಾಯಿತು. ನನ್ನ ಎಂಟು ವರ್ಷಗಳ ಕಾಯುವಿಕೆಗೆ ಗುರು ಕರುಣಿಸಿದ್ದು ಹೀಗೆ".
ಮಂಜಣ್ಣನವರ ಕಣ್ಣುಗಳು ಮಂಜಾಗುತ್ತಿತ್ತು. ಆನಂದಬಾಷ್ಪಗಳು , ಗುರುವಿನ ದರ್ಶನ ಸಂತಸ, ತನ್ನ ಭಾವನೆಗೆ ಸಿಕ್ಕ ಗುಜರು ಸ್ಪಂದನ ಅದನ್ನವರು ಆ ಕ್ಷಣಗಳಲ್ಲೂ ಅನುಭವಿಸುತ್ತಿರುವಂತಿತ್ತು.
ಭಗವಂತನ ದರ್ಬಾರಿನಲ್ಲಿ... ತಡವಾಗಬಹುದು. ಆತನ ಕರುಣೆ ದೊರೆಯಲು. ಆದರೆ ಸಿಕ್ಕಾಗ ಮಾತ್ರ ಅದು ಜನುಮ ಜನುಮಗಳಿಗೆ ಆಗುವಷ್ಟು ಭಾರಿಯದಾಗಿರುತ್ತದೆ ಅಲ್ಲವೇ?.....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment