ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 27
ಪರೀಕ್ಷೆಯೊಡ್ಡಿ ಉತ್ತರ ಹೇಳಿ ಕೊಡುವವರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರ ಬಳಿ ಬಂದವರಿಗಾಗುವ ಅನುಭವಗಳಲ್ಲಿ ಒಂದೆಂದರೆ, ಬರುವ ವ್ಯಕ್ತಿ ತನ್ನ ಮನಸಾ ಬರಬೇಕು. ಜೊತೆಗೆ ತನ್ನದಲ್ಲದ ಇತರರ ತಾಪತ್ರಯಗಳಿಗೂ ಗುರುವಿನಿಂದ ಏನಾದರೂ ಸಮಾಧಾನಗಳನ್ನು ಆಶಿಸಿದರೆ "ಮತ್ತೊಬ್ಬರ ಚಿಂತೆ ನಿನಗೆ ಬೇಡ. ಅವನ ಕರ್ಮ ಕಳೆದರೆ ಅವನೇ ಬರುತ್ತಾನೆ. ಎಲ್ಲದಕ್ಕೂ ಕರ್ಮಗಳನ್ನು ಅನುಭವಿಸಿಯೇ ತೀರಿಸಬೇಕು. ಯಾರದ್ದನ್ನು ಯಾರೂ ಹೊರಲಾಗದು" ಎಂಬ ಮಾತುಗಳು ಗುರುನಾಥರಿಂದ ನೇರವಾಗಿ ಬರುತ್ತಿತ್ತು.
ಯಾರನ್ನು ಯಾರೂ ಕಲಿಸದಿದ್ದರೂ ಗುರುನಾಥರ ಬಳಿ ನಿತ್ಯ ಆರ್ತರು, ಭಕ್ತರು ಗುಂಪು ಗುಂಪಾಗಿ ನೆರೆದೇ ಇರುತ್ತಿದ್ದರು. ಎಲ್ಲರಿಗೂ ಒಂದಲ್ಲ ಒಂದು ಸಮಾಧಾನ ಅವರವರ ಭಕ್ತಿಗೆ ಅನುಸಾರವಾಗಿ ಸಿಗುತ್ತಲೇ ಇತ್ತು. ಹೀಗೆ ಒಂದು ದಿನ ಒಬ್ಬ ಹೆಣ್ಣು ಮಗಳು, ಮೊದಲಿನಿಂದಲೂ ಗುರುಚರಿತ್ರೆ, ಗುರುಕಥಾಮೃತ, ಗುರುಗಳಲ್ಲಿ ಸೇವಾ ಮನೋಭಾವವನ್ನು ಹೊಂದಿದ್ದ ಆಕೆ ಮತ್ತೊಬ್ಬ ಗುರುನಾಥರ ಭಕ್ತರಿಂದ ಗುರುನಾಥರ ಬಗ್ಗೆ ಕೇಳಿ ಕೇಳಿ ಮನದಲ್ಲೇ ಗುರುನಾಥರನ್ನು ಆರಾಧಿಸುತ್ತಿದ್ದ ಆಕೆ, ಒಂದು ದಿನ ತನ್ನ ಪತಿಯೊಡನೆ ಗುರುನಾಥರನ್ನು ನೋಡಲೇಬೇಕೆಂಬ ಉತ್ಕಂಠತೆಯಿಂದ ಸಖರಾಯಪಟ್ಟಣಕ್ಕೆ ಬಂದರು.
ಮೊದಲು ಗುರುನಾಥರನ್ನು ನೋಡಿಲ್ಲ. ಊರು ಕೇರಿ ತಿಳಿದಿಲ್ಲ. ಆದರೂ ಅದೇನೋ ಇಂದು ಗುರುನಾಥರ ದರ್ಶನವಾಗುತ್ತದೆಂಬ ಭರವಸೆಯ ಭಾವದೊಂದಿಗೆ ಗುರು ಮನೆಯ ಒಳ ಪ್ರವೇಶಿಸಿದರು. ಸುತ್ತಮುತ್ತಲೆಲ್ಲಾ ಅನೇಕ ಭಕ್ತರು ಕುಳಿತಿದ್ದರು. ಗುರುನಾಥರು ಮುಂದೆ ಬಂದು ನಿಂತಾಗ, ಗುರುವಿನ ಮೊಗದಲ್ಲೊಂದು ಮೋಹಕ ಮುಗ್ಧ ನಗುವಿನಲ್ಲೇ ಇವರತ್ತ ಬಂದಿತು. ಯಾವ ಆಂಗ್ಜೈಟಿ ಹೊತ್ತು ಇವರು ಬಂದಿದ್ದರೋ, ಒಂದೇ ಕ್ಷಣದಲ್ಲಿ ಅವರ ದುಗುಡ, ತವಕಗಳೆಲ್ಲಾ ಕಳೆದು ಆ ನಗು ಮೊಗ ಅವರ ಮನದಾಳದಲ್ಲಿ ಬೇರೂರಿಬಿಟ್ಟಿತು. ಇಷ್ಟು ದೂರ ಬಂದದ್ದು ಸಾರ್ಥಕವಾಯಿತು. ನಿಜವಾದ ಗುರುದರ್ಶನವೆನಗೆ ಆಯಿತೆಂಬ ಧನ್ಯತಾಭಾವ ಮನದಾಳದಲ್ಲಿ ಮೂಡಿ ಆ ಕ್ಷಣದಿಂದಲೇ ಸರ್ವಸ್ವವೂ ನೀನೇ ಗುರುನಾಥ ಎಂಬ ಭಾವ ಉಂಟಾಯಿತು.
ಬಂದವರ ಮನದಾಳದ ಶುದ್ಧತೆ, ಪ್ರೀತಿಯನ್ನು ಪರೀಕ್ಷಿಸಿ ತೃಪ್ತರಾದ ಗುರುನಾಥರು ಅದೇ ಪ್ರೀತಿಯ ದನಿಯಲ್ಲಿ "ಏನು ಯಾಕೆ ಬಂದ್ರಿ... ಯಾರು ಕಳಿಸಿದರು.... ಯಾವ ಊರು..." ಎಂದು ಪ್ರಶ್ನಿಸಿದರಂತೆ. ನಮಸ್ಕರಿಸುತ್ತಾ ಶಕ್ತಿ ಶ್ರೀಧರಶರ್ಮ ಎಂಬುವವರು ತಮ್ಮ ಬಗ್ಗೆ ಹೇಳುತ್ತಿದ್ದರು. ಅದಕ್ಕಾಗಿ ತಮ್ಮನ್ನು ಕಾಣಲು ಬಂದೆವು" ಎಂದಾಗ... "ಎಲ್ಲಾ ನನಗೆ ತಿಳಿದಿದೆ" ಎಂಬಂತೆ "ಓಹೋ.... ಹಾಗೋ" ಎನ್ನುತ್ತಾ, ಅಲ್ಲಿ ಬರುತ್ತಿದ್ದ ಒಬ್ಬರತ್ತ ಕೈ ತೋರಿಸುತ್ತಾ, "ಆಗೋ ನೋಡಿ ನಿಮಗೆ ಪರಿಚಯ ಇರುವವರೇ ಬರುತ್ತಿದ್ದಾರೆ" ಎಂದರಂತೆ ಗುರುನಾಥರು. ಇದೇನು ಇದೇ ಮೊದಲು ಬರುತ್ತಿದ್ದೇವೆ. ನಮಗೆ ಇಲ್ಲಿ ಪರಿಚಯದವರು ಇದ್ದಾರೆ ಅನ್ನುತ್ತಾರಲ್ಲ.. ಈ ಗುರುನಾಥರು ಎಂದು ಚಿಂತಿಸುತ್ತಾ, ಬಂದ ವ್ಯಕ್ತಿಗಳತ್ತ ಈ ದಂಪತಿಗಳು ನೋಡಿದರು. ಆ ವ್ಯಕ್ತಿ ಚಿಕ್ಕಮಂಗಳೂರಿನ ಒಬ್ಬ ವೈದ್ಯರು. ಕೊನೆಗೆ ಮಾತನಾಡಿದಾಗ ಇವರಿಬ್ಬರೂ ಒಬ್ಬರಿಗೊಬ್ಬರು ಪರಿಚಯವಿರುವುದು ತಿಳಿದುಬಂತಂತೆ. ಹೀಗೆ ಗುರುನಾಥರಿಗೆ ತಿಳಿಯಾದುದೇನಿದೆ? ಎಂಬೆಲ್ಲಾ ವಿಚಾರಗಳನ್ನು ನಮ್ಮ ನಿತ್ಯ ಸತ್ಸಂಗಕ್ಕೆ ಹಂಚಿಕೊಳ್ಳುತ್ತಿರುವವರು, ಬೆಂಗಳೂರಿನ ಶ್ರೀಮತಿ ಲಕ್ಷ್ಮೀ ಪ್ರಸಾದ್ ಅವರು. ಬನ್ನಿ ಇನ್ನಷ್ಟು ಅನುಭವಗಳನ್ನು ಅವರಿಂದಲೇ ಕೇಳೋಣ ನಿತ್ಯ ಸತ್ಸಂಗಾಭಿಮಾನಿ ಗುರು ಭಕ್ತರೇ.
"ಸುಮಾರು 2005 ನೆಯ ಇಸವಿ ಇರಬಹುದು. ನನ್ನ ಜೀವನದಲ್ಲಿ ಅದೊಂದು ಸುದಿನವೇ ಸರಿ. ಹಾಗೆ ನೋಡಿದರೆ ನಮ್ಮ ಯಜಮಾನರು ದೇವರು ದಿಂಡರು ಎಂದರೆ ತುಂಬಾ ಭಕ್ತಿ ಭಾವ ಹೊಂದಿದವರು. ಗುರುಗಳೂ, ಪವಾಡ... ಇವುಗಳಿಗೆ ಅವರ ಮನ ಅಷ್ಟಾಗಿ ಒಗ್ಗುತ್ತಿರಲಿಲ್ಲ. ಆ ದಿನದಿಂದ ಬಹುಶಃ ನನ್ನ ಮೇಲೆ ಗುರುನಾಥರ ಪ್ರಭಾವ ಅವರ ದರ್ಶನದಿಂದ ಎಷ್ಟಾಯಿತೋ ಅದಕ್ಕಿಂತ ದುಪ್ಪಟ್ಟು, ಗುರುನಾಥರಂತಹ ಮಹಾತ್ಮರನ್ನು ಕಂಡು ಅವರ ಬಳಿ ಇದ್ದ ಕೆಲವೇ ಗಂಟೆಗಳಲ್ಲಿ ಇವರ ಮೇಲಾಯಿತು. ಗುರುನಾಥರು ನನ್ನನ್ನು ದೈಹಿಕವಾಗಿ ನನ್ನೊಳಗಿದ್ದನಿರ್ಬಲತೆಯನ್ನು ದೂರ ಮಾಡುವ ಉದ್ದೇಶದಿಂದಲೋ ಎಂಬಂತೆ, ನನಗಾಗಿ ಬೂಸ್ಟ್ ಮಾಡಿಸಿ ಕುಡಿಸಿದರು. ಎಲ್ಲ ಬಲ್ಲ ಗುರುನಾಥರು ಹೀಗೆ ನಾನು ಮುಂದೆ ಎದುರಿಸಬೇಕಾದ ಖಾಯಿಲೆಗಳಿಗೆ ಮದ್ದನ್ನೇ ಈ ರೀತಿ ನೀಡಿದುದು ಅವರ ಅಪಾರ ಕರುಣೆಯಿಂದಲೇ ಇರಬೇಕು. ನಾವು ಭೇಟಿ ಮಾಡಿದ ಮೊದಲನೇ ಸಲ ಒಂದು ವಿಚಿತ್ರವೆಂಬಂತಹ ಪ್ರಶ್ನೆಯೊಂದನ್ನು ಗುರುನಾಥರು ಕೇಳಿದರು. "ನಿಮ್ಮ ಜೇಬಿನಲ್ಲಿ ದುಡ್ಡೆಷ್ಟಿದೆ?" ಸಾಮಾನ್ಯರಾದ ನಮಗೆ ಸದ್ಗುರುವಿನಿಂದ ದುಡ್ಡಿನ ಬಗ್ಗೆ ಕೇಳುತ್ತಿದ್ದಾರಲ್ಲಾ..... ಇದೇಕೆ ಎಂದು ತಪ್ಪಾಗಿ ಚಿಂತಿಸಿದ್ದೆವು. ಗುರುನಾಥರ ಈ ಪ್ರಶ್ನೆಗೆ ಮೂಲ ನಮ್ಮನ್ನವರು ಶೃಂಗೇರಿಗೆ ಗುರುದರ್ಶನಕ್ಕೆ ಕಳುಹಿಸಿ, ನಮ್ಮ ಕರ್ಮಾ ತೊಳೆಸಿ, ಜಗದ್ಗುರು ದರ್ಶನ ಮಾಡಿಸಿ, ಪುನೀತರಾಗಿಸುವ ಯೋಚನೆಯನ್ನು ಮಾಡಿದ್ದರು. ಹಾಗಾಗಿ, ನಮ್ಮ ಜೇಬಿನಲ್ಲಿ ಹಣವಿದೆಯೋ ಇಲ್ಲವೋ, ಬೆಂಗಳೂರಿನಿಂದ ಬಂದ ನಾವು, ಸಖರಾಯಪಟ್ಟಣದಿಂದ ಬೆಂಗಳೂರಿಗೆ ಹೋಗುವಷ್ಟೇ ಹಣ ಹೊಂದಿದ್ದರೆ, ನಮಗವರು ತಮ್ಮ ಜೇಬಿನಿಂದ ಕೊಡಲು ಚಿಂತಿಸಿದ್ದರು. ಆದರೆ ಅರಿಯದ ಮೂಢರು ನಾವು ಏನೇನೋ ಚಿಂತಿಸಿ, ದಾರಿ ತಪ್ಪುತ್ತಿದ್ದೆವು. ಕುಬೇರನಿಗೆ ನಮ್ಮ ಪುಡಿಗಾಸು ಬೇಕೇ?" ಗುರುನಾಥರ ಸ್ಮರಣೆ ಮಾಡುತ್ತಾ ಲಕ್ಷ್ಮೀ ಪ್ರಸಾದ್ ಗದ್ಗದಿತರಾದರು.
ಪ್ರಿಯ ಗುರುಬಾಂಧವರೇ, ಮುಂದೇನಾಯಿತು? ಗುರುನಾಥರು ಪರೀಕ್ಷೆಯನ್ನು ನೀಡಿ, ಅವರೇ ಉತ್ತರವನ್ನು ತಿಳಿಸಿ ತಮ್ಮ ಭಕ್ತರನ್ನು ಈ ಭವ ಪರೀಕ್ಷೆಯಿಂದ ಹೇಗೆ ಉದ್ಧಾರ ಮಾಡಿದರು. ಎಲ್ಲಿಯೋ ಇದ್ದವರನ್ನು ತಮ್ಮ ಬಳಿ ಸೆಳೆದು ಭಕ್ತರ ದೋಷಗಳನ್ನೆಲ್ಲಾ ಹರಿಸುವ ಎಂತೆಂತಹ ಲೀಲಾ ವಿನೋದಗಳನ್ನು ಅವರು ರಚಿಸಿದರು ಎಂಬುದನ್ನೆಲ್ಲಾ ತಿಳಿಯಲು ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ.... ಸದ್ಗುರುನಾಥ್ ಮಹಾರಾಜ್ ಕೀ ಜೈ.... ಎನ್ನುತ್ತಾ ಅಲ್ಪ ವಿರಾಮಕ್ಕೆ ಬರೋಣ.. ನಾಳೆ ಸೇರೋಣ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment