ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 22
ಗುರುಕೃಪೆ ಎಂಬ ಭವಸಾಗರ ದಾಟುವ ದೋಣಿ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಹದಿನೈದಿಪ್ಪತ್ತು ದಿನಗಳಾದ ಮೇಲೆ ಗುರುನಾಥರನ್ನು ಈ ತಾಯಿ ನೋಡಲು ಹೋದರಂತೆ. ಹೋಗುವ ಮೊದಲೇ ಅದೇನೋ ಗುರುನಾಥರ ಪ್ರಸನ್ನವದನವೆನಗೆ ಸಿಗುವುದೆಂಬ ಭರವಸೆ ಇವರಿಗಿತ್ತು.
ಅಲ್ಲದೆ ಒಂದು ಪಾತ್ರೆಯೊಳಗಿನ ಅನ್ನ ಬೆಂದಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಅಡುಗೆ ಮಾಡುವವರು ಒಂದೆರಡು ಅಗುಳುಗಳನ್ನು ಪರೀಕ್ಷಿಸಿ ನಿರ್ಧರಿಸುವಂತೆ ಮಾತೃ ಸ್ವರೂಪಿಯಾದ ಗುರುನಾಥರಿಗೆ ಈ ತಾಯಿಯ ನೋವು, ಅವರ ಮನದಾಳದ ಪ್ರೀತಿಯ, ಭಕ್ತಿಯ ಅರಿವಾಗಿತ್ತೆಂಬಂತೆ.... ಇವರು ಆ ದಿನ ಗುರುನಾಥರ ಮನೆಯೊಳಗೆ ಪ್ರವೇಶ ಮಾಡಿ ಗುರುನಾಥರಿಗೆ ನಮಸ್ಕರಿಸಿದರಂತೆ. ಸುತ್ತಮುತ್ತಲೂ ತುಂಬಾ ಶಿಷ್ಯರು ಅದಾಗಲೇ ಕೂತಿದ್ದರು. ಗುರುನಾಥರ ಪ್ರಶಾಂತ ಮುಖ, ಇತರರ ನೋವನ್ನು ನಿವಾರಿಸುವ ಆನಂದದಾಯಕ ದೃಷ್ಟಿ ಗೋಚರಿಸಿತು. ಒಂದು ಕೃಪಾದೃಷ್ಟಿ ಇಂದಲೇ ನೆಮ್ಮದಿಯ ಕಡಲನ್ನೇ ಧಾರೆ ಎರೆಯುವ ಗುರುನಾಥರ ಪ್ರೀತಿಯ, ಅಮ್ಮನ ನಲ್ಮೆ ಇವರಿಗೆ ದೊರೆಯಿತಂತೆ. ಮುಂದೆಂದೂ ಗುರುನಾಥರು ಬೈದದ್ದೇ ಇಲ್ಲವಂತೆ. ಬಂದಾಗಲೆಲ್ಲಾ ಕರುಣೆಯ ಕಡಲನ್ನೇ ಕಂಡರಂತೆ. ಇವರು ಆರೇಳು ಬಾರಿ ಗುರುನಾಥರ ದರ್ಶನ ಮಾಡಿದರು. ಇವರ ಮೂರನೆಯ ಬಾರಿಯ ದರ್ಶನದ ಸಾರ್ಥಕತೆಯನ್ನು ಅವರು ಹೀಗೆ ವಿವರಿಸುತ್ತಾರೆ.
"ಅಂದು ಅದು ಮೂರನೆಯ ಬಾರಿ ನಾನು ಗುರುನಾಥರ ಮನೆಗೆ ಬಂದದ್ದು. ಅವರಿಗೆ ನಮಸ್ಕರಿಸಿ ಎಲ್ಲರಂತೆ ಒಂದು ಕಡೆ ಮೂಲೆಯಲ್ಲಿ ದೂರ ಕುಳಿತಿದ್ದೆ. ಸಧ್ಯ ನನ್ನನ್ನು ತಮ್ಮ ಮನೆಯಲ್ಲಿ ತಮ್ಮೆದುರು ಕೂರಲು ಗುರುನಾಥರು ಬಿಟ್ಟಿದ್ದಾರಲ್ಲಾ ಎಂಬುದೇ ನನ್ನ ದೊಡ್ಡ ಭಾಗ್ಯ ಎಂಬ ಭಾವ ನನ್ನೊಳಗೆ ಉದಯಿಸಿತ್ತು. ಬೆಂಗಳೂರಿಗೆ ಹೋದರು ಗುರುನಾಥರನ್ನು ಕಾಣುವ ತವಕ ಅತಿಯಾದಾಗ ಹೊರಟು ಬಂದು ಬಿಡುತ್ತಿದ್ದೆ. ಮನದ ದುಗುಡವೆಲ್ಲಾ ಆ ವಾತಾವರಣದಲ್ಲಿ ತಿಳಿಯಾಗಿ, ಆನಂದವಾದಾಗ ಅವರಪ್ಪಣೆ ಪಡೆದು ಹೊರಡುತ್ತಿದ್ದೆ. ಆದರೆ ಈ ದಿನ ನನ್ನ ಜನ್ಮದ ಸುದಿನವೆಂದರೆ ತಪ್ಪಲ್ಲ. ಗುರುನಾಥರು "ಎದ್ದು ಒಳ ಹೋಗಿ ಕೆಲಸ ಮಾಡು" ಎಂದಾಗ... ನನಗಾದ ಸಂತಸ ಅಷ್ಟಿಷ್ಟಲ್ಲ.. ಗುರುನಾಥರು ನನ್ನನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿಸಿಕೊಂಡು, ನನಗೆ ಗುರುಸೇವೆ ಮಾಡಲು ಅವಕಾಶ ಮಾಡಿಕೊಟ್ಟರಲ್ಲ.. ಎಂದು ಸಂಭ್ರಮಿಸಿದೆ. ಅವತ್ತಿನಿಂದ ಇವತ್ತಿನವರೆಗೂ ನನ್ನ ಜೀವನ ನಡೆಸಿರುವವರೇ ಆ ಗುರುನಾಥರು" ಮಾತನಾಡುತ್ತಾ ಆಡುತ್ತಾ ಆ ತಾಯಿಯ ಗಂಟಲು ಕಟ್ಟಿ ಹೋಗಿ ಮಾತು ಮೌನದ ಆಸರೆ ಪಡೆಯಿತು.
ಹೌದು, ಗುರು ಪ್ರೀತಿ ಎಂದರೆ ಇದೇ ಅಲ್ಲವೇ? ಎಷ್ಟೋ ವರ್ಷಗಳ ಕೆಳಗೆ ನಡೆದ ಘಟನೆಯನ್ನು ಯಾವಾಗ ನೆನೆದರೂ ಭಾವುಕ ಹೃದಯ, ಆರ್ದ್ರವಾಗುತ್ತದೆ. ಮಾತಾಡದ ಪರಿಸ್ಥಿತಿ ನಿರ್ಮಾಣವಾಗಿ ಮೌನದ ರಾಜ್ಯ ಶುರುವಾಗುತ್ತದೆ.
ಒಂಟಿಯಾದ ಪತಿಯನ್ನು ಕಳೆದುಕೊಂಡ ಆ ತಾಯಿ, ತಾನು ನಂಬಿದ ಗುರುನಾಥರು ಅದು ಹೇಗೆ ಹೆಜ್ಜೆ ಹೆಜ್ಜೆಗೂ ಆಸರೆಯಾಗಿ ನಿಂತು ಇವರನ್ನು ಸಂರಕ್ಷಿಸಿದರು. ತಮ್ಮ ಭವಸಾಗರದ ಭೀಕರ ಪಯಣಕ್ಕೆ ಗುರುನಾಥರ ಕೃಪೆ ಎಂಬ ದೋಣಿ ಅದು ಹೇಗೆ ಅಂದೂ ಇಂದೂ ಮುಂದೂ ಸಹಕಾರಿಯಾಗಿದೆ ಎಂಬುದನ್ನವರು ಮುಂದುವರೆಸಿದರು.
"ಹೀಗೆ ಗುರುನಾಥರು ನನ್ನ ರಕ್ಷಣೆಯ ಹೊಣೆ ಹೊತ್ತರು. ತಮ್ಮ ಅಂತರಂಗದ ಕಕ್ಷೆಗೆ ತೆಗೆದುಕೊಂಡುದುದು ನನ್ನ ಅದೆಷ್ಟು ಜನ್ಮಗಳ ಸುಕೃತವೋ... ಮುಂದೆ ನನ್ನ ಮಗಳು ಎರಡನೆಯ ಬಾರಿ ಮಗುವನ್ನು ಹೆರುವ ಸಂದರ್ಭ ಬಂದಿತು. ಇದು ಬಹು ಅಪಾಯಕಾರಿಯದಾಗಿತ್ತು. ಏಕೆಂದರೆ ನನ್ನ ಯಜಮಾನರು ಇರುವಾಗಲೇ ಮೊದಲ ಮಗು ಜನಿಸಿತ್ತು. ಬಹು ಸಂಕಟದ ಪ್ರಸಂಗವೇರ್ಪಟ್ಟಿತ್ತು. ಡಾಕ್ಟರುಗಳು ಬಹಳವಾಗಿ ಎಚ್ಚರಿಕೆಯಿಂದ ಇರಬೇಕೆಂದು ಎಚ್ಚರಿಸಿದ್ದರು. ಆದರೆ ಇದೆಲ್ಲಾ ಮೀರಿ ಆಕೆ ಮತ್ತೆ ತಾಯಿಯಾಗುತ್ತಿದ್ದಾಳೆ ಎಂದಾಗ ನನ್ನ ಜಂಘಾ ಬಲವೇ ಉಡುಗಿ ಹೋಯಿತು. ಆಗೇನೋ ನಮ್ಮ ಯಜಮಾನರಿದ್ದರು. ಈಗ ನಾನು ಒಬ್ಬಂಟಿ... ನನಗಾರು ಗತಿ ಎಂದು ಒಂದು ಕ್ಷಣ ಬೆಚ್ಚಿಬಿದ್ದೆ. ತತ್ ಕ್ಷಣ ಅನಾಥರ ನಾಥರಾದ ಗುರುನಾಥರ ನೆನಪಾಗಿ ಅವರಡಿಗೆ ಓಡಿದೆ. ಮನದಲ್ಲಿ ಏನೇನೋ ಬೇಡದ ವಿಚಾರಗಳು ಏಳುತ್ತಿದ್ದವು. ಗುರುನಾಥರ ಬಳಿ ಬಂದು ಅಪ್ಪಾ.... ತಂದೆ ಕಾಪಾಡಪ್ಪಾ ನೀನಿಲ್ಲದೇ ಬೇರೆ ದಾತಾರರಾರಿದ್ದಾರೆ ಈ ಅಬಲೆಗೆ... ? ಎಂದು ಬೇಡುತ್ತಾ ನಮಸ್ಕರಿಸಿ ಎದ್ದಾಗ, ಗುರುನಾಥರು ನಗು ಮುಖದಿಂದ "ಯಾಕಿಷ್ಟು ಗಾಭರಿಯಾಗಿದ್ದೀಯಾ... ಎಲ್ಲಾ ಸರಿಯಾಗುತ್ತೆ. ಚಿಂತೆ ಬೇಡ.. ನಾನಿದ್ದೀನಿ" ಎಂದು ಅಭಯ ನೀಡಿದರು. ಮುಂದೆ ಪ್ರಸವದ ಸಮಯ ಅದೆಷ್ಟು ಸುಲಭವಾಗಿ ಎಲ್ಲಾ ಸುಖಮಯವಾಗಿ ನಡೆದುಹೋಯಿತು ಎಂದರೆ ಊಹಿಸಲೂ ಅಸಾಧ್ಯ. ನನ್ನ ಮನಸ್ಸು ನಿರಾಳವಾಯಿತು. ನನ್ನ ಪ್ರತಿ ಕ್ಷಣಗಳಲ್ಲೂ ಗುರುನಾಥರ ಅಭಯ ಹಸ್ತ ನನ್ನನ್ನು ಕಾಪಾಡುತ್ತಿದೆ. ನನ್ನ ಒಂದೊಂದು ಉಸಿರಿನಲ್ಲೂ ಅವರದೇ ಧ್ಯಾನ ಸಾಗುತ್ತಿದೆ. ನನಗೆ ನಿರಂತರ ಒಂದೇ ಚಿಂತೆ ಅದೆಂದರೆ ಇಂತಹ ಗುರು ಕೃಪಾ ಛತ್ರದಿಂದ ನಾನೆಂದೂ ದೂರವಾಗಬಾರದು. ಅವರ ಕರುಣೆಯ ಭಿಕ್ಷೆಯ ಅಡಿಯಲ್ಲಿ ನನ್ನ ಬಾಳು ಪೂರ್ಣವಾಗಬೇಕು ಎಂದು ಬೇಡುತ್ತಾ ಇರುತ್ತೇನೆ ಯಾವಾಗಲೂ".
ಗುರುಬಂಧು ನಿತ್ಯ ಸತ್ಸಂಗ ಪ್ರಿಯ ಬಂಧುಗಳೇ.... ಒಮ್ಮೆ ಗುರು ಕೃಪೆ ಎಂಬ ಕಲ್ಪವೃಕ್ಷ ನಮಗೆ ದೊರೆತಾಗ ಅದನ್ನಾರಾದರೂ ಬಿಡುತ್ತಾರೆಯೇ.... ನಿಷ್ಠೆ, ನಿರಂತರ ಅವರ ಸ್ಮರಣೆಯೊಂದಿದ್ದರೆ ಸಾಕಲ್ಲವೇ.... ಅಂತಹ ಸ್ಮರಣೆಯೇ ಈ ಸತ್ಸಂಗವಾಗಲಿ.
ನಾಳೆಯೂ ಗುರುನಾಥರು, ಗುರು ಚರಿತ್ರೆಯ ಅದ್ಯಾವ ಮಹತ್ ಘಟನೆಯನ್ನು ನಮಗೆಲ್ಲರಿಗಿತ್ತು ಪುನೀತಗೊಳಿಸುವರೋ.. ಮಿತ್ರರೇ ತಪ್ಪದೆ ನಾಳೆಯೂ ಬರುವಿರಲ್ಲವಾ?
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment