ಒಟ್ಟು ನೋಟಗಳು

Monday, June 26, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 26
ಗುರುವಿಗೇರಿಯದ್ದೇನಿದೆ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಹೀಗೆ ನಾವು ಕೇಳಿದ್ದೇನೋ ಇರುತ್ತದೆ. ಆದರೂ ಅವರವರಿಗೆ ಆದ ಅನುಭವಗಳು ಬೇರೆಯೇ ಇರುತ್ತದೆ. ಎಲ್ಲರಿಗೂ ಆ ರೀತಿಯೇ ಆಗಬೇಕೆಂಬುದೇನಿಲ್ಲ. ಗುರುನಾಥರ ಸಹಸ್ರಾರು ರೂಪಗಳಿವೆ. ಕನ್ನಡಿ ಒಂದೇ ಆದರೂ ಅದರ ಮುಂದೆ ಬಂದು ನಿಲ್ಲುವವರಿಗೆ ಅನುಗುಣವಾಗಿ ಹಲವಾರು ರೂಪಗಳು ಕನ್ನಡಿಯಲ್ಲಿ ಪ್ರತಿಬಿಂಬಿಸುವಂತೆ ನಮ್ಮ ನಮ್ಮ ಹೃದಯದ ಭಾವನೆಗಳೇ ಗುರುನಾಥರೆಂಬ ದಿವ್ಯ ಕನ್ನಡಿಯಲ್ಲಿ ಪ್ರತಿಬಿಂಬಿಸಿ ಅವರವರಿಗದು ಫಲರೂಪದಲ್ಲಿ ದೊರಕುವುದಿದೆ. 

ಮಂಜಣ್ಣನವರು ತಂದ ವಸ್ತುಗಳನ್ನು ಗುರುನಾಥರು ಪ್ರೀತಿಯಿಂದ ಸ್ವೀಕರಿಸಿದರು. ಗುರುವಿನ ಸ್ಪರ್ಶವಾಗುತ್ತಿದ್ದಂತೆ ಸಾಮಾನ್ಯ ವಸ್ತುವೂ ಪ್ರಸಾದದ ಅರ್ಹತೆಯನ್ನು ಪಡೆಯುತ್ತದೆ. ಹಾಗಾಗಿ, "ತೀರ್ಥನಾರಾಯಣನ ಪೂಜೆಯಾದ ನಂತರ ಇದನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಿರಿ" ಎಂದು ಗುರುನಾಥರು ಅಂದರು. ಮುಂದೆ ಮತ್ತೊಂದು ಚಮತ್ಕಾರ ಆದದ್ದನ್ನು ಮಂಜಣ್ಣನವರು ಹೀಗೆ ವಿವರಿಸುತ್ತಾರೆ. 

ಗುರುನಾಥರು ಇದ್ದಲ್ಲಿ ಭಜನೆ, ಸತ್ಸಂಗ, ಪೂಜೆ, ಪುನಸ್ಕಾರಗಳು ನಡೀತಾನೇ ಇರುತ್ತೆ. ಅಂದೂ ಒಂದು ದೊಡ್ಡ ಪೂಜೆ ನಡೀತಿತ್ತು. ಪೂಜೆಯಾದಾಗಲೇ ಎಲ್ಲರಿಗೂ ಊಟ ಮಾಡಿ ಊಟಕ್ಕೆ ಬನ್ನಿ ಎಂದು ಕರೆದು ಕೂರಿಸಿ ಎಲ್ಲರಿಗೂ ಬಡಿಸುತ್ತಿದ್ದರು. ನಮ್ಮನ್ನೂ ಬಲವಂತವಾಗಿ ಕೂರಿಸಿ ಊಟ ಮಾಡಿಸಿದರು. ಅದೇ ಸಂದರ್ಭದಲ್ಲಿ ನಾನು ನಮ್ಮ ತಾಯಿಯವರ ದೀಕ್ಷೆಯಲ್ಲಿ ಇದ್ದೆ. ಗಡ್ಡ ಬಿಟ್ಟಿದ್ದೆ. ಆ ವರ್ಷ ನಮ್ಮ ತಾಯಿ ಹೋಗಿದ್ದರು. ನಾನಿದೇನನ್ನೂ ಅಲ್ಲಿ ಯಾರೊಂದಿಗೂ ಹೇಳಿರಲಿಲ್ಲ. ಮುಂದೆ ಪೂಜೆಯಾದ ನಂತರ ತೀರ್ಥ ನಾರಾಯಣ ಪೂಜೆ ಪ್ರಾರಂಭವಾಯಿತು. ತೀರ್ಥನಾರಾಯಣರೊಂದಿಗೆ ಬಿಂದಿಗೆ ಹೊತ್ತು ಎಲ್ಲರೂ ಪ್ರದಕ್ಷಿಣೆ ಬರುತ್ತಿದ್ದರು. ನಾನೂ ಮತ್ತು ನನ್ನ ಹೆಂಡತಿಯೂ ಆ ಪ್ರದಕ್ಷಿಣೆಯಲ್ಲಿ ಸೇರಿಕೊಂಡೆವು. ಒಂದೆರಡು ಪ್ರದಕ್ಷಿಣೆ ಬರುತ್ತಿದ್ದಂತೆ ತೀರ್ಥ ನಾರಾಯಣ ಕಲಶವನ್ನು ಬೇರೆಯವರ ತಲೆಯ ಮೇಲೆ ಗುರುನಾಥರೇ ಇಡುತ್ತಿದ್ದರು. ನಮ್ಮ ಸರದಿ ಬಂದಾಗ, ನಮ್ಮನ್ನು ಬಿಟ್ಟು ಬೇರೆ ಹಿಂದಿರುವವರ ತಲೆ ಮೇಲೆ ಕಲಶವನ್ನು ಗುರುನಾಥರು ಇಡುತ್ತಿದ್ದರು. ಒಂದೆರಡು ಬಾರಿ ಈ ರೀತಿಯಾದಾಗ ನಾನು ಎಚ್ಚೆತ್ತುಕೊಂಡೆ. ಬಹುಶಃ ನಮ್ಮ ಮಾತೃ ದೀಕ್ಷೆಯಲ್ಲಿ ನಾನಿರುವಾಗ ತೀರ್ಥನಾರಾಯಣ ಕಲಶವನ್ನು ಹೊರುವುದು ತಪ್ಪೇನೋ... ಸೂಚ್ಯವಾಗಿ ಗುರುನಾಥರು ಆಡದೆ ಇದನ್ನು ತೋರಿಸಿದ್ದಾರೆಂದು ಪ್ರದಕ್ಷಿಣಾ ಪಥದಿಂದ ನಾವಿಬ್ಬರೂ ಹೊರಬಂದೆವು. ಗುರುನಾಥರು ಅದೆಷ್ಟು ಸೂಕ್ಷ್ಮವಾಗಿ ವರ್ತಿಸುತ್ತಿದ್ದರೆಂಬುದು ನನಗಾಗ ಅರ್ಥವಾಯಿತು. ಎಲ್ಲರೆದುರು ಏನಾದರೂ ಹೇಳಿದರೆ ಭಕ್ತರಿಗೆ ಎಲ್ಲಿ ಮನ ನೋವಾಗುವುದೋ ಎಂದವರು ಭಾವಿಸಿದಂತಿತ್ತು. ಮುಂದೆ ಎಲ್ಲರೂ ತೀರ್ಥನಾರಾಯಣನ ಸೇವೆ ಪ್ರದಕ್ಷಿಣೆ ಮಾಡಿದ ನಂತರ ಸ್ವಯಂ ಗುರುನಾಥರೇ ನಾವು ನಿಂತಿದ್ದ ಬಳಿ ಬಂದು ತೀರ್ಥವನ್ನು ನಮ್ಮ ಮೇಲೆ ಪ್ರೋಕ್ಷಿಸಿ ಹರಸಿದರು. ನನಗೆ ಸಂತೃಪ್ತಿಯಾಯಿತು. ಹೀಗೆ ಗುರುನಾಥರು ಯಾವ ಭಕ್ತರಿಗೂ ಮನ ನೋಯದಂತೆ ನಡೆದದ್ದನ್ನು ನಾನೆಂದೂ ಮರೆಯಲಾರೆ. ಮುಂದೆ ಕಾರ್ಯಕ್ರಮವೆಲ್ಲಾ ಮುಗಿದಾಗ ತಮ್ಮ ಶಿಷ್ಯರೊಬ್ಬರನ್ನು ಕರೆದು ಶ್ರೀ ಬ್ರಹ್ಮಾನಂದರನ್ನು ಹಾಗೂ ನಮ್ಮಗಳನ್ನು ಮನೆಯ ತನಕ ಮುಟ್ಟಿಸಿ ಬರಲು ಕಾರಿನಲ್ಲಿ ಕಳಿಸಿದರು. ತಮ್ಮ ಬಳಿ ಬಂದವರ ಬಗ್ಗೆ ಗುರುನಾಥರು ವಹಿಸುತ್ತಿದ್ದ ಕಾಳಜಿಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅಷ್ಟೇ ಅಲ್ಲದೆ ಗುರುನಾಥರು ಧರ್ಮದ ಮಾರ್ಗದಲ್ಲಿ ಏನು ಹೇಗೆ ನಡೆಯಬೇಕೆಂದು ನಿರ್ಧರಿಸಿರುತ್ತಾರೋ ಅದೇ ನಡೆಯುತ್ತದೆಯೇ ಹೊರತು ನಮಗೆ ಇಷ್ಟ ಬಂದಂತೆ ಏನೂ ನಡೆಯದು. ನಮ್ಮ ಇಷ್ಟದಲ್ಲಿ ಸ್ವಾರ್ಥವಿದ್ದರೆ ಗುರುನಾಥರ ಇಷ್ಟದಲ್ಲಿ ನ್ಯಾಯ, ಧರ್ಮ, ನೀತಿಗಳೇ ತುಂಬಿರುತ್ತದೆ ಎಂಬುದನ್ನಿಲ್ಲಿ ಅಂದು ಅವರು ನಮಗೆ ಸೂಕ್ಷ್ಮವಾಗಿ, ನವಿರಾಗಿ ಸ್ಪಷ್ಟಪಡಿಸಿದರು. ಗುರುನಾಥರ ಬಳಿ ಇದ್ದ ಒಂದೊಂದು ಕ್ಷಣವೂ ಅನೇಕ ಪಾಠಗಳು ಎಲ್ಲರಿಗೂ ಆಗುತ್ತಿರುತ್ತದೆ. ಏನೂ ಆಡದೇ ಮಾಡಿ ತೋರಿಸುವ ಗುರುನಾಥರ ರೀತಿಯೇ ಅನನ್ಯ. ಏನೋ ನಮ್ಮ ಶಂಕರಲಿಂಗ ಗುರುವಿನ ಎತ್ಕಿಂಚಿತ್ ಸೇವೆ ಮಾಡಿದುದರ ಫಲ, ಇಂತಹ ಮಹಾತ್ಮರ ದರ್ಶನ ನಮಗಾಗಿದೆ. ಅಲ್ಲದೆ ಅವರು ಸಾಕಾರ ನಿರಾಕಾರರಾಗಿಯೂ ನಿರಂತರ ನಮ್ಮ ನಡುವೆಯೇ ಇದ್ದಾರೆಂದರೆ ಅತಿಶಯ ಎನ್ನುತ್ತಾರೆ" ಗುರುನಾಥರನ್ನು ವಿನೀತರಾಗಿ ಸ್ಮರಿಸುತ್ತಾ ಈ ಗುರುಭಕ್ತರು. 

ಮತ್ತೊಮ್ಮೆ ಈ ಭಕ್ತರು ತಮ್ಮ ಅನೇಕ ಜನ ಸ್ನೇಹಿತರೊಂದಿಗೆ ಕಾರಿನಲ್ಲಿ ಗುರುನಾಥರ ದರ್ಶನ ಮಾಡಲು ಸಖರಾಯಪಟ್ಟಣಕ್ಕೆ ಹೋದರಂತೆ. ಪ್ರೀತಿಯಿಂದ ಎಲ್ಲರನ್ನು ಆದರಿಸಿ ಕರೆದರು ಗುರುನಾಥರು. ಊಟ ಮಾಡಿಸಿದರು. ನಂತರ "ಹೇಗೆ ಬಂದಿದ್ದೀರಿ ಕಾರಿನಲ್ಲೇ. ಹಾಗಾದರೆ ನೀವು ಈಗಲೇ ಶೃಂಗೇರಿಗೆ ಹೊರಡಿರಿ. ಐವತ್ತಲ್ಲಿ ಅಭಿನವ ವಿದ್ಯಾತೀರ್ಥರ ಆರಾಧನೆ ಇದೆ... ಜಗದ್ಗುರುಗಳ ದರ್ಶನ ಮಾಡಿ" ಎಂದು ಕಳಿಸಿಬಿಟ್ಟರಂತೆ. ಇವರೆಲ್ಲಾ ಶೃಂಗೇರಿಗೆ ಹೋಗಿ ಜಗದ್ಗುರು ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ಬರುವ ಮೊದಲು ಇವರಲ್ಲೊಬ್ಬ ಭಕ್ತರು, ಬೆಂಗಳೂರಿನಲ್ಲಿರುವ ತಮ್ಮ ಮಗಳು ಹಾಗೂ ಹೆಂಡತಿಗೆ, ಗುರುನಾಥರು ಊರಲ್ಲಿ ಇರುವ ವಿಷಯ ತಿಳಿಸಿ ಬಂದು ಗುರುದರ್ಶನ ಮಾಡಿಕೊಳ್ಳಲು ಹೇಳಿಬಿಟ್ಟಿದ್ದರು. ಹಾಗಾಗಿ ತಾಯಿ ಮಗಳು ಬಾಡಿಗೆ ಕಾರು ಮಾಡಿಕೊಂಡು ಗುರುನಾಥರ ಮನೆಗೆ ಬಂದಿದ್ದರು. ಸಂಜೆಯಾಗಿತ್ತು. ಗುರುನಾಥರಿಗೆ ಈ ರೀತಿ ಬಂದ  ಭಕ್ತರನ್ನು ನೋಡಿ ಅಸಾಧ್ಯ ಸಿಟ್ಟು ಬಂದಿತ್ತು. ಕೊನೆಗೆ ನಮಗೆ ಫೋನು ಮಾಡಿಸಿ, ಮತ್ತೆ ನಮ್ಮನ್ನೆಲ್ಲಾ ತಮ್ಮೂರಿಗೆ ಕರೆಸಿದರು. ತಮ್ಮ ಹೆಂಡತಿ ಮಗಳನ್ನು ಈ ರೀತಿ ಗುರುದರ್ಶನಕ್ಕೆ ಕರೆಸಿದ ಭಕ್ತರಿಗೆ ಗುರುನಾಥರು ಸರಿಯಾಗಿ ತರಾಟೆಗೆ ತೆಗೆದುಕೊಂಡರಂತೆ. "ಯಾವ ರೀತಿಯ ಬೇಜವಾಬ್ದಾರಿ ಇದು? ಇಬ್ಬರೇ ಮಹಿಳೆಯರು ಬಾಡಿಗೆ ಕಾರಿನಲ್ಲಿ ಹೀಗೆ ಬರುವುದು ಸರಿಯೇ?" ಎಂದು ಮನೆಯ ಯಜಮಾನರ ಜವಾಬ್ದಾರಿ ಏನೆಂದು ತಿಳಿಸಿದರಂತೆ. ಗುರುನಾಥರಿಗೆ ತಮ್ಮ ಭಕ್ತರ ಬಗ್ಗೆ ಭಕ್ತರ ಪರಿವಾರ ಸಂಸಾರದ ಬಗ್ಗೆ ಅದೆಷ್ಟು ಕಾಳಜಿ ಇತ್ತೆಂಬುದಿಲ್ಲಿ ಅವರಿಗರಿವಾಯಿತಂತೆ. ಮುಂದೆ ಶಾಂತರಾದ ಗುರುನಾಥರು ಎಲ್ಲರಿಗೂ ದರ್ಶನವಿತ್ತು ಆಶೀರ್ವದಿಸಿ ಕಳಿಸಿದ ವಿಚಾರವನ್ನು ಅವರು ಸ್ಮರಿಸುತ್ತಾರೆ. 

ಪ್ರಿಯ ಗುರುಬಂಧು ಸತ್ಸಂಗ ಪ್ರಿಯರೇ, ನಮಗೆ ನಮ್ಮ ಜವಾಬ್ದಾರಿ ಹೊರುವುದೇ ಆಗದಿರುವಾಗ ಗುರುವಾದ ಗುರುನಾಥರಿಗೆ ಅದೆಷ್ಟು ಪರಿವಾರ, ಸಂಸಾರ, ಭಕ್ತರ ಜವಾಬ್ದಾರಿ ಹೊರೆ ಇದೆ ಎಂಬುದನ್ನು ಚಿಂತಿಸಿದರೆ ಅಗಾಧ, ಅಪಾರವೆನಿಸದೇ ಇರದು. ಜೀವನದಲ್ಲಿ ಇಂತಹ ಒಬ್ಬ ಗುರುವಿನ ಆಶ್ರಯ ದೊರೆತರೆ ನಮ್ಮ ಜನ್ಮ ಸಾರ್ಥಕ, ನಿಶ್ಚಿಂತೆಯ ಜೀವನ ನಮ್ಮದಾದೀತು. ಅದಕ್ಕೆ ನಾವು ಕೊಡಬೇಕಾದ ಕಪ್ಪವೆಂದರೆ ನಿಷ್ಕಲ್ಮಶ ಗುರುಭಕ್ತಿ. ಅದೆಲ್ಲರಿಗೆ ದೊರೆಯಲೆಂದು ಆಶಿಸುತ್ತಾ... ನಾಳಿನ ಸತ್ಸಂಗದಲ್ಲೂ ಭಾಗಿಯಾಗಲು ಬನ್ನಿ.... ದಯಮಾಡಿ ಬರುವಿರಲ್ಲಾ.... ? 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment