ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 23
ಗುರು ನಿರಂತರ - ಗುರುಕೃಪೆ ಅಗಾಧ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಬೆಂಗಳೂರಿನ ಗೀತಮ್ಮನವರಿಗೆ ಆದ ಅನುಭವಗಳನ್ನೆಲ್ಲಾ ಕೇಳಿದಿರಲ್ಲಾ ಸತ್ಸಂಗಾಭಿಮಾನಿಗಳೇ. ಈ ಗುರುಕೃಪೆ ಎಂಬುದು ಯಾವುದೋ ಕಾಲಕ್ಕಲ್ಲ. ಅಂದೂ, ಇಂದೂ ಎಂದೆಂದೂ ಆಗುತ್ತಿರುತ್ತದೆ. ಏಕೆಂದರೆ ಗುರು ಅವಿನಾಶಿ. ಆದಿ ಅಂತ್ಯ ರಹಿತ. ನಿತ್ಯ ಸತ್ಯ ಹಾಗಾಗಿ.
ಈ ಭಕ್ತೆಯ ದೊಡ್ಡ ಮೊಮ್ಮಗ ಕ್ರಿಕೆಟ್ ಆಡುತ್ತಾ ಒಂದು ಸಣ್ಣ ಅವಘಡಕ್ಕೆ ತುತ್ತಾದನಂತೆ. ಕಾಲಿಗೆ ಪೆಟ್ಟಾಯಿತು. ಡಾಕ್ಟರುಗಳು ಪರೀಕ್ಷಿಸಿದರು. 'ಲಿಗಮೆಂಟ್ ಟೇರ್' ಆಗಿದೆ. ಇದು ಆಪರೇಷನ್ ಮುಖಾಂತರವೇ ಸರಿಪಡಿಸಬೇಕೆಂದು ಹೇಳಿದರಂತೆ. ಇನ್ನೇನು ಮಾರ್ಗವಿಲ್ಲ. ಸಣ್ಣ ವಯಸ್ಸು. ಕಾಲಿಗೆ ಏನಾದರೂ ಆದರೆ ಜೀವಮಾನವಿಡೀ ಒದ್ದಾಡಬೇಕಲ್ಲ ಎಂಬ ಚಿಂತೆಯಿಂದ ಆಪರೇಷನ್ ಮಾಡಿಸಲು ಇವರು ಒಪ್ಪಿದರು. ಆದರೂ ಈ ಎಲ್ಲಾ ವೈದ್ಯರಿಗಿಂತ ಭವರೋಗ ವೈದ್ಯರಾದ ಗುರುನಾಥರ ಬಳಿ ಹೋದ ಇವರು. ಅಂದು ಗುರುನಾಥರ ಆರಾಧನೆಯ ದಿನವಿತ್ತು. ಬೆಂಗಳೂರಿನ ವೇದ ಗುರುಗಳ ಮನೆಯಲ್ಲಿ ನಡೆಯುತ್ತಿರುವ ಗುರುನಾಥರ ಆರಾಧನೆಗೆಂದು ಹೋದ ಇವರು ಅನನ್ಯವಾಗಿ ಗುರುನಾಥರಲ್ಲಿ ಬೇಡಿಕೊಂಡರಂತೆ.
ಬೆಳಿಗ್ಗೆಯೇ ಎಲ್ಲ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡ ವೈದ್ಯರು ಮಗುವನ್ನು ಆಪರೇಷನ್ ಥಿಯೇಟರ್ ಗೆ ಕರೆದೊಯ್ದರು. ಆರಾಧನೆಯಲ್ಲಿದ್ದ ಅಜ್ಜಿಗೆ ಮೊಮ್ಮಗನ ಕಡೆಯಿಂದ 'ಆಪರೇಷನ್ ಗೆ ಸಿದ್ಧವಾಗಿ ಓ.ಟಿ. ಗೆ ಕರೆದೊಯ್ದಿದ್ದಾರೆ' ಎಂಬ ವಿಚಾರವೂ ಫೋನಿನಲ್ಲಿ ತಿಳಿಯಿತಂತೆ.
ಆದರೂ ಅಜ್ಜಿಯ ಅನನ್ಯ ಬೇಡಿಕೆಗೆ ಭವರೋಗ ವೈದ್ಯ ಗುರುನಾಥರ ಕರುಣೆ ಸಿಕ್ಕಿತು. ಆರಾಧನೆ ಮುಗಿಸಿಕೊಂಡು ಪ್ರಸಾದ ತೆಗೆದುಕೊಂಡು ಮೊಮ್ಮಗನನ್ನು ಕಾಣಲು ಹೋದಾಗ ಆಶ್ಚರ್ಯವೇ ಕಾದಿತ್ತು. ಮತ್ತೆ ಡಾಕ್ಟರ್ ಗಳು ಪರಾಮರ್ಶಿಸಿ, ಚಿಕ್ಕ ವಯಸ್ಸು ಮುಂದೆ ಹಾಗೆಯೇ ಸರಿಯಾಗಬಹುದು ಆಪರೇಷನ್ ಬೇಡವೆಂದು ಹಾಗೆಯೇ ಕಳಿಸಿದರಂತೆ. ಇದೆಲ್ಲಾ ನಡೆದದ್ದು ಎರಡು ಸಾವಿರದ ಹದಿನೈದನೆಯ ಇಸವಿಯ ಗುರುನಾಥರ ಆರಾಧನೆಯ ದಿನದಂದೇ ಎಂಬುದು ಕಾಕತಾಳೀಯವೋ, ಗುರು ನಿರ್ಣಯವೋ ಬಲ್ಲವರಾರು.
ಆದರೆ ಇಂತಹ, ತರ್ಕಕ್ಕೆ ನಿಲುಕದ ಅನೇಕ ಘಟನೆಗಳು ಕೇಳಿ ಬರುತ್ತಲೇ ಇದೆ. ಘಟಿಸುತ್ತಲೇ ಇದೆ. ಗುರುನಾಥರು ಇದ್ದಾರೆಂದು ನಂಬಿದ ಅನೇಕರಿಗೆ ಅವರ ಇರುವು ಹಲವು ಘಟನೆಗಳಿಂದ ಸಾಬೀತಾಗಿದೆ. ಇವೆಲ್ಲಾ ಭಾವಕ್ಕೆ ಸಂಬಂಧಿಸಿದವು. ಕಾರ್ಯಕಾರಣಗಳ ಸಂಬಂಧಕ್ಕಾಗಲೀ ಮತ್ಯಾವುದೇ ವಾದಕ್ಕಾಗಲೀ ಅರ್ಥವಾಗುವಂತಹುದಲ್ಲ.
ಇಂತಹ ಮತ್ತೊಂದು ಘಟನೆಯನ್ನು ಬೆಂಗಳೂರಿನ ಗೀತಮ್ಮನವರು ಹೀಗೆ ಸ್ಮರಿಸಿಕೊಳ್ಳುತ್ತಾರೆ. ಕರ್ಮಧರ್ಮ ಸಂಯೋಗದಿಂದ ಅದೂ ಸಹ ಗುರುನಾಥ ಆರಾಧನೆಯ ದಿನವೇ ನಡೆದದ್ದಂತೆ.
ತಮ್ಮ ಸ್ನೇಹಿತೆಯೊಬ್ಬರು ಸರಸ್ವತಿ ಎಂಬುವರ ಯಜಮಾನರು ಹೃದಯ ಸಂಬಂಧಿ ಖಾಯಿಲೆಯಿಂದ ಜಯದೇವ ಆಸ್ಪತ್ರೆಗೆ ಸೇರಿದ್ದರು. ವೈದ್ಯರುಗಳು ರೋಗಿಯನ್ನು ಪರೀಕ್ಷಿಸಿ, ಹಾರ್ಟಿನಲ್ಲಿ ಬ್ಲಾಕೇಜ್ ಇದೆ. ಇದು ಆಪರೇಷನ್ ನಿಂದಲೇ ಸರಿಯಾಗಬೇಕೆಂದು ನಿರ್ಧರಿಸಿ ಆಸ್ಪತ್ರೆಗೆ ಸೇರಿಸಿ, ಆಪರೇಷನ್ ಥಿಯೇಟರ್ ಗೂ ಕರೆದುಕೊಂಡು ಹೋದರಂತೆ.
ತಮ್ಮ ಸ್ನೇಹಿತೆ ಸರಸ್ವತಿಯವರೂ ಗುರುನಾಥರ ಪರಮ ಭಕ್ತರಂತೆ. ಅವರ ಪತಿಗೆ ಈ ರೀತಿಯಾಗಿ ಆಪರೇಷನ್ ದಿನ ನಿಗದಿಯಾಗಿರುವುದನ್ನು ಗೀತಮ್ಮನವರಿಗೆ ತಿಳಿಸಿದಾಗ, ಅವರು ಸರಸ್ವತಿ 'ನೀವು ಗೆದ್ದಿರಿ. ಗುರುನಾಥರನ್ನು ಬೇಡಿಕೊಳ್ಳಿ. ಅವರು ಎಲ್ಲವನ್ನೂ ಸರಿ ಮಾಡುತ್ತಾರೆ.. ಅಲ್ಲದೆ ಇವತ್ತು ಗುರುನಾಥರ ಆರಾಧನೆ ಇದೆ. ಖಂಡಿತಾ ನಿಮ್ಮ ಕಂಟಕಗಳು ದೂರವಾಗುತ್ತದೆ. ಗುರುನಾಥರ ಕೃಪೆ ನಿಮಗಿದೆ' ಎಂದು ಭಾವುಕರಾಗಿ ಇವರೇನೋ ಹೇಳಿಬಿಟ್ಟರಂತೆ.
ಮುಂದೆ ಸಂಜೆ ಸ್ನೇಹಿತೆಯಿಂದ ಫೋನು ಬಂದಿತು. "ನಿಜವಾಗಲೂ ಪವಾಡವೇ ಆಗಿ ಹೋಯಿತು. ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಗೆ ನಮ್ಮ ಯಜಮಾನರನ್ನು ಕರೆದೊಯ್ದ ವೈದ್ಯರುಗಳು, ಮತ್ತೊಮ್ಮೆ ಪರೀಕ್ಷಿಸಿದರಂತೆ. ಹೃದಯವನ್ನು ಸ್ಕ್ಯಾನ್ ಮಾಡಿ ಚರ್ಚಿಸಿದಾಗ ವೈದ್ಯರುಗಳ ಅಭಿಮತವೇ ಬೇರೆಯಾಗಿತ್ತು. ಅಂತಹುದೇನೂ ಸಿವಿಯರ್ ಪರಿಸ್ಥಿತಿ ಇಲ್ಲದಿರುವುದರಿಂದ ಕೆಲವು ಮಾತ್ರೆಗಳಲ್ಲಿ ಇದನ್ನು ಸರಿಪಡಿಸಬಹುದು. ಸ್ವಲ್ಪ ಕಾಯ್ದು ನೋಡೋಣ. ಓಪನ್ ಹಾರ್ಟ್ ಸರ್ಜರಿ ಬೇಕಾಗಿಲ್ಲವೆಂದು ನಮ್ಮ ಯಜಮಾನರನ್ನು ಆಪರೇಷನ್ ಮಾಡದೆಯೇ ಕರೆ ತಂದಿದ್ದಾರೆ. ಎಲ್ಲ ಗುರುನಾಥರ ಚಮತ್ಕಾರ. ನಮ್ಮ ಪ್ರಾರ್ಥನೆಗವರು ಕರುಣಿಸಿದ್ದಾರೆ ಎಂದು ಫೋನಿನಲ್ಲಿ ಸಂತಸ ಹಾಗೂ ಗುರುನಾಥರ ಮಹಿಮೆಯನ್ನು ಹಂಚಿಕೊಂಡರಂತೆ.
ಪ್ರಿಯ ಗುರು ಬಾಂಧವ ಸತ್ಸಂಗಾಭಿಮಾನಿಗಳೇ... ಗುರುವಿಗೆ ಆಗದ್ದೇನಿದೆ? ಅವರು ಮನಸ್ಸು ಮಾಡಿದರೆ "ಪಂಗುಂ ಲಂಘಯತೇ ಗಿರಿ, ಮೂಕಂ ಕರೋತಿ ವಾಚಾಲಂ' ಎಂಬಂತೆ ಎಲ್ಲವೂ ಸಾಧ್ಯ. ಆದರೆ ನಿರ್ಮಲವಾದ ದೃಢಭಕ್ತಿ ನಮ್ಮಲ್ಲಿ ಇರಬೇಕು.
ನಾಳೆಯೂ ಮತ್ತಿನ್ನೇನು ಅಘಟಿತ ಘಟನೆಗಳನ್ನು ಗುರುನಾಥರು ಜರುಗಿಸುತ್ತಾರೋ, ತಿಳಿಸುತ್ತಾರೋ, ಕಾಯೋಣ ಅವರ ಕೃಪೆಗಾಗಿ... ನಾಳೆಯೂ ಬರುವಿರಲ್ಲವಾ?
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment