ಒಟ್ಟು ನೋಟಗಳು

Wednesday, June 28, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 28
ನಾನು ಹೇಳಿದ್ದು ಮಾಡ್ತೀಯಾ ? 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಪ್ರಿಯ ಭಕ್ತ ಮಹಾಶಯರೇ, ಬೆಂಗಳೂರಿನ ಲಕ್ಷ್ಮೀ ಪ್ರಸಾದ್ ತಮ್ಮ ಗುರು ಪರೀಕ್ಷೆಯ ವಿವಿಧ ಮಜಲುಗಳನ್ನು ಹಾಗೂ ಪರೀಕ್ಷೆಯಲ್ಲಿ ಪಾಸು ಮಾಡಿಸುವವನೂ ಅವನೇ ಆದ ಗುರುನಾಥರ ವಿಚಾರವನ್ನು ಇಂದಿನ ಸತ್ಸಂಗದಲ್ಲೂ ಮುಂದುವರೆಸುತ್ತಿದ್ದಾರೆ. ಬನ್ನಿ ಆಲಿಸೋಣ. 

"ಹೀಗೆ ಪ್ರಾರಂಭದಿಂದಲೇ ಸಂಪೂರ್ಣ ನಮ್ಮನ್ನು ತಮ್ಮ ಕೃಪಾಛತ್ರಕ್ಕೆ ಯಾವಾಗಲಾದರೂ ಯಾವ ರೀತಿಯಲ್ಲಾದರೂ ಒಡ್ಡಬಹುದೆಂಬ ವಿಚಾರ ನನ್ನ ಮನಸ್ಸಿನಲ್ಲಿ ಬರುತ್ತಿತ್ತು. ಅದೇನು ನನ್ನ ಮನಸ್ಸಿನ ವಿಚಾರವೇ ಗುರು ಪರೀಕ್ಷೆಗಳಾಗಿ ನನ್ನೆದುರಿಗೆ ಬರುತ್ತಿತ್ತೋ ಏನೋ, ಆದರೆ ಪರಿಹಾರ ನೀಡುವವರು ಮಾತ್ರಾ ಗುರುನಾಥರೇ ಎಂಬ ಭಾವನೆ ನನ್ನ ಅನುಭವದಿಂದ, ಗುರುಕೃಪೆಯಿಂದ ನನಗೆ ಅದು ಹೇಗೋ ಮನದಟ್ಟಾಗಿತ್ತು. ಹಾಗಾಗಿ ಗುರುನಾಥರ ಲೀಲಾ ವಿನೋದಗಳಲ್ಲಿ ನಾನೊಂದು ಕೇವಲ ಗೊಂಬೆಯಂತೆ, ಅವರಾಡಿಸುವ ಸೂತ್ರಧಾರನ ಕೈನ ಸೂತ್ರದ ಗೊಂಬೆಯಂತಿದ್ದು ಬಿಡುತ್ತಿದ್ದೆ. ಅಂದು ಶೃಂಗೇರಿಯಿಂದ ಬಂದ ನಾವು ಮತ್ತೆ ಗುರುನಾಥರ ಮನೆಗೆ ಬಂದು ದರ್ಶನ ಮಾಡಿದೆವು. ನಮಸ್ಕರಿಸಿ ಕುಳಿತ ನಮಗೆ ಗುರುನಾಥರ ಅದೇ ಸೌಮ್ಯ ಪ್ರಶಾಂತ ನಗುವಿನ ಮುದ್ದು ಮೊಗದ ದರ್ಶನವಾಯಿತು. ಮಾತನಾಡುತ್ತಾ ಗುರುನಾಥರು ಗುರುವಿನ ಸಹವಾಸದ ಕಠಿಣತೆಯ ಬಗ್ಗೆ ತಿಳಿಸುತ್ತಾ ಗುರು ಏನು ಹೇಳಿದ್ರೂ ಮಾಡ್ತೀಯಾ? ಎಂದು ಅದೇಕೆ ಪ್ರಶ್ನೆ ಕೇಳಿದರೋ ನಾನರಿಯೆ. ನಾನು ಅಷ್ಟೇ ಗಟ್ಟಿ ನಿಂತು ಆಯ್ತು, ಮಾಡ್ತೀನಿ ಅಂದುಬಿಟ್ಟೆ. ಮತ್ತೆ ಈಗ ಶೃಂಗೇರಿಗೆ ಹೋಗು ಎಂದರೆ ಹೋಗ್ತೀಯಾ? ಎಂದು ಕೇಳಿದರು. ನಾನೊಪ್ಪಿದೆ. ನನ್ನ ಮನೆಯವರಿಗೆ ಮಾರನೆಯ ದಿನ ಆಫೀಸು ಇತರ ಕೆಲಸ ಕಾರ್ಯಗಳಿದ್ದವು. ಗುರುನಾಥರು ಮುಂದವರೆದು 'ನೋಡು ಡಿಸೆಂಬರ್ ಚಳಿ ಇದೆ. ಆದರೂ ನೀನು ತುಂಗೆಯಲ್ಲಿ ಸ್ನಾನ ಮಾಡಬೇಕು, ಉರುಳುಸೇವೆ ಮಾಡಬೇಕು, ಗುರುಭಿಕ್ಷೆ ಹಾಕಬೇಕು, ಯತಿದರ್ಶನ ಮಾಡಬೇಕು' ಹೀಗೆ ಒಂದಾದ ಮೇಲೆ ಒಂದರಂತೆ ಹೇಳುತ್ತಾ ಹೋದರು. ಪಾಪ ಗುರುನಾಥರಿಗೆಂತಹ ಜವಾಬ್ದಾರಿ ನೋಡಿ... ನಮ್ಮಂತೆ ಬರುವ ಭಕ್ತರುಗಳ ಕರ್ಮ ಸವೆಸಲು ಅದೆಷ್ಟು ಮಾರ್ಗಗಳನ್ನು ತೋರಿಸಿ ನಮ್ಮನ್ನು ಉದ್ಧಾರ ಮಾಡಲು ಶ್ರಮಿಸುತ್ತಾರೆ. ಗುರುನಾಥರು ಮುಂದುವರೆದು, ಬಾಯಿಲ್ಲಿ ಎಂದು ಅವರ ಮನೆಯ ದೇವರ ಮನೆಗೆ ಕರೆದೊಯ್ದು ಫಲ ಒಂದನ್ನು ನೀಡುತ್ತಾ ಇದನ್ನು ತೆಗೆದುಕೊಂಡು ಹೋಗಿ ಜಗದ್ಗುರುಗಳಿಗೆ ಕೊಟ್ಟು, ಸಖರಾಯಪಟ್ಟಣದ ಅವಧೂತರು ಕಳಿಸಿದ್ದಾರೆ ಎಂದು ಹೇಳಿ ಗುರುಗಳಿಂದ ಒಳ್ಳೆಯ ಆಶೀರ್ವಾದ ಮಾಡಬೇಕೆಂದು ಕೇಳಿ, ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಮುಂತಾಗಿ ಎಳೆಯ ಮಗುವಿಗೆ ಹೇಳಿದಂತೆ ಎಲ್ಲವನ್ನೂ ಎಳೆ ಎಳೆಯಾಗಿ ನಮಗೆ ತಿಳಿಸಿದರು. ಗುರುನಾಥರು ಶ್ರೀನಿವಾಸ ಡಾಕ್ಟರಿಗೆ ಹೇಳಿ ಶೃಂಗೇರಿಯ ಬಸ್ ಹತ್ತಿಸಲು ಹೇಳಿದರು. ದೇವರ ಮನೆಯ ಒಳಗೆ ಹೋದಾಗ ನನಗಲ್ಲಿ ಚಂದ್ರಶೇಖರ ಭಾರತಿಗಳ ಭಾವಚಿತ್ರದ ದರ್ಶನವಾಯಿತು. ಜಗದ್ಗುರುಗಳ ಪಾದುಕೆಗಳಿರುವ ಗುರುನಾಥರ ಮನೆಯ ದೇವರ ಮನೆ, ಯಾವ ಜಗದ್ಗುರುಗಳ ಪೀಠಕ್ಕೂ ಕಮ್ಮಿ ಇರಲಿಲ್ಲ. ಗುರುವಿನ ಕೃಪೆಯಿಂದ ಅಲ್ಲಿಯೇ ಚಂದ್ರಶೇಖರ ಭಾರತೀ ಸ್ವಾಮಿಗಳು ಪ್ರಯಾಸರಹಿತಕರವಾಗುವಂತೆ ಆವರು ಕರುಣಿಸಿರಬಹುದು. ಮುಂದೆ ನಾವು ಮತ್ತೆ ಶೃಂಗೇರಿಯನ್ನು ತಲುಪಿ, ಎಲ್ಲ ಸೇವೆಗಳನ್ನು ಮುಗಿಸಿ, ಜಗದ್ಗುರುಗಳ ದರ್ಶನವನ್ನೂ ಮಾಡಿ, ಗುರುನಾಥರು ಹೇಳಿದಂತೆ ಫಲವನ್ನು ಅವರ ಕೈಗೆ ನೀಡಿ ಸಖರಾಯಪಟ್ಟಣದ ಗುರುನಾಥರು ಹೇಳಿ ಕಳುಹಿಸಿದ್ದಾರೆ, ನನಗೆ ಚೆನ್ನಾಗಿ ಆಶೀರ್ವಾದ ಮಾಡಬೇಕೆಂದು ಕೇಳಲೂ ಹೇಳಿದ್ದಾರೆ' ಎಂದು ನಮಿಸಿ ನಾನು ಹೇಳಿದೆ. 

ಜಗದ್ಗುರುಗಳು ಹಣ್ಣನ್ನು ತೆಗೆದುಕೊಂಡರು ಹಸನ್ಮುಖರಾಗಿ, ಎಲ್ಲವನ್ನೂ ಅವರೇ ನೀಡಿರುವಾಗ ಗುರುನಾಥರು ಈ ರೀತಿ ತಮ್ಮ ಭಕ್ತರನ್ನಿಲ್ಲಿಗೆ ಕಳಿಸಿ, ಜಗದ್ಗುರು ಪರಂಪರೆಯ ಗೌರವ ಆದರಗಳನ್ನು ಹೆಚ್ಚಿಸುತ್ತಿರುವ ಭಕ್ತ ವೃಂದವನ್ನು ಶ್ರೀಮಠಕ್ಕೆ ಕಲಿಸುವುದರ ಮೂಲಕ ಗುರುಸೇವಾ ಮನೋಭಾವವನ್ನು ಜನಮನದಲ್ಲಿ ಬಿತ್ತುತ್ತಿರುವುದನ್ನು ಅರಿತೋ ಏನೋ ಮುಗುಳ್ನಕ್ಕರು. ಆ ನಗೆಯೇ ಮನಗೆಲ್ಲಾ ಆಶೀರ್ವಾದವನ್ನು ಕರುಣಿಸಿತ್ತು. ಹೀಗೆ ಎಲ್ಲೆಲ್ಲಿ ಒಳ್ಳೆಯದಿದೆಯೋ, ಅಲ್ಲಲ್ಲಿಗೆಲ್ಲಾ ನಮ್ಮನ್ನು ಕಳಿಸಿ ಆಶೀರ್ವಾದ ಸಿಗುವಂತೆ ಮಾಡುತ್ತಿದ್ದ ಗುರುನಾಥರ ಉಪಕಾರ ಹೇಗೆ ತೀರಿಸಲು ಸಾಧ್ಯ. ಒಮ್ಮೆ ಬೆಂಗಳೂರಿನಲ್ಲಿ ಒಂದು ಕಲ್ಯಾಣ ಮಂಟಪಕ್ಕೆ ನಾಲ್ಕು ಗಂಟೆಗೆ ಬರಲು ತಿಳಿಸಿದ್ದರು. ನಾವೆಲ್ಲಾ ಹೋಗಿ ಕಾಯುತ್ತಿದ್ದೆವು. ಅಲ್ಲಿಗೆ ನಾಲ್ಕೂವರೆಗೆ ಗುರುನಾಥರು ಬಂದರು. ಪ್ರೋಗ್ರಾಮ್ ಶುರುವಾಯಿತು. ಅಲ್ಲಿ ಗಾಯತ್ರಿ ಹೋಮ ಮುಂತಾದ ದೊಡ್ಡ ಕಾರ್ಯಗಳು ನಡೆಯುತ್ತಿತ್ತು. ಹೀಗೆ ಗುರುನಾಥರು ಒಂದಲ್ಲ ಒಂದು ಕಾರಣದಿಂದ ನಮ್ಮ ಕರ್ಮಾ ತೊಳೆಸಿ, ಪುಣ್ಯ ಬರುವ ಸಾನ್ನಿಧ್ಯಗಳಲ್ಲಿ ನಮ್ಮನ್ನು ತೊಡಗಿಸುತ್ತಿದ್ದ ವಿಶ್ವ ಪ್ರೇಮಿಗಳೇ ಆಗಿದ್ದರು" ಎನ್ನುತ್ತಾರೆ ಶ್ರೀಮತಿ.ಲಕ್ಷ್ಮೀ ಪ್ರಸಾದ್. 

ಗುರು ಬಾಂಧವ ನಿತ್ಯ ಸತ್ಸಂಗ ಪ್ರಿಯರೇ, ಗುರುದರ್ಶನ ದುರ್ಲಭ. ಗುರುಕೃಪೆಯಂತೂ ಇನ್ನೂ ದುರ್ಲಭ. ಆದರೆ ನಿಷ್ಠೆಯಿಂದ, ಸತ್ ಪ್ರೀತಿಯಿಂದ ಪರಿಪೂರ್ಣರಾಗಿ ತಮ್ಮನ್ನು ಅರ್ಪಿಸಿಕೊಂಡವರಿಗೆ ಗುರು ಕಾಯುವ ರೀತಿ ನೋಡಿ ಹೇಗಿದೆ. 

ನಿರಂತರ ಸತ್ಸಂಗದಿಂದ ಗುರುನಾಥರ ಕೃಪೆ ನಮ ನಿಮಗೆಲ್ಲಾ ಸಿಗಲಿ ಎಂದು ಶುಭ ಹಾರೈಸುತ್ತಾ ಇಂದಿನ ಸತ್ಸಂಗಕ್ಕೆ ಕೊಂಚ ವಿರಾಮ ಕೊಟ್ಟು ವಿಶ್ರಮಿಸೋಣ. ಸತ್ಸಂಗದಿಂದ ವಿಶ್ರಾಮ ಪಡೆದರೂ ನಿರಂತರ ಗುರುನಾಮ ಸ್ಮರಣೆ ನಮ್ಮ ಉಸಿರಾಗಲಿ ಎಂದು ಬೇಡುವ, ನಾಳೆ ಮತ್ತೆ ಒಂದಾಗೋಣ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment