ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 30
ನಿಮಗೆಷ್ಟು ಸಂಬಳ ? ಪರ್ಸಿನಲ್ಲಿ ಎಷ್ಟು ದುಡ್ಡಿದೆ ?
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
"ಗುರುವನ್ನು ಅರಿಯುವುದು ಅಷ್ಟು ಸುಲಭವಲ್ಲ. ಅವರಾಡುವ ನಾಟಕಗಳು ಒಮ್ಮೊಮ್ಮೆ ಅವರ ಬಳಿ ಬರುವವರು ಹತ್ತಿರ ಸುಳಿಯದಂತೆ ಮಾಡಿಬಿಡುವುದುಂಟು. ಕೆಲವೊಮ್ಮೆ ಗುರು ದರ್ಶನಕ್ಕೆ ಹೋಗಬೇಕೆಂದು ಮನಸ್ಸು ಮಾಡಿದರೂ ಹಲವಾರು ಅಡ್ಡಿಗಳನ್ನೊಡ್ಡಿ ನಾವಲ್ಲಿಗೆ ಹೋಗಲಾಗದಂತೆಯೂ ನಾಟಕವಾಡುವ ಗುರುಗಳೂ ಇದ್ದಾರೆ. ಹೊಳಲೂರಿನ ಒಬ್ಬ ಮಹಾಮಹಿಮರು ಯಾವಾಗಲೂ ಒಂದು ಕಂಬಳಿ ಹಾಸಿ, ತಲೆಗೆ ಪೇಟವಿಟ್ಟುಕೊಂಡು ಸಾಮಾನ್ಯ ದಿರಿಸಿನಲ್ಲಿರುತ್ತಾ ಒಂದು ಕಲ್ಲು ಹಾಸಿನ ಮೇಲೆ ಕಂಬಳಿಯನ್ನಿಟ್ಟು ತಲೆಕೊಟ್ಟು ಮಲಗಿರುತ್ತಿದ್ದರು. ಯಾರಾದರೂ ಅರೆಮನಸ್ಸಿನಿಂದ ಒಂದೋ, ಇದೇನು ಕುರುಬರ ವೇಷದಲ್ಲಿರುವ ಇವರೂ ಗುರುವಾ? ಎಂದೇನಾದರೂ ಚಿಂತಿಸಿಕೊಂಡರೆ, ಕೂಡಲೇ ಮಲಗಿದ್ದಲ್ಲಿಂದಲೇ "ಯಾಕಪ್ಪಾ ತಮ್ಮಾ, ಅಷ್ಟು ದೂರದಿಂದ ಬಂದೆ, ಏನೈತೆ ಈ ಕುರುಬಣ್ಣನ ತಾವ, ಯಾರ ಯಾರದೋ ಮಾತು ಕೇಳಿ ಬಂದ್ಯಲ್ಲ ಏನಿಲ್ಲ ಇಲ್ಲಿ ಹೋಗಪ್ಪ" ಎಂದು ಬಿಡುತ್ತಿದ್ದರು. ಬಂದವರು ಹೋದರೆ... ಮುಗಿಯಿತು. ಗಟ್ಟಿ ಮನಸ್ಸಿನಿಂದ ಅಲ್ಲೇ ಪಟ್ಟು ಹಿಡಿದು ಪಾದ ಹಿಡಿದರೆ ಭವದ ಪಾರು ಕಾಣುತ್ತಿದ್ದರು. ಮಹಾತ್ಮರ ರೀತಿಯೇ ವಿಚಿತ್ರ.
ಬೆಂಗಳೂರಿನ ಪ್ರಸಾದರೂ ಸಹಾ ಇಂತಹ ಒಂದು ಪೇಚಿನ ಪ್ರಸಂಗಕ್ಕೆ ಗುರುನಾಥರ ಸಮ್ಮುಖದಲ್ಲಿ ಸಿಕ್ಕಿಹಾಕಿಕೊಂಡ ಪ್ರಹಸನವೇ ಇಂದಿನ ನಿತ್ಯ ಸತ್ಸಂಗ. ಬನ್ನಿ ಅವರ ಅನುಭವಗಳನ್ನು ಕೇಳುತ್ತಾ ಗುರುನಾಥರ ಸ್ಮರಣೆ ಮಾಡುತ್ತ ಕೆಲ ಕ್ಷಣಗಳನ್ನು ಸಾರ್ಥಕ ಮಾಡಿಕೊಳ್ಳೋಣ.
"ದೇವರು ದಿಂಡರು, ಪೂಜೆ-ಪುನಸ್ಕಾರಗಳಲ್ಲಿ ನನಗೆ ಮೊದಲಿನಿಂದಲೂ ತಂದೆ ತಾಯಿಗಳ ಆಶೀರ್ವಾದ ಭಕ್ತಿ ಇದ್ದಿತು. ಸ್ನೇಹಿತರೊಬ್ಬರಿಂದ ಗುರುನಾಥರ ಬಗ್ಗೆ ಆಗಾಗ್ಗೆ ಕೇಳುತ್ತಿದ್ದೆ. ಸಾಧು ಸನ್ಯಾಸಿಗಳ ಸಹವಾಸದ ಅರಿವು ನನಗೆ ಇರಲಿಲ್ಲ. ನಮ್ಮ ಮನೆಯವರಿಗೋ ಗುರುನಾಥರ ವಿಚಾರದ ಬಗ್ಗೆ ತುಂಬಾ ಶ್ರದ್ಧೆ ಇದ್ದಿತು. ಅಂತೂ ಗುರುನಾಥರ ದರ್ಶನದ ಅಪೂರ್ವ ಕಾಲ ಸನ್ನಿಹಿತವಾಗಿರಬೇಕು. ನಾವಂದು ಸಖರಾಯಪಟ್ಟಣಕ್ಕೆ ಹೋದೆವು. 'ಅವರಿರುತ್ತಾರೋ ಇಲ್ಲವೋ, ಅವರ ದರ್ಶನವಾದರೂ ಆಗಬಹುದು, ಆಗದಿದ್ದರೂ ಆಶ್ಚರ್ಯವಿಲ್ಲ' ಎಂಬೆಲ್ಲಾ ಕಿಂವದಂತಿಗಳು ಅನೇಕರಿಂದ ಬಂದಿತ್ತು. ಆದರೆ ಅಂದು ಗುರುನಾಥರಿದ್ದರು. ಮುಗುಳ್ನಗೆಯ ಮಂದಹಾಸದ ಗುರುನಾಥರ ಹಸನ್ಮುಖದ ಸ್ವಾಗತವೇ ನಮಗೆ ದೊರೆಯಿತು. ಮೊದಲೆಂದೂ ಕಂಡಿರದ ಗುರುನಾಥರನ್ನು ಕಂಡಾಗ ಒಂದು ರೀತಿಯ ಭಕ್ತಿ ಭಾವವೇ ಇರಬೇಕು ನನ್ನಲ್ಲಿ ಮೂಡತೊಡಗಿತ್ತು. ಎಲ್ಲಿಂದ ಬಂದಿರಿ? ಯಾರು ಕಳಿಸಿದರು, ಯಾವ ಊರು, ಏತಕ್ಕೆ ಬಂದಿರಿ' ಎಂಬೆಲ್ಲಾ ಪ್ರಶ್ನೆಗಳ ನಂತರ ಅಲ್ಲಿ ಕುಳಿತ ಇತರ ಭಕ್ತ ವೃಂದದ ಕ್ಷೇಮ ಸಮಾಚಾರವನ್ನೂ ಅವರು ವಿಚಾರಿಸಕೊಳ್ಳತೊಡಗಿದರು. ಮುಂದೆ ಕೆಲ ಸಮಯದಲ್ಲಿ ನನ್ನ ಕಡೆ ತಿರುಗಿ 'ಏನು ಕೆಲಸ ಮಾಡುತ್ತಿದ್ದೀರಿ? ಎಷ್ಟು ಸಂಬಳ ಬರುತ್ತೆ?" ಎಂದು ಪ್ರಶ್ನಿಸಿದಾಗ ಮೂಢನಾದ ನಾನು ಕಳವಳಗೊಂಡೆ. ಎಲ್ಲ ತೊರೆದ ಗುರುಗಳಿಗೂ ದುಡ್ಡು ಸಂಬಳದ ವ್ಯಾಮೋಹವೇ ಎಂದು ನನ್ನ ಒಳ ಮನ ಚಿಂತಿಸುತ್ತಿರುವಲ್ಲಿ ಮತ್ತೊಂದು ಪ್ರಶ್ನೆಯನ್ನೆಸೆದರು ಗುರುನಾಥರು. 'ನಿಮ್ಮ ಪರ್ಸಿನಲ್ಲಿ ಎಷ್ಟು ಹಣವಿದೆ?' ಈಗಂತೂ ನನ್ನ ಹೊಯ್ದಾಡುತ್ತಿದ್ದ ಮನಸ್ಸು ಮತ್ತಷ್ಟು ಜಾಳು ಜಾಳಾಯಿತು. ಗುರುಗಳಿಗೆ ನನ್ನ ಬಳಿ ಇರುವ ಹಣದ ಮೇಲೆ ಮನವಿದೆಯೇ ಎಂದು ಚಿಂತಿಸಿದೆ. 'ಆತುರಗಾರನಿಗೆ ಬುದ್ಧಿ ಮಟ್ಟ' ಎಂಬ ಗಾದೆಯೊಂದಿದೆ. ಕೇವಲ ಲೌಕಿಕರಾಗಿ ಬೆಳೆದ ನಮಗೆ ಗುರುಗಳ ಸನ್ಯಾಸಿಗಳ ಸಹವಾಸದ ಪರೀಕ್ಷೆಯ ಅರಿವಿರದ ನಾನು ಅತಿ ಕುಬ್ಜನಾಗಿ ಚಿಂತಿಸಿದ್ದೆ. ಬಹಳ ಸಣ್ಣ ಮನಸ್ಸಿನವನಾಗಿಬಿಟ್ಟಿದ್ದೆ. ಮುಂದೆ ಗುರುನಾಥರ ಈ ಪ್ರಶ್ನೆಗಳೆಲ್ಲಾ... ನಾವು ಏಕಾಏಕಿಯಾಗಿ ಬಂದ ನನ್ನ ಜೇಬಿನಲ್ಲಿ ಹಣವಿಲ್ಲದಿದ್ದರೆ ತಮ್ಮ ಬಳಿ ಇದ್ದ ಹಣವನ್ನು ನೀಡಿ ಸಹಕರಿಸಲಿಕ್ಕಾಗಿ ಪ್ರಶ್ನಿಸಿದ್ದೆಂಬುದು ಅರಿವಾದಾಗ ನಾನು ಬಹಳ ನೊಂದುಕೊಂಡೆ. ಗುರುಕಾರುಣ್ಯದ ಅರಿವಿರದೇ ತಪ್ಪು ಮಾಡಿದ ನಾನು ಮನದಲ್ಲೇ 'ಗುರುನಾಥ ನನ್ನ ಸರ್ವ ಅಪರಾಧವನ್ನೂ ಮನ್ನಿಸಪ್ಪ' ಎಂದು ಅದೆಷ್ಟು ಸಲ ಬೇಡಿದ್ದೆ. ಕರುಣಾಮಯಿಯಾದ ಗುರುನಾಥರು ನನ್ನ ಮನ್ನಿಸಿದ್ದಾರೆಂಬುದು ನನ್ನ ಭಾವನೆ. ಮುಂದೆಯೂ ಅನೇಕ ಸಾರಿ ನನ್ನನ್ನು ಬರಮಾಡಿಕೊಂಡು, ಒಂದು ಪರೀಕ್ಷೆಯಲ್ಲೇ ತೇರ್ಗಡೆಯಾಗಿದ್ದೀಯೆ ಎಂಬಂತೆ, ಯಾವಾಗಲೂ ನಗು ಮುಖದಿಂದಲೇ ಸ್ವಾಗತಿಸಿ, ಹರಸಿ, ಉಪದೇಶಿಸಿ ಕಲಿಸುತ್ತಿದ್ದುದೇ ಸಾಕ್ಷಿ. ಮುಂದೆ ನನ್ನ ಶ್ರೀಮತಿಯ ಕಾಲು ನೋವಿನ ಮಾತು ಬಂದಾಗ, ದೇವರ ಸೇವೆ, ಗುರುಸೇವೆಗಳನ್ನು ಮಾಡಿ ನಮ್ಮ ಪೂರ್ವಾರ್ಜಿತ ಕರ್ಮಗಳನ್ನು ತೊಳೆದುಕೊಳ್ಳಬೇಕೆಂದು ಹೇಳಿ... ತಮ್ಮ ಪದಚರಣದಲ್ಲಿ ಆಶ್ರಯವಿತ್ತರು. ಪಾದ ಸೇವೆಗೆ ಅವಕಾಶವಿತ್ತರು. ನಮ್ಮ ಮನೆಯವರ ಕಾಲಿನ ನೋವು ಮರೆಯಾಯಿತು. ಗುರುನಾಥರೊಂದಿಗೆ ನಿರಂತರ ಕ್ಷಮೆ ಬೇಡುತ್ತಿದ್ದೇನೆ. ನಮ್ಮ ಜೀವನದ ಗತಿಯನ್ನೇ ತಿದ್ದಿ ನಿತ್ಯ ಚೇತನದಾಯಕರಾಗಿ, ನಮ್ಮ ಇಂದಿನ ಸಮಸ್ಯೆಗಳೇನು ಬಂದರೂ, ಯಾವುದೋ ರೀತಿಯಲ್ಲಿ ಪರಿಹರಿಸುತ್ತಾ, ನಮ್ಮನ್ನು ಸಲಹುತ್ತಿರುವ ಗುರುನಾಥರಿಗೆ ಅದೆಷ್ಟು ವಂದಿಸಿದರೂ ಸಾಲದು" ಎನ್ನುವ ಬೆಂಗಳೂರಿನ ಪ್ರಸಾದ್ ಅವರು ಗುರುಚರಿತೆ ಗುರುವಿನ ಬಳಿ ಸಾರುವ ಭಕ್ತರಿಗೆಲ್ಲಾ ಒಂದು ಮಾರ್ಗ ದೀಪವಾದೀತು....
ಸಹಸ್ರಾಕ್ಷರೂ, ಸಹಸ್ರಪಾದರೂ, ಸಹಸ್ರಮುಖರೂ ಆದ ಗುರುನಾಥರು, ಅವರ ಭಕ್ತಕೋಟಿಗೆ ಅವರು ನೀಡಿದ ಪಾಠಗಳಿಗೆ, ಕರುಣಿಸಿದ ಕೃಪೆಗೆ ಅಂತ್ಯವಿಲ್ಲ. ನಾಳೆಯೂ ಬನ್ನಿ ನಿತ್ಯ ಸತ್ಸಂಗಾಭಿಮಾನಿ ಗುರು ಭಕ್ತರೇ, ಮತ್ಯಾವ ಅನರ್ಘ್ಯ ಮಣಿ ದೊರೆಯುವುದೋ ಕಾಯೋಣ. ಅನುಭವಿಸೋಣ. ತಪ್ಪದೇ ಬರುವಿರಲ್ಲಾ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment