ಶ್ರೀ ಗುರುಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 41
ಇಷ್ಟಕಾರ್ಯವ ಕೊಡುವ ಕಾಶೀ । ಪಟ್ಟಣದ ಯಾತ್ರೆಯನು ಪೇಳಿದ ।
ಶ್ರೇಷ್ಠ ತೀರ್ಥಾಖ್ಯಾನ ನಲವತ್ತೊಂದರಲಿ ತಿಳಿಯೆ || 41 ||
ಶ್ರೀ ಗುರು ನೃಸಿಂಹ ಸರಸ್ವತಿಗಳು ಗಾಣಗಾಪುರದಲ್ಲಿರಲು ಅನೇಕ ಜನ ಭಕ್ತರು ಬರುತ್ತಾರೆ. ಅವರ ಕೀರ್ತಿ ಕೇಳಿದ ಸಾಯಂದೇವರೂ ಗುರುದರ್ಶನಕ್ಕೆ ಬರುತ್ತಾರೆ. ಅತ್ಯಂತ ಭಕ್ತಿಯಿಂದ ಗುರುವಿಗೆ ನಮಿಸಿ, ಗುರುಸೇವೆಯಲ್ಲಿ ನಿರತರಾಗುತ್ತಾರೆ. ಆ ದಿನ ಗುರುಗಳು ಸಾಯಂದೇವನ ಜೊತೆಗೆ ಸಂಗಮಕ್ಕೆ ಬಂದು, ಅಲ್ಲಿಯೇ ಸಂಜೆಯಾಗಿ ಶೀತಗಾಳಿ ಬೀಸತೊಡಗಿದಾಗ ಗುರುಗಳು ಸಾಯಂದೇವನನ್ನು ಬೆಂಕಿ ತರಲು ಗಾಣಗಾಪುರಕ್ಕೆ ಕಳಿಸುತ್ತಾರೆ. ಮಳೆ, ಚಳಿಯಲ್ಲಿಯೇ ಗಾಣಗಾಪುರಕ್ಕೆ ಕತ್ತಲಲ್ಲಿ ಬರುವಾಗ ಒಮ್ಮೆ ಹಿಂತಿರುಗಿ ನೋಡಿದಾಗ ಎರಡು ಸರ್ಪಗಳು ಅವರನ್ನು ಬೆನ್ನಟ್ಟಿ ಬರುವುದು ಕಂಡು ಭಯಭೀತನಾಗಿ, ಗುರುಧ್ಯಾನ ಮಾಡುತ್ತಾ ಸಂಗಮಕ್ಕೆ ಬರಲು ದೂರದಲ್ಲಿ ದಿವ್ಯಪ್ರಕಾಶನದಲ್ಲಿ ಗುರುಗಳು ಕಾಣುತ್ತಾರೆ. "ನಿನ್ನ ರಕ್ಷಣೆಗಾಗಿ ನಾನು ಅವುಗಳನ್ನು ಕಳಿಸಿದ್ದೆ, ಬೆದರಿದೆಯಾ" ಎಂದು ಕರುಣೆಯ ನುಡಿಯಾಡುತ್ತಾರೆ."ಗುರುಸೇವೆ ಎಂಬುದು ಬಹು ಕಠಿಣ, ಸಾಮಾನ್ಯರಿಂದ ಅದು ಆಗದೆಂದು, ತಿಳಿಸುತ್ತಾ ನಿನ್ನ ದೃಢ ಭಕ್ತಿಗೆ ಮೆಚ್ಚಿದೆನು" ಎಂದು ಹೇಳುತ್ತಾ, ಪವಿತ್ರವಾದ ಕಾಶೀಯಾತ್ರೆ ಹೇಗೆ ಮಾಡಬೇಕು ಎಂಬುದನ್ನೂ, ಅದರ ಅಪಾರವಾದ ಫಲವನ್ನು ತಿಳಿಸುವ ಗುರುಗಳು, ಇದು ಎಲ್ಲವನ್ನೂ ಶುದ್ಧ ಮನಸ್ಸಿನಿಂದ ಕೇಳುವವರಿಗೂ, ಕಾಶೀಯಾತ್ರಾ ಫಲ ದೊರೆಯುವುದೆಂದು ಹೇಳುವುದೇ ನಲವತ್ತೊಂದನೆಯ ಅಧ್ಯಾಯ.
ಮುಂದುವರಿಯುವುದು...
No comments:
Post a Comment