ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 19
ಖಂಡಿತವಾದಿ ಲೋಕೋದ್ಧಾರಿ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರ ಲೀಲಾವಿನೋದಗಳನ್ನು ಹಾಡಿಹೊಗಳಲು, ಅದೆಷ್ಟು ಜನ ಶಿಷ್ಯರು, ಬಂಧುಗಳಿದ್ದಾರೋ ಲೆಕ್ಕವೇ ಇಲ್ಲ. ಮದುವೆ ಮನೆ ಇರಲಿ, ಯಾವುದೋ ಸಾರ್ವಜನಿಕ ಸಮಾರಂಭವಿರಲಿ, ಅಥವಾ ಬಸ್ಸು ರೈಲುಗಳಲ್ಲಿ ಪ್ರಯಾಣಿಸುತ್ತಿರಲಿ - ಅದೆಲ್ಲಿಂದಲೋ ಪರಿಚಿತ -ಅಪರಿಚಿತರೆಲ್ಲಾ ಗುರುನಾಥರ ಲೀಲೆಯಲ್ಲಿ ಭಾಗಿಗಳಾಗಿ ಹೃದಯ ತುಂಬಿ ತಮ್ಮ ಅನುಭವಗಳನ್ನು ಈ ಸತ್ಸಂಗಕ್ಕೆ ನೀಡುತ್ತಿರುವುದೂ ಗುರುನಾಥರ ಒಂದು ಲೀಲೆಯೇ. ಮಾಳೇನಹಳ್ಳಿಯ ಶ್ರೀನಿವಾಸ ಅವರು ಇದೀಗ ಬೆಂಗಳೂರಿನಲಿದ್ದಾರೆ. ಶಂಕರಲಿಂಗ ಭಗವಾನರ ಸಂಬಂಧಿಗಳು, ಅನನ್ಯಭಕ್ತರು. ಎಲ್ಲರಲ್ಲಿ ಶಂಕರಲಿಂಗರನ್ನೇ ಕಾಣುವ ಈ ಭಾವುಕರು, ಶಿವಮೊಗ್ಗ ಗುರು ಭಕ್ತರೊಬ್ಬರ ವೈಕುಂಠಕ್ಕೆ ಬಂದಾಗ, ಅಲ್ಲಿಯೇ ಅದು ಹೇಗೋ ಒಂದು ಸತ್ಸಂಗವೇರ್ಪಟ್ಟಿತ್ತು. ಪರಿಚಯವಿರದ ಅವರು ನನ್ನೊಂದಿಗಾಡಿದ ಗುರುಕಥಾಮೃತ ನೋಡಿ.... ಇಗೋ ಇಲ್ಲಿದೆ.
“ನಮಗೆ ಶಂಕರಲಿಂಗನೇ ಸರ್ವಸ್ವ.... ಆತನ ಪ್ರತಿರೂಪವೇ ಗುರುನಾಥರು ಎಂಬ ಭಾವನೆ ನನ್ನದು. ಎಲ್ಲರೂ ಗುರುನಾಥರ ಬಗ್ಗೆ ಹೇಳುವುದು ಕೇಳಿದ್ದೆ. ನಾನೂ ನಮ್ಮ ತಾಯಿ ಇಬ್ಬರು ಗುರುನಾಥರನ್ನು ನೋಡಲು ಅನೇಕ ಸಾರಿ ಪ್ರಯತ್ನಿಸಿದ್ದರೂ ಸಾದ್ಯವಾಗಿರಲಿಲ್ಲ. ಒಂದು ಕ್ಷಣ ಬೇಜಾರಾದರೂ ನಮ್ಮ ಶಂಕರಲಿಂಗ ಬೇರೆ ಅಲ್ಲ ಗುರುನಾಥರು ಬೇರೆ ಅಲ್ಲ. ಅವನ ಸೇವೆ ಮಾಡಿದರೆ ಇವರೂ ದರ್ಶನ ಕೊಟ್ಟೇ ಕೊಡುತ್ತಾರೆ ಎಂಬ ದೃಡ ವಿಶ್ವಾಸ ನನ್ನಲ್ಲಿತ್ತು.
ನಾವಿರುವುದು ಬೆಂಗಳೂರಿನ ಜೆ.ಪಿ.ನಗರದಲ್ಲಿ. ಒಮ್ಮೆ ಈ ಬ್ಲಾಕ್ ಗೆ ಗುರುನಾಥರು ಬಂದ್ದಾರೆಂದು ತಿಳಿದು ಓಡೋಡಿ ಹೋದೆ. ಹೋಗುವಷ್ಟರಲ್ಲಿ ಅವರು ಅಲ್ಲಿಂದ ತೆರೆಳಿದ್ದರು. ಇದೇನು ಮಹಾ, ಪಕ್ಕದ ಮನೆಗೆ ಅವರು ಬಂದಿರುತ್ತಾರೆ, ನಮಗೆ ತಿಳಿಯುವಷ್ಟರಲ್ಲಿ ಅವರಲ್ಲಿ ಕಾಣಸಿಗುವುದಿಲ್ಲ - ಏಕೆಂದರೆ ನಮ್ಮ ಭಂಗ ಹರಿದಿರಬೇಕಲ್ಲ - ಒಮ್ಮೆ ವೆಂಕಟನಾರಾಯಣ್ ಅವರು ಎಲ್ಲಾ ಗುರುಗಳ ಪಾದುಕೆಯನ್ನು ಒಂದೆಡೆ ಸೇರಿಸಿ ಪಾದುಕಾ ಮಂದಿರವಾಗುವ ಮೊದಲು ಒಂದು ಕಾರ್ಯಕ್ರಮ ಮಾಡಿದರು. ಎರಡು ದಿನ ಬಂದಾಯ್ತು. ‘ನಾಳೆಯೂ ಬನ್ನಿ ಗುರುಪಾದುಕೆಗಳನ್ನು ಎಲ್ಲರ ತಲೆ ಮೇಲಿಡುವ ಕಾರ‍್ಯಕ್ರಮವಿದೆ’, ಎಂದಾಗ ನಾವು ಬಂದಿದ್ದೆವು. ಗುರುನಾಥರು ಮದ್ಯಾಹ್ನ ಬರುತ್ತಾರೆಂಬ ವಿಚಾರ ಅದಾರೋ ಹೇಳಿದರು. ಗುರುನಾಥರ ಅತ್ಯಂತ ಸನಿಹ ಹೋಗಿದ್ದರೂ ಅವರ ದರ್ಶನವಾಗದ ಅನೇಕ ಸಂದರ್ಭಗಳು ನನಗೆ ಆಗಿತ್ತು - ನನ್ನದೂ ಒಂದು ಮೊಂಡು ಧೈರ್ಯ, ಅಪ್ಪ ಶಂಕರಲಿಂಗನನ್ನು ನಂಬಿದ್ದೇನೆ. ಅವನು ಆಜ್ಞೆ ಮಾಡಿದರೆ ಯಾವ ಕ್ಷಣಕ್ಕೂ ಗುರನಾಥರ ದರ್ಶನ ಮಾಡಿಸಿಯೇ ಮಾಡಿಸುತ್ತಾನೆ. ಹತ್ತಿರ ಹೋದರೂ ದರ್ಶನ ಮಾಡುವ ಯೋಗ್ಯತೆ ನಮಗಿಲ್ಲದಿದ್ದರೆ ಏನು ತಾನೆ ಮಾಡಲು ಸಾದ್ಯ - ಎಂದು ಸುಮ್ಮನಾಗಿಬಿಟ್ಟಿದ್ದೆ. ಏಕೆಂದರೆ ಮುನುಷ್ಯ ಪ್ರಯತ್ನಗಳೆಲ್ಲಾ ದೈವನಿಯಮದ ಮುಂದೆ ವ್ಯರ್ಥವಾಗಿ ಹೋಗಿ ಬಿಡುತ್ತವೆ. ಅವನ ಒಲುಮೆ ಇಂದ ಮಾತ್ರಾ ಏನೂ ಆದೀತು.
“ಇನ್ನೇನು ಮಧ್ಯಾಹ್ನದ ಪ್ರಸಾದವಾಯಿತು, ಹೊರಡಬೇಕು, ಮನೆಗೆ ಎಂದು ತಯಾರಾದ ನಮಗೆ, ಶ್ರೀಯುತ ಬಾಲಗಣಪತಿಯವರು ಹೇಳಿದಂತೆ, ನಾವು ಗುರುನಾಥರು ಬರುವರೆಂದು ತಿಳಿದು ನೋಡಿಯೇ ಹೋಗೋಣವೆಂದು ಅಲ್ಲಿಯೇ ಉಳಿದೇ ಬಿಟ್ಟೆವು. ಮಧ್ಯಾಹ್ನ ಎರಡು ಗಂಟೆಗೆ ಬರುವವರು ಸಂಜೆ ಆರಾಯ್ತು. ಕಾಯುವಿಕೆಗಿಂತ ತಪ ಒಂದಿಲ್ಲ ಎನ್ನುವಂತೆ ನಾವೂ ನಿಂತೇ ಬಿಟ್ಟೆವು. ಅಷ್ಟರಲ್ಲಿ ಜನಜಂಗುಳಿ ತುಂಬೇ ಬಿಟ್ಟಿತು. ಕೆಲವೇ ಜನರಿದ್ದ ನಾವು, ಸಂಜೆ ಹೊತ್ತಿಗೆ ಸಿಕ್ಕಾಪಟ್ಟೆ ಜನ ಸೇರಿದ್ದರು. ಅಂತೂ ಗುರುನಾಥರ ಆಗಮನವಾಯ್ತು. ಒಂದು ಟವಲ್ಲನ್ನು ಸುತ್ತಿ ಕೊಂಡಿದ್ದ ಸರಳಾತಿಸರಳ ಉಡುಗೆಯ ಗುರುನಾಥರನ್ನು ಕಂಡಾಗ ನನ್ನ ಮನ ಸಂತಸಗೊಂಡಿತು. ಅಂತೂ ನಮ್ಮಪ್ಪ ಇವತ್ತು ದರ್ಶನ ಕೊಟ್ಟನಲ್ಲಾ ಎಂದು ನಮಿಸಿದೆವು. ಗುರುನಾಥರು ಸೀದಾ ಬಂದವರೇ ಪಾದುಕೆಗಳ ಬಳಿ ಬಂದು ದೂರವೇ ನಿಂತರು. ಒಬ್ಬರಿಗಿಂತ ಒಬ್ಬ ಘನ ಪುರೋಹಿತರುಗಳಲ್ಲಿ ನಿಂತಿದ್ದರು. ‘ಹತ್ತಿರಬನ್ನಿ’, ಎಂದು ಗುರುನಾಥರನ್ನು ಕರೆದಾಗ, ಹತ್ತಿರ ಬರದ ಅವರು ನಾನು ಕಾರಿನಲ್ಲಿ ಬಂದಿದ್ದೀನಪ್ಪಾ, ಮಡಿ ಇಲ್ಲ. ನಾನು ಕಾರಿನಲ್ಲಿ ಬಂದಿದೀನಿ, ಸ್ನಾನ ಮಾಡಿಲ್ಲ..... ನೋಡಿ ಮೈ ಎಲ್ಲಾ ಎಷ್ಟು ಗಲೀಜಾಗಿದೆ.... ನೀವು ಮಾಡಿ ಪೂಜೇನ..... ನಾನಿಲ್ಲೇ ದೂರ ಇರ‍್ತೀನಿ”, ಎಂದು ಬಿಟ್ಟರು ಗುರುನಾಥರು ಮಾರ್ಮಿಕವಾಗಿ. ಗುರುವಿಗೆಂತ ಮಡಿ ಮೈಲಿಗೆ? ಮಡಿ ಮೈಲಿಗೆಯ ಸೊಂಕು ಅಂಟಿದ ನಮ್ಮ ಮನದ ವಿಚಾರವನ್ನೇ ಗುರುನಾಥರು ಆಡಿದ್ದರು. ಯಾರು ಯಾರಿಗೆ ಚಾಟಿ ಏಟು ತಗುಲಬೇಕೋ ಅವರಿಗೆಲ್ಲಾ ತಗುಲಿತ್ತು. ಅಲ್ಲಿ ನೆರೆದವರೆಲ್ಲಾ ಗುರುನಾಥರ ಮಾತು ಕೇಳಿ ಬೆಚ್ಚಿ ಬಿದ್ದರು.”
ಇದೇ ಸಂದರ್ಭದ ಆಸುಪಾಸಿನಲ್ಲಿ ಶೃಂಗೇರಿಯ ಸ್ವಾಮಿಗಳ ಅರವತ್ತು ವರ್ಷದ ಶಾಂತಿ ನಡೆದಿತ್ತು. ಅಲ್ಲಿಗೆ ಹೋಗಿ ಬಂದ ಅನೇಕ ಪುರೋಹಿತರುಗಳೆಲ್ಲಾ ಕೈ ತುಂಬ ದಕ್ಷಿಣೆ ತೆಗೆದುಕೊಂಡು ಬಂದಿದ್ದರು. ಅದೇನನಿಸಿತೋ ಗುರುನಾಥರಿಗೆ ಶೃಂಗೇರಿಗೆ ಹೋಗಿ ನೀವು ದಕ್ಷಿಣೆ ತೆಗೆದುಕೊಳ್ಳಬೇಕಾ. ಅವರ ಆಶೀರ‍್ವಾದದಿಂದ ಬದುಕಿರೋದು ನೀವು. ಅಲ್ಲಿಗೆ ಹೋಗಿ ಪುರೋಹಿತ್ಯ ಮಾಡಿ ದುಡ್ಡು ತಗೋಬೇಕಾ? ದಕ್ಷಿಣೆ ತೆಗೆದುಕೊಳ್ಳೋ ಜಾಗ ಬೇರೆ, ಸೇವೆ ಮಾಡುವ ಸಮಯ ಸಿಕ್ಕಾಗಲೂ ದುಡ್ಡು ತಗೋಬೇಕೇ? ಎಂದು ನೇರವಾಗಿ ಅಂದುಬಿಟ್ಟರು. ಖಂಡಿತವಾದಿಯಾಗಿ ಲೋಕ ವಿರೋಧಕ್ಕೆ ಹೆದರದ, ನೇರ ನುಡಿಯ ಗುರುನಾಥರ ದರ್ಶನ, ನಾವು ಪುರೋಹಿತರು, ಎಲ್ಲೆಲ್ಲಿ ಎಡವುತ್ತೇವೆಂಬುದರ ಪಾಠ ನಮಗಂತೂ ಆಗಿತ್ತು. ದರ್ಶನ ಬರೀ ದರ್ಶನ ಮಾತ್ರವಲ್ಲ ಒಂದು ಸುಬೋಧೆ ಇಂದ ನೀಡಿದ ಗುರುನಾಥರನ್ನು ಎಷ್ಟು ವಂದಿಸಿದರೂ ಸಾಲದು” ಎನ್ನುತ್ತಾರೆ ಮಾಳೇನಹಳ್ಳಿಯ ಆ ಗುರುಭಕ್ತರು.
ಪ್ರಿಯ ನಿತ್ಯಸತ್ಸಂಗಾಭಿಮಾನಿ ಗುರುಭಕ್ತರೆ, ಇಂದಿಲ್ಲಿಗೆ ಒಂದು ಅಲ್ಪ ವಿರಾಮ ಹಾಕೋಣವೇ, ಮತ್ತೆ ನಾಳೆ ಇದೆಯಲ್ಲ ಬನ್ನಿ, ನಿತ್ಯ ಸತ್ಸಂಗ ನಮ್ಮ ಜೀವನ್ನಕ್ಕೆ ಬೆಳಕಾಗಲಿ, ಅಲ್ಲವೇ? ಗುರುನಾಥರ ಮಾತುಗಳು ಖಾರವಾದವು, ಕ್ಷಣ ಬೇಸರವೆನಿಸಿದರೂ ತಪ್ಪು ಗ್ರಹಿಕೆಗಳನ್ನು ತಿದ್ದುವ ಸೂಜಿ ಮದ್ದುಗಳಾಗಿದ್ದವು, ಅರಿತು-ನುರಿತು ಬಾಳಿದವರಿಗೆ ಸ್ವರ್ಗತುಲ್ಯ ಜೀವನ ನೀಡುವ ಅಮೃತ ಬಿಂದುಗಳೇ ಅಗಿದ್ದವು.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment