ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 3
ಇದಾವ ಜನುಮದ ಸಂಬಂಧ?
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರ ಭಕ್ತರುಗಳನ್ನು ಕಂಡಾಗಲೆಲ್ಲಾ ಅವರ ಮಾತುಗಳಲ್ಲಿ ಗುರುನಾಥರೇ ಕಂಡು ಬರುತ್ತಾರೆ, ಮೈದಳೆಯುತ್ತಾರೆ, ಅವರುಗಳ ಒಂದೊಂದು ಅನುಭವವೂ ಹೃದಯಂಗಮವಾಗಿರುತ್ತದೆ. ಪ್ರಪಂಚದ ದುಡ್ಡು, ಕಾಸು, ಆರೋಗ್ಯ, ಆನಂದಗಳಿಗೆ ಮೀರಿ ತಾವಾವಸ್ಥಿತಿಯಲ್ಲಿದ್ದರೂ ಗುರುನಾಥರ ಸ್ಮರಣೆ ಅವರನ್ನು ಆನಂದಸಾಗರದಲ್ಲಿರಿಸಿರುತ್ತದೆ ಎಂಬ ಸತ್ಯ ದರ್ಶನವೇ ಇಂದಿನ ನಿತ್ಯ ಸತ್ಸಂಗದ ವಸ್ತು..
ಬೆಂಗಳೂರಿನ ರಾಜಾಜಿನಗರದ ಒಂದು ಮನೆಗೆ, ಶ್ರೀಮತಿ ಹೇಮಲತಾ ಎನ್ನುವ ಗುರುಬಂಧುಗಳು “ನೀವೊಬ್ಬ ಗುರುನಾಥರ ಭಕ್ತನನ್ನು ನೋಡಲೇಬೇಕು” ಎಂದು ಹೇಳುತ್ತಾ ನನ್ನನ್ನು ಕರೆದೊಯ್ದರು. ಎಲ್ಲ ಮನೆಗಳಂತೆಯೇ ಆ ಮನೆಯೂ ಇದ್ದರೂ ಅದೇನು ವಿಶೇಷ ಸ್ಪಂದನದ ಅರಿವಾಯ್ತಲ್ಲಿ. ಮನೆಯ ಒಳಗೆ ಹೋದರೆ ಕೆಲವು ವರ್ಷಗಳಿಂದ ಹಾಸಿಗೆಯಲ್ಲಿ ಮಲಗಿರುವ ಮನೆಯೊಡೆಯರು. ವೈದ್ಯಲೋಕಕ್ಕೆ ಸವಾಲು ಎಸೆಯುವಂತಹ ಖಾಯಿಲೆ ಇದ್ದರೂ ಅವರು ಮಾತ್ರ ನಿಶ್ಚಿಂತರು, ಮಂದಸ್ಮಿತರು, ನಿರಂತರ ತಮ್ಮ ಪಕ್ಕದಲ್ಲಿರುವ ಗುರುನಾಥರ ಚಿತ್ರವನ್ನು ನೋಡುತ್ತಾ ಭವದ ರೋಗಗಳನ್ನು ಮರೆತು ಭವರೋಗ ವೈದ್ಯರಾದ ಗುರುನಾಥರನ್ನು ಸ್ಮರಿಸುತ್ತಾ ಆನಂದದಲ್ಲಿದ್ದು, ದುಃಖಿಗಳಾಗಿ ಸಮಸ್ಯೆಗಳ ಬುಟ್ಟಿ ಹೊತ್ತು ಬರುವ ಗುರುಭಕ್ತರ ಸಮಸ್ಯೆಗಳ ಹೊರೆ ಇಳಿಸಿ ಆನಂದದ ಸವಿ ಫಲವನ್ನು ನೀಡುತ್ತಿರುವುದನ್ನು ನೋಡಿದರೆ ಎಂತಹವರಿಗೂ ವಿಸ್ಮಯವಾಗದಿರದು.
ಅವರಗೀ ಶಕ್ತಿ ಬಂದುದು ಹೇಗೆ? ಮನೆಯೊಡೆಯನೇ ಮಲಗಿದ್ದರೂ ಮನೆಗೆ ಬಂದವರು, ಬಳಗದವರು, ಎಲ್ಲರ ರಕ್ಷಣೆ ಮಾಡುವವರಾರು? ಎಂಬ ಪ್ರಶ್ನೆಗೆ ಉತ್ತರ ‘ಆ ಸದ್ಗುರುನಾಥರಾದ ವೆಂಕಟಾಚಲರೇ’ ಎಂದರೆ ಹುಬ್ಬೇರಿಸಬೇಕಿಲ್ಲ.
ಆ ಮನೆಯೊಡೆಯ ಮದನ್ ಮೋಹನ್ ಎಂಬ ಗುರುಬಂಧುಗಳೂ ಹೀಗೆ ಹೇಳತೊಡಗಿದರು;
“ಸಾವಿರದೊಂಬೈನೂರಾ ತೊಂಬತ್ಮೂರನೆಯ ಇಸವಿ ನನ್ನ ಭಾವ ಮೈದುನನಿಂದ ಗುರುನಾಥರ ವಿಚಾರ ನನಗೆ ತಿಳಿಯಿತು. ಇವರನ್ನು ನಾನು ಒಂದು ಗುಡ್ಡದ ಕೆಳಗೆ ಮೊಟ್ಟ ಮೊದಲ ಬಾರಿಗೆ ಕಂಡಿದ್ದು. ನನ್ನ ಹೆಸರು ಅದು ಹೇಗೆ ತಿಳಿದಿತ್ತೋ, ನಾನು ಹೋಗುತ್ತಿದ್ದಂತೆಯೇ ಗುರುನಾಥರು ‘ಬಾರಪ್ಪ ಮದನ ಮೋಹನ್ ನಾನು ಎಷ್ಟು ದಿವಸದಿಂದ ನಿನಗಾಗಿ ಕಾಯಬೇಕಾಯ್ತಪ್ಪ? ನನ್ನ ಹೋದ ಜನ್ಮದ ಬಂಧು ಕಣಪ್ಪಾ ನೀನು. ನಾನು ಕಷ್ಟದಲ್ಲಿದ್ದಾಗ ನೀನು ೧೫ ದಿನ ಉಪವಾಸವಿದ್ದು ನನ್ನನ್ನು ಉಳಿಸಿಕೊಂಡಿದೀಯಪ್ಪ. ನೀನು ಆಗಾಗ್ಗೆ ಬರುತ್ತಿರಬೇಕು, ನೀನು ನನ್ನ ಜೊತೆಗಿರಬೇಕು’ ಎಂದು ಹೇಳಿ ನನ್ನ ಕಾಲಿಗೆ ನಮಸ್ಕರಿಸಿ ಬಿಟ್ಟರು. ನನಗೆ ಮುಜುಗರವಾಯ್ತು. ನಾನು ಅವರಿಗೆ ನಮಸ್ಕರಿಸಿ, ನನಗೆ ಹಿಂದಿನ ಜನ್ಮಗಳದ್ದೇನು ಅರಿವಿಲ್ಲ ಗುರುವೇ, ನಿನ್ನ ಕೃಪೆಬೇಕು, ನಿನ್ನಾಶೀರ್ವಾದ ಬೇಕು ಎಂದು ಬೇಡಿಕೊಂಡೆ.” ಒಂದು ಕ್ಷಣ ಸುಮ್ಮನಾದ ಆ ಗುರುಬಂದುಗಳು ಮತ್ತೆ ಮುಂದುವರೆಸಿದರು.
“ಆಮೇಲೆ ಫೋನ್ ಮಾಡಿ ಪದೇ ಪದೇ ನನ್ನನ್ನು ಕರೆಸಿಕೊಳ್ಳುತ್ತಿದ್ದರು, ನಾನು, ದೇವನೂರು ವೇಣುಗೋಪಾಲ್, ರಾಜಶೇಖರ್ ಇವರನ್ನೆಲ್ಲಾ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮನ್ನು ಬಾಣಾವರದ ವೇದಿಕೆಗೆ, ಅರಸೀಕೆರೆಗೆ, ಅರಸೀಕೆರೆಯ ಶ್ರೀಕಾಂತ್‌ರ ಮನೆಗೆ ಕರೆದೊಯ್ಯುತ್ತಿದ್ದರು, ಮುಂದೆ ಅರಸೀಕೆರೆಯ ನಂತರ ಇರುವ ಹಾರನಹಳ್ಳಿಯಲ್ಲಿರುವ ಆಶ್ರಮಕ್ಕೆ, ಬ್ರಹ್ಮ ಚೈತನ್ಯರ ಆಶ್ರಮಕ್ಕೆ ಕರೆದೊಯ್ಯುತ್ತಿದ್ದರು.”
ಮೊಟ್ಟಮೊದಲು ಗುರುನಾಥರನ್ನು ನೋಡಿದಾಗ ತಮಗೇನು ಅನಿಸಿತು ಎಂದು ಕೇಳಿದಾಗ ಅವರಂದದ್ದು “ಗುರುನಾಥರನ್ನು ಕಂಡ ಕೂಡಲೇ ಮೈ ಜುಮ್ಮೆಂದಿತು. ಯಾವುದೋ ಒಂದು ವಿಶೇಷ ಶಕ್ತಿಯ ಪ್ರಬಲ ಪ್ರಭಾವವನ್ನು ಕಂಡು ಭೀತಿಯಾದಂತಾಯ್ತು. ಆಗ ಗುರುನಾಥರು ‘ಹೆದರಬೇಡ ಕಣಯ್ಯಾ ನಾನು ನಿನ್ನ ಜೊತೆಗಿರ‍್ತೀನಿ ಭಯ ಪಡಬೇಡ, ನಿನ್ನ ರಕ್ಷಣೆಯ ಹೊಣೆ ನನ್ನದು’ ಎಂದು ಅಭಯ ಹಸ್ತ ನೀಡಿದರು. ಯಾವಾಗಲೂ ನಿನ್ನ ಪಕ್ಕದಲ್ಲೇ ಇರ‍್ತೀನಿ, ಸದಾ ನಿನ್ನ ಮನೆಗೆ ಪೋಟೋ ರೂಪದಲ್ಲಿ ಬರ‍್ತೀನಿ ಎಂದರು. ನಮ್ಮ ಮನೆಯಲ್ಲಿ ಒಂದು ಗೂಡಿದೆ. ಮೊದಲು ಆ ಜಾಗದಲ್ಲಿ ಗೊಂಬೆಗಳನ್ನಿಟ್ಟಿದ್ವಿ.... ‘ಈ ಜಾಗ ನನಗೆ ಬೇಕು ನನಗಿಲ್ಲಿ ಜಾಗ ಕೊಡಯ್ಯ ಅಂದರು’ ಅವತ್ತಿನಿಂದ ಅಲ್ಲಿ ಗುರುನಾಥರು ಪೋಟೊ ಹಾಕಿದಿವಿ. ಅಂದಿನಿಂದ ಇಂದಿನವರೆಗೆ ಅನೇಕ ಸಮಸ್ಯೆಗಳಿಗೆಲ್ಲಾ ಅವರೇ, ಆ ಪೋಟೊ ಮುಖಾಂತರ ಉತ್ತರ ಸೂಚಿಸುತ್ತಾರೆ, ನನಗೆ ಹೇಳುತ್ತಾರೆ. ಎಲ್ಲ ವಿಚಿತ್ರ ರೀತಿಯಲ್ಲಿ ನಡೆಯುತ್ತಿದೆ. ನನಗೆ ಮನೆ ಇರಲಿಲ್ಲ ಗುರುನಾಥರೇ ಮನೆ ಮಾಡಿಸಿದರು’ ಎಂದರು ಮದನ್‌ಮೋಹನ್.
“ಬೆಂಗಳೂರಿನಲ್ಲಿ ಮನೆ ಕಟ್ಟುವುದು ಸಾಮಾನ್ಯರಿಗೆ ಅಸಮಾನ್ಯ ಕೆಲಸ. ಆದರೆ ನಮ್ಮ ಮನೆಗೆ ಒಮ್ಮೆ ಗುರುನಾಥರು ಬಂದಾಗ ಅವರು ಗಮನಿಸಿದರು, ‘ಮನೆ ಕಟ್ಟಪ್ಪಾ’ ಎಂದರು, ‘ಕೈಯಲ್ಲಿ ದುಡ್ಡಿಲ್ಲವಲ್ಲಾ ಗುರುನಾಥರೇ, ನಾನು ಹೇಗೆ ಮೆನೆ ಕಟ್ಟಲಿ?’ ಎಂದಾಗ ಗುರುನಾಥರು ‘ಕೇಶವಮೂರ್ತಿ ಮನೆಯ ಹತ್ತಿರ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಹೋಮ ನಡೀತಿದೆ. ಅಲ್ಲಿಂದ ಕೇಳಿ ಐದು ಇಟ್ಟಿಗೆ ತೆಗೆದುಕೊಂಡು ಬಾ ಎಂದರು’ ಸಂಜೆಯೇ ಹೋಗಿ ಕೇಳಿದೆ ಹೋಮವಾಗಿತ್ತು, ಇಟ್ಟಿಗೆಗಳು ಬಿಸಿಯಾಗಿದ್ದವು, ‘ಬೆಳಿಗ್ಗೆ ಬನ್ನಿ ಇಟ್ಟಿಗೆ ಈಗ ಬಿಸಿ ಇದೆ. ಬೆಳಿಗ್ಗೆ ಕೊಡುತ್ತೇವೆ’ ಎಂದರವರು.
ಮಾರನೆಯ ದಿನ ಬೆಳಗ್ಗೆ ನಾನೇ ಚೀಲದಲ್ಲಿ ಇಟ್ಟಿಗೆ ಹೊತ್ತು ತಂದೆ. ಗುರುನಾಥರ ಕೃಪೆ ಆರು ತಿಂಗಳಲ್ಲಿ ಕಾಸಿಲ್ಲದ ನನ್ನ ಕೈಯಲ್ಲಿ ಗುರುನಾಥರು ಈ ಮನೆಯನ್ನು ಕಟ್ಟಿಸಿದರು. ಆಗಾಗ್ಗೆ ಕನಸಿನಲ್ಲಿ ಬಂದು “ಮನೆ ಆಯ್ತೇನಯ್ಯಾ” ಎಂದು ಕೇಳುತ್ತಿದ್ದರು. ನನ್ನ ತಾಪತ್ರಯಗಳನ್ನೆಲ್ಲಾ ತೋಡಿಕೊಂಡರೆ ‘ನನ್ನ ಮನೆ ನಾನು ಕಟ್ಟಿಸಿಕೊಳ್ಳುತ್ತೇನೆ ನಿನಗೇಕೆ ಚಿಂತೆ? ನೀ ಸುಮ್ಮನಿರು. ನನಗೆ ಇಲ್ಲಿ ಒಂದು ಜಾಗ ಕೊಡು, ನಾನಿಲ್ಲಿ ನಿನ್ನ ಜೊತೆಗಿರ‍್ತೀನಿ’ ಎಂದರು. ಗುರುನಾಥರಿಲ್ಲಿಂದು ಹೀಗೆ ಫೋಟೋದಲ್ಲಿ ನೆಲೆಸಿದ್ದಾರೆ”. ಮಲಗಿದ್ದಲ್ಲಿಯೇ ಮನಮೋಹನರು ತಮ್ಮ ಅನುಭವ, ಆನಂದವನ್ನವರು ಸತ್ಸಂಗಕ್ಕೆ ಇತ್ತರು. ಪ್ರಿಯ ಗುರುಬಂಧುಗಳೇ ಇಂದಿನ ಸತ್ಸಂಗಕ್ಕೆ ಅಲ್ಪ ವಿರಾಮವಿರಲಿ ನಾಳೆ ಮತ್ತೆ ಬನ್ನಿ ಸತ್ಸಂಗ ಮುಂದುವರೆಯುತ್ತದೆ ಬರುವಿರಲ್ಲಾ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment