ಒಟ್ಟು ನೋಟಗಳು

Sunday, June 4, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 5
ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿದೆಯಲ್ಲಾ ತಾಯಿ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ಒಂದು ಕಾರು ಭರದಿಂದ ಓಡುತ್ತಿದೆ. ಅದರಲ್ಲಿ ಕುಳಿತ ಹೆಣ್ಣುಮಗಳಿಗೆ ಎಲ್ಲಿ ವಿಳಂಬವಾಗಿ ಗುರುನಾಥರ ದರ್ಶನ ತಪ್ಪಿ ಬಿಡುತ್ತದೋ ಎಂಬ ಭಯ. ಜೊತೆಗೆ ಅಷ್ಟೇನು ಗುರುಗಳ ಬಗ್ಗೆ ಮನೋಭಾವವಿಲ್ಲದ ತಮ್ಮ ಪತಿದೇವರು, ಗುರುಗಳು ದೊರೆಯದೆ, ಅವರ ದರ್ಶನವಾಗದೇ ಹೋದಾಗ ಎಲ್ಲಿ ಮನಿಸಿಕೊಳುವರೋ ಎಂಬ ಭಯ ಬೇರೆ. ಹೆಂಗಸರು ಇನ್ನೇನು ಮಾಡಲು ಸಾಧ್ಯ? ಯಜಮಾನರು ಹೊರಡುವಾಗಲೇ “ಮತ್ತೆ ನಮಸ್ಕಾರ ಮಾಡು ಎಂದು ಒತ್ತಾಯಿಸಬಾರದು” ಎಂದು ಬೇರೆ ಎಚ್ಚರಿಸಿದ್ದರು. ಎಲ್ಲಾ ಚಿಂತೆಗಳನ್ನು ಬಿಟ್ಟು ಆ ತಾಯಿ ಕೈಗೊಂಡಿದ್ದು ಒಂದೇ ಕೆಲಸ ಅದೆಂದರೆ “ಗುರುನಾಥ ನಿನ್ನ ದರ್ಶನವಾಗಲಿ, ದರ್ಶನವಾಗಲಿ” ಎನ್ನುವ ಜಪ.

ಚನ್ನರಾಯಪಟ್ಟಣದ ಮದುವೆಗೆ ಹೊರಟ ಈ ಮಂದಿ, ಗುರುದರ್ಶನವೇ ಮುಖ್ಯವೆಂದು ಭಾವಿಸುತ್ತ ಸಕ್ಕರಾಯಪಟ್ಟಣವನ್ನು ಅಂತೂ ಮುಟ್ಟಿದರು. ಸ್ಥಿತಪ್ರಜ್ಞರಾದ ಯಜಮಾನರು. ಎಲ್ಲದಕ್ಕೂ ಅಧೀರ ಮನಸ್ಸು ಮಾಡಿಕೊಳ್ಳುವ ಅವರ ಹೆಂಡತಿ. ಅಂತೂ ಕಾರು ನಿಲ್ಲುತ್ತಲೆ ಗುರು ಮನೆಯೊಳಗೆ ಧಾವಂತ ಪಡುತ್ತ ಓಡಿದ ಆ ತಾಯಿಗೆ ಗುರುನಾಥರನ್ನು ಕಂಡಾಗ...... ಅಬ್ಬಾ ನಿಧಿ ಸಿಕ್ಕಿತೆಂಬ ಸಂತಸವಾಯ್ತು,  ಆ ತಾಯಿಯ ಕೋರಿಕೆ ಈಡೇರಿತ್ತು. ಆ ದಂಪತಿಗಳನ್ನು ಕೂರಿಸಿ ಕುಶಲೋಪರಿ ವಿಚಾರಿಸಿದ ಗುರುನಾಥರು “ಏನಮ್ಮ ತಾಯಿ ನಾನು ಬೆಂಗಳೊರಿಗೆ ಹೋಗುವುದನ್ನು ತಪ್ಪಿಸಿಬಿಟ್ಟಿಯಲ್ಲ” ಎನ್ನಬೇಕೆ? ಇವರ ಯಜಮಾನರು ಬ್ಯಾಂಕ್ ಮ್ಯಾನೇಜರ್ ಎನ್ನುವುದನ್ನು ಗುರುನಾಥರಿಗೆ ಯಾರೂ ಹೇಳದಿದ್ದರೂ “ಯಾರಪ್ಪಾ ಅಲ್ಲಿ ಬ್ಯಾಂಕ್ ಮ್ಯಾನೇಜರ್ ಬಂದಿದ್ದಾರೆ,  ಹಸಿದಿದ್ದಾರೆ. ಈ ದಂಪತಿಗಳಿಗೆ ಮೊದಲು ಊಟ ಹಾಕಿ” ಎಂದರು ಗುರುನಾಥರು. ಸಂಜೆಯ ಆರರ ಸಮಯದಲ್ಲಿ, ಹಸಿವಾಗಿದ್ದರೂ, ಊಟದ ಅಪೇಕ್ಷೇ ಇದ್ದರೂ, ಸಿಗುವುದು ಅಸಾಧ್ಯವಾದ ಆ ಸಂದರ್ಭದಲ್ಲಿ ರುಚಿರುಚಿಯಾದ ಸೊಪ್ಪಿನಹುಳಿ ಅನ್ನವನ್ನು ಗುರುನಾಥರು ದಯಪಾಲಿಸಿದರಂತೆ- ದರ್ಶನ ಲಾಭದ ಜೊತೆಗೆ ಪ್ರಸಾದವನ್ನು ಕರುಣಸಿದ ಗುರುನಾಥರ ಕರುಣೆಯದರ್ಶನ, ಶ್ರೀಮತಿ.ಹೇಮಲತಾ ನಾಗರಾಜ್ ಅವರಿಗಾದ ಪರಿ ಇಂತು. ಆ ಗುರುಪ್ರಸಾದದ ಸವಿಯನ್ನು ಇಂದೂ ಅವರು ಮರೆತಿಲ್ಲ.

ಈ ಭಕ್ತೆ, 2004ರಲ್ಲಿಯೇ ಗುರುನಾಥರ ವಿಚಾರವನ್ನು ಸ್ನೇಹಿತೆಯೊಬ್ಬರಿಂದ ಕೇಳಿದ್ದರು. ಒಂದು ವರ್ಷದ ನಂತರ ಗುರುದರ್ಶನದ ಕಾಲ ಒದಗಿ ಬಂದಿತ್ತು. ಸ್ನೇಹಿತೆಯು ಮೊದಲೇ ಎಚ್ಚರಿಸಿದ್ದರು, ಹೋಗುತ್ತಿದ್ದಂತೆ ಏನೇನೋ ಕೇಳಬೇಡ ಎಂದು - ಹೇಮಲತಾ ಅವರಿಗೆ.

ಗುರುನಾಥರನ್ನು ನೋಡುತ್ತಿದ್ದಂತೆಯೇ “ಏನ್‌ ಸಾರ್ ಶೃಂಗೇರಿಗೆ ಹೋಗಿ ಬರಲಾಗುತ್ತಾ” ಎಂದು ಗುರುನಾಥರು ನನ್ನವರನ್ನು ಪ್ರಶ್ನಿಸುತ್ತಿದ್ದಂತೆ, ನಾನು “ಹೋಗಿಬರ‍್ತೀವಿ ಗುರುಗಳೇ, ನಾಳೆ ಹತ್ತು ಗಂಟೆಗೇ ಇಲ್ಲಿಗೆ ಬರ‍್ತೀವಿ” ಎಂದಾಗ ಗುರುನಾಥರು ನನ್ನ ಅವಸರ ಪ್ರವೃತ್ತಿಯನ್ನು ಕಂಡು “ನೀನು ಸ್ವಲ್ಪ ಸುಮ್ಮನಿರಮ್ಮ ತಾಯಿ, ಬೇರೆಯವರ ವಿಚಾರವನ್ನು ನಾವು ನಿರ್ಧರಿಸಬಾರದು. ಏನು ಮ್ಯಾನೇಜರ್ ಸಾಹೇಬರೇ, ನಿಮಗೇನಾದರು ಅಭ್ಯಂತರವಿದೆಯಾ?” ಎಂದು ಕೇಳಿದರಂತೆ. ‘ಏನೂ ಇಲ್ಲಾ ಸ್ವಾಮಿ, ಕಾರಿನದು ಒಂಚೂರು ನೋಡಿಕೊಳ್ಳಬೇಕಿದೆ’ ಎಂದಾಗ ಗುರುನಾಥರೇ ಕಾರಿನ ಡ್ರೈವರನ್ನು ಕರೆದು “ಸಾರಥಿ ಬಾರಯ್ಯ ಇಲ್ಲಿ ತೋಗೋ ಈ ಹಣ್ಣನ್ನು” ಎಂದು ಆರ್ಶಿರ್ವದಿಸಿ ಸೇಬಿನ ಹಣ್ಣೊಂದನ್ನು ನೀಡಿದರಂತೆ.

ಕಣ್‌ರೆಪ್ಪೆಯಲ್ಲಿಟ್ಟುಕೊಂಡ ಕಾಯ್ದ ಗುರುನಾಥರು

“ಶೃಂಗೇರಿಗೇನೋ ಹೊರಟೆವು, ಕತ್ತಲೆಯಾಗುತ್ತಿತ್ತು, ಮಳೆಯೂ ಬರುತ್ತಿತ್ತು. ಸಂಜೆ ಶೃಂಗೇರಿಗೆ ಹೋಗುವ ಬದಲು ಒಂದು ಕವಲು ದಾರಿಯಲ್ಲಿ ಮತ್ತೆಲ್ಲೋ ಸಾಗಿತ್ತು ನಮ್ಮ ಕಾರು. ಕೊನೆಗೆ ಬಹುದೂರ ಬಂದು, ಕಾಡಿನ ಮಧ್ಯವಿದ್ದ ಒಂದು ಸ್ಕೂಲ್ ಬಳಿ ಕತ್ತಲಲ್ಲಿ ಕಾರು ನಿಲ್ಲಿಸಿ ಅಲ್ಲಿದ್ದ ಮನೆಗಳ ಬಾಗಿಲು ಬಡಿದರೂ ಯಾರೂ ತೆಗೆಯಲಿಲ್ಲ-ಬಾಗಿಲು. ರಾತ್ರಿ‌ ಇಡೀ ಕಾರಿನಲ್ಲಿಯೇ ಉಳಿದದ್ದಾಯಿತು.  ಆ ಸರಿ ರಾತ್ರಿಯಲ್ಲಿ ಏನೂ ಆಗಬಹುದಿತ್ತು.  ಅದೊಂದು ಭೀಕರ ನಕ್ಸಲ್ ಏರಿಯಾ. ಆದರೆ ಗುರುನಾಥರೇ ನಮ್ಮನ್ನು ರಕ್ಷಿಸಿದ್ದರು.

ಬೆಳಗಾದ ಮೇಲೆ ಅಲ್ಲಿದ್ದ ನವೋದಯ ಶಾಲೆಯವರು ಬಾಗಿಲು ತೆರೆದು, ನಮ್ಮನ್ನು ಕರೆದು ಸ್ನಾನ ಮಾಡಲು, ಉಪಹಾರ ಕಾಫಿಗಳನ್ನು ನೀಡಿ ಸಹಕರಿಸಿದರು.  ಇದು ನಕ್ಸಲ್ ಏರಿಯ ಅವರ ಕಾಟ ಜಾಸ್ತಿ , ರಾತ್ರಿ ಹೊತ್ತು ಇಲ್ಲಿ ಯಾರೂ ಬಾಗಿಲು ತೆಗೆಯೊಲ್ಲ, ಅಂದಾಗ ಗುರು ರಕ್ಷಿಸಿದ ರೀತಿ ಕಂಡು ಬೆರಗಾದೆವು. ಅಲ್ಲಿಂದ ಬೆಳೆಗೆದ್ದು ಶೃಂಗೇರಿಯನ್ನು ತಲುಪಿ, ಎಲ್ಲ ದರ್ಶನ ಪಡೆದು, ಮತ್ತೆ ಸಕ್ಕರೆಪಟ್ಟಣ ತಲುಪಿ ಗುರುಗಳನ್ನು ಕಂಡಾಗ ಸಂಜೆ ಆರೂವರೆಯಾಗಿತ್ತು. ಗುರುನಾಥರು ನಗುತ್ತ “ಏನಮ್ಮ ಎಷ್ಟು ಹೊತ್ತಿಗೆ ಬರ‍್ತೀನಿ ಅಂದೆ, ಈಗೆಷ್ಟು ಗಂಟೆ? ಅದಕ್ಕೆ ಹೇಳೋದು ಅವಸರ ಬೇಡ, ಇನ್ನೊಬ್ಬರ ವಿಚಾರದಲ್ಲಿ ನಾವು ನಿರ್ಧಾರ ಕೊಡಬಾರದು. ನಾವು ಸುಮ್ಮನಿರಬೇಕು” ಎಂದು ನನ್ನ ಅವಸರ ಪ್ರವೃತ್ತಿ, ಧಾವಂತತನಗಳನ್ನು ಬಿಟ್ಟು ನೆಮ್ಮದಿಯಿಂದಿರಲು ಒಳ್ಳೆಯ ಪಾಠವನ್ನು ಮನೋಜ್ಞವಾಗಿ ನೀಡಿದರು. ಗುರುನಾಥರ ಮಾತುಗಳು ನನ್ನನ್ನು ನಾನು ತಿದ್ದಿಕೊಳ್ಳಲು ಮೂಲ ಕಾರಣವಾಯ್ತು. “ತಾಯಿ ನೀನು ಏನೂ ಅಶಿಸಬೇಡ. ನೀನು ಬೇಡಿದ್ದು ನಿನ್ನ ಕೈಗೆಟುಕುವುದಿಲ್ಲ. ನೀನು ಪದೇ ಪದೇ ಬರಬೇಡ ನಿನ್ನ ಮಗನಲ್ಲಿ ಗುರುವನ್ನು ಕಾಣು” ಎಂದು ಪ್ರೀತಿ‌ ಇಂದಾಡಿದ ಮಾತುಗಳು-ಆಸೆ ಪಡದೆ ಇರಲು, ಬಂದದ್ದರಲ್ಲಿ ಸಂತಸ ಪಡೆವ ಪ್ರವೃತಿ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಮಗನ ಸದ್ವರ್ತನೆ, ಸನ್ನಡತೆಗಳು ನನಗೀಗ ಅರಿವಾಗುತ್ತಿದೆ. ಗುರುನಾಥರ ಒಂದೊಂದು ನುಡಿಗಳೂ, ಅವರನ್ನು ಕಂಡಾಗಲೆಲ್ಲಾ ಅವರು ಪ್ರೀತಿ ಇಂದ ಉಪದೇಶಿಸಿದ ರೀತಿ ಇಂದೂ ನೆನಸುತ್ತೇನೆ. ಬಯಸದೇ ಆ ಭಗವಂತ ಎಲ್ಲವನ್ನು ನೀಡಿದ್ದಾನೆ. ಎಂದು ನಿರಂತರ ಸ್ಮರಿಸುತ್ತಾರೆ ಹೇಮಲತ. ತಮ್ಮ ಮನೋಕ್ಲೇಶಗಳೆಲ್ಲಾ ಹರಿದಿದೆಯಂತೆ. ಹೇಮಲತಾ ಸಂತಸದಿಂದಿದ್ದಾರೆ.

ಗುರುಭಾಂದವ ಸತ್ಸಂಗ ಮಿತ್ರರಿಗೆ ಇದಕ್ಕಿಂದ ಇನ್ನೇನು ಬೇಕು, ಏನೂ ಬೇಡದೆ ಎಲ್ಲ ನೀಡುವ ಗುರನಾಥರಂತಹವರ ದರ್ಶನ, ಮನನ, ಧ್ಯಾನ ಎಲ್ಲವೂ ಸಂತಸದಾಯಕವೇ. ಸಧ್ಯಕ್ಕೆ ಇಂದಿನ ನಿತ್ಯಸತ್ಸಂಗಕ್ಕೆ ಅಲ್ಪವಿರಾಮವೆನ್ನೋಣವೇ. ನಾಳೆಯೂ ನಿತ್ಯಸತ್ಸಂಗವಿದ್ದೇ ಇದೆ, ನೀವು ಬಂದೇ ಬರುವಿರಿ. ಇದರ ಲಾಭವನ್ನು ಎಲ್ಲಾ ಹಂಚಿಕೊಳೋಣವೇ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment