ಒಟ್ಟು ನೋಟಗಳು

Wednesday, June 7, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 6
ಪಾದುಕೆ ಬರುತ್ತಿದೆ ಹಿಂದೆ ತಿರುಗಿ ನೋಡಯ್ಯ



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥



ಗುರುನಾಥರು ನಾಮಾನ್ಯವಾಗಿ ಎಲ್ಲ ಕಡೆ, ಶೃಂಗೇರಿ ಜಗದ್ಗುರು ಪೀಠದ ಯತಿಗಳ ಪಾದುಕೆಗಳನ್ನಿಡುವುದು, ವೃಂದಾವನ್ನು ನಿರ್ಮಿಸುವುದನ್ನು ತಮ್ಮ ಭಕ್ತರ ಮನೆಯಲ್ಲಿ ಮಾಡುತ್ತಿದ್ದರು. ಯತಿಗಳೆಂದರೆ ಅತ್ಯಂತ ಭಕ್ತಿಭಾವ ಹೊಂದಿದ್ದ ಗುರುನಾಥರು ಬೆಂಗಳೂರಿನ ಭಕ್ತರೊಬ್ಬರ ಮನೆಗೆ ಶಿವಗಂಗಾ ಶಂಕರ ಮಠದ ಯತಿಗಳ ಪಾದುಕೆಗಳನ್ನು ಕಳಿಸುದುದೇ ಇಂದಿನ ಸತ್ಸಂಗದ ವಿಶೇಷ.

ಆ ಗುರು ಭಕ್ತರು ಸ್ಪೈನಲ್ ಕಾರ್ಡ  ತೊಂದರೆಯಲ್ಲಿದ್ದರು. ಎಲ್ಲದಕ್ಕೂ ಇತರರನ್ನು ಆಶ್ರಯಿಸಬೇಕು. ಅಂದು ಎಂದಿನಂತೆ ಅಡಿಗೆಮನೆಯಲ್ಲಿ ಕುಳಿತು ಊಟ ಮಾಡುತ್ತಿದ್ದ ಇವರಿಗೆ “ ನೋಡಯ್ಯ... ಸ್ವಲ್ಪ ಹಿಂತಿರುಗಿ ನೋಡಯ್ಯ ಪಾದುಕೆಗಳು ಬರುತ್ತಿದೆ... ಸ್ವಾಗತಿಸಯ್ಯ “ ಎಂದಂತಾಯಿತು. ಕೂಡಲೇ ಅವರು ತಮ್ಮ ಶ್ರೀಮತಿ ಭಾಗ್ಯಮ್ಮನವರಿಗೆ “ ಪಾದುಕೆಗಳು ಬರುತ್ತಿದೆಯಂತೆ ಕೆಳಗೆ ಹೋಗಿ ಪೂರ್ಣ ಕುಂಭ ಸ್ವಾಗತಮಾಡಿ ಅವರನೆಲ್ಲ ಕರೆತಾ”  ಎಂದರು.

ಭಾಗ್ಯಮ್ಮ ಇಂತಹ ಅನೇಕs ವಿಚಿತ್ರಗಳನ್ನು ಕಂಡು ಅನುಭವಿಸಿದ್ದವರು ಇದೆಲ್ಲಾ ಗುರುನಾಥರ ಕೃಪೆಯಿಂದ ಸಾಗುತ್ತಿದೆ ಎಂದು ಬಲ್ಲವರಾಗಿದ್ದರು, ತಡಮಾಡದೆ ಕೆಳಗಿಳಿದರು-ಆರತಿಮಾಡಿ, ಪೂರ್ಣಕುಂಬಕಳಸಗಳೊಂದಿಗೆ ಸ್ವಾಗತಿಸಲು ಸಿದ್ದರಾದರು. ಅಷ್ಟರಲ್ಲಾಗಲೇ ಇಪ್ಪತ್ತು ಮೂವತ್ತು ಜನ ಮಹಿಳೆಯರು ಭಜನೆಮಾಡುತ್ತ, ಪಾದುಕೆಗಳನ್ನು ತಲೆಯ ಮೇಲೆಹೊತ್ತು ಇವರ ಮನೆ ಎದರು ನಿಂತಿದ್ದರು.

ಅವರಿಗೆಲ್ಲಾ ಸ್ವಾಗತವಾಯ್ತು. ಮನೆಯ ಒಳಗೆ ಬಂದ ಅವರು ಭಜನೆ ಪೂಜೆ ಆರತಿಗಳನ್ನು ನಡೆಸಿದರು- ಇವರ ಮನೆಯಲ್ಲಿ. ಶಿವಗಂಗೆ ಶಂಕರಮಠದ ಪಾದುಕೆಯನ್ನು ತಲುಪಿಸಿ, ಆತಿಥ್ಯ ಪಡೆದು ಹೋದರು.

ಭಾಗ್ಯಮ್ಮನವರಾಗಲಿ, ಅವರ ಪತಿಯಾಗಲೀ ಬೇಡಿಕೊಳ್ಳದೆ ಗುರುನಾಥರ ಆಜ್ಞೆಯ ಮೇರೆಗೆ ಹೀಗೆ ಗುರುಪಾದುಕೆ ಬಂದಿರುವುದಲ್ಲದೆ, ಆ ಮನೆಯೀಗ ಗುರು ಮಂದಿರವಾಗಿದೆ. ಅನೇಕ ಜನ ಭಕ್ತರು ಆಗಾಗ್ಗೆ ಬಂದು ಭಜನೆ ಪೂಜೆ ನಡೆಸುತ್ತಾರೆ. ಅನೇಕ ಜನ ಭಕ್ತರಿಗೆ ಪವಾಡಸದೃಶ್ಯದಲ್ಲಿ ಇಷ್ಟಾರ್ಥಗಳು ಲಭಿಸಿವೆ.  ಮನೆಯವರೆಲ್ಲರ ಅನಿಸಿಕೆ ಎಂದರೆ, ಇದು ಗುರುವಾಥರ ಕರುಣೆಯಲ್ಲದೆ ಮತ್ತೇನಲ್ಲ. ಗುರುನಾಥರ ಬಹುದೊಡ್ಡ ಭಾವಚಿತ್ರದ ಜೊತೆಗೆ ಬಹಳ ಸಮಯ ಮಲಗೇ ಇರುವ ಮನೆಯ ಯಜಮಾನರ ಹಾಸಿಗೆಯಪಕ್ಕದಲ್ಲೂ ಗುರುನಾಥರ ಚಿತ್ರವಿದೆ. ಗುರುನಾಥರು ಆಗಾಗ್ಗೆ ಹೇಳುತ್ತಾರಂತೆ “ ಯಾರ ದುಡ್ಡಿಗೂ ಕೈ ಒಡ್ಡದೆ ಭಜನಾಮಂದಿರ ನಿರ್ಮಿಸು. ಇದು ಸಾದುಸಂತರ ನೆಲೆವೀಡಾಗುತ್ತದೆ. ಅನೇಕರು ಬರುತ್ತಾರೆ” ಅವರ ಮಗನೀಗ ಭಜನಾಮಂದಿರ ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದಾನೆ.

ಭಾಗ್ಯಮ್ಮನವರು ಗುರುನಾಥರ ಕರುಣೆಯ ಬಗ್ಗೆ ಹೇಳುತ್ತ “ನಮ್ಮ ಮನೆಯವರಿಗೆ ಸ್ಪೈನಲ್ ಕಾರ್ಡ್‌ನ ತೊಂದರೆಯಾಯಿತು. ಮುಂದೆ ಮೂತ್ರಕೋಶದ ತೊಂದರೆಯಾಯ್ತು. ಅನೇಕ ಆಸ್ಪತ್ರೆಗಳನ್ನು ಕಂಡರೂ ಏನೂ ಪರಿಹಾರವಾಗದೆ-ಭವರೋಗ ವೈದ್ಯರಾದ ಗುರುನಾಥರ ಮೊರೆಹೋದೆವು. ಕೊನೆಗೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅತ್ಯಂತ ಗಂಭೀರ ಸ್ಥಿತಿಯಲ್ಲಿವರು ಆಡ್ಮಿಟ್ ಆದರು. ವೈದ್ಯರುಗಳು ಯಾವುದೇ ಭರವಸೆ ನೀಡಲಿಲ್ಲ. ನಮಗೆ ಗುರುನಾಥರ ಸ್ಮರಣೆಯಲ್ಲದೆ ಬೇರೇನೂ ಉಳಿದಿರಲಿಲ್ಲ. ಆ ಸಮಯದಲ್ಲಿ ಒಬ್ಬ ಹೆಣ್ಣು ಮಗಳು ಬಂದು ಧೈರ್ಯ ಹೇಳಿ, ಭರವಸೆ ನೀಡಿದರು. ಡಯಾಲಿಸಿಸ್ ಶುರುಮಾಡಬೇಕೆಂದು ಆಸ್ಪತ್ರೆಯವರು ಸರ್ವಸಿದ್ಧತೆ ನಡಸಿ ಸ್ಟ್ರಚರ್ ಮೇಲೆ ಮಲಗಿಸಿ ಇನ್ನೇನು ಡಯಾಲಿಸಿಸ್ ಪ್ರಾರಂಭಿಸಬೇಕು. ನನ್ನ ಮಗನಿಗೆ ಏಕೋ ಗುರುನಾಥರು “ನಿಮ್ಮ ತಂದೆಯನ್ನು ಮನೆಗೆ ಕರೆದೊಯ್ಯು” ಎಂದು ಪ್ರೇರೇಪಿಸಿದಂತಾಯ್ತಂತೆ. ಆತನೂ ಹಠಮಾಡಿದ. ವೈದ್ಯರುಗಳು ಒಪ್ಪದಿದ್ದರೂ, ಕ್ರಿಟಿಕಲ್ ಸ್ಥಿತಿಯಲ್ಲದ್ದ ನಮ್ಮವರನ್ನು ಮನೆಗೆ ತಂದೆವು. ಎಷ್ಟೋ ವರ್ಷಗಳಾದವು. ಡಯಾಲಿಸಿಸ್ ಇಲ್ಲ. ಯಾವುದೇ ಔಷಧವಿಲ್ಲ.  ಸಣ್ಣ ಪುಟ್ಟ ವ್ಯಾಯಾಮಗಳನ್ನವರು ಮಾಡುತ್ತಾರೆ. ಎಲ್ಲಕ್ಕಿಂತ ನಿರಂತರ ಗುರುನಾಥರ ನಿತ್ಯ ಸ್ಮರಣೆಯಲ್ಲಿರುತ್ತಾರೆ. ಆರೋಗ್ಯವಾಗಿದ್ದಾರೆ, ಯಾವ ತೊಂದರೆ ಇಲ್ಲ ತಾವೂ ನಗುನಗುತ್ತಿದ್ದು, ಬಂದ ಇತರರ ನೋವಿಗೂ ಗುರುನಾಥರು ಇವರ ಮೂಲಕ ಅನೇಕ ನಿವಾರಣೆಗಳನ್ನು ನಿಡುತ್ತಿದ್ದಾರೆ... ನಮ್ಮ ಒಂದೊಂದು ಉಸಿರೂ ಆ ಭಗವಂತನ, ಗುರುನಾಥರ ಕೃಪೆ ಇಂದ ಸಾಗಿದೆ” ಎನ್ನುತ್ತಾರೆ.

ಹೀಗೆ ನಿತಂತರ ಗುರುನಾಥರ ಲೀಲೆಗಳು ಅವರ ಮನೆಯಲ್ಲಿ ನಡೆಯುತ್ತಲೇ ಇರುತ್ತೆ. ಮತ್ತೊಂದು ದಿನ “ನಮ್ಮ ಮನೆಯವರು ನಾಲ್ಕು ಕೇಜಿ  ಗುಲಗಂಜಿ ಬೇಕೆಂದು ಗುರುನಾಥರು ಕೇಳುತ್ತಿದ್ದಾರೆ ತರಿಸು” ಎಂದು ಹೇಳಿದರು. ಅಂಗಡಿಯಲ್ಲಿ ಹೋಗಿ ಕೇಳಿದರೆ  ಒಂದು ಗುಲಗಂಜಿಗೆ ಹತ್ತು ರೂಪಾಯಿ ಎಂದರು.  ಏನಪ್ಪಾ ಗುರುದೇವ ಹೇಗೆ ಮಾಡುವುದು? ಎಂದು ಗುರುನಾಥರನ್ನು ನೆನೆದವು. ಮಾರನೆಯ ದಿವಸ ನಮ್ಮಗುರುತಿನವರೊಬ್ಬರು ಒಂದು ಚೀಲದ ತುಂಬಾ ಗುಲಗಂಜಿಯನ್ನು ತಂದು ನಮಗಿತ್ತರು. ತೂಗಿ ನೋಡಿದಾಗ ಅದು ಸರಿಯಾಗಿ ನಾಲ್ಕು ಕೇಜಿ ತೂಕದ್ದಾಗಿತ್ತು. ಅದನ್ನಿಟ್ಟು ಪೂಜಿಸುತ್ತಿದ್ದೇವೆ. ಅನೇಕರು ಬಂದು ಅದರಲ್ಲಿ ಕಾಯಿನ್ ಹಾಕಿ ತಮ್ಮ ಕೋರಿಕೆಗಳನ್ನು ತಿಳಿಸಿ, ಫಲ ಪಡೆಯುತ್ತಿದ್ದಾರೆ. ಹೀಗೆ ಗುರುನಾಥರ ಕೃಪೆ ಇಂದ ಅಘಟಿತ ಘಟನೆಗಳು ನಮ್ಮಲ್ಲಿ ಜರುಗುತ್ತಿವೆ” ಎಂದರು ಭಾಗ್ಯಮ್ಮನವರು.

ನಿರಂತರ ಮಲಗಿರುವುದು ಅದೆಷ್ಟು ಕಷ್ಟಕರ. ಬಂದುಬಳಗದವರು ಒಂದೆರಡು ದಿನ ಬಂದಾರು. ಗುರುನಾಥರ ಲೀಲೆಯನ್ನು ನೋಡಿ. ನಿತ್ಯ ಅನೇಕ ಜನ ಗುರುನಾಥರ ಹೆಸರು ಹೇಳಿಕೊಂಡು ಈ ಮನೆಗೆ ಬರುತ್ತಾರೆ. ಮದನ್‌ಮೊಹನ್ ಎಲ್ಲರೊಂದಿಗೆ ಮಾತನಾಡುತ್ತಾರೆ, ನಿರಂತರ ಮಲಗಿದ್ದರೂ ಏನೂ ಬೇಸರವಾಗದಂತೆ ಅದೆಷ್ಟು ರೀತಿಯಲ್ಲಿ ಗುರುನಾಥರು ತಮ್ಮ ಭಕ್ತರ ನೆರವಿಗೆ ನಿಂತಿದ್ದಾರೆಂದರೆ- “ನಾನು ನಿನ್ನ ಜೊತೆ  ಇರ‍್ತೀನಯ್ಯ” ಎಂದ ಗುರುನಾಥರ ಮಾತು ಹೀಗೆ ಸತ್ಯವಾಗಿ ನಡೆದಿದೆ.

ಪ್ರಿಯ ಗುರು ಬಂಧುಗಳೇ...... ಗುರುನಾಥರ ಈ ನಿತ್ಯಸತ್ಸಂಗ ನಮಗೇನೇನೆಲ್ಲಾ ಕೊಡುತ್ತಿದೆ, ಭಕ್ತ ಪ್ರಿಯರಾದ ಗುರುನಾಥರ ಲೀಲೆಯ ಒಂದೊಂದು ಮಖವೂ ವಿಶೇಷವೇ. ಎಲ್ಲೆಲ್ಲೋ ನಡೆದ ಘಟನೆಗಳು ಹೀಗೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತಾ ಹೋಗುವುದೂ ಆ ಗುರುನಾಥರ ಕೃಪೆಯಲ್ಲವೆ? ನಾಳಿನ ಸತ್ಸಂಗಕ್ಕೆ ನೀವೂ ಬನ್ನಿ... ನಿಮ್ಮವರನ್ನೂ ಕರೆತನ್ನಿ... ನಾವೆಲ್ಲಾ ಗುರುನಾಥರ ಬಳಗವಾಗೋಣ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment