ಒಟ್ಟು ನೋಟಗಳು

Saturday, June 3, 2017

ಗುರುನಾಥ ಗಾನಾಮೃತ 

ಗುರು ಹರಿಯೂ ಗುರು ಹರನೂ
ರಚನೆ: ಅಂಬಾಸುತ 


ಗುರು ಹರಿಯೂ ಗುರು ಹರನೂ
ಗುರುವೇ ತಾ ಪರಬ್ರಹ್ಮನೂ
ಅಗಣಿತಗುಣಗಣ ಭೂಷಿತನೂ
ಅಪ್ರಮೇಯನು ಆದ್ಯಂತ ರಹಿತನೂ ||


ಸುಲಭಕೆ ಸಾಧ್ಯನು ಇವನಲ್ಲಾ
ಸಾಧನೆಯೊಳಗಡಗಿಹನೂ
ಸಂತತ ಸೇವೆಯ ಮಾಡುತಲಿರಲೂ
ಸಾಕ್ಷಾತ್ಕಾರವ ನೀಡುವನೂ ||


ತೋರಿಕೆಗೆಂದೂ ತಾ ಬಾರಾನು
ಶುದ್ಧ ಅಂತಕರಣಕೆ ಒಲಿಯದೇ ಇರನು
ಭಾವುಕ ಮನದೊಳು ತಾ ನೆಲೆಸಿಹನೂ
ಭಕ್ತಾಧೀನಾ ಶ್ರೀ ಗುರುವೂ ||


ತಮವನು ಕಳೆಯುವ ಜ್ಯೋತಿ ಸ್ವರೂಪನು
ಗ್ರಹ ಸಂಚಾರವ ತಡೆಯುವನೂ
ದೇಹಭಾವವಾ ಅಳಿಸಿ ಶಿಷ್ಯರಿಗೆ
ಆತ್ಮಾನಂದವ ನೀಡುವನೂ ||


ಸಖರಾಯಪುರದೊಳು ತಾ ನೆಲೆಸಿಹನೂ
ವೇಂಕಟಾಚಲ ನಾಮದಲೀ
ಅಂಬಾಸುತನಾ ಅನವರತಾ ಪೋಷಿಸಿ
ಆನಂದ ನೀಡಿಹ ಅವಧೂತನೂ ||

No comments:

Post a Comment