ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 2
ಸದ್ಗುರು ದೊರೆವುದು ದುರ್ಲಭವು....
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥ ಭಕ್ತರೇ, ಸತ್ಸಂಗ ಪ್ರೇಮಿಗಳೇ, ಇಂದು ಆ ಭಕ್ತರು ಮತ್ತಷ್ಟನ್ನು ನೀಡಲಿದ್ದಾರೆ ಕೇಳಿ. "ಡಮರುಗಧಾರಿ ಶಿವನ ರೂಪ ತೋರಿಸಿದ ಗುರುನಾಥರು ಒಂದು ಹಾಡನ್ನು ಹೇಳಿ ಸಾರ್ ಕೇಳೋಣ ಎಂದಾಗ, 'ನೀಡು ಶಿವಾ ನೀಡದಿರು ಶಿವಾ.,.. ಬಾಗುವುದು ಎನ್ನ ಕಾಯ' ಎಂಬ ಹಾಡು ತನ್ನ ತಾನೇ ನನ್ನ ಹೃದಯಾಳದಿಂದ ಮೂಡಿ ಬಂದಿತು. ಈ ಏಕಾಂತದಲ್ಲಿ ನನಗೊಬ್ಬನಿಗೇ ಎಲ್ಲ ಬಹು ಹೊತ್ತು ಸಿಗುವುದನ್ನು ಪ್ರಕೃತಿಯೂ ಸಹಿಸಲಿಲ್ಲವೋ, ಅಥವಾ ಎಲ್ಲರಿಗೂ ಅನಿವಾರ್ಯವಾದ ಗುರುನಾಥರು, ಸಕಲರ ಜವಾಬ್ದಾರಿ ಹೊರಬೇಕಲ್ಲ ಅದಕ್ಕೋ ಏನೋ, ಸ್ವಲ್ಪ ಹೊತ್ತಿಗಾಗಲೇ ಸೌಂದರ್ಯಲಹರಿ ಸ್ತೋತ್ರಗಳನ್ನು ಹೇಳುವವರ ದಂಡು ಬಂದಿತು. ಮುಂದೆ ಅವರಿಗೆ ತಿಂಡಿ ತೀರ್ಥಗಳ ಜವಾಬ್ದಾರಿ ಇದ್ದುದರಿಂದ ನಾನು ಗುರುನಾಥರ ಮನೆಯ ಕಡೆಗೆ ಮನಸ್ಸಿಲ್ಲದ ಮನಸ್ಸಿನಿಂದ ಕಾರ್ಯೋನ್ಮುಖನಾಗಿ ನಡೆದೆ".
'ಸದ್ಗುರು ಸಿಗುವುದು ದುರ್ಲಭವು. ದೊರೆತರೆ ಜೀವನ ಪಾವನವು' ಎಂಬ ಸಂತ ವಾಣಿಯೊಂದಿದೆ. ನಮಗೆ ನಿಮಗೆಲ್ಲಾ ಅವರ ಕಥಾಸಾಗರ ದೊರೆತರೆ, ಅವರ ಸೇವಾವಕಾಶ ದೊರೆತ ಅನಂತಣ್ಣನವರಿಗೆ ಗುರುನಾಥರು ಪದೇ ಪದೇ ನೀಡಿದ ದರ್ಶನ ಭಾಗ್ಯ ಅರಿಯುವ ವಿಚಾರ ನಮಗೊದಗಿರುವುದು ನಮ್ಮ ಸುಯೋಗವೇ. ಅದನ್ನು ನಮಗೆ ತಿಳಿಸುವ ಉದಾರತೆಯನ್ನು ತೋರಿದ ಆ ಗುರು ಬಾಂಧವರಿಗೆ ಒಂದು ಧನ್ಯವಾದವನ್ನು ಹೇಳಿ ಅವರ ಅನುಭವವನ್ನಾಲಿಸಲು ನಮ್ಮ ಹೃದಯ ತೆರೆದಿಡೋಣ ಬನ್ನಿ.
"ನನ್ನ ಅದ್ಯಾವ ಜನ್ಮದ ಪುಣ್ಯವೋ, ಗುರುನಾಥರು ಒಂದು ದೊಡ್ಡ ಜಗದ್ಗುರು ಪೀಠದ ಸೇವಾವಕಾಶವನ್ನು ದೊರಕಿಸಿದ್ದರು ನಮಗೆ. ಮಠದ ಪರಿಪೂರ್ಣ ಕೆಲಸ ಮುಗಿದಿತ್ತು. ಶಾರದಾಂಬಾ ದೇವಸ್ಥಾನದ ಮುಂಭಾಗದಲ್ಲಿ ತಗಡು ಹಾಕಿ ವೆಲ್ಡಿಂಗ್ ಮಾಡುವುದೊಂದು ಬಾಕಿ ಉಳಿದಿತ್ತು. ಪದೇ ಪದೇ ಕರೆಂಟಿನ ಕೊರತೆಯಿಂದಾಗಿ ಸ್ಥಗಿತಗೊಂಡ ಕೆಲಸದ ಜವಾಬ್ದಾರಿಯನ್ನು ನಮ್ಮ ಮಿತ್ರರಾದ ಗೋಪಣ್ಣನವರಿಗೆ ವಹಿಸಿ, ತುರ್ತು ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಸ್ವಲ್ಪ ಹೊತ್ತಿನಲ್ಲೇ ಗುರುನಾಥರ ಫೋನ್ ಬಂತು. 'ಏನ್ಸಾರ್ ಎಲ್ಲಿಗೆ ಬಂತು ಕೂಡಲಿ ಮಠದ ಕೆಲಸ? ನೀವೆಲ್ಲಿದ್ದೀರಿ ಸಾರ್'. ಸಖರಾಯಪಟ್ಟಣದಿಂದಲೇ ನಾನು ಬೆಂಗಳೂರಿನಲ್ಲಿ ಇರುವುದನ್ನು ಅರಿತಿದ್ದರು ಗುರುನಾಥರು. 'ಎಲ್ಲಾ ಮುಗಿದಿದೆ ಗುರುವೇ. ಇನ್ನೆರಡು ದಿನದ ಕೆಲಸವಿದೆ' ಎಂದು ನಾನು ಉತ್ತರಿಸಿದೆ. 'ಅದೆಲ್ಲಾ ನನಗೆ ಗೊತ್ತಿಲ್ಲ ಸಾರ್, ಬರಿ ದುಡ್ಡು ಕೊಟ್ಟುಬಿಟ್ಟರೆ ಆಗಲ್ಲ ಸಾರ್.. ಹೋಗಿ ಅಲ್ಲಿ ನಿಂತು ಮಾಡಿಸಬೇಕು ಸಾರ್' ಗುರುನಾಥರ ಎಚ್ಚರದ ದನಿಯ ಗಂಟೆ ಮೊಳಗಿತ್ತು. ಆ ರಾತ್ರಿಯೇ, ಮಾರನೆಯ ದಿನವೇ ಮತ್ತೆ ಕೂಡಲಿಗೆ ಓಡಿದ್ದೆ. ಅಂದು ಸಂಜೆಯಾಗಿ ರಾತ್ರಿ ಬಂತು. ಕರೆಂಟ್ ಮಾತ್ರಾ ಬರಲೇ ಇಲ್ಲ. ನಮ್ಮ ಮಿತ್ರರೆಲ್ಲಾ ಮಠದ ಒಂದು ರೂಮಿನಲ್ಲಿ ಒಟ್ಟಿಗೆ ಮಲಗಿದ್ದೆವು. ನಿದ್ದೆ ಬರಲಿಲ್ಲ. ಗುರುನಾಥರು ನೀಡಿದ ಮಂತ್ರವನ್ನು ಮನದಲ್ಲೇ ಜಪಿಸುತ್ತಿದ್ದೆ. ಸೊಳ್ಳೆಯ ಕಾಟವೂ ಇತ್ತು. ಸುಮಾರು ಮೂರು ಗಂಟೆಯ ಸರಿ ರಾತ್ರಿ ಇರಬಹುದು. ವಿದ್ಯಾಶಂಕರನ ದೇವಸ್ಥಾನದ ಮೇಲ್ಭಾಗದಲ್ಲಿ ಇದ್ದಕ್ಕಿದ್ದಂತೆ ಅಪಾರವಾದ ಪ್ರಖರ ಬೆಳಕು ಕಾಣಿಸತೊಡಗಿತು. ಇದೇನಾಶ್ಚರ್ಯ ಇಷ್ಟು ಬೇಗ ಬೆಳಗಾಯಿತೋ, ಮಿಂಚುಗಿಂಚೇನಾದರೂ ಆಗಿ ನಾಳೆಯೂ ಕರೆಂಟ್ ಕೈ ಕೊಟ್ಟರೆ.,.. ಎಂದು ಯೋಚಿಸುತ್ತಾ ಹೊರಬಂದೆ. ಆ ಬೆಳಕು ಇದ್ದಕ್ಕಿದಂತೆ ಜಾಸ್ತಿಯಾಯಿತು. ಆ ಬೆಳಕು ಗರುಡ ಪಕ್ಷಿಯಾಯಿತು ಮತ್ತು ಆ ಜಾಗದಲ್ಲಿ ಪ್ರಕಾಶ ಕಂಡು ಬಂತು. ಓಹೋ, ಇನ್ನೊಂದು ಗರುಡ ಪಕ್ಷಿ ಬಂತೇನೋ ಎಂದು ಚಿಂತಿಸಿದೆ. ವೇದಿಕೆಯ ಬಳಿ ಬಂದು ನಮಸ್ಕರಿಸಿ ಹೋಗಿ ಮಲಗಿಬಿಟ್ಟೆ. ಮಾರನೆಯ ದಿನ ಬೆಳಿಗ್ಗೆ ಜಗದ್ಗುರುಗಳಲ್ಲಿಯೂ ಇದನ್ನು ನಿವೇದಿಸಿಕೊಂಡೆ. ಹೀಗೆ ಗರುಡ ಪಕ್ಷಿಯ ರೂಪದಲ್ಲಿ ಬಂದು ಅದ್ಯಾವ ಮಹಾತ್ಮರು ನನ್ನಂತಹ ಅಲ್ಪನಿಗೆ ದರುಶನ ನೀಡುವ ಕರುಣೆ ತೋರಿದ್ದು ನನ್ನ ಸೌಭಾಗ್ಯ, ಗುರುನಾಥರ ಕೃಪೆ, ಎಂದು ಭಾವಿಸುತ್ತೇನೆ. ಇದಕ್ಕಾಗಿಯೇ ಗುರುನಾಥರು ನನ್ನನ್ನು ಅವಸರ ಮಾಡಿ ಇಲ್ಲಿಗೆ ಕಳುಹಿಸಿದರೇನೋ? ಇದಾಗಿ ಒಂದು ಹದಿನೈದು ದಿನ ಸಖರಾಯಪಟ್ಟಣಕ್ಕೆ ಹೋಗಲಾಗಲಿಲ್ಲ. ಆಮೇಲೆ ಒಮ್ಮೆ ಗುರುನಾಥರ ಬಳಿ ಬಂದಾಗ, ಅದೇಕೋ ಏನೋ ಗುರುನಾಥರು ಇದ್ದಕ್ಕಿದಂತೆ 'ಏನ್ ಸಾರ್ ಏನಾದರೂ ದರ್ಶನವಾಯಿತಾ ಸಾರ್' ಎಂದು ಕೇಳಿದರು. ನನಗೇನೂ ಪ್ರಶ್ನೆಯ ಅರ್ಥವೇ ಆಗಲಿಲ್ಲ. ಕೂಡಲಿಯ ಘಟನೆಯೂ ನೆನಪಿಗೆ ಬರಲಿಲ್ಲ. ಆಮೇಲೆ ನಮ್ಮ ಸ್ನೇಹಿತರ ಜೊತೆ ಬಾಣಾವರದ ಬಳಿ ಬರುವಾಗ ಥಟ್ಟನೆ, ಗರುಡ ಪಕ್ಷಿಯ ರೂಪದಲ್ಲಿ ದರ್ಶನವಿತ್ತ ಸಮಾಚಾರ ನೆನಪಾಯಿತು. ನನ್ನ ಮರೆವಿಗೆ ನಾನೇ ಹಳಿದುಕೊಂಡೆ. ಇರಲಿ ಎಲ್ಲವನ್ನೂ ಅವರು ಬಲ್ಲವರು, ಅವರೇ ನೀಡಿದ್ದಲ್ಲವೇ ಎಂದುಕೊಂಡು ಸುಮ್ಮನಾದೆ" ಎಂದು ತಮ್ಮ ಅನುಭವವನ್ನು ಹಂಚಿಕೊಂಡು ಹೃದಯದೊಳಗೇ ಅಂದಿನ ತಮಗಾಗಿದ್ದ ಆನಂದವನ್ನು ಅನಂತಣ್ಣನವರು ಮೆಲುಕು ಹಾಕುತ್ತಿದ್ದರು.
ಪ್ರಿಯ ಸತ್ಸಂಗಾಭಿಮಾನಿ ಗುರು ಬಂಧುಗಳೇ, ಕರ್ಮಕ್ಕೆ ತಕ್ಕ ಫಲ, ಮಾಡಿದ ಕೆಲಸಕ್ಕೆ ತಕ್ಕ ಕೂಲಿ ಇದು ಪ್ರಕೃತಿ ನಿರ್ಧಾರ. ಮಾನವರು ನೀಡುವುದು ಹಣದೆಣಿಕೆಯ, ತತ್ ಕ್ಷಣದ ಸುಖದ ಕೂಲಿಯಾದರೆ, ಗುರುನಾಥರು ನೀಡುವ ನಿಷ್ಕಾಮ ಕರ್ಮದ ಫಲ ಅನಂತ, ನಿರಂತರವಾಗಿ ಉಳಿಯುವ, ಮೌಲ್ಯ ಕಟ್ಟದಂತಹದು. ಬೆಂಗಳೂರಿನಿಂದ ಕೂಡಲಿಗೆ ಕರೆಸಿ, ಸ್ವಕ್ಷೇತ್ರದಲ್ಲಿಯೇ ಅಲ್ಲಿ ಗೈದ ಕರ್ಮದ ಸತ್ಫಲವನ್ನು ಅವರಿಗೆ ವಿಶೇಷ ರೀತಿಯಲ್ಲಿ ದಯಪಾಲಿಸಿದ ಗುರುನಾಥರ ಮಹಿಮೆಗೆ ಏನನ್ನೋಣ?... ಅನ್ನುವುದೇನಿದೆ.... ನಾಳೆಯೂ ಮತ್ತೆ ಸೇರೋಣ. ಗುರುನಾಥರ ನಿತ್ಯ ಸತ್ಸಂಗ ಲೀಲಾವಿನೋದಗಳನ್ನು ಕೇಳುತ್ತಾ ಆನಂದವನ್ನು ಅನುಭವಿಸೋಣ... ಬರುವಿರಲ್ಲಾ ಮಿತ್ರರೇ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment