ಗುರುನಾಥ ಗಾನಾಮೃತ
ನನ್ನಾ ಗುರುವರನಾ ನೀವೇನಾದರೂ ಕಂಡೀರಾ
ರಚನೆ: ಅಂಬಾಸುತ
ನನ್ನಾ ಗುರುವರನಾ ನೀವೇನಾದರೂ ಕಂಡೀರಾ
ನಗುಮೊಗದೀ ಭವಸಾಗರ ದಾಟಿಸುವಾ ನಾವಿಕನಾ
ನೀವೇನಾದರೂ ಕಂಡೀರಾ
ನೀವೇನಾದರೂ ಕಂಡೀರಾ ||
ದಟ್ಟಿಯ ಉಟ್ಟಿಹನೂ ದಿಟ್ಟರೊಳೂ ದಿಟ್ಟನಿವನು
ದಿಕ್ಕು ಕಾಣದೆ ಬಂದಾ ಭಕ್ತಗೆ ಭಗವಂತನಾದಾ ||
ಭಸ್ಮಾ ಭೂಷಿತನೂ ಪಾಪಗಳಾ ಭಸ್ಮಾ ಮಾಡುವವನೂ
ಭಕ್ತಿ ಇಂದಲಿ ಬೇಡೇ ಬಿಡದೇ ಪಾಲಿಸುವವನಾ ||
ಕಲ್ಲೆದೆಯ ಒಳಗೆ ಮಲ್ಲಿಗೆಯ ಅರಳಿಸುವವನೂ
ಕರ್ಮ ಕಳೆದೂ ಧರ್ಮದ ಮಾರ್ಗಾ ತೋರುವವನಾ ||
ಪವಾಡ ಪುರುಷನಲ್ಲಾ ಧನದಾಸೆ ಮೊದಲಿಲ್ಲಾ
ಸತಿಸುತರಾ ಜೊತೆಗಿದ್ದೂ ನಾಲ್ಕಾಶ್ರಮ ಮೀರಿದವನಾ ||
ಕಣ್ಣೀರು ಒರೆಸುವವನಾ ಕರೆದೂ ಮುದ್ದಾಡುವವನಾ
ತಂದೆ ತಾಯಿ ತಾನಾಗೀ ಸಲಹುವ ನಿಜಬಂಧುವಾ ||
ತಮವಾ ಕಳೆಯುವವನಾ ತನ್ಮಯತೆ ನೀಡುವವನಾ
ಅಹಂಭಾವವ ಬಿಡಿಸೀ ಸೋಹಂಭಾವ ನೀಡುವವನಾ ||
ಭೇಧವ ಅಳಿಸೀದವನಾ ವೇದವ ತಿಳಿಸೀದವನಾ
ಶುಧ್ಧ ಭಾವವ ನೀಡೀ ಶಂಕರ ತಾನೆನಿಸಿದವನಾ ||
ವೇಂಕಟಾಚಲನೆಂಬೋ ನಾಮವ ಧರಿಸೀದವನಾ
ಶಾರದೆಯಾ ಮಡಿಲೊಳಗೇ ನಗುತಾ ಇರುವವನಾ ||
ಧರೆಯೊಳಗುತ್ತಮವಾದಾ ಸಖರಾಯಪುರದೊಳಗೇ
ಸಖನಾಗಿ ಸಂತನಾಗೀ ದೊರೆಯಾಗಿ ಇರುವವನಾ ||
ಅಂಬಾಸುತನಾ ಅನವರತ ಪೋಷಿಸಿ
ಅವನಂತರಂಗವಾ ತಿಳಿಗೊಳಿಸುವ ಅವಧೂತನಾ ||
No comments:
Post a Comment