ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 9
ಭಯಕೃದ್ ಭಯನಾಶ ಗುರುನಾಥರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಉತ್ತಮ ಕೆಲಸಗಳಿಗೇ ವಿಘ್ನಗಳು ಅನೇಕ ಏಕೆ? ಎಂಬ ಭಯ ಉಂಟಾಗುತ್ತೆ. ಆದರೆ ಆ ಗುರುನಾಥರ ಕೃಪೆಯೊಂದಿದ್ದರೆ ಎಲ್ಲ ದೂರವಾಗಿ ಬಿಡುತ್ತದೆಂಬ ಸತ್ಯ ಪ್ರತಿಪಾದನೆಯೇ ಇಂದಿನ ಸತ್ಸಂಗದ ಮೂಲ ವಿಷಯವಾಗಿದೆ ಗುರುಬಂಧುಗಳೇ..... ಅನಂತಣ್ಣನವರ ಅನುಭವ ಹೀಗಿದೆ ಕೇಳಿ
“ಮಠದ ಕೆಲಸ ಮುಂದುವರೆದಿತ್ತು. ಎರಡನೆಯ ಮೌಲ್ಡಿಂಗ್‌ಗೆ ಸಿದ್ಧತೆ ಮಾಡಿಕೊಂಡವು. ಬಳ್ಳಾರಿಯಿಂದ ಒಬ್ಬ ಸಿಮೆಂಟ್ ಡೀಲರ್ ನಮಗಾಗಿ ಒಂದು ಪೈಸೆ ಲಾಭವನ್ನೂ ಪಡೆಯದೆ ಸಿಮೆಂಟ್ ಕಳಿಸಲು ಒಪ್ಪಿದ್ದರು. ಹಣ ಭರ್ತಿ ಮಾಡಿದ್ದೇವೆ. ಲಾರಿಗೆ ಸಿಮೆಂಟ್ ತುಂಬಿ ನಿಲ್ಲಿಸಿದ್ದಾರೆ. ಕ್ಯಾಸ್ಟಿಂಗ್ ದಿನ ಹತ್ತಿರ ಬಂದಿದೆ. ಎಂಬತ್ತರಿಂದ ನೂರು ಜನ ಕೆಲಸಗಾರರನ್ನು ಸಿದ್ಧ ಮಾಡಿಕೊಂಡಿದ್ದೇವೆ. ಇದ್ದಕ್ಕಿದ್ದಂತೆ ಅಲ್ಲಿಂದ ಒಂದು ಅಘಾತಕಾರಿ ದೂರವಾಣಿಯೊಂದು ಸಿಮೆಂಟ್ ಡೀಲರ್ ನಿಂದ ಬಂದಿತು’ ‘ಅಣ್ಣಾ ಲಾರಿ ಸ್ಟ್ರೈಕ್ ಶುರುವಾಗಿ ಬಿಟ್ಟಿದೆ, ಲೋಡ್ ಲಾರಿ ದಾರಿಗಿಳಿಯುವುದು ಕಷ್ಟ ಏನು ಮಾಡುವುದು?’ ಏನು ಮಾಡುವುದು? ಪರಮಾತ್ಮಾ ಎಂದು ನನ್ನ ಮನ ಅವರನ್ನೇ ನೆನೆಯಿತು ಅಷ್ಟರಲ್ಲಿ ಅಕ್ಕನಿಗೆ ಪೋನು ಮಾಡಿ ಒಂದಿಷ್ಟು ಹಣ ಜೋಡಿಸಿ ಕಳಿಸಲು ಹೇಳಿದವನು ಶಿವಮೊಗ್ಗದ ಗುರುಬಂಧುಗಳಿಗೆ ಒಂದು ಮುನ್ನೂರು ಮೂಟೆ ಸಿಮೆಂಟ್ ಸಿಗಬಹುದೇ? ವಿಚಾರಿಸಿರಿ ಎಂದು ಕೇಳಿಕೊಂಡೆ. ಸಿಮೆಂಟೇನೋ ಸಿಗುತ್ತೆ ಸಾರ್, ಆದರೆ ಹಾರ್ಡಕ್ಯಾಷ್ ಕೊಡಬೇಕಾಗಬಹುದು’ ಎಂದರು. ಅಲ್ಲಿ ಬೆಂಗಳೂರಿನಿಂದ ಹೀಗೆ ಇದ್ದಕ್ಕಿದ್ದಂತೆ ಕೂಡಲೇ ಹಣ ಕೇಳಿದರೆ ಇಷ್ಟೊಂದು ಹಣ ಎಲ್ಲಿಂದ ತರುವುದು?’ ಎಂದವರೂ ಪ್ರಯತ್ನಿಸುತ್ತಲೇ ಇದ್ದರು. ಕೂಡಲೇ ನಾನು ನನ್ನ ಮನೆಗೆ ಪೋನು ಮಾಡಿ, ಗುರುನಾಥರ ಪೋಟೋದ ಮುಂದೆ ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿಕೊಳ್ಳಿ’ ಎಂದೆ. ಇದಾದ ಅರ್ಧಗಂಟೆಯಲ್ಲೇ ಅಕ್ಕ ನನಗೆ ಪೋನು ಮಾಡಿ ‘ಏ ಅದೇ ಮದ್ರಾಸ್ ಪಾರ್ಟಿ ಬಂದಿದ್ದ, ಮಧು ಅನ್ನುವವನು...ಐಟಂ ತೆಗೆದುಕೊಳ್ಳುವುದು ಇನ್ನೂ ತಡ ಆಗುತ್ತೆ ಎಂದು ನೀನು ಅವರಿಗೆ ಕೊಟ್ಟಿದ್ದು ಐವತ್ತು ಸಾವಿರ ರೂಪಾಯಿ ನನಗೆ ವಾಪಸ್ಸು ಕೊಟ್ಟು ಹೋಗಿದ್ದಾನೆ’ ಎಂದರು, ಇಕ್ಬಾಲ್ ಎನ್ನುವವರೊಬ್ಬರು ಇಪ್ಪತ್ತು ಸಾವಿರವನ್ನು ಮನೆಗೆ ತಲುಪಿಸಿದರೆಂಬ ವಿಚಾರವೂ ನನಗೆ ತಿಳಿಯಿತು. ನಾನು ನನ್ನ ಸ್ನೇಹಿತರಾದ ನಾರಾಯಣ್ ಎಂಬುವರ ಕೈಲಿ, ಕೂಡಲೇ ರಾತ್ರೋರಾತ್ರಿ ಹಣ ಕಳಿಸಲು ಹೇಳಿದೆ. ಶಿವಮೊಗ್ಗದ ಗುರುಬಂಧುಗಳಿಗೆ ಬೆಳಿಗ್ಗೆ ಸಿಮೆಂಟ್ ರೆಡಿ ಮಾಡಲು ತಿಳಿಸಿದೆ. ಬೆಳಗಿನ ಜಾವ ಬಂದ ನಾರಾಯಣ್ ಹಣ ತಲುಪಿಸಿದರು, ಕೆಲಸದ ಸಮಯಕ್ಕೆ ಸರಿಯಾಗಿ 300 ಮೂಟೆ ಸಿಮೆಂಟ್ ಮಠದ ಬಾಗಿಲಿಗೆ ಬಂದಿತ್ತು. ಇದೇ ಸಮಯಕ್ಕೆ ಸರಿಯಾಗಿ, ಬಳ್ಳಾರಿ ಇಂದಲೂ 300 ಮೂಟೆ ಸಿಮೆಂಟ್, ಎಲ್ಲ ಅಡೆತಡೆಗಳನ್ನು ಮೀರಿ, ನಮ್ಮನಿರೀಕ್ಷೆಗೂ ಮೀರಿ ನಮ್ಮನ್ನು ಅಂದೇ ತಲುಪಿತ್ತು. ಈಗಾಗಲೇ ನಮ್ಮ ಮೌಲ್ಡಿಂಗ್ ಕೆಲಸ ಸುಲಲಿತವಾಗಿ ಮುಗಿದಿತ್ತು. ಕೊಡುವ ಧಾರಾಳಿ ಗುರುನಾಥರು ಹೀಗೆ ಎಂತೆಂಥಹ ಸಮಸ್ಯೆಗಳಲ್ಲೂ....ನಮಗರಿವಾಗದಂತೆ, ನಮ್ಮ ಬೆನ್ನ ಹಿಂದೆ ಅಗಾಧ ಕೆಲಸಗಳನ್ನು ಆಗ ಮಾಡಿಸಿದರು” ಎನ್ನುತ್ತಾರೆ ಧನ್ಯತಾ ಭಾವದಿಂದ ಅನಂತಣ್ಣ.
ಬಳ್ಳಾರಿ ಇಂದ ಬಂದ ಸಿಮೆಂಟ್‌ನ್ನು ಒಂದು ರೂಮಿನಲ್ಲಿ ಹಾಕಿಸಿದ ಅನಂತಣ್ಣನವರೇನೋ ಬೆಂಗಳೂರಿಗೆ ಹೋದರು. ಗೋಪಿನಾಥರು ಗುರುನಾಥರನ್ನು ಕಾಣಲು ಸಕ್ರಾಯಪಟ್ನಕ್ಕೆ ಹೋದವರು, ಮೌಲ್ಡಿಂಗ್ ಮುಗಿದ ವಿಚಾರವನ್ನು ಹೇಳಿದರಂತೆ. ಎಲ್ಲ ಬಲ್ಲ ಗುರುನಾಥರಿಗೆ ತಿಳಿಯದುದೇನಿದೆ?
“ಅಲ್ಲಾ ಸಾರ್, ಮೌಲ್ಡಿಂಗ್ ಮುಗೀತೂ ಅಂತೀರಿ.. ನನಗೆ ಇನ್ನು 300 ಮೂಟೆ ಕಾಣಿಸ್ತಿದೆಯಲ್ಲಾ ಸಾರ್” ಅಂದಾಗ - ಆ ಕಪಟನಾಟಕ ಸೂತ್ರಧಾರಿ ಗುರುನಾಥರ ಬಳಿ ಎಲ್ಲವನ್ನೂ ತಿಳಿಸಬೇಕಾಯ್ತು. ಸಿಮೆಂಟ್‌ಗಾಗಿ ಪರದಾಟ ಮಾಡಿದುದನ್ನು ಅನಿವಾರ‍್ಯವಾಗಿ ಬಿಚ್ಚಿಡಬೇಕಾಯ್ತು ಗುರುನಾಥರು ಮುಗುಳು ನಗುತ್ತ ಮುಂದೆ ನಮಗದು ಬೇಕಲ್ಲಾ ನೀವೆ ಒಂದು ರೂಮಿಗೆ ಹಾಕಿಸಿ ಬೀಗ ಹಾಕಿ ಬೀಗದ ಕೈ ನಿಮ್ಮ ಬಳಿ ಇಟ್ಟುಕೊಳ್ಳಿ” ಎಂದರಂತೆ.
ಅನಂತಣ್ಣನವರು ಬಾಣಾವರದಲ್ಲೂ ಗುರುಸೇವೆ ಮಾಡುವ ಅವಕಾಶ ಪಡೆದ ಧನ್ಯರಲ್ಲಿ ಒಬ್ಬರು. ಅಲ್ಲಿ ಮೌಲ್ಡಿಂಗ್ ಹಾಕುವ ಹಿಂದಿನ ದಿವಸ ಗೋಪೀನಾಥರ ಜೊತೆಗೆ ಅನಂತಣ್ಣ ಇದ್ದರು. ಮೌಲ್ಡಿಂಗ್ ದಿವಸ ತುಂಬ ಜನ ಗುರು ಭಕ್ತರು ಬಾಣಾವರದಲ್ಲಿದ್ದರಂತೆ. ಅಂದು ರಾತ್ರಿ ಈ ಗುರುನಾಥರ ಭಕ್ತರೆಲ್ಲಾ ಅಲ್ಲೇ ಮಲಗಿದ್ದರಂತೆ. ಇದಕ್ಕಿದ್ದಂತೆ ಎಚ್ಚರವಾದ ಅನಂತಣ್ಣನವರಿಗೆ ಪ್ರಖರವಾದ ಬೆಳಕೊಂದು, ಆ ಕಗ್ಗತ್ತಲೆಯಲ್ಲಿ ದೇದೀಪ್ಯಮಾನವಾಗಿ ಬೆಳಗುವುದು ಕಂಡು ಬಂದಿತಂತೆ. ಇದೇನು ಬೆಳಗಾಯ್ತ ಎನ್ನುವ ಭ್ರಮೆ. ಆದರೆ ಆ ಸೂರ‍್ಯ ಅದೆಷ್ಟು ಕೆಂಪಗೆ ನಿಗಿನಿಗಿಸುತ್ತಿದ್ದನೆಂದರೆ, ಹಿಂದೆಂದೂ ಅಂತಹ ಸೂರ‍್ಯನನ್ನವರು ನೋಡೇ ಇರಲಿಲ್ಲವಂತೆ. ಆ ಬೆಳಕು ಹಾಗಯೇ, ಇವರು ನೋಡುನೋಡುತ್ತಿರುವಂತೆಯೇ ಕೃಷ್ಣಯೋಗೀಂದ್ರರ ವೇದಿಕೆಯೊಳಗೆ ಅಂತರ್ಧಾನಾವಾದುದನ್ನಿವರು ಕಂಡರಂತೆ. ಅದೇ ಸಮಯದಲ್ಲಿ ಟಕ್, ಟಕ್, ಟಕ್ ಎಂದು ಹೆಜ್ಜೆಯ ಸಪ್ಪಳವೂ ಇವರಿಗೆ ಕೇಳಿತಂತೆ. ಕೂಡಲೇ ಎದ್ದ ಅನಂತಣ್ಣ - ಎದ್ದವರೆ ತಾವೇನೋ ನಿಶ್ಚಯಿಸಿ “ಯಾರದು ಸಾರ್....ಯಾರು....ಯಾರು” ಎಂದು ಕೂಗುತ್ತ ಶಬ್ದ ಬಂದ ಕಡೆ ಹೋಗುವಲ್ಲಿ, ಇವರ ಜತೆ ಕೆಲಸ ಮಾಡಲು ಬಂದಿದ್ದ ಮೂರ‍್ನಾಲ್ಕು ಜನ ಹುಡುಗರು ಬ್ಯಾಟರಿ ಹಾಕಿ ಹುಡುಕಿದರೆ.... ಅಲ್ಯಾರು ಕಾಣಲು ಸಾಧ್ಯ?.... “ಅಣ್ಣ ಯಾರೂ ಕಾಣಿಸ್ತಾ ಇಲ್ಲ ಕಣಣ್ಣ ಇಲ್ಲಿ” ಎಂದರಂತೆ ಆ ಹುಡುಗರು. “ತಮ್ಮಂತಹ ಪಾಮರನ ಮೇಲೆ ಗುರುನಾಥರು ಹೇಗೆ ಪದೇ ಪದೇ ದಿವ್ಯ ದರ್ಶನಗಳನ್ನು ನೀಡಿ ಉದ್ದರಿಸಿದ್ದಾರೆ. ಆ ಕರುಣಾಳಿ ಇನ್ನೂ ನಮಗಿನ್ನೆಷ್ಟು ಕೊಡಬೇಕು ಸಾರ್?” ಎಂದು ಪ್ರಶ್ನಿಸುವಲ್ಲಿ ಸಂತೃಪ್ತ ಭಾವವೆದ್ದು ಕಾಣುತ್ತಿತ್ತು.
“ನೀನೆ ಗತಿ.......ನೀನೇ ಮತಿ......ನೀನೇ ಸ್ವಾಮಿ” ಎಂದು ಅನನ್ಯವಾಗಿ ನಂಬಿದವರನ್ನು ಗುರುನಾಥರು ಹರಸಿದ ರೀತಿ ನಿಜವಾಗಿಯೂ ಆಶ್ಚರ್ಯವಲ್ಲವೇ. ಗುರುಭಕ್ತರೆ, ಗುರುನಾಥರ ಕರುಣೆ ನಮ್ಮ ಮೇಲೂ ನಿರಂತರವಿದ್ದೇ ಇದೆ. ಇರಲಿ ಎಂದು ಬೇಡುವ. ನಿತ್ಯ ಸತ್ಸಂಗದಲ್ಲಿ ನಾಳೆಯೂ ಗುರುಚರಿತ್ರೆಯ ರೋಚಕ ಪುಟಗಳನ್ನು ತೆರೆದು ಪಠಿಸಿ, ಪುನೀತರಾಗೋಣ..... ನಾಳೆಯೂ ನಿಮ್ಮವರೊಂದಿಗೆ ಬಂದು ನಮ್ಮವರಾಗುವುದರ ಜೊತೆಗೆ ಎಂದೆಂದೂ ಗುರುನಾಥರವರಾಗೋಣ ಅಲ್ಲವೇ?
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment