ಒಟ್ಟು ನೋಟಗಳು

Sunday, June 11, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 11
ತುರ್ಯಾವಸ್ಥೆಯಲ್ಲಿದ್ದ ಅಪ್ಪಾಜಿಗೆ ಹಣ್ಣು ತಿನ್ನಿಸಿದ ಗುರುನಾಥರು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ಸಾಧನೆಯ ತುರ್ಯಾವಸ್ಥೆಯಲ್ಲಿದ್ದ ಮಹಾನ್ ಸಾಧಕರೊಬ್ಬರ ಬಗ್ಗೆ ಪುಸ್ತಕ ಬರೆದ ಗುರು ಭಕ್ತರೊಬ್ಬರು, ಆ ಪುಸ್ತಕಕ್ಕೆ ಮುನ್ನುಡಿ ಬರೆಸಲು ಗುರುನಾಥರ ಬಳಿ ಹೋದರು. “ನಮಗೂ ಅವರ ದರ್ಶನ ಮಾಡಿಸಿ” ಎಂದು ಗುರುನಾಥರು ಕೇಳಿದಾಗ ಹೇಗೋ ಊರ ಕಡೆ ಬರಲಿದ್ದ ಅವರನ್ನು ಇಲ್ಲಿಗೂ ಕರೆತರಬಹುದೆಂದು ಆ ಭಕ್ತರು ಒಪ್ಪಿದರಂತೆ. ಆಯ್ತು ಎಂದುಬಿಟ್ಟರಂತೆ. ಶ್ರೀ ಸತ್‌ಉಪಾಸಿ ಸದ್ಗುರುಗಳೇ ಅವರು. ಆ ಮಹಾನ್ ಸಾಧಕರು, ಅವರ ಶಿಷ್ಯ ಸಮೂಹವೇ ಸಕ್ರಾಯಪಟ್ಟಣದ ಸನಿಹದ ಊರಿಗೆ ಬಂದರು. ಇದನ್ನು ಮೊದಲೇ ಅರಿತ ಗುರುನಾಥರು ರಸ್ತೆಯಲ್ಲೇ ಕಾದು ಕುಳಿತಿದ್ದು ಭಕ್ತವೃಂದ ಬಂದ ಬಸ್ ಅನ್ನೇ ಮೂರು ಬಾರಿ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ, ನಂತರ ಕಾರಿನಲ್ಲಿ ಕಣ್ಣುಮುಚ್ಚಿ ಕುಳಿತು ತುರ್ಯಾವಸ್ಥೆಯಲ್ಲಿದ್ದ ಸಾಧಕರ ಬಳಿ ಬಂದು ಪ್ರೀತಿಯಿಂದ ಬಾಳೇಹಣ್ಣನ್ನು ಅವರ ಬಾಯಿಗಿಟ್ಟು ಗುರುನಾಥರು ತಿನ್ನಿಸಿದಂತೆ. ಕಣ್ಣು ಮುಚ್ಚಿದರೂ ಈ ಸಾಧಕರೀರ್ವರ ಸಂಬಂಧವು ಕರುಳಿಗೆ ಅರಿವಾಗಿತ್ತು. ಎರಡು ಮನಗಳು ಮೌನವಾಗಿಯೇ ಅದೇನೇನು ಆಧ್ಯಾತ್ಮಿಕ ಸಂಭಾಷಣೆ ಮಾಡಿದ್ದವೋ ಆ ಮಹಾತ್ಮರುಗಳೇ ಬಲ್ಲರು.

ಜೋಡಿ ಕುದುರೆ ಸವಾರನಾಗಬೇಡ- ಒಂದನ್ನು ಇಟ್ಟುಕೋ

ಬೆಂಗಳೂರಿನ ಬಿ.ಎನ್.ವಿರೂಪಾಕ್ಷಪ್ಪನವರು ವೃತ್ತಿಯಲ್ಲಿ ಲಾಯರು, ಪ್ರವೃತ್ತಿಯಲ್ಲಿ ಬರಹಗಾರರು, ಆಧ್ಯಾತ್ಮ ಚಿಂತಕರು, ಗುರುಬಂಧುಗಳು. ಒಮ್ಮೆ ಇವರು ಗುರುನಾಥರನ್ನು ನೋಡಲು ಹೋದಾಗ ಬಿಸಲೇಹಳ್ಳಿಯವರೆಂದು ತಿಳಿಯುತ್ತಲೇ ಅವರ ಊರಿನ ಎಲ್ಲಾ ಪರಿಚಯಸ್ತರ ಹೆಸರು ಕುಲ-ಗೋತ್ರಗಳನ್ನೆಲ್ಲಾ ಗುರುನಾಥರು ಹೇಳಿದಾಗ ಲಾಯರ್ ಮೂಕ ವಿಸ್ಮಿತರಾದರಂತೆ.

ಮೊದಲು ಇವರು ಗುರುನಾಥರ ಮನೆಗೆ ಹೋದಾಗ ಒಂದೂವರೆ ಗಂಟೆಯವರೆಗೆ ಇವರ ಕಡೆ ತಿರುಗಿ ನೋಡದ ಗುರುನಾಥರು, ಲಾಯರ್ ಅವರ ತಾಳ್ಮೆ ಪರೀಕ್ಷೆ ಮಾಡಿದರೇನೋ, ಆಮೇಲೆ ಪರಮಾಪ್ತವಾಗಿ ಮಾತನಾಡಿಸಿ ನಂತರ ಇವರ ವೃತ್ತಿ-ಪ್ರವೃತ್ತಿಗಳನ್ನೆಲ್ಲಾ ಕೇಳಿ ಯಾವುದಾದರೂ ಒಂದನ್ನು ಪರಿಪೂರ್ಣವಾಗಿ ಹಿಡಿಯಿರಿ, ಜೋಡಿ ಕುದುರೆ ಸವಾರರಾಗುವುದು ಬೇಡವೆಂದರಂತೆ.

ಗುರುನಾಥರಾಡಿದ ಮಾತಿನಂತೆಯೇ ಸತ್ ಉಪಾಸಿ ಗುರುಗಳೂ ವೀರಭದ್ರಪ್ಪನವರನ್ನು ಪರಿಪೂರ್ಣ ಲೌಕಿಕದಿಂದ ಬಿಡಿಸಿ ಲಾಯರ್ ಗಿರಿಯನ್ನು, ಬರವಣಿಗೆಯನ್ನು ಬಿಡಿಸಿ ‘ಸುಮ್ಮನಿರಿ ಭಗವತ್ ಚಿಂತನೆಯಲ್ಲಿ ಕಾಲ ಕಳೆಯಿರಿ’ ಎಂದು ಗುರುನಾಥರು ತೋರಿದ ದಾರಿಯಲ್ಲೇ ಮುನ್ನಡೆಸಿದರಂತೆ. ರೂಪ ಬೇರಾದರೇನು ಒಳಗಿನ ಚೈತನ್ಯ ಒಂದೇ, ಸತ್ಯ ಸತ್ಯವೇ ಅಲ್ಲವೇ.

ಈ ಗುರು ಭಕ್ತರು ಒಂದು ದಿವ್ಯ ಪೇಚಾಟದಲ್ಲಿ ಸಿಕ್ಕಿಕೊಂಡುದೇ ಇಂದಿನ ನಮ್ಮ ಸತ್ಸಂಗದ ಸಾರ. ಬನ್ನಿ ಆ ಗುರು ಭಕ್ತರ ಮಾತನ್ನು ಸವಿಯೋಣ.

“ಆಡಿ ಹುಸಿಯಬಾರದು, ಆದರೆ ಕೆಲ ಒಂದು ಸಮಯ ನಾವೆಣಿಸಿದಂತೆ ನಡೆಯಲಾಗದ ಪರಿಸ್ಥಿತಿಯನ್ನು ಅವನೇ ನಿರ್ಮಿಸಿ ಬಿಡುತ್ತಾನೇನೋ. ಅಂದು ಸತ್ ಉಪಾಸಿ ಗುರುಗಳು ನಮ್ಮ ಕಡೆ ಬಂದಿದ್ದರು, ಜೊತೆಗಿದ್ದ ನನಗೆ ಗುರುನಾಥರು ಎಲ್ಲರನ್ನು ಸಕ್ರಾಯಪಟ್ನಕ್ಕೆ ಕರೆತರಲು ತಿಳಿಸಿದ್ದರು. ನಾನು ಒಪ್ಪಿಕೊಂಡೆ. ಆದರೆ ತುರ್ಯಾವಸ್ಥೆಯಲ್ಲಿದ್ದ ಅಪ್ಪಾಜಿ “ಮತ್ತೊಮ್ಮೆ ಹೋಗೋಣ” ವೆಂದಾಗ ನಾನಾದರೂ ಏನು ಮಾಡಲು ಸಾಧ್ಯ? ಇದಾದ ಎರಡು ದಿನಗಳ ನಂತರ ಮತ್ತೆ ಗುರುನಾಥರನ್ನು ನೋಡಲು ಹೋದೆ. ಕೈಯಲ್ಲಿ ಒಂದು ಚಿಪ್ಪು ಬಾಳೆಯಹಣ್ಣು ಎಂದಿನಂತೆ ತೆಗೆದುಕೋಡು ಹೋಗಿದ್ದೆ. ಗುರುನಾಥರು ದೇವಸ್ಥಾನದಲ್ಲಿದ್ದಾರೆ ಎಂದು ತಿಳಿದು, ಅತ್ತಲೇ ಹೋದೆ. ಒಂದು ಹದಿನೈದು ಇಪ್ಪತ್ತು ಜನಗಳು ಗುರುನಾಥರ ಜೊತೆಗಿದ್ದರು. ನಾನು ಮಾತಾಡಿ, ನಡೆಸದೆ ಇದ್ದುದಕ್ಕೆ ಇವತ್ತು ಗುರುನಾಥರು ಸರಿಯಾಗಿ ಬೈಯುತ್ತಾರೆಂದು ಗೊತ್ತಿತ್ತು.  ಗುರುನಾಥರಿಗೆ ನಮಿಸಿದರೆ, ಗುರುನಾಥರು ಎಲ್ಲರೆದುರಿಗೆ ‘ಮಹಾತ್ಮರನ್ನು ದರ್ಶನ ಮಾಡಿಸಿದ ಮಹಾತ್ಮ ಬಂದಿದಾನೆ ನೋಡ್ರಪ್ಪ, ಮಹಾತ್ಮರ ದರ್ಶನ ಮಾಡಿಸಿದ ಗುರು ಬಂದಿದ್ದಾರೆ ನೋಡ್ರಯ್ಯಾ’ ಎಂದರು. ನನಗೆ ಮೈಮೇಲೆ ಬಿಸಿ ನೀರು ಸುರಿದಂತಾಯ್ತು. ಎಲ್ಲರನ್ನೂ ಕಳಿಸಿದ ಅವರು 'ನೀವು ಮನೆಗೆ ಹೋಗಿ ನಾನು ಬರ‍್ತೀನಿ ಅಲ್ಲಿರಿ’ ಎಂದ ಗುರುನಾಥರು ಸ್ವಲ್ಪ ಹೊತ್ತಿನ ನಂತರ ಮನೆಗೆ ಬಂದರು. ಮುಂದೇನಾಗುತ್ತೆ ಎಂಬ ಭೀತಿ ಒಳಗೊಳಗೆ ಕಾಡಿದರೂ “ಗುರುವೇ ನೀನೇ ಗತಿ ಎಂದುಕೊಂಡೆ.” 

ದಂಢಾಧೀಶರ ಪ್ರೀತಿಯ ಶಿಕ್ಷೆ

“ಐದು ನಿಮಿಷದಲ್ಲಿ ಗುರುನಾಥರು ಬಂದರು. ಅಲ್ಲಪ್ಪಾ ಗುರುಗಳನ್ನು ಕರೆದುಕೊಂಡು ಬರ‍್ತೀನಿ ಅಂದ್ಯಲ್ಲಾ ಮಾತಿಗೆ ತಪ್ಪುವುದು ಸರೀನಾ...... ನೀವು ಲಾಯರು” ಎಂದರು. ನಾನೇನು ಮಾತನಾಡಲು ಸಾಧ್ಯ? “ತಪ್ಪಾಯ್ತು ಗುರುಗಳೇ” ಎಂದೆ. ಅದಕ್ಕವರು ‘ಅಲ್ಲಪ್ಪಾ ಯಾರದ್ದಾದರೂ ಕೊಲೆ ಮಾಡಿ ಆಮೇಲೆ ತಪ್ಪಾಯ್ತು ಅಂದುಬಿಟ್ರೆ ಆಗುತ್ತಾ? ನೀವು ಕೋರ್ಟಿನವರು ಜಡ್ಜ್‌ರು ಮಾಡಿದ ತಪ್ಪಿಗೆ ಶಿಕ್ಷೆ ಏನು ಕೊಡುತ್ತಾರೆ?’ ಎಂದು ಕೇಳಿದರು. ಕೊನೆಗೆ ಅತಿ ಕಡಿಮೆ ಎಂದರೆ ಜಡ್ಜ್ ಸಾಹೇಬರು ಕೋರ್ಟಿನಲ್ಲಿರುವವರಿಗೆ ಆ ತಪ್ಪಿತಸ್ಥ ಕುಳಿತಿರಬೇಕಾಗುತ್ತದೆ ಎಂದೆ. ಆಗ ಗುರುನಾಥರು ಹಾಗಾದರೆ ತಪ್ಪು ಒಪ್ಪಿಕೊಂಡಾಗಿದೆ, ನಾನು ಶಿಕ್ಷೆ ವಿಧಿಸುತ್ತೇನೆ. ಈ ಚಾಪೆಯ ಮೇಲೆ ನಾನು ಹೇಳುವವರೆಗೆ ಕುಳಿತಿರಬೇಕು. ಮನೆಯವರು ಕೊಟ್ಟ ಊಟ ತಿಂಡಿಗಳನ್ನು ಮಾಡಬೇಕು.  ನೇಚರ್ ಕಾಲ್‌ಗಳಿಗೆ ಮಾತ್ರ ಎದ್ದು ಹೋಗಬೇಕು ಎಂದಂದು ಒಂದು ಚಾಪೆಯನ್ನು ಹಾಸಿ ಕುಳಿತುಕೊಳ್ಳಲು ಹೇಳಿದರು. ಎಲ್ಲಿಗೋ ಹೊರಟೇಬಿಟ್ಟರು. ಮನೆಯವರು ಆಗಲೇ ತಿಂಡಿ-ತೀರ್ಥಗಳನ್ನು ತಂದುಕೊಟ್ಟರು. ಬಂದು ಹೋದವರೆಲ್ಲಾ ತಿಂಡಿ ಕೊಡುತ್ತಿದ್ದರು. ಮನೆಯವರು ಊಟ ಹಾಕಿದರು. ಬಹುಷಃ ನಾನು ಜೀವನದಲ್ಲಿ ಅಷ್ಟೊಂದು ಎಂದೂ ತಿಂದಿರಲಿಲ್ಲ. ಗುರುವಾಜ್ಞೆ ಆಗಿದೆ ನನ್ನ ಆರೋಗ್ಯ ಮುಂದೇನು ಎಂಬುದನ್ನು ಚಿಂತಿಸದೆ ಕೊಟ್ಟದ್ದನ್ನೆಲ್ಲಾ ತಿನ್ನುತ್ತಿದ್ದೆ. ಈಗ ಬರಬಹುದು, ಆಗ ಬರಬಹುದು ಎಂದು ಕಾಯುತ್ತಿದ್ದರೆ, ಸಂಜೆ ಐದು ಗಂಟೆ ಆಯ್ತು. ಇಷ್ಟರಲ್ಲಿ ಕಾರಿನಲ್ಲಿ ಬಂದ ಹೆಣ್ಣು ಮಗಳೊಬ್ಬರು ಹೊರಗೇ ಕುಳಿತು ಕಾಯುತ್ತಿದ್ದರು.  ಒಳಗೆ ಬನ್ನಿ ಎಂದರೂ ಅವರು ಬರಲಿಲ್ಲ. ಕೊನೆಗೆ ಆ ತಾಯಿ ಹಾಗೆ ಹೊರಟು ಹೋದರು. ಅವರು ಅತ್ತ ಹೋದ ಐದು ನಿಮಿಷದಲ್ಲಿ ಗುರುನಾಥರು ಮನೆಗೆ ಬಂದರು. ಬೆಳಗ್ಗೆ 11 ರಿಂದ 4ರವರೆಗೆ ಅವರು ಕಾದವರು ಹೊರಟು ಹೋಗಿದ್ದರು. ಗುರುನಾಥರು ಬಂದ ಮೇಲೆ ಕಾಯುತ್ತಿದ್ದ ಆ ಹೆಣ್ಣು ಮಗಳ ಬಗ್ಗೆ ಹೇಳಿದಾಗ ‘ಹೂಂ ಬಂದು ಬಿಡುತ್ತಾರೆ, ಮನೇಲಿ ಗಂಡನಿಗೆ ಹೇಳದೆ ಕೇಳದೆ..... ಇವರು ಬಂದ ಕೂಡಲೇ ನಾವು ದರ್ಶನ ಕೊಟ್ಟು ಬಿಡಬೇಕು. ಇದೇ ಅಂತ ಹೇಳಿ ಏನು ಮೆರೀತಾರೆ ಜನ’ ಎಂದರು. ಸಂಜೆ ಆಗ್ತಿದೆ ನಾನು ಊರಿಗೆ ಹೋಗಬೇಕೆಂದಾಗ ‘ಇರು ಏನು ಲೇಟಾಗಿಲ್ಲ ಎಂದವರೇ ತಮ್ಮ ಜೊತೆಗಿದ್ದ ಒಬ್ಬರಿಗೆ 100 ರೂ ಕೊಟ್ಟು ಮಸಾಲೆ ದೋಸೆ ತರಲು ಹೇಳಿದರು. ಅಟ್ಟದ ಮೇಲೆ ಹೋಗಿ ಒಂದು ಚಾಪೆಯ ಮೇಲೆ ಮಲಗಿಬಿಟ್ಟರು. ಜೊತೆಗಿದ್ದವರು ಕಾಲು ಒತ್ತುತ್ತಿದ್ದರು. ಮಸಾಲೆ ದೋಸೆ ನೀಡಿದರು. ಅದು ಹೇಗೆ ತಿಂದೆನೋ ಅರಿಯೆ.  ಆಮೇಲೆ ನನ್ನನ್ನು ಹೊರಗೆ ಕರೆದುಕೊಂಡು ಬಂದು ಬಸ್‌ಸ್ಟಾಂಡ್ ವರೆಗೆ ಕಳಿಸಲು ಬಂದು ‘ನೋಡು ಯಾವುದಾದರೂ ಒಂದನ್ನು ಗಟ್ಟಿಯಾಗಿ ಹಿಡಿ’ ಎಂದರು.  ಹೀಗೆ ಗುರುನಾಥರು ದಂಡಾಧೀಶರಾಗಿ ಶಿಕ್ಷೆ ನೀಡಿ, ಅದರಲ್ಲೂ ಪ್ರೀತಿಯಿಂದ ಉಣಿಸಿ ತಿನಿಸಿ ನನ್ನನ್ನು ತಿದ್ದಿದ್ದನ್ನು ನಾನೆಂದೂ ಮರೆಯಲಾರೆ” ಎಂದರು.
ಪ್ರಿಯ ಗುರುಭಕ್ತ ನಿತ್ಯ ಸತ್ಸಂಗ ಪ್ರೇಮಿಗಳೇ, ಗುರುವೆಂದರೆ ಪ್ರೀತಿಯ ಕಡಲು ಅಲ್ಲಿರದು ಕೋಪ-ತಾಪ. ಆದರೆ ತಾಳ್ಮೆಯಿಂದ ಕಾಯ್ದು ಎಲ್ಲ ಸಮರ್ಪಿಸಿದಾಗ ಎಲ್ಲ ಉತ್ತಮವಾದ್ದೇ ಆಗಿ ಬರುತ್ತದೆ. ಇಂದಿನ ಸತ್ಸಂಗಕ್ಕೆ ಅಲ್ಪ ವಿರಾಮ ಹಾಕೋಣವೇ ಗುರುನಾಥರನ್ನು ನೆನೆಯುತ್ತಾ ದಿನ ಕಳೆಯೋಣ.. ನಾಳೆ ಮತ್ತೆ ಬನ್ನಿ ಅದೇನು ಗುರುಪ್ರಸಾದ ಏನು ಅನುಗ್ರಹಿಸುತ್ತಾರೋ ಪಡೆಯೋಣ ತಪ್ಪದೇ ಬರುವಿರಲ್ಲಾ....


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment