ಒಟ್ಟು ನೋಟಗಳು

Monday, June 12, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 12
ಆ ಗಿಡಕ್ಕೆ ಸುಣ್ಣ ಬಳಿದು ಮೊಳೆ ಹೊಡೆಯಿರಿ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥



ಹಾಸನದ ಒಂದು ಕಾಲೇಜಿನ ಒಬ್ಬರು ತಮ್ಮ ವಾಡೇನೂರಿನಲ್ಲಿ 400 ಗಿಡದ ತೆಂಗಿನ ತೋಟ ಮಾಡಿದ್ದರು. ತೆಂಗೇನೋ ಚೆನ್ನಾಗೆ ಬಂದಿತ್ತು.  ಆದರೆ ದಿನನಿತ್ಯ ಕಳ್ಳರು ಒಂದೊಂದು  ಬದಿಯ ಹತ್ತು ಮರಗಳಿಂದ ಹತ್ತತ್ತು ತೆಂಗಿನಕಾಯನ್ನು ಕಳ್ಳತನ ಮಾಡುತ್ತಿದ್ದರು. ಬೇಸತ್ತು ಆ ಗೌಡರು ಈ ತೋಟವೂ ಬೇಡ, ತೆಂಗೂ ಬೇಡ ಎನ್ನುವ ಹಂತ ತಲುಪಿದಾಗ, ಈ ಕಷ್ಟವನ್ನು ಕಂಡ ಗುರುನಾಥರ ಭಕ್ತರೊಬ್ಬರು ಅದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು ಆಗಾಗ್ಗೆ ಗುರುನಾಥರ ದರ್ಶನ ಪಡೆಯುತ್ತಿದ್ದ ಒಬ್ಬ ಗುರುಭಕ್ತರಿಗೆ ತಿಳಿಯಿತು, ಅದೇನು ಕರುಣೆ ಬಂದಿತೋ, ಸಖರಾಯಪಟ್ಟಣದ ಗುರುಬಂಧುಗಳ ಬಳಿ ಸಂಕಟವನ್ನು ಗೌಡರು ತೋಡಿಕೊಂಡಾಗ ತೋಟ ಮಾರಿ ಬಿಡುವಷ್ಟು ಅವರು ರೋಸಿ ಹೋಗಿದ್ದರಿಂದ ಕೊನೆಯದಾಗಿ ಗುರುನಾಥರಲ್ಲಿ ಪರಿಹಾರ ದೊರೆಯಬಹುದೆಂದು ಕಳಿಸಿದ್ದರು. ‘ನೀವು ನಮ್ಮ ಜೊತೆ ಬನ್ನಿ’ ಎಂದು ಗೌಡರು ದುಂಬಾಲು ಬಿದ್ದಾಗ 'ಬೇಡ ನಾವು ಜೊತೆಯಲ್ಲಿ ಬರುವುದು ಬೇಡ ನೀವೇ ಹೋಗಿ, ನಿಮ್ಮದೃಷ್ಟ ಇದ್ದರೆ ದರ್ಶನವಾಗುತ್ತೆ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ಏನಾದರೂ ಒಂದು ದಾರಿ ಸಿಗುತ್ತದೆ’ ಎಂದು ಗುರುಭಕ್ತರು ತಿಳಿಸಿದಾಗ ಗೌಡರು ಮಾರನೇಯ ದಿನ ಬೆಳಿಗ್ಗೆಯೇ ಸಖರಾಯಪಟ್ಟಣಕ್ಕೆ ಹೋಗೋದು ಗುರುನಾಥರ ದರ್ಶನ ಮಾಡುವುದೆಂದು ತೀರ್ಮಾನಿಸಿದರಂತೆ, ಅಂತೆಯೇ ಹೊರಟರು. ಅವರ ಮಾತಿನಲ್ಲೇ ಮುಂದಿನದನ್ನು ಕೇಳೋಣ. 

“ಸಾರ್ ನಾನು ಬೆಳಗ್ಗೆ ಏಳು ಗಂಟೆಗೇ ಹೊರಟೆ, ಸಖರಾಯಪಟ್ಟಣ ತಲುಪಿ, ಗುರುನಾಥರ ಮನೆಗೆ ಹೋದೆ. ಒಳಗೆ ಗುರುನಾಥರಿದ್ದರು. ನನ್ನನ್ನು ಕಾಣುತ್ತಲೇ ‘ಬನ್ನಿ ಸುಬ್ಬೇಗೌಡರೇ’ ಎಂದರು ಗುರುನಾಥರು. ಒಂದು ಕ್ಷಣ ಅಪರಿಚಿತನಾದ ನನ್ನ ಹೆಸರು ಹಿಡಿದು ಕರೆದಾಗ ನನಗೆ ದಿಗ್ಬ್ರಾಂತಿಯಾಯ್ತು, ಹಾಗೇ ತಲೆ ತಿರುಗಿ ಜೋಲಿ ಬಂದಂತಾಯ್ತು. ಗುರುನಾಥರು ‘ಅಲ್ಲೇ ಕೂತ್ಕಳಿ ಆ ಅಡಿಕೆ ಮೂಟೆ ಮೇಲೆ ಕೂತ್ಕಳಿ’ ಎಂದರು. ನಂತರ ಸುಧಾರಿಸಿಕೊಂಡ ನಾನು ಗುರುನಾಥರ ಪಾದಗಳಿಗೆ ನಮಸ್ಕರಿಸಿ, ನನ್ನ ಕಷ್ಟಗಳನ್ನೆಲ್ಲಾ ತೋಡಿಕೊಂಡೆ. ಏನಾದರೂ ಮಾಡಿ ನನ್ನ ತೋಟದಲ್ಲಿ ಆಗುತ್ತಿರುವ ಕಳ್ಳತನ ನಿಲ್ಲಿಸಿಕೊಡಿ ಸ್ವಾಮಿ, ನೀವು ಏನು ಹೇಳಿದ್ರು ಮಾಡ್ತೀನಿ ಎಂದು ದೈನ್ಯದಿಂದ ಬೇಡಿಕೊಂಡೆ ಗುರುನಾಥರು ಶಾಂತಚಿತ್ತರಾಗಿ ಎಲ್ಲ ಕೇಳಿ, ಅದೇನು ಮಹಾ ದೊಡ್ಡ ಕೆಲಸವೋ ಎಂಬಂತೆ ‘ಅಷ್ಟೇ ತಾನೇ ಒಂದು ಮೊಳೆ ತಗೋಂಬನ್ನಿ.  ಒಂದು ನಾಲ್ಕಿಂಚಿನ ದೊಡ್ಡ ಮೊಳೆ ತನ್ನಿ, ಜೊತೆಗೆ ಒಂದಿಷ್ಟು ಸುಣ್ಣಾನು ತನ್ನಿ’ ಎಂದರು. ನಾನು ಕೂಡಲೆ ಅಂಗಡಿ ಹುಡುಕಿಕೊಂಡು ಹೊರಟೆ. ಯಾವ ಅಂಗಡಿ ಬಾಗಿಲುಗಳೂ ಇನ್ನೂ ತೆರೆದಿರಲಿಲ್ಲ ಸ್ವಲ್ಪ ಹೊತ್ತು ಕಾದು ನಂತರ ನಾಕಿಂಚಿನ ಮೊಳೆ ಹಾಗೂ ಸುಣ್ಣ ತೆಗೆದುಕೊಂಡು ಬಂದು ಗುರುನಾಥರಿಗೆ ನೀಡಿದೆ. ಗುರುನಾಥರು ಸುಣ್ಣ ಮೊಳೆ ಎರಡನ್ನೂ ಕೈಲಿ ತೆಗೆದುಕೊಂಡರು. ಅದೇನು ಮಂತ್ರಿಸಿದರೋ, ಆಮೇಲೆ ನನ್ನ ಕಡೆ ತಿರುಗಿ ‘ನಿಮ್ಮ ತೋಟದ ಇಂತಹ ದಿಕ್ಕಿನಲ್ಲಿ ಇಂತಹ ಒಂದು ದೊಡ್ಡ ಮರ ಇದೆಯಲ್ಲಾ’ ಅದಕ್ಕೆ ಸುಣ್ಣ ಬಳಿದು ಈ ಮೊಳೆಯನ್ನು ಪೂರ್ತಿಯಾಗಿ ಅದಕ್ಕೆ ಹೊಡೆದುಬಿಡಿ. ನಿಮ್ಮ ಕಷ್ಟ ಎಲ್ಲಾ ಪರಿಹಾರ ಆಗುತ್ತೆ' ಎಂದರು. ಏನೇನೋ ಪ್ರಯತ್ನ ಮಾಡಿದರೂ ಕಳ್ಳತನ ತಪ್ಪಿಸಲಾಗಲಿಲ್ಲ,  ಇಷ್ಟು ಸುಲಭದಲ್ಲಿ ಕೆಲಸವಾಗುತ್ತದೆ ಎಂದು ನನ್ನ ಮನ ಚಿಂತಿಸುತ್ತಿರುವಾಗಲೇ, ಗುರುನಾಥರು ‘ಸಂಶಯ ಮಾಡಬೇಡಿ ಸಾರ್ ನಂಬಿಕೆಯಿಂದ ಕೆಲಸ ಮಾಡಿ ಎಲ್ಲ ಸರಿ ಆಗುತ್ತೆ’ ಎಂದರು. ಮೈಮೇಲೆ ಬಿಸಿನೀರು ಚೆಲ್ಲಿದಂತಾಯ್ತು. ಸುಧಾರಿಸಿಕೊಂಡ ನಾನು 'ಇಲ್ಲಾ ಸ್ವಾಮಿ ತಪ್ಪಾಯ್ತು ನಂಬಿಕೆಯಿಂದ ಕೆಲಸ ಮಾಡುತ್ತೇನೆ' ಎಂದೆ.

ಮುಂದೆ ತೋಟಕ್ಕೆ ಬಂದು ನೋಡಿದಾಗ ಗುರುನಾಥರು ಹೇಳಿದ ದಿಕ್ಕಿನಲ್ಲೇ ಅವರು ತಿಳಿಸಿದ ಆ ದೊಡ್ಡ ಮರ ಇತ್ತು. ಸುಣ್ಣ ಬಳಿದು ಮೊಳೆ ಹೊಡೆದರು. ಅಂದಿನಿಂದ ಇಂದಿನವರೆಗೆ ಯಾರೂ ಕಾಯಿ ಕದಿಯಲಿಲ್ಲವಂತೆ. ಗುರುನಾಥರ ವಿಚಾರ ತಿಳಿಸಿದ ಗುರುಬಂಧುಗಳನ್ನು ನಿರಂತರ ಸ್ಮರಿಸುವ ಗೌಡರು ಇಂದೂ ಗುರುನಾಥರನ್ನು ಆದರ ಗೌರವಗಳಿಂದ ನಮಿಸುತ್ತಾರೆ. ಗುರುನಾಥರ ಹೆಸರೆತ್ತಿದರೆ ಸಾಕು ಅವರ ಉಪಕಾರವನ್ನು ನೆನೆಯುತ್ತಾರೆ.

ಪ್ರಿಯ ಸತ್ಸಂಗ ಪ್ರೇಮಿಗಳೇ, ಇಂತಹ ಅದೆಷ್ಟು ಜನ ಸಂಕಟದಲ್ಲಿದ್ದವರಿಗೆ ಗುರುನಾಥರು ದಾರಿ ತೋರಿದ್ದಾರೋ, ಸಂಕಟದಿಂದ ಪಾರು ಮಾಡಿದ್ದಾರೋ, ಯಾರಿಂದ ಬಿಡಿಗಾಸನ್ನೂ ಸ್ವೀಕರಿಸದ, ಯಾರೇನಾದರೂ ತಂದರೆ ಅವರ ಕೈಲೇ ಅಲ್ಲಿದ್ದವರಿಗೆಲ್ಲಾ ಹಂಚಿಸಿ ಬಿಡುತ್ತಿದ್ದ, ತುಂಬಾ ಭಕ್ತಿ ಭಾವದಿಂದ ಭಕ್ತರು ಏನಾದರೂ ತಂದರ್ಪಿಸಿದರೆ ಒಂದೊಂದು ಸಾರಿ ಅವರೇ ಕೈಚಾಚಿ ಒಂದು ಚೂರು ಪಡೆಯುತ್ತಿದ್ದ ಗುರುನಾಥರಂತಹವರು ಸಿಗುವುದು ದುರ್ಲಭ. ಎಂತಹ ಸಮಸ್ಯೆಯನ್ನು ಹೊತ್ತೊಯ್ದರೂ ಬಂದವರ ಭಕ್ತಿಗನುಗುಣವಾಗಿ ಪರಿಹರಿಸಿ, ಸನ್ಮಾರ್ಗಕ್ಕೆ ಹಚ್ಚುತ್ತಿದ್ದ ಗುರುನಾಥರು ಅನ್ಯಾಯ, ಅಸತ್ಯ, ಅಧರ್ಮದಲ್ಲಿ ನಡೆವವರನ್ನು ಹತ್ತಿರವೂ ಸೇರಿಸುತ್ತಿರಲಿಲ್ಲ. ಒಂದು ವೇಳೆ ಬಂದರೂ ನೇರವಾಗಿ ಮುಖ ಮುರಿವಂತೆ ಮಾತನಾಡಿದ್ದೂ ಇದೆ.

ಸಖರಾಯಪಟ್ಟಣದ ಇಂತಹ ಸವಿ ಸಕ್ಕರೆಯ ಸಿಹಿ ಪಡೆದವರೇ ಧನ್ಯರು. ನಾಳಿನ ಸತ್ಸಂಗಕ್ಕೂ ಹಾಜರಿರುವಿರಲ್ಲಾ ಗುರುಬಾಂಧವರೇ, ಕಲ್ಲು ಸಕ್ಕರೆಯ ಸವಿ ಅನುಭವಿಸಲು ಇಂದೂ ಅವರ ಹೆಸರು ಕೇಳಿದರೆ ಭಕ್ತಿಪರವಶರಾಗುವ ಭಕ್ತರಿಗೇನು ಕೊರತೆ ಇಲ್ಲ. ಅವರು ನೀಡುವ ಗುರುಕಥಾಮೃತಕ್ಕೂ ಎಂದೂ ಕೊರತೆ ಬರದು.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment