ಒಟ್ಟು ನೋಟಗಳು

Wednesday, June 14, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 14
ಭಗವಂತನ ವಿಷಯದಲ್ಲಿ ನಂಬಿಕೆ ಗಟ್ಟಿ ಆಗುತ್ತಿಲ್ಲ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥



ವಿಚಿತ್ರವೆಂದರೆ ಗುರುನಾಥರ ಹೆಸರನ್ನು ಕೇಳಿದವರು ಲಕ್ಷಾಂತರ ಮಂದಿ.  ಅದರಲ್ಲನೇಕರಿಗೆ ಇಂದು ನಾಳೆ ಎನ್ನುವುದರಲ್ಲೇ ಕಾಲಗತಿಸಿ ಬಿಟ್ಟಿರುತ್ತೆ. ಅವರ ದರ್ಶನವಾಗದೆ ನಂತರ ಹಪಹಪಿಸುತ್ತಿರುವವರಿಗೆ ಲೆಕ್ಕವೇ ಇಲ್ಲ. ಏಕೆಂದರೆ ಪ್ರಚಾರ ಪ್ರಿಯರಲ್ಲದ ಗುರುನಾಥರು ನಮ್ಮ ಪಕ್ಕದ ಮನೆಗೆ ಬಂದಿದ್ದರೂ ನಮಗೆ ಸಿಗರು. ಅದಕ್ಕೆ ವಿಶೇಷವಾದ ಅವರ ಕೃಪೆಯೇ ಬೇಕು, ಅವರ ದರ್ಶನವಾಗಲು. ಹೀಗೆ ನಾಲ್ಕೈದು ವರ್ಷಗಳಿಂದ ಗುರುನಾಥರ ಬಗ್ಗೆ ಕೇಳಿದ್ದ ಆದರೆ ಕಾಣಲಾಗದಾಗಿದ್ದ ಮತ್ತೂರಿನ ಸನತ್ ಕುಮಾರ್ ಒಂದು ದಿನ ಗಟ್ಟಿ ಮನಸ್ಸು ಮಾಡಿ ಸಖರಾಯಪಟ್ಟಣಕ್ಕೆ ಹೋದರು.. ಮುಂದೇನಾಯ್ತು? ಅವರ ನುಡಿಗಳಲ್ಲೇ ಕೇಳೋಣ ಬನ್ನಿ.. ಸತ್ಸಂಗ ಪ್ರಿಯರೇ 

“ಹೆಸರು ಮಾತ್ರ ಕೇಳಿದ್ದ ನಾನು ಆ ದೇದೀಪ್ಯ ಪ್ರಭಾ ಪುರುಷರನ್ನು ಕಂಡಾಗ ಎಷ್ಟು ದಿನ ವ್ಯರ್ಥ ಮಾಡಿಕೊಂಡು ಬಿಟ್ಟೆನಲ್ಲಾ ಹೋಗಲಿ, ಈಗಲಾದರೂ ದರ್ಶನ ಭಾಗ್ಯ ಸಿಕ್ಕಿತಲ್ಲ ಎಂದು ಸಂತಸಗೊಂಡೆ. ಅವರ ಸುತ್ತಮುತ್ತ ಅನೇಕ ಜನ ಬಂದು ಹೋಗುತ್ತಿದ್ದವರು. ಬಂದವರಿಗೆಲ್ಲಾ ಏನೇನೋ ಪರಿಹಾರ ಹೇಳುತ್ತಿದ್ದರು. ಎಷ್ಟು ಹೊತ್ತಾದವರು ನನ್ನನ್ನವರು ವಿಚಾರಿಸಲೇ ಇಲ್ಲ. ಅವರ ಬಳಿ ಸಮಸ್ಯೆ ಹೊತ್ತು ಹೋದವನು ನಾನೇ ಅಲ್ಲವೇ,  ಕೊನೆಗೆ ಗುರುನಾಥರಲ್ಲಿ ನೇರವಾಗಿ ಮಾತು ಶುರು ಮಾಡಿದೆ,  ನಾನು ಬಂದು ಇಷ್ಟೊತ್ತಾಯ್ತು,  ಎಲ್ಲರ ಸಮಸ್ಯೆಗೆ ಉತ್ತರ ಹೇಳಿದಿರಿ ನನಗೆ ಕೃಪೆ ತೋರಲಿಲ್ಲ ಎಂದಾಗ ‘ಹೌದಲ್ಲ ಬಂದವರು ಬಹಳ ಇದ್ದರು ಬಹಳ ಸಮಯವಾಯಿತು. ಏನು ನಿಮ್ಮ ಸಮಸ್ಯೆ ಹೇಳಿ?’ ಎಂದು ಪ್ರೀತಿಯಿಂದ ಕೇಳಿದರು. ಇನ್ನೇನಿಲ್ಲ ಗುರುನಾಥರೆ,  ಭಗವಂತನ ವಿಷಯದಲ್ಲಿ ಪರೊಪೂರ್ಣವಾದ ನಂಬಿಕಯೇ ಗಟ್ಟಿಯಾಗುತ್ತಿಲ್ಲ ಅದೊಂದನ್ನು ಅನುಗ್ರಹಿಸಿದರೆ ಎಲ್ಲವೂ ದೊರಕುತ್ತದೆ ಎಂದು ನಾನಂದಾಗ ಅವರು ‘ಭಗವಂತನಲ್ಲಿ ನಿಮಗೆ ಗಟ್ಟಿ ನಂಬಿಕೆ ಇರದಿದ್ದರೆ ಅಯ್ಯೋ ನೀವು ಇಲ್ಲಿಗೆ ಬರುತ್ತಲೇ ಇರಲಿಲ್ಲ. ಸುಮಾರು ಇಪ್ಪತ್ತೆರೆಡು ವರ್ಷದ ಹಿಂದೆ ಎದುರುಗಡೆ ಅಟ್ಟದಲ್ಲಿ ಬಂದು ಒಂದು ಕಾವ್ಯವಾಚನ ಮಾಡಿದ್ರಿ’ ನನಗೆ ತುಂಬಾ ಸಂತಸವಾಗಿತ್ತು ಎಂದು ನಿಖರವಾಗಿ ಆ ದಿನವನ್ನು ಹೇಳಿದವರು. ಹೀಗೆ ಗುರುನಾಥರ ಆ ಮೊದಲ ದರ್ಶನ ನನಗೆ ಬೇಕಾದ್ದನ್ನು ನೀಡಿತ್ತು. ಅತ್ಯಂತ ಸರಳ ಸಂಭಾಷಣೆಯಿಂದ, ಪ್ರೀತಿಯಿಂದ ನನಗೆ ಆಶೀರ್ವದಿಸಿದವರು” ಎಂದು ನೆನೆಸುತ್ತಾರೆ ಆ ಗುರುಭಕ್ತರಾದ ಸನತ್ ಕುಮಾರರು.

ಮುಂದೆ ಆ ಕೂಡಲೀ ಮಠಕ್ಕಾಗಿ ಒಂದು ವೇದಪಾಠಶಾಲೆಯನ್ನು ನಡೆಸಲು ಇವರು ತೊಡಗಿದವರು. ಹಣಕ್ಕಾಗಿ (ಪಾಠಶಾಲೆಯ ನಿರ್ವಹಣೆಗಾಗಿ) ದಾನಿಗಳಿಂದ ಹಣ ಪಡೆಯುವ ಪರವಾನಗಿ, ರಶೀದಿ ಪುಸ್ತಕಗಳನ್ನೆಲ್ಲಾ ಸಿದ್ದಪಡಿಸಿಕೊಂಡು ಪಾಠಶಾಲೆಯನ್ನು ಪ್ರಾರಂಭಿಸಿದರು. ಅದರು ನಡೆಯು ಅಷ್ಟು ಸುಗಮವಾಗಿರಲಿಲ್ಲ. ಮತ್ತೊಬ್ಬ ಅಭಿಮಾನಿಗಳು ಗುರುನಾಥರನ್ನು ಈ ಸಂಬಂಧ ಕಾಣುವುದು ಉತ್ತಮವೆಂದು ಸನತ್ ಕುಮಾರ್ ಅವರನ್ನು ಕರೆದೊಯ್ದರು. ಆ ಸಮಯದಲ್ಲಿ ಇವರ ಆರ್ಥಿಕ ಪರಿಸ್ಥಿತಿಯೂ ಅಂತಹ  ಹೇಳಿಕೊಳ್ಳುವಂತಿರಲಿಲ್ಲ.

“ಮತ್ತೆ ಅಂದೂ ಗುರುನಾಥರನ್ನು ಕಂಡು ನಮಿಸಿದೆ. ಪಾಠಶಾಲೆ ಪ್ರಾರಂಭ ಮಾಡಿದ ವಿಷಯವನ್ನು ತಿಳಿಸಿದಾಗ ಗುರುನಾಥರು ಬಹಳ ಸಂತಸಪಟ್ಟರು. "ನಲವತ್ತು ವರ್ಷದಿಂದ ಇಂತಹ ಪಾಠಶಾಲೆ ನಡೆಸಬೇಕೆಂಬ ವಿಚಾರವಿತ್ತು ಹೆದರಬೇಡಿ ಗುರುಗಳು ನಡೆಸಿಕೊಡುತ್ತಾರೆ. ಪ್ರಾರಂಭ ಮಾಡಿದ್ದೀರಿ ತುಂಬಾ ಸಂತೋಷವಾಯ್ತು ನಿಲ್ಲಿಸಬೇಡಿ” ಎಂದರು. ಒಳಗೆ ಕರೆದುಕೊಂಡು ಹೋಗಿ, ಶೃಂಗೇರಿ ಮಠದ ಮೂವರು ಗುರುವರ‍್ಯರ ಪಾದುಕೆಗಳ ಪೂಜೆ ಮಾಡುವ ಸೌಭಾಗ್ಯ ನೀಡಿದವರು. ಪ್ರತ್ಯೇಕವಾಗಿ ಒಳಗೆ ಅಡಿಗೆ ಮಾಡಿಸಿ ಅದೆಷ್ಟು ಪ್ರೀತಿ ಆದರಗಳಿಂದ ನಮ್ಮನ್ನು ಸತ್ಕರಿಸಿದರೆಂದರೆ, ಗುರುನಾಥರ ತಾಯಿಯ ಮಮತೆಯ ಅರಿವು ನನಗಾಗ ಆಗಿತ್ತು. ಅತ್ಯಂತ ಸಾಲದ ಹೊರೆಯಲ್ಲಿದ್ದ ನಾನು, ಅದೇಕೋ ಕೇಳಬಾರದೆಂದರೂ ಮನಸ್ಸು ತಡೆಯಲಿಲ್ಲ ಗುರುನಾಥರೆದುರು ನನ್ನ ಮನದ ನೋವನ್ನು ತೋಡಿಕೊಂಡೆ. ಗುರುನಾಥರೆ ಏಕೋ ಸಾಲಬಾಧೆ ತಡೆಯಲಾಗುತ್ತಿಲ್ಲ. ಎಂಟು ವರ್ಷದಿಂದ ನನ್ನನ್ನಿದು ಕಾಡುತ್ತಿದೆ ಎಂದೆ. ‘ಅದಕ್ಕವರು ಅಯ್ಯೋ ಅಷ್ಟೇ ತಾನೇ ಬನ್ನಿ ಇಲ್ಲಿ’ ಎಂದು ಕರೆದು, ಐದು ಹಿಡಿ ಅರಳನ್ನು ಕೊಟ್ಟರು. ‘ಇದನ್ನು ನೆಲದ ಮೇಲೆ ಇಡದೆ ನೇರವಾಗಿ ಯಾವುದಾದರೂ ಅರಳಿಮರಕ್ಕೆ ಸುತ್ತು ಹಾಕಿ ಬನ್ನಿ’  ಎಂದರು.  ಅಷ್ಟು ಸುಲಭವಾಗಿ ಆಗುವ ಕೆಲಸ ಮಾಡಿದೆ.  ಗುರುನಾಥರ ಕೃಪೆ ಅನುಗ್ರಹದಿಂದ ನಾನೀಗ ಸಾಲಗಾರನಾಗುಳಿದಿಲ್ಲ.  ಬೆಟ್ಟದಂತಹಾ ನನ್ನ ಕಷ್ಟಗಳೆಲ್ಲಾ ಗುರುಕೃಪೆಯಿಂದ ಕಡ್ಡಿಯಂತೆ ಕರಗಿ ಹೋಯ್ತು.  ಗುರುನಾಥರ ಉಪಾಸನಾ ರೀತಿಯನ್ನು ಅವರಿಂದ ಕಲಿಯಬೇಕಿತ್ತು.  ಎಲ್ಲ ಕಾಲ ಮಿಂಚಿದೆ.  ಅವರ ಅನುಗ್ರಹ ನಮಗಾಗಬೇಕು ಇದೇ ನನ್ನ ನಿರಂತರ ಪ್ರಾರ್ಥನೆ” ಎನ್ನುತ್ತಾರೆ ಮತ್ತೂರಿನ ಗುರುಬಂಧುವಾದ  ಸನತ್‌ ಕುಮಾರರು.

ಮತ್ತೊಂದು ವಿಚಿತ್ರ ಪ್ರಸಂಗದಲ್ಲಿ ಬೆಳಗಿನ ಜಾವವೇ ಬಂದು ಗುರುನಾಥರು ಇವರ ತಮ್ಮನ ಮನೆಯ ಬಾಗಿಲು ಬಡಿದರಂತೆ. ಕಣ್ಣುಜ್ಜುತ್ತಾ ಎದ್ದು ಬಂದವರಿಗೆ ‘ಇದೇನು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸಾಧನೆ ಮಾಡದೆ ಹೀಗೆ’ ಎಂದಂರಂತೆ. ಒಂದಷ್ಟು ಹಿತ್ತಲಿನಿಂದ ಹೂವು ತರಿಸಿ ಪೂಜೆ ಮಾಡಬೇಕೆಂದಾಗ, ‘ಒಂದು ಗಿಡವೂ ಇಲ್ಲ ಎಲ್ಲಾ ಒಣಗಿ ಹೋಗಿದೆ’ ಎಂದು ಮನೆಯವರೆಂದಾಗ, ಗುರುನಾಥರು ಹಿತ್ತಲಿಗೆ ಹೋಗಿ ಒಂದು ಬೊಗಸೆ ಹೂವು ತಂದು ಪೂಜೆ ಮಾಡಿದರಂತೆ.  ಅದೆಲ್ಲಿತ್ತು ಹೂವು. ಸೃಷ್ಟಿ ಮಾಡಿದರೋ ಹೂವನ್ನು?  ಬೆಳಗಾಯ್ತು ನೆರೆದ ಜನಗಳಿಗೆ ಆಶೀರ್ವಾದ ಮಾಡಿ ಹೊರಟಾಗ ಸ್ವಲ್ಪ ದೂರ ಹಿಂಬಾಲಿಸಿದ ಸನತ್‌ ಕುಮಾರರ ತಮ್ಮನನ್ನು ‘ನೀನು ಹೋಗು ನಿನ್ನ ಕೆಲಸ ನೋಡಿಕೋ’ ಎಂದು ಬಲವಂತ ಮಾಡಿ ಗುರುನಾಥರು ವಾಪಸ್ಸು ಕಳಿಸಿದರಂತೆ.  ಎರಡು ಹೆಜ್ಜೆ ಹಿಂದಡಿ ಇಟ್ಟು ತಿರುಗಿ ನೋಡಿದಾಗ ಗುರುನಾಥರು ಎಲ್ಲೂ ಕಾಣಲಿಲ್ಲ.  ಎಲ್ಲಿ ಹೋದರು? ಆ ಪ್ರಶ್ನೆಗಿನ್ನೂ ಯಾರಿಗೂ ಉತ್ತರ ಸಿಕ್ಕಿಲ್ಲವಂತೆ.  ಪ್ರಿಯ ಸತ್ಸಂಗ ಗುರುಬಾಂಧವರೇ ಗುರುನಾಥರ ಸತ್ಸಗದಲ್ಲಿ ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದ ಅದೆಷ್ಟೋ ಪ್ರಸಂಗಗಳಿವೆ, ಗುರುಶಕ್ತಿಯೇ ಅಂತಹುದು, ತರ್ಕಕ್ಕೆ ನಿಲುಕದ್ದು, ಕಣ್ಣಿಗೆ ಕಾಣದ್ದು, ಭಾವಕ್ಕೆ ಮಾತ್ರ ಸಿಕ್ಕುವಂತಹದು.  ಸದ್ಯಕ್ಕೆ ಸ್ಪಲ್ಪ ವಿರಾಮವಿರಲಿ. ನಾಳೆಯೂ ಬನ್ನಿ, ಭಾವ ಶುದ್ದರಾಗಿ, ಗುರುನಾಥ ಪ್ರಿಯರಾಗಿ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment