ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 15
ಜಗದ್ಗುರುಗಳಿಗೆ ನಮಿಸಿ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಮತ್ತೂರಿನ ಮತ್ತೊಬ್ಬರು ಗುರುಭಕ್ತರಿಗೆ ಗುರುನಾಥರ ದರ್ಶನ ಭಾಗ್ಯ ದೊರೆತ ವಿಚಿತ್ರ ಪ್ರಸಂಗ ಒಂದನ್ನು ನಿತ್ಯ ಸತ್ಸಂಗಕ್ಕಾಗಿ ಧಾರೆ ಎರೆದರು. ಗುರುನಾಥರ ಕೃಪೆ ಎಂದರೆ, ಹೀಗೆ ಇದ್ದಕ್ಕಿದ್ದಂತೆ ಎಲ್ಲೆಲ್ಲಿಯೋ ಇರುವವರಿಗೆ ದರ್ಶನವೀಯುವುದು. ಆದರೆ ತಾನ್ಯಾರೆಂದು, ಎಲ್ಲಿಂದ ಬಂದರೆಂಬುದೇ ತಿಳಿಯುವುದರಲ್ಲಿ ಅದೆಲ್ಲಿಯೋ ಮರೆಯಾಗಿ ಬಿಡುತ್ತಿದ್ದರು. ಅವರು ಅದಾವ ಗುರಿ ಇಟ್ಟುಕೊಂಡು ಬರುತ್ತಿದ್ದರೋ, ಅದಾವಾಗ ಆ ಕೆಲಸವಾಗಿ ಬಿಡುತ್ತಿತ್ತೋ ಅದವರೇ ಬಲ್ಲರೆನ್ನುವ ಮತ್ತೂರಿನ ಗುರುಬಂಧುಗಳ ಅನುಭವ ನೋಡಿ.
“ಅಂದು ಮತ್ತೂರಿಗೆ ಶೃಂಗೇರಿಯ ಶ್ರೀಗಳು ಬರುತ್ತಾರೆಂದು ಊರವರೆಲ್ಲಾ ಜಗದ್ಗುರುಗಳನ್ನು ಸ್ವಾಗತಿಸುವ ಸಂಭ್ರಮದಲ್ಲಿದ್ದರು. ಅಷ್ಟರಲ್ಲಿ ಊರವರಲ್ಲದ ಒಬ್ಬರು, ಒಂದು ಪಂಚೆಯುಟ್ಟು ಅಲ್ಲಿ ಕಂಡರು. ನನಗಂತೂ ಅವರಾರೆಂದು ಗೊತ್ತೇ ಇರಲಿಲ್ಲ. ಅವರನ್ನು ನಾನು ನೋಡಿದುದು ಅದೇ ಮೊದಲು. ಆ ತುಂಬು ಮೊಗ, ಮೊಗದ ತುಂಬಾ ಬಿಳಿಗೂದಲು, ಪ್ರಕಾಶಮಾನವಾದ ಆ ಕಣ್ಣುಗಳು, ಇವರಾರೋ ಸಾಮಾನ್ಯರಲ್ಲವೆನ್ನುವುದನ್ನು ಬಿಂಬಿಸುತ್ತಿತ್ತು. ಅಷ್ಟರಲ್ಲಿ ಕೆಲವರು ‘ಅವಧೂತರು, ಅವಧೂತರು....ಸಕ್ರಾಯಪಟ್ಟಣದ ಗುರುಗಳು’ ಎಂದು ಬಹುದೊಡ್ಡ ನಿಧಿ ತನ್ನ ತಾನೇ ತಮ್ಮ ಮಡಿಲಿಗೆ ಬಿದ್ದಂತೆ, ಅವರನ್ನು ಸುತ್ತುವರೆದು ನಮಸ್ಕರಿಸುತ್ತಿದ್ದರು. ಅವರುಗಳು ಶಾಂತಚಿತ್ತರಾಗಿ 'ಜಗದ್ಗುರುಗಳಿಗೆ ನಮಿಸಿ ನನಗ್ಯಾಕೆ ಇದೆಲ್ಲಾ ಸಾಕ್ಷಾತ್ ವಿದ್ಯಾ ದೇವತೆ ಶಾರದೆಯೇ ಬರುತ್ತಿದ್ದಾಳೆ’ ಎಂದರು. ಅಷ್ಟು ಹೊತ್ತಿಗೆ ಜಗದ್ಗುರುಗಳ ಕಾರು ಬಂದಿತು. ಅವಧೂತರನ್ನು ಕಂಡ ಕೂಡಲೇ ಜಗದ್ಗುರುಗಳು ಕಾರು ನಿಲ್ಲಿಸಿದರು. ಅವರು ಕಾರಿನ ಬಳಿ ಬಂದು ಅತ್ಯಂತ ಭಕ್ತಿ ನಯ ವಿನಯಗಳಲ್ಲಿ ಬೆನ್ನು ಬಾಗಿಸಿ, ಜಗದ್ಗುರುಗಳೊಂದಿಗೆ ಕೆಲ ಹೊತ್ತು ಏನೋ ಸಂಭಾಷಿಸಿದರು. ನಂತರ ಕಾರು ಮುಂದುವರೆಯಿತು, ಜನಜಂಗುಳಿ ಹಿಂದೆ ಸಾಗಿತು. ಇದ್ದಕ್ಕಿದ್ದಂತೆ ಗುರುನಾಥರು ಎತ್ತ ಅದೃಶ್ಯರಾದರೋ, ಅಂದು ಮತ್ತೆ ಅಲ್ಲಿ ಕಾಣಲೇ ಇಲ್ಲ. ಆದರೆ ಅವರ ವಿನೀತತೆ, ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಗುರುನಾಥರು ಕಾರಿಗೆ ಪ್ರದಕ್ಷಿಣೆ ಬಂದು ನಮಸ್ಕರಿಸಿ, ಅಷ್ಟರಲ್ಲಿ ಅವರ ಶಿಷ್ಯರಾರೋ ತಂದ ಚಾಮರವನ್ನು ಜಗದ್ಗುರುಗಳಿಗೆ ಬೀಸಿ ವಿನಯದ ಸಾಕಾರಮೂರ್ತಿಯಾಗಿ ನಡೆದುಕೊಂಡರು. ಮುಂದೆ ಭಜನಾ ಮಂದಿರಕ್ಕೆ ಜಗದ್ಗುರುಗಳನ್ನು ವೇದಘೋಷದಲ್ಲಿ ಕರೆದೊಯ್ಯಬೇಕಿತ್ತು. ಗುರುನಾಥರ ಬಳಿ ನಿಂತಿದ್ದ ಕೆಲವರನ್ನು ಮುಂದೆ ಹೋಗಿ....ಮುಂದೆ ಹೋಗಿ ಜಗದ್ಗುರುಗಳನ್ನು ಸ್ವಾಗತಿಸಿ, ಎಂದು ಕಳಿಸಿಬಿಟ್ಟರು. ಅವರು ಕ್ಷಣಾರ್ಧದಲ್ಲಿ ತಿರುಗಿ ನೋಡಿದರೆ ಗುರುನಾಥರು ಕಾಣಲೇ ಇಲ್ಲ. ಆಮೇಲೆ ಇದೇ ಮತ್ತೂರಿಗೆ ಮತ್ತೊಮ್ಮೆ ಗುರುನಾಥರು ಬಂದಾಗಲೂ ಆದ ವಿಚಿತ್ರವನ್ನು ಈ ರೀತಿ ಆ ಭಕ್ತರು ವಿವರಿಸುತ್ತಾ ಮುಂದುವರೆಸಿದರು ಗುರು ಚರಿತ್ರೆಯನ್ನು. “ಅವತ್ತು ಗುರುನಾಥರು ಬಂದವರೇ ಒಂದು ಯತಿ ಕುಟೀರಕ್ಕೆ ಹೋದರು. ಮೊದಲೇ ನಮಗೆಲ್ಲಾ ಅವಧೂತರ ರೀತಿ ನೀತಿಗಳ ಪರಿಚಯವಿರಲಿಲ್ಲ. ನಮ್ಮೂರಿನ ಕಂಚಿ ಮಠ ಎಂದು ಕರೆಯಲ್ಪಡುವ ಆ ಮಠದಲ್ಲಿ ನಮ್ಮವರೊಬ್ಬರು ಸನ್ಯಾಸಿಗಳಾಗಿದ್ದರು. ಅತ್ಯಂತ ತಪೋನಿಷ್ಟರು. ಅಂದು ಇದ್ದಕ್ಕಿದ್ದಂತೆ ಗುರುನಾಥರು ಬಂದವರೇ ಆ ಯತಿಗಳಿಗೆ ದರ್ಶನವಿತ್ತರು. ಗುರುನಾಥರನ್ನು ಕಂಡ ಕೂಡಲೇ ಆನಂದಬಾಷ್ಪ ಉಕ್ಕಿ ಹರಿಯಿತು ಸನ್ಯಾಸಿಗಳ ಕಣ್ಣಲ್ಲಿ. ಆ ಯತಿಗಳು ಅದೇನನ್ನಪೇಕ್ಷಿಸಿದ್ದರು - ಅದಕ್ಕೆ ಗುರುನಾಥರು ಅದ್ಯಾವ ರೂಪದಲ್ಲಿ ದರ್ಶನ ನೀಡಿದ್ದರೋ, ಸರ್ವ ಸಮರ್ಥರಾದ ಗುರುನಾಥರೇ ಬಲ್ಲರು. ನಾವೆಲ್ಲಾ ಮೂಕ ಸಾಕ್ಷಿಗಳಾಗಿ ಆ ಭಾವ ಸಮಾಗಮವನ್ನು ನೋಡುತ್ತಿದ್ದೆವು. ಅಷ್ಟೇ ನಮಗೆ ಸಿಕ್ಕ ಪುಣ್ಯವೇನೋ. ಅತ್ಯಂತ ಭಾವುಕರಾಗಿ ಆನಂದಾಶೃ ಹರಿಸುತ್ತಿದ್ದ ಆ ಸನ್ಯಾಸಿಗಳನ್ನು ಗುರುನಾಥರು ಅತ್ಯಂತ ಪ್ರೀತಿಯಿಂದ ಅಪ್ಪಿಕೊಂಡರು. ಸಾಕ್ಷಾತ್ ಪರಮಾತ್ಮನನ್ನೇ ಆಲಂಗಿಸಿದಂತೆ ಆನಂದ ಯತಿಗಳ ಮುಖದಲ್ಲಿ ಕಂಡು ಬರುತ್ತಿತ್ತು. ಅದೇನೋ ಒಂದೆರೆಡು ಮಾತುಗಳನ್ನು ಗುರುನಾಥರಾಡುವುದರಲ್ಲಿ, ಅದೆಲ್ಲಿತ್ತೋ ಜನಸಮೂಹ ಜಾಸ್ತಿಯಾಗಿಬಿಟ್ಟಿತ್ತು. ಹೊರಬಂದ ಗುರುನಾಥರು ಏನೇನೋ ಮಾತುಗಳನ್ನಾಡುತ್ತಿದ್ದರು. ಅದು ಆ ಗುಂಪಿನ ಒಳಗಿರುವ ಯಾರನ್ನು ತಲುಪಬೇಕೋ ಅವರನ್ನು ತಲುಪಿ, ಅವರ ಆದೇಶಕ್ಕನುಗುಣವಾಗಿ ಪ್ರತಿಕ್ರಿಯಿಸುತ್ತಿದ್ದರು. ಹೀಗೆ ಹಲವು ಮಾತುಗಳು ಗುರುನಾಥರ ಬಾಯಿಂದ ಹೊರ ಬರುತ್ತಿತ್ತು - ಸಮೂಹದಿಂದ ಪ್ರತಿಕ್ರಿಯೆಯೂ ಬರುತ್ತಿತ್ತು. ಇದನ್ನು ಗಮನಿಸುತ್ತಿದ್ದ ನನಗೆ ಗುರುನಾಥರ ಅಪಾರ ಶಕ್ತಿ ನನ್ನನ್ನು ಮೂಕವಿಸ್ಮಿತನಾಗಿಸಿತ್ತು. ಅದಲ್ಲದೆ ಗುರುನಾಥರು ಬಂದು ಹೋದರೆ ತಿಂಗಳುಗಟ್ಟಲೆ ಊರಿನಲ್ಲಿ ಒಂದು ವೈಬ್ರೇಷನ್ ಇರುತ್ತಿತ್ತು. ನಮ್ಮ ತಂಡದಲ್ಲಿ ಸಂಧ್ಯಾವಂದನೆ ಮಾಡುವ ಪಾರಾಯಣ ಮಾಡುವ ಸತ್ ಕೆಲಸಗಳತ್ತ ನಮ್ಮ ಮನವಿರುತ್ತಿತ್ತು. ಒಂದು ರೀತಿ ಇದು ನಮ್ಮ ಊರಿನ ಮೇಲೆ ಸಮೂಹದ ಮೇಲೆ ಪರಿಣಾಮ ಬೀರಿತ್ತೆಂದರೆ ಅತಿಷಯವಲ್ಲ” ಎನ್ನುತ್ತಾರೆ. ಮಹಾತ್ಮರ ಮಹಾನ್ನತೆಯೇ ಹೀಗೆ.. ಗುರುನಾಥರು ಹೆಜ್ಜೆ ಇಟ್ಟರೆ ಬೇರೆ ಭಾವನೆ ಬರಲು ಅದು ಹೇಗೆ ಸಾಧ್ಯ. ಗುರುನಾಥರ ನಾಮಸ್ಮರಣೆ ಮಾಡಿದರೆ ಸಾಕು...ಬಹು ದೊಡ್ಡ ಪರಿವರ್ತನೆ ಕಾಣುವಲ್ಲಿ...ಅವರ ಸಾನಿಧ್ಯವಿದ್ದಾಗ ಏನಾಗಬೇಡ ಹೇಳಿ...ಪ್ರಿಯ ನಿತ್ಯ ಸತ್ಸಂಗ ಅಭಿಮಾನಿ ಗುರುಬಾಂಧವರೇ ನಾಳೆಯೂ ನಮ್ಮೊಂದಿಗಿರುವಿರಲ್ಲಾ...ಮತ್ತಷ್ಟು ತಿಳಿಯಲು.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment