ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 16
ಡಿಸೆಂಬರ್ ಇಪ್ಪತ್ತೈದಲ್ಲವೇ ನೀವು ಹುಟ್ಟಿದ್ದು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುದರ್ಶನಾಕಾಂಕ್ಷಿಗಳಾದವರಿಗೆ ಗುರುನಾಥರು, ಅವರ ಉತ್ಕಟ ಪ್ರೀತಿಗನುಗುಣವಾಗಿ ಕೆಲವೊಮ್ಮೆ ದರ್ಶನ ನೀಡಿದರು. ಇನ್ನು ಕೆಲವೊಂದು ಘಟನೆಗಳಲ್ಲಿ ಅತಿ ಸುಲಭವಾಗಿ ಗುರುನಾಥರೇ ದರ್ಶನ ನೀಡಿದ ಘಟನೆಗಳೂ ಇವೆ. ಆದರೆ ಎಲ್ಲೋ ಒಂದೆಡೆ ಸುಪ್ತ ಮನಸ್ಸಿನಲ್ಲಿ ಗುರುದರ್ಶನದ ಸಾತ್ವಿಕ ಅಭಿಲಾಷೆ ಇದ್ದಿರುತ್ತದೇನೋ, ಇಂತಹ ಅನುಭವವೂ ಹಾಸನದ ಗುರುಭಕ್ತರಾದ ಪ್ರಕಾಶ್ ಅನುಭವಕ್ಕೆ ಬಂದ ಸ್ವಾರಸ್ಯವೇ ಇಂದಿನ ನಿತ್ಯಸತ್ಸಂಗದ ವಿಚಾರ. ಬನ್ನಿ ಗುರುಬಾಂಧವ ಸತ್ಸಂಗ ಪ್ರಿಯರೇ... ಅವರನುಭವಗಳನ್ನು ಸ್ವಾಗತಿಸೋಣ.
“ನನ್ನ ಆತ್ಮೀಯರೂ, ಪರಿಚಿತರೂ ಆದ ಹಾಸನದ ಪ್ರಭಾಕರ್ ಅವರು ಗುರುನಾಥರ ವಿಚಾರವನ್ನು ಅಗಾಗ್ಗೆ ನನ್ನಲ್ಲಿ ಪ್ರಸ್ತಾಪಿಸುತ್ತಿದ್ದರು. ಜೊತೆಗೆ ಒಂದು ದಿನ ಹೋಗಿ ಬರೋಣ ಗುರುನಾಥರ ಪರಿಚಯ ಮಾಡಿಸ್ತೀನಿ, ಅಂತಲೂ ಅಂದಿದ್ದರು. ಎಲ್ಲಾ ಅವನಿಚ್ಚೆಯಂತೆ ನಡೆವುದು ಎಂದು ಭಾವಿಸುವ ನನಗೆ, ಒಂದು ದಿನ ಇದ್ದಕ್ಕಿದಂತೆ ಇವತ್ತು ಬರ್ತೀರಾ ಹೋಗೋಣ ಎಂದು ಕೇಳಿದರು. ಫೆಬ್ರವರಿ ಮಾಹೆ 1994 ಇರಬೇಕು. ಆಯ್ತು ಎಂದು ಹೊರಟೇಬಿಟ್ಟೆವು ಕಾರಿನಲ್ಲಿ. ಗುರುನಾಥರು ಇರುತ್ತಾರೋ ಇಲ್ಲವೋ. ಫೋನು ಮಾಡಿ ಕೇಳಿದರುತ್ತಮವೇ? ಎಂಬೆಲ್ಲಾ ಚರ್ಚೆಗಳು ಕಾರಿನಲ್ಲಿ ನಡೆಯುತ್ತಿತ್ತು. ಆದರೆ ಅದೇಕೋ ನನ್ನ ಮನಸ್ಸಿನಲ್ಲಿ ಅದ್ಯಾವ ತಾಕಲಾಟಗಳು ಇಲ್ಲದೆ, ಸಿಕ್ಕಿದರೆ ಒಳ್ಳೆಯದು... ಇಲ್ಲದಿದ್ದರೆ... ಎಂಬ ಯೋಚನೆಗಷ್ಟು ಪ್ರಾಶಸ್ತ್ಯವಿರಲಿಲ್ಲ. ಅಂತೂ ಗುರುನಾಥರ ಮನೆಯ ಮುಂದೆ ನಮ್ಮ ಕಾರು ನಿಂತಿತು. ಅವರ ಹಳೆಯ ಮನೆಯ ಮೆಟ್ಟಿಲ ಮೇಲೆ ನಿಂತಿದ್ದರು ಗುರುನಾಥರು. ಅವರ ಭವ್ಯ ದರ್ಶನವಾಯಿತು. ಸರಸರ ಮೆಟ್ಟಿಲುಗಳನ್ನಿಳಿದು ಬಂದ ಗುರುನಾಥರು ನನ್ನ ನೋಡಿ ‘ನೀವು ಡಿಸೆಂಬರ್ ಇಪ್ಪತ್ತೈದಕ್ಕಲ್ಲವೇ ಹುಟ್ಟಿದ್ದು’ ಎಂದರು. ನಂತರ ಅವರು ‘ಇದೇ ತಾನೇ ಡಾಕ್ಟರು ಹೋಗಿಬಿಟ್ಟರು’ ಎಂದರು. ನನಗೆ ಆ ಎರಡನೆಯ ಮಾತಿನ ಅರ್ಥ ಇದುವರೆವಿಗೂ ಆಗಿಲ್ಲ... ನಾವೆಲ್ಲಾ ಇಳಿದು ಅವರ ಮನೆಯೊಳಗೆ ಹೋದರೆ ದೊಡ್ಡ ಸಮೂಹವೇ ಅಲ್ಲಿತ್ತು. ಯಾವುದೋ ಸಮಾರಾಧನೆಯ ಸಿದ್ದತೆಯಂತೆ ಕಂಡು ಬರುತ್ತಿತ್ತು. ನಾನು ಗುರುನಾಥರ ಕಾಲಿಗೆರಗಿದೆ. ಅವರು ನನಗೆ ನಮಸ್ಕರಿಸಿದರು. ಮತ್ತೆ ನಾನವರಿಗೆ, ಅವರು ನನಗೆ ನಮಸ್ಕರಿಸುವ ಪ್ರಕ್ರಿಯೆಯನ್ನು... ಪ್ರಭಾಕರ್ ಅವರು ಸೂಚ್ಯವಾಗಿ ನಿಲ್ಲಿಸಿದರು. ಈ ರೀತಿ ಬಂದವರಲ್ಲಿ ಭಗವಂತನನ್ನು ಕಂಡು ಆದರಿಸಿ ನಮಸ್ಕರಿಸುವ ಒಂದು ವಿಶೇಷ ಗುಣ ಗುರುನಾಥರಲ್ಲಿ ನಾನು ಆ ಮೊದಲೇ ಕಂಡೆ... ಮುಂದೆ ಕೆಲವೊಂದು ಸಾರಿ ಕೆಲವರು ನಮಸ್ಕಾರ ಮಾಡಲು ಬಂದರೆ ‘ಮಾಡಬೇಡಿ ಅಪ್ಪಾ’ ಎಂದು ದೂರ ಸರಿಯುತ್ತಿದ್ದರು. ಒಮ್ಮೊಮ್ಮೆ ಯಾರಾದರೂ ಬಂದು ಭಕ್ತಿಯಿಂದ ನಮಿಸಿದರೆ ಸಂತಸದಿಂದ ನಮಸ್ಕಾರ ಮಾಡಿಸಿಕೊಳ್ಳುತ್ತಿದ್ದುದು ಕಂಡಿದ್ದೆ. ನಾನು ಅನೇಕ ಸಾರಿ ಗುರುನಾಥರನ್ನು ಕಾಣಲು ಹೋದಾಗಲೆಲ್ಲಾ ಅವರಿಂದ ಕೇಳಿ ಬರುತ್ತಿದ್ದ ಮಾತುಗಳೆಂದರೆ ‘ಎನ್ ಬಂದ್ರಿ, ಏನು ಸಮಾಚಾರ, ಏನ್ ಬೇಕು ಸಾರ್’ ಎಂದಾಗಿರುತ್ತಿತ್ತು. ಅವರ ಪ್ರೀತಿಯ ಮಾತುಗಳೇ ನನ್ನನ್ನು ಮೌನವಾಗಿಸುತ್ತಿತ್ತು... ನಾನೇನು ಬೇಕೆಂದು ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ. ಕೇಳದೇ ಎಲ್ಲವನ್ನೂ ದಯಪಾಲಿಸುವ ಗುರುನಾಥರ ದರ್ಶನ. ಅವರ ಸಾನಿಧ್ಯವನ್ನು ಮಾತ್ರ ಮನ ಆಗಾಗ್ಗೆ ಬೇಡುತ್ತಿತ್ತು”
ಪ್ರಿಯ ಗುರುಬಾಂಧವರೇ, ಕಲ್ಪವೃಕ್ಷ ಕಾಮಧೇನುಗಳೇ ನಮ್ಮದಾದಾಗ ಬೇಡುವುದರಲ್ಲೇನಿದೆ. ಆದರೆ ಅವರು ಸಾಮಾನ್ಯ ಕಲ್ಪವೃಕ್ಷವಲ್ಲ, ಅದು ಸಾಮಾನ್ಯ ಹಸುವಲ್ಲ ಕಾಮಧೇನು... ಎಂಬುದರ ಅರಿವು ನಮಗಾಗಬೇಕು. ಅದಕ್ಕೆ ಹೇಳುವುದು ಗುರು ನರನಲ್ಲ ಎಂದು. ಬನ್ನಿ ಶ್ರೀಯುತ ಪ್ರಕಾಶ ಅವರು ತಮ್ಮ ಸತ್ಸಂಗವನ್ನು ಮುಂದುವರೆಸುತ್ತಿದ್ದಾರೆ ಆಲಿಸೋಣ.
“ಅಂದು ಬೆಳಿಗ್ಗೆ ಒಂಭತ್ತರ ಸಮಯವಿರಬಹುದು, ಎಂದಿನಂತೆ ಗುರುನಾಥರ ಮನೆಯ ಒಳಗೆ ಹೋಗಿ ನಮಸ್ಕರಿಸಿ ಗುರುನಾಥರನ್ನು ಕಂಡಾಗ ಅದೇ ನುಡಿಗಳು ಅವರಿಂದ ಬಂದವು. ಆದರೆ ಗುರುನಾಥರ ಮೊಗದಲ್ಲೇಕೋ ಒಂದು ರೀತಿಯ ಬೇಜಾರು, ಬೇಸರ, ಮುಂದಾವುದೋ ಕಹಿ ಘಟನೆ ಜರುಗುವ ಲಕ್ಷಣಗಳು ಕಂಡು ಬರುತ್ತಿತ್ತು. ಅಲ್ಲಿದ್ದವರ ಮುಖದಲ್ಲಿ ಈ ಭಾವದ ನೆರಳು ಕಂಡು ಬರುತ್ತಿತ್ತು. ಮೌನ ಆವರಿಸಿತ್ತು. ಎಂದಿನಂತೆ ನಾನು ಗುರುನಾಥರು ಕುಳಿತ ಕುರ್ಚಿಯ ಎಡಭಾಗದಲ್ಲಿ ಕುಳಿತು ಕೈ ಒತ್ತುತ್ತಿದ್ದೆ. ಬಲಭಾಗದಲ್ಲಿ ಮತ್ತೊಬ್ಬರಿದ್ದರು. ಗುರುನಾಥರ ನಡೆಯನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಒಂದೊಂದು ನಡೆಯಲ್ಲೂ ಅದೇನೋ ವಿಶೇಷವಿರುತ್ತಿತ್ತು. ಇದ್ದಕ್ಕಿದ್ದಂತೆ ಗುರುನಾಥರು ಎದ್ದು ಬಾಗಿಲ ಬಳಿ ಹೋದರು. ಹೊರಗಡೆ ಕಾರೊಂದು ಬಂದಿತ್ತು. ಒಂದಷ್ಟು ಜನ ಕಾರಿನಿಂದಿಳಿದು ಬಳಬಂದರು. ಗುರುನಾಥರು ಬನ್ನಿ ಬನ್ನಿ ಎಂದು ಸ್ವಾಗತಿಸಿದರು. ಕಾರಿನಲ್ಲಿ ಬಂದವರು ಬರುತ್ತಲೇ ಬಹು ದುಖಃದಿಂದ ಬಂದಂತಿತ್ತು. ಒಮ್ಮೆ ಆ ವ್ಯಕ್ತಿಯ ಕಡೆಗೆ ನೋಡಿ ಗುರುನಾಥರು ನಕ್ಕರು. ಗುರುನಾಥರ ಆ ನಗು... ಒಂದು ಕ್ಷಣ ವಾತಾವರಣದಲ್ಲಿದ್ದ ಬಿಗುವನ್ನು ಕಡಿಮೆ ಮಾಡಿತು.
ಪ್ರಿಯ ನಿತ್ಯ ಸತ್ಸಂಗಾಭಿಮಾನಿ ಮಿತ್ರರೇ ಮುಂದೇನಾಯಿತು...ಬಂದವರು ಅದಾವ ಕಷ್ಟದಲಿ ಸಿಲುಕಿದ್ದರು? ಗುರುನಾಥರಾವ ಪರಿಹಾರ ಸೂಚಿಸಿದರು. ಗುರುನಾಥರ ನಗುವಿನ ಹಿಂದೆ ಇದ್ದ ಅರ್ಥವೇನು? ಇದೆಲ್ಲಾ ತಿಳಿಯಲು ನಾಳಿನ ನಿತ್ಯ ಸತ್ಸಂಗಕ್ಕೆ ನಮ್ಮೊಂದಿಗಿರುವಿರಲ್ಲಾ...ಗುರುನಾಥರ ಪ್ರತಿ ಸತ್ಸಂಗವೂ ಒಂದಲ್ಲಾ ಒಂದು ಅನೌಪಚಾರಿಕ ಭೋದವನ್ನು ನೀಡುತ್ತದಲ್ಲವೇ? ನಾಳೆ ಮತ್ತೆ ಸೇರೋಣ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment