ಒಟ್ಟು ನೋಟಗಳು

Saturday, June 17, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 17
ಇವೆಲ್ಲದರಲ್ಲಿ ಹೊಡೆದುಕೊಂಡರೂ ತೀರದು ಸಾರ್... 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


“ಗುರುನಾಥರ ನಗು ನಮ್ಮ ಪರಿಸರದ ಬಿಗುವನ್ನು ಕಡಿಮೆ ಮಾಡಿದಂತೆ ಬಂದವರ ಮನಸ್ಸಿನ ಭಾವವನ್ನು ಹಗುರಗೊಳಿಸಿರಬೇಕು.  ಅವರಲ್ಲೊಬ್ಬರು, ಇದ್ದಕ್ಕಿದ್ದಂತೆ ಅಳಲು ಶುರು ಮಾಡಿದರು.  ಅವರು ಸಮಸ್ಥಿತಿಗೆ ಬರುವವರೆಗೆ ಅಳಲುಬಿಟ್ಟರು. ಮುಂದೆ ಅವರ ಸಮಾಧಾನಕ್ಕೆ ಬಂದು ತಮಗೊದಗಿದ ಕಷ್ಟದ, ಸಂಕಷ್ಟದ ವಿಚಾರವನ್ನು ತೋಡಿಕೊಂಡರು...  ಜೊತೆಯಲ್ಲಿದ್ದವರು ಏನೋ ಹೇಳಲು ಬಂದಾಗ, ಗುರುನಾಥರು ‘ನೀವೇನು ಮಾತನಾಡಬೇಡಿ, ಅವರ ವಿಚಾರ ಅವರು ಹೇಳಲಿ ಬಿಡಿ’ ಎಂದರು.  ಬಂದವರು ಅಳುತ್ತಿದ್ದಾಗ ಗುರುನಾಥರು ಏನೂ ಸಮಾಧಾನ ಮಾಡಲು ಹೋಗಲೇ ಇಲ್ಲ. ಮುಂದೆ ಬಂದವರು ತಾವು ಎಲ್ಲಿಯೋ ಎಕ್ಸಿಕ್ಯುಟೀವ್ ಇಂಜಿನಿಯರ್ ಆಗಿರುವುದು ಅವರೀಗ ಸಿಕ್ಕಿಕೊಂಡಿರುವ ಸಮಸ್ಯೆಗಳನ್ನೆಲ್ಲಾ ವಿವರಿಸಿ ‘ಗುರುನಾಥರೇ ತುಂಬಾ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದೇನೆ... ನೀವೇ ಪಾರು ಮಾಡಬೇಕೆಂದು ಬೇಡಿಕೊಂಡರು’, ಇದನ್ನೆಲ್ಲಾ ಕೇಳಿದ ಗುರುನಾಥರು ‘ಹೌದೇ ಬಹಳ ತೊಂದರೆಯಲ್ಲದ್ದೀರೇ’ ಎಂದವರೇ ದಡ ದಡ ನಾವು ಕುಳಿತ ಜಾಗದಿಂದ ಜಗಿಲಿಗೆ ಹೊರಹೋದರು. ಅಲ್ಲಿ ಬಿಟ್ಟಿದ್ದ ಎಲ್ಲರ ಚಪ್ಪಲಿಗಳನ್ನು ಕೈಯಿಂದ ಎದೆಗವುಚಿಕೊಂಡು ಬಂದು.. ನೋವು ಹೇಳಿಕೊಂಡವರ ಮುಂದೆ ಹಾಕಿದರು. ಗುರುನಾಥರ ಈ ನಡೆ ಮತ್ತೆ ಅಲ್ಲಿದ್ದವರ ಮನದಲ್ಲೆಲ್ಲಾ.. ಇನ್ಮುಂದೇನಪ್ಪಾ... ಇದೇಕೆ ಹೀಗಾಡುತ್ತಿದ್ದಾರೆ? ಎಂಬ ಭಯ ಮಿಶ್ರಿತ ಭಾವವನ್ನು ಹುಟ್ಟಿಸಿರಬೇಕು. ಯಾರೂ ಏನೂ ಮಾತನಾಡದ ಸ್ಥಿತಿ ನಿರ್ಮಾಣವಾಗಿತ್ತು. ನೋಡಿ ಸಾರ್ ಇಷ್ಟೆಲ್ಲದರಲ್ಲಿ ಹೊಡೆದುಕೊಂಡರೂ ನಿಮ್ಮ ಪಾಪ ಕಳೆಯುವಂತಹುದಲ್ಲ. ನೀವು ಮಾಡಿದ್ದನ್ನು ನೀವೇ ಅನುಭವಿಸಬೇಕಲ್ಲಾ ಸಾರ್...ಅದಕ್ಕೆ ನಾನೇನು ಮಾಡೋಕಾಗುತ್ತೆ ಸಾರ್’ ಒಳ್ಳೆಯದಾಗಲಿ ನಡೀರಿ ಸಾರ್’ ಎಂದು ಗಂಭೀರವಾಗಿ ಗುರುನಾಥರಂದರು. ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ ಆ ಸಂಕಟಕ್ಕೊಳಗಾದ ವ್ಯಕ್ತಿ ಎದ್ದು, ಗುರುನಾಥರಿಗೆ ನಮಸ್ಕರಿಸಿ ಹೊರ ನಡೆದರು. ಎಂತಹ ಉದ್ವಿಗ್ನ ಪರಿಸ್ಥಿತಿ ಬಂದಿದ್ದರೂ ಗುರುನಾಥರು ಶಾಂತವಾಗಿಯೇ ವರ್ತಿಸಿದರು, ಒಂದು ಬಿರುನುಡಿಯಾಡಲಿಲ್ಲ. ಆದರೆ ವಾತಾವರಣದ ಬಿಸಿಯಿಂದ ಅಲ್ಲಿದ್ದವರಿಗೆ ಹೊರ ಬರಲು ಅದೆಷ್ಟು ಸಮಯ ಬೇಕಾಯಿತೋ.. ನನಗಂತು ಆ ದಿನವಿಡೀ ಒಂದು ರೀತಿಯ ತೊಳಲಾಟ ಮನದಲ್ಲಿ ಮನೆ ಮಾಡಿತ್ತು” ಇದನ್ನು ವಿವರಿಸುತ್ತಿದ್ದಾಗ ಅಂದಿನ ಆ ನೆನಪು, ಭಾವ, ಪ್ರಕಾಶ ಅವರ ಮುಖದಲ್ಲಿ ಇಣುಕಿ ಕಾಣುತ್ತಿತ್ತು. ಭಗವಂತ ಬುದ್ದಿ ನೀಡಿದ್ದರೂ ತಾಮಸಗುಣಗಳಿಗೊಳಗಾಗಿ ಪರಪೀಡನ ಮಾಡುವಾಗ ಸಂತೋಷಪಡುವ ನಾವು ಭಯ, ಸಂಕಟದಲ್ಲಿದ್ದಾಗ ಯಾರಾದರೂ ಕಾಪಾಡಲಿ ಎಂದು ಮಹಾತ್ಮರ ಬಳಿ ಸಾಗಿದರೂ ನಮ್ಮ ಕರ್ಮ ನಾವೇ ಅನುಭವಿಸಬೇಕಲ್ಲವೇ?

ಇದನ್ನು ಬಳಸುವ ಅರ್ಹತೆ ಇದೆಯಾ ಸಾರ್?

ಅದೊಂದು ಪ್ರತಿಷ್ಠಿತ ಕಾಲೇಜು. ಅಲ್ಲಿಯ ಲೈಬ್ರರಿಯಲ್ಲಿ ಕೆಲಸ ಮಾಡಲು ಒಬ್ಬರನ್ನು ಹಂಗಾಮಿಯಾಗಿ ನೇಮಿಸಿಕೊಂಡಿದ್ದರು. ಲೈಬ್ರರಿಯ ಆಡಳಿತಾತ್ಮಕ ಸುಧಾರಣೆಗಾಗಿ ಕಂಪ್ಯೂಟರ್ ಬಲ್ಲವರೊಬ್ಬರನ್ನು, ಅದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬರನ್ನು ಕಂಪ್ಯೂಟರೀಕರಿಸಲು ಪ್ರಾಂಶುಪಾಲರು ಗ್ರಂಥಾಲಯಕ್ಕೆ ಡೆಪ್ಯೂಟ್ ಮಾಡಿದ್ದರು. ಅವರು ಗುರುನಾಥರ ಭಕ್ತರೂ ಆಗಿದ್ದು, ಆಗಾಗ್ಗೆ ಗುರುನಾಥರ ಬಳಿ ಹೋಗಿ ಬರುತ್ತಿದ್ದದ್ದನ್ನು ಅರಿತ ಆ ಹಂಗಾಮಿ ಲೈಬ್ರರಿಯನ್ “ನನಗೂ ಗುರುನಾಥರ ದರ್ಶನ ಮಾಡಿಸಿ” ಎಂದು ಆಗಾಗ್ಗೆ ಕೇಳುತ್ತಿದ್ದರು. ಪರ್ಮನೆಂಟ್ ಲೈಬ್ರರಿಯನ್ ತಾವೇ ಆಗಬೇಕೆಂಬ ಹಂಬಲವಿದ್ದ ಅವರಿಗೆ ಇವರೆಲ್ಲಿ ತಮ್ಮನ್ನು ಮೀರಿ ಲೈಬ್ರರಿಯನ್ ಆಗುತ್ತಾರೋ ಎಂಬ ಭಯವೂ ಮನದಲ್ಲಿರಬಹುದು. ಆದರವರಿಗೆ ಆ ತಾಂತ್ರಿಕ ಅರ್ಹತೆ ಇರಲಿಲ್ಲ, ಅಭಿಲಾಷೆಯೂ ಇರಲಿಲ್ಲ.

ಅಂತೂ ಕಾಲ ಕೂಡಿ ಬಂದಿತು ಗುರುನಾಥರ ಭಕ್ತರೊಂದಿಗೆ ಈ ಹಂಗಾಮಿ ನೌಕರರು ಗುರುನಾಥರನ್ನು ನೋಡಲು ಸಾಗಿದರು. ಗುರುನಾಥರಿಗೆ ವಂದಿಸಿದ ನಂತರ ‘ಏನ್ ಸಾರ್ ಬಂದ್ರಿ...ಏನಾಗ್ಬೇಕಾಗಿತ್ತು’ ಎಂದು ಗುರುನಾಥರು ಸಹಜವಾಗಿ ಅವರನ್ನು ಪ್ರಶ್ನಿಸಿದರು.. ತಾವು ಏತಕ್ಕಾಗಿ ಬಂದಿದ್ದಾರೆಂಬುವುದನ್ನು ತಿಳಿಯಲು ಅಳುಕಿದಾಗ...ಗುರುನಾಥರು “ಅದೇನೋ ಸಾರ್ ನೀವು ಎರಡು ಸೀಲ್‌ಗಳನ್ನು ಮಾಡಿಸಿಟ್ಟುಕೊಂಡಿರಲ್ಲಾ ಅದ್ಯಾವುದು? ಅದೇನು ಅಂತ ಹೇಳಿ” ಎಂದು ಪ್ರಶ್ನಿಸಿದಾಗ, ಆ ಬಂದ ವ್ಯಕ್ತಿ ತಬ್ಬಿಬ್ಬಾದರು. ಆಗ ಗುರುನಾಥರಿಗೆ ‘ಆ ಸೀಲು.. ಏನು ಮಾಡಿಸಿಕೊಂಡಿಲ್ಲವಲ್ಲಾ’ ಎಂದುಬಿಟ್ಟರು ತಬ್ಬಿಬ್ಬಾಗಿ. ಗುರುನಾಥರು ಈ ಪ್ರಶ್ನೆ ಕರೆದುಕೊಂಡು ಬಂದವರೆದುರೆ ಹೀಗೆ ಬರುತ್ತದೆ, ತನ್ನನ್ನು ಉಭಯ ಸಂಕಟದಲ್ಲಿ ಸಿಕ್ಕಿಸಿಯಾತೆಂಬ ಕಲ್ಪನೆಯಲ್ಲವರಿರಲಿಲ್ಲ. ಗುರುನಾಥರು ಮತ್ತೂ ನೇರವಾಗಿ “ನೀವಾಗಿ ಅದೇನು, ಅದೆಲ್ಲಿದೆ ಎಂದು ಹೇಳ್ತೀರೋ ಅದೆಲ್ಲಿದೆ ಎಂದು ನಾನೇ ತಿಳಿಸಲೋ ಎಂದುಬಿಟ್ಟರು”.  ಬಂದ ವ್ಯಕ್ತಿ ತಡವರಿಸುತ್ತಾ “ಇಲ್ಲ ಅದು ಸುಮ್ಮನೆ ಮಾಡಿಸಿಟ್ಟಿದ್ದೆ. ಚೀಫ್ ಲೈಬ್ರರಿಯನ್ ಎಂದು ಸುಮ್ಮನೆ ಮಾಡಿಸಿದ್ದೆ ಎಂದರು”.  “ಸರಿ ಸಾರ್ ನಿಮಗೆ ಅದನ್ನು ಉಪಯೋಗಿಸುವ ಅರ್ಹತೆ ಇದೆಯಾ.. ಮೊದಲು ಅದನ್ನು ಹೊರಗೆ ಬಿಸಾಕಿ” ಗುರುನಾಥರೆಂದು ಬಿಟ್ಟರಂತೆ.

ತಪ್ಪು ಮಾಡುವುದು ಸಹಜ, ಗುರುವಿನೆದುರಿಗದೆಂತಹ ಮುಚ್ಚುಮರೆ ಮಾಡಲು ಸಾಧ್ಯ ಹೇಳಿ. ಗುರುನಾಥರ ಕೃಪೆಯಿಂದ ಸೀಲುಗಳನ್ನು ಹೊರಗೆಸೆದಾದ ಮೇಲೆ ಆ ಉನ್ನತ ಹುದ್ದೆಯನ್ನವರು ಅಲಂಕರಿಸಿ, ಸಂತಸವಾಗಿ ಗುರುಸ್ಮರಣೆ ಮಾಡುತ್ತಾ ಸುಖವಾಗಿದ್ದಾರೆ.  ಅಲ್ಲದ್ದನ್ನು ಮಾಡಲು ಹೊರಟಾಗ, ಸರಿ ದಾರಿಗೆ ಹಚ್ಚಿ ಎಲ್ಲವನ್ನು ನೀಡುವ ಕರುಣಾಳು ಗುರುನಾಥರ ಇಂತಹ ಲೀಲೆಗಳಿಗೆ ಕೊನೆ ಮೊದಲಿಲ್ಲ.  ತಮ್ಮ ತಪ್ಪುಗಳನ್ನು ಒಪ್ಪಿ, ಗುರುವನ್ನಪ್ಪಿ ಶರಣಾಗರಾದರೆ ಎಲ್ಲ ಸುಲಲಿತವಲ್ಲವೇ. 

ನಿಮ್ ಫ್ರೆಂಡಿಗೆ ಎಲೆಕ್ಷನ್‌ಗೆ ನಿಲ್ಲಲು ಹೇಳಿ ಸಾರ್

ಒಂದು ಸಾರಿ ಪ್ರಕಾಶ ಅವರು ಗುರುನಾಥರನ್ನು ಎಂದಿನಂತೆ ನೋಡಲು ಹೋಗಿದ್ಧರಂತೆ. ಇದ್ದಕ್ಕಿದ್ದಂತೆ ಗುರುನಾಥರು “ ಏನ್‌ ಸಾರ್ ನಿಮ್ ಪ್ರೆಂಡಿಗೆ ಎಲೆಕ್ಷನ್‌ಗೆ ನಿಂತುಕೊಳ್ಳಲು  ಹೇಳಿ ಸಾರ್”  ಎಂದುಬಿಟ್ಟರಂತೆ. 

ಪ್ರಕಾಶ್ ಅವರು ಕೊನೆಗೆ ನನ್ನ ಯಾವ ಸ್ನೇಹಿತರಿಗೆ ಗುರುನಾಥರು ಹೇಳಿದರು? ಎಂದು ಚಿಂತಿಸಿ, ತಮ್ಮ ಕಾಲೇಜಿನಲ್ಲಿಯೇ ಒಂದು ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ ಮಂಜಣ್ಣನವರಿಗೆ “ನೋಡಿಪ್ಪಾ ಗುರುನಾಥರು ನಿಮಗೆ ಎಲೆಕ್ಷನ್‌ಗೆ ನಿಲ್ಲಲು ತಿಳಿಸಿದ್ದಾರೆ” ಎಂದಾಗ ಅವರು ಎನ್ಸಾರ್ ಇದು ಮೊನ್ನೆ ತಾನೆ ಎಂ.ಲ್.ಎ  ಎಲೆಕ್ಷನ್ ಆಗಿದೆ. ಎನ್ನು ಸಧ್ಯ ಯಾವ ಎಲೆಕ್ಷನ್ನೂ ಇಲ್ಲವಲ್ಲ”  ಎಂದಾಗ “ ನನಗೇನು ಗೊತ್ತಾ ಸಾರ್.... ನಾನೊಬ್ಬ ಪೋಸ್ಟಮ್ಯನ್ ಅಷ್ಟೇ.  ಅವರ ಆರ್ಡರ್ ಅನ್ನು ನಿಮ್ಮ ತನಕ ತಲುಪಿಸುವ ಕೆಲಸವನ್ನು ನಾನು ಮಾಡಿದ್ದೇನೆ ಅಷ್ಟೆ” ಎಂದುಬಿಟ್ಟರು ಪ್ರಕಾಶ್ ರವರು.

ಹಾಗಾದರೆ ಒಂದು ಸಾರಿ ಗುರುನಾಥರ ಬಳಿಯೇ ಹೋಗಿ ಬರುವುದೆಂದು ನಿರ್ಧರಿಸಿದ ಮಂಜಣ್ಣನವರು ಪ್ರಕಾಶ್ ಅವರ ಜೊತೆಗೆ, ಅಂದು ಶನಿವಾರ ಮದ್ಯಾಹ್ನದ ಮೇಲೆ ಎಲೆಕ್ಷನ್ ವಿಚಾರವನ್ನು ಪ್ರಸ್ತಾಪಿಸಿದಾಗ ಗುರುನಾಥರು “ಯಾವಾಗ, ಯಾವ ಎಲೆಕ್ಷನ್ ಅಂತ ಅಲ್ಲ.... ನೀವು ಎಲೆಕ್ಷನ್‌ಗೆ ನಿಂತುಕೊಳ್ತಿರಾ? ಅಂತ ಕೇಳಿದೆ... ಜನಸೇವೆ ಮಾಡಬೇಕು ಸಾರ್. ಜನ ಸೇವೆಗಿಂತ ದೊಡ್ಡದು ಯಾವುದೂ ಇಲ್ಲ...ನಿಮ್ಮ ಕೈಲಿ ಅಧಿಕಾರವಿದ್ದಾಗ ಯಾರ‍್ಯಾರಿಗೆ ಏನೇನು ಉಪಕಾರ ಮಾಡಬಹುದೋ ಮಾಡಿ, ಕುರುಡರಿಗೆ ಅಕ್ಕಿಕೊಡಿ, ಕತ್ತಲು ಬೀದಿಗಳಿಗೆ ದೀಪ ಹಾಕಿಸಿ, ಕುಡಿಯೋದಕ್ಕೆ ಎಲ್ಲರಿಗೂ ನೀರು ಕೊಡಿ” ಎಂದು ಬಿಟ್ಟರಂತೆ.

ಕುರುಡರಿಗೆ ಅಕ್ಕಿನೀಡಿ, ಬೀದಿಗೆ ಬೆಳಕು ನೀಡಿ, ನೀರು ಕೊಡಿ... ಈ ಮೂರು ಮಾತುಗಳು ಪ್ರಕಾಶ್ ಅವರು ಕಿವಿಯಲ್ಲಿ ಗುಂಯ್‌ಗುಡತೊಡಗಿತ್ತು - ಗುರುನಾಥರು ಅದಾವ ದೂರ ದೃಷ್ಟಿಯಿಂದ, ಅರ್ಜುನನಿಗೆ ಗೀತೋಪದೇಶ ಮಾಡಿದಂತೆ ಮಂಜಣ್ಣನೆದುರು ಆಡಿದರೋ.....ನನಗಿಂತೂ ಅಂದು ತಿಳಿಯಲಿಲ್ಲ ಎನ್ನುತ್ತಾರೆ.

ಗುರುವಾಕ್ಯ ಹುಸಿಯಾಗದು. ಇದಾದ ಕೆಲ ದಿನಗಳಲ್ಲೇ ಹಾಸನ ನಗರ ಮುನಿಸಿಪಾಲಿಟಿ ಸೂಪರ್ ಸೀಡ್‌ ಆಯ್ತು. ಮಂಜಣ್ಣ ಅಪ್ಲೈ ಮಾಡಿದರು. ಮೆಜಾರಿಟಿಯಲ್ಲಿ ಗೆದ್ದರು. ಗುರುನಾಥರ ಬಳಿ ಬಂದು ನಮಸ್ಕರಿಸಿದ ಮಂಜಣ್ಣನವರಿಗೆ ಗುರುನಾಥರು ತಾವು ನೀಡಿದ ವಚನಗಳನ್ನು ಪುನರ್‌ ನೆನಪಿಸಿದ್ದರು.

ಎಲ್ಲ ಬೀದಿಗಳಲ್ಲೂ ಅಂದು ಲೈಟ್ ದೀಪಗಳು ಪ್ರಕಾಶವಾಗಿ ಉರಿದವು. ಕೇಳಿದ ಮನೆಗಳ ಬಳಿ ನೀರಿನ ಪೈಪುಗಳು ನೆಲದಡಿ ಹರಿದಾಡಿದವು. ಅಂಧರ ಶಾಲೆಗೆ ಅನ್ನದಾನದ ಹೊಳೆ ಹರಿಯಿತು.  ಅನ್ನದಾನದ ಗ್ರಾಂಟ್‌ ಸಹಾ ದೊರೆಯಿತು. ಬೇರೆಯವರ ಉಸಾಬರಿ ಬೇಡ ಎಂದೂ ಗುರುನಾಥರು ಎಚ್ಚರಿಸಿದ್ದರು ಆದರೆ ವಿಧಿ...

ಪ್ರಿಯ ಬಂಧುಗಳೇ, ಮುಂದಾಗುವುದನ್ನೆಲ್ಲಾ ಅರಿತರೂ ಅಗಾಧವಾದುದನ್ನು ಒಂದು ಉಪಕರಣದಿಂದ ಮಾಡಿಸಿ, ತನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ದೂರ ನಿಲ್ಲುವುದೇ ಸದ್ಗುರುವಿನ ಲಕ್ಷಣ. ಅಂತೆಯೇ ನಮ್ಮ ಗುರುನಾಥರು ಎಂಬುದಕ್ಕೆ ಒಂದೆರಡೇ ನೂರೆಂಟು ಉದಾಹರಣೆಗಳಿವೆ. ನಾವು ಹೇಗಿರಬೇಕೆಂದು ಕಲಿಯಲು ಗುರುನಾಥರು ನೀಡುತ್ತಿದ್ದ ಅನೌಪಚಾರಿಕ ಶಿಕ್ಷಣವೆಂದರೆ ಅತಿಯಲ್ಲ ಅಲ್ಲವೆ? ಗುರುನಾಥರು ಅನೇಕ ಸಾರಿ ಮುಂದಾಗುವ ಅವಘಡಗಳನ್ನು ಸೂಚ್ಯವಾಗಿ ತಿಳಿಸಿದರೂ - ಅರ್ಥಮಾಡಿಕೊಳ್ಳಲಾಗಲಿಲ್ಲವೋ ವಿಧಿಚಿತ್ತ‌ ಅಂತಿತ್ತೋ...ಘಟನೆ ಘಟಿಸಿ ಬಿಡುತ್ತಿತ್ತು.

ಪ್ರಿಯ ನಿತ್ಯ ಸತ್ಸಂಗಾಭಿಮಾನ ಗುರುಭಕ್ತರೆ, ಇಂದಿಗೆ ಅಲ್ಪ ವಿರಾಮ. ಮತ್ತೆ ನಾಳೆ ಸೇರೋಣವೇ? ಬರುವಿರಲ್ಲಾ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment