ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 18
ತಣ್ಣೀರು ಬಿಸಿಯಾಗಿಸಿ ಕುರುಹು ತೋರಿದ ಗುರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಉತ್ತಮವಾದ ಸುಯೋಗ್ಯ ಗುರು ದೊರೆಯುವುದು ಎಷ್ಟು ದುರ್ಲಭವೋ ಹಾಗೆಯೇ ಶಿಷ್ಯನು ನರೇಂದ್ರರು ತಮಗೆ ಸರಿ ಹೊಂದುವ, ತಮ್ಮ ಮನದನುಮಾನಗಳನ್ನು ಪರಿಹರಿಸುವ ಗುರುವನ್ನು ಪಡೆಯಲು ಅದೆಷ್ಟು ಗುರುವೆಂದಿನಿಸಿದವರನ್ನು ಪರೀಕ್ಷಿಸುತ್ತಾ, ಕೊನೆಗೆ ರಾಮಕೃಷ್ಣ ಪರಮಹಂಸರನ್ನು ಪಡೆದು ಸಾರ್ಥಕರಾದಂತೆ, ಅನನ್ಯ ಭಕ್ತಿಯಲ್ಲಿ ವಿನಯಪರತೆಯೊಂದಿಗೆ ಗುರುನಾಥರೊಂದಿಗೆ ಸವಾಲೆಸೆದ ಶಿಷ್ಯರಿಗೇನೂ ಕಡಿಮೆ ಇಲ್ಲ. ಆದರೆ ಗುರುವಿನ ಮೇಲಿನ ಪ್ರೀತಿ, ನಂಬಿಕೆ, ನನಗೆ ಇದನ್ನು ಇಂದು ಗುರುನಾಥರು ಕೊಟ್ಟೇ ಕೊಡುತ್ತಾರೆ, ಕೊಡಲೇಬೇಕೆಂಬ ಉತ್ಕಟ ಇಚ್ಛೆಗೆ ಗುರು ನೀಡುವ ಕುರುಹುಗಳು ಅವೂ ವಿಚಿತ್ರವಾದವುಗಳೇ, ಅದು ಕೇವಲ ಭಾವಕ್ಕೆ ವೇದ್ಯವಾದವು, ಮಾತಿಗೆ ಸಿಲುಕದೆ ಅನುಭವಕ್ಕೆ ಬರುವಂತಹ ಅಣಿಮುತ್ತುಗಳು. ಅಂತಹ ಒಂದು ಪ್ರಸಂಗವೇ ಗುರುಬಾಂಧವರೇ.. ನಮ್ಮ ಇಂದಿನ ಸತ್ಸಂಗ, ಭದ್ರಾವತಿಯ ಪ್ರಶಾಂತ ಬಾಬು ಅವರಿಗೆ ಗುರುನಾಥರಿತ್ತ ದಿವ್ಯಾನುಭವ ಹೀಗಿದೆ.
“ಸುಮಾರು ಎಂಟೊಂಬತ್ತು ವರುಷಗಳ ಹಿಂದಿನ ಮಾತಿರಬಹುದು. ಗುರುನಾಥರ ಬಳಿ ಆಗಾಗ ಹೋಗಿ ಬರುತ್ತಿದ್ದೆ. ಹೋಗಿ ನಮಸ್ಕಾರ ಮಾಡಿ ಕುಳಿತುಕೊಳ್ಳುತ್ತಿದ್ದರಂತೆ. ಅದೇ ಮುಗುಳು ನಗೆಯ ಮೊಗದಲ್ಲಿ ‘ಬಾರೋ ಭದ್ರಾವತಿ’ ಎಂದವರು ಕರೆಯುತ್ತಿದ್ದರು. ಹಾಗೆ ಕರೆದರೇ ನನಗೂ ಸಂತಸವೇನೋ ಎಂಬ ಮಟ್ಟಿಗೆ ನನ್ನ ಮನಸ್ಸನ್ನವರು ಸಿದ್ಧ ಮಾಡಿದ್ದರು. ಗುರುನಾಥರ ಬಳಿ ಸ್ವಲ್ಪ ಹೊತ್ತಿರುವುದು ಬರುವುದು ನಡೆದೇ ಇತ್ತು. ಒಮ್ಮೆಯೂ ನನ್ನನ್ನವರು ತಿರಸ್ಕರಿಸಿರಲಿಲ್ಲ, ಆಪ್ಯಾಯಮಾನವಾಗಿ ಬರಮಾಡಿಕೊಳ್ಳುತ್ತಿದ್ದುದೇ ಗುರುನಾಥರು ನನಗೆ ನೀಡಿದ ಭರವಸೆಯೋ, ಅಥವಾ ನಾನು ಸರಿಯಾಗಿರುವುದಕ್ಕೆ ಪುರಾವೆಯೋ ಎಂಬ ನೆಮ್ಮದಿ ನನಗವರಿತ್ತಿದ್ದರು. ಅಂದು ಮನದಲ್ಲೇನೋ ಗಟ್ಟಿ ನಿರ್ಧಾರ ಮಾಡಿಕೊಂಡೇ ಹೊರಟಿದ್ದೆ. ನಾನು ಒಳಹೋಗುತ್ತಿದ್ದಂತೆ ‘ಬಾರೋ ಭದ್ರಾವತಿ’ ಎಂದು ಕರೆದರು. ಸನಿಹ ಹೋದೆ, 'ನೀವು ಬೇಕು ಗುರುನಾಥ' ಎಂದಂದೆ. ಕೈ ಹಿಡಿದು ಕುಳ್ಳಿರಿಸಿದರು ನನ್ನ ಎಡ ತೊಡೆಯ ಮೇಲೆ ಎಡಗಾಲನ್ನಿಟ್ಟರು. ನಾನು ಗುರುನಾಥರ ಈ ಪರೀಕ್ಷೆಯೋ, ನನಗವರು ನೀಡಿದ ಉದಾರ ಸಮಯದ ಸೇವೆಯೋ, 12 ಅಥವಾ 12.30 ರಿಂದ 4.30 ರವರೆಗೆ ಹಾಗೆಯೇ ಗುರುಸೇವೆಗವರು ಅವಕಾಶ ನೀಡಿದ್ದರು. ಆಮೇಲೆ ಮೊಸರನ್ನವನ್ನು ನನ್ನ ಕೈಗೆ ನೀಡಿ ಬಾವಿಗೆ, ಒಂದಿಷ್ಟು ಮೇಲೆ ಹಾಕಿ ಬರಲು ತಿಳಿಸಿದರು. ಹಾಗೇ ಮಾಡಿದೆ ಆಗಲೇ ನಾನೆದ್ದಿದ್ದು. ‘ತಿನ್ನುತ್ತೀಯೇನಯ್ಯ' ಎಂದು ನನ್ನ ಕಡೆ ನೋಡಿ ಕೇಳಿದರು. ನೀವು ಕೊಟ್ಟರೆ ಮಾತ್ರಾ ಎಂದೆ. ಗುರುನಾಥರು ಪ್ರೀತಿಯಿಂದ ಮೂರು ನಾಲ್ಕು ತುತ್ತನ್ನು ನನ್ನ ಬಾಯಿಗೇ ಇಟ್ಟು ತಿನ್ನಿಸಿದರು. ಗುರುನಾಥರ ಆ ಪ್ರೀತಿಯ ಬಾಯತುತ್ತು, ಆ ಮೊಸರನ್ನದ ಸವಿ ಅವರ್ಣನೀಯ. ಮನವೆಲ್ಲ ಮುದಗೊಂಡಿತ್ತು. ಅವರ ಮೈಮೇಲೆಲ್ಲಾ ಮೊಸರನ್ನದ ಅಗುಳುಗಳಂಟಿದ್ದವು. ಇದಾವುದರ ಪರಿವೆ ಇಲ್ಲದಂತಿದ್ದರು ಗುರುನಾಥರು. ನಾನೇ ಮುಂದುವರೆದು ಎದೆ ಮೈಮೇಲೆ ಬಿದ್ದಿರುವ ಮೊಸರನ್ನದ ಅಗಳುಗಳನ್ನು ತೆಗೆಯಲು ಅಪ್ಪಣೆ ಬೇಡಿದಾಗ ‘ತೆಗೆದುಕೊಳ್ಳೋ’ ಎಂದರವರು. ಆಮೇಲೆ ‘ಎಷ್ಟು ದಿನವಾಗಿದೆಯೋ ಸ್ನಾನಮಾಡದೆ ಒಂದಿಷ್ಟು ಬಿಸಿನೀರು ಕಾಯಿಸೋ’ ಎಂದು ನನಗಂದರು. ಬೆಳಗಿರುವ ದೊಡ್ಡ ಹಂಡೆಯಲ್ಲಿ ನೀರು ಕಾಯಿಸಿ, ಗುರುನಾಥರನ್ನು ಕರೆದೆ. ಅಲ್ಲಿ ಹನ್ನೆರಡು ಹದಿಮೂರು ಜನರಿದ್ದರು. ಗುರುನಾಥರು ‘ನಡಿಯೋ ಸ್ನಾನ ಮಾಡೋಣ’ ಎಂದಾಗ, ಬಿಸಿ ನೀರಿನ ಹಂಡೆಯ ಬಳಿ ಗುರುನಾಥರನ್ನು ಕರೆದೊಯ್ದೆ. ಗುರುನಾಥರು ‘ತಣ್ಣೀರು ಮಾಡ್ರೋ ತಣ್ಣೀರಲ್ಲೇ ಸ್ನಾನ ಮಾಡಿಸೋ’ ಎಂದರು. ಗುರುವಿನಿಚ್ಚೆ ಎಂದು ತಣ್ಣೀರನ್ನು ತುಂಬಿ ತುಂಬಿ ಗುರುನಾಥರಿಗೆ ಸ್ನಾನ ಮಾಡಿಸತೊಡಗಿದೆ. ಅದೇನಚ್ಚರಿ, ನಾನು ಗಾಭರಿಯಾಗುವಷ್ಟು ಬಿಸಿಬಿಸಿಯಾದ ನೀರು ನನ್ನ ಕಾಲಿಗೆ ತಗಲುತ್ತಿತ್ತು. ಗುರುನಾಥರ ಮೇಲೆ ನಾನು ಸುರಿಯುತ್ತಿದ್ದುದು ತಣ್ಣೀರು, ಆದರೆ ಅದು ಕೆಳಗೆ ಬರುವಲ್ಲಿ ಬಿಸಿ ನೀರಾಗಿ ನನಗೆ ತಗಲುತ್ತಿತ್ತು.
“ಎಂಥಹ ದಡ್ಡ ನಾನು ಎಂದೇ ನನಗನಿಸಿತು. ಈ ದಿನ ಮನೆಯಿಂದ ಬರುವಾಗ - ಗುರುನಾಥರು ಏನಾದರೊಂದು ಪವಾಡವನ್ನು ನನಗೆ ತೋರಿಸದಿದ್ದರೆ ನಾನಿವರನ್ನು ಗುರುವೆಂದು ಹೆಂಗೆ ನಂಬಲಿ, ನನ್ನ ಜೀವನದ ಮುಂದಿನ ಗತಿ ಏನೆಂಬ ಏನೇನೋ ವಿಚಾರಗಳು ಮನದಾಳದಲ್ಲಿ ಮೂಡಿದ್ದವು. ಅವೆಲ್ಲಾ ಒಂದು ಕ್ಷಣದಲ್ಲಿ ನುಚ್ಚು ನೂರಾಗಿತ್ತು . ನನ್ನ ಗುರುನಾಥರು ತಾವೇನೆಂಬುದನ್ನು ಅಜ್ಜನಾದ ನನಗೆ ಕ್ಷಣಾರ್ಧದಲ್ಲಿ ತೋರಿಸಿದ್ದರು. ಮೂಕನಾದ ನಾನು ಗುರುನಾಥರನ್ನು ಅನನ್ಯ ಭಕ್ತಿಯಿಂದ, ಶ್ರದ್ದೆಯಿಂದ, ಪ್ರೀತಿಯಿಂದ ನೋಡಿ ಮನ ತುಂಬಿಕೊಳ್ಳುವುದಲ್ಲದೆ ಇನ್ನೇನು ಮಾಡಲು ಸಾಧ್ಯ? ಇದು ನನ್ನ ಗುರುನಾಥರ ಕರುಣೆ, ಹಠಮಾಡಿ ಚಂಡಿ ಹಿಡಿದ ಮಗುವನ್ನು ಸಂತೈಸಲಾರದ ತಾಯಿಗೆ ಅಜ್ಜಿ ತನ್ನಾವುದೋ ಪ್ರೀತಿ ಇಂದ ಸಂತೈಸಿದಂತೆ ಗುರುನಾಥರ ಅನುಗ್ರಹವಾಯಿತೆಂಬುದೇ ನನ್ನ ಭಾವನೆ”.
ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವಗಳನ್ನು ಗುರುನಾಥರು ತಮ್ಮ ಶಿಷ್ಯರಿಗೆ ನೀಡಿದ್ದರು. ಅದರೆಲ್ಲದರ ಸಾರವನ್ನು ತಮ್ಮ ಸತ್ಸಂಗಾಭಿಮಾನಿಗಳಿಗೆ ಗುರುನಾಥರು ಕುಳಿತಲ್ಲೇ ನೀಡುತ್ತೀರುವುದೇ, ಗುರುನಾಥರ ಕೃಪಾನುಗ್ರಹ. ಮತ್ತೆ ನಾಳೆಯೂ ನಮ್ಮೊಂದಿಗಿರಿ ಬಂಧುಗಳೇ...
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment