ಒಟ್ಟು ನೋಟಗಳು

Saturday, June 10, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 10
ಏನ್ಸಾರ್ ಇಷ್ಟೊಂದು ನನ್ನನ್ನು ಬಯ್ಯುತ್ತಿದ್ದೀರಲ್ಲಾ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥



“ಗುರುನಾಥರು ಖುಷಿಯಲ್ಲಿದ್ದಾಗ ಅವರ ಮಾತುಗಳನ್ನು ಕೇಳುವುದೇ ಒಂದು ಚೆಂದ” ಎನ್ನುತ್ತಾ ಇಂದಿನ ಸತ್ಸಂಗದಲ್ಲಿ ಗುರುನಾಥರ ಕೃಪಾಳುತನವನ್ನು ಮುಂದುವರೆಸಿದರು ಅವರ ಆಪ್ತ ಭಕ್ತರೊಬ್ಬರು.   
            
“ಅಂದು ನಾವು ಮನೆಯಲ್ಲಿ ಭಜನೆ ಮಾಡುತ್ತಿದ್ದೆವು. ಗುರುನಾಥರು ದೊಡ್ಡ ಕೆಲಸ ಒಂದರ ಜವಾಬ್ದಾರಿ ನಮಗೊಹಿಸಿದ್ದರು. ಆದರೆ ಅದರ ಪೂರ್ಣ ಹೊರೆಯನ್ನವರು ಹೊತ್ತಿದ್ದರು, ಹಾಗಾಗಿ ಲವಲೇಶವೂ ಚಿಂತಿಸದೆ ನಾವು ಮನೆಯಲ್ಲಿ ಭಜನೆ ಮಾಡುತ್ತಿರುವಾಗ ಗುರುನಾಥರ ಇನಿದನಿಯ ಫೋನು ರಿಂಗಣಿಸಿತು. ಇದಕ್ಕಿಂತ ಭಾಗ್ಯ ನಮಗೇನು ಬೇಕಿದೆ. ಅವರೊಂದಿಗೆ ಮಾತಿಗೆ ತೊಡಗಿದೆ. ನನಗಿಲ್ಲದ ಚಿಂತೆ ಅವರಿಗೆ ‘ಏನ್ಸಾರ್ ಅಷ್ಟೊಂದು ಬಯ್ತಾ ಇದ್ದೀರಲ್ಲ ನನ್ನನ್ನ’ ಎಂದರು ಹಾಸ್ಯ ಮಾಡುತ್ತಾ ಗುರುಗಳು. ಇಲ್ಲ ಭಜನೆ ಮಾಡುತ್ತಾ ಇದ್ದೀವಿ ಎಂದೆ. ‘ಅಲ್ಲಾ ಸಾರ್ ಮಠದ ಕೆಲಸಕ್ಕೆ ಇನ್ನು 16 ಲಕ್ಷ ಬೇಕಲ್ವಾ ಸಾರ್’ ಎಂದಾಗ ಅಯ್ಯೋ ಗುರುವೆ ಅದರ ಕಡೆ ನಾನು ಯೋಚನೆಯೇ ಮಾಡಿಲ್ಲ. ನಾನ್ಯಾಕೆ ಲೆಕ್ಕ ಹಾಕಲಿ ಎಂದೆ. ಆಗ ಅತ್ತಲಿಂದ ಗುರುನಾಥರು ದೂರವಾಣಿಯಲ್ಲಿ ‘ಯಾಕೆ ಲೆಕ್ಕ ಹಾಕ್ತೀರಿ ಬಿಡಿ ನನ್ನದೊಂದು ಎಂಟು ಲಕ್ಷ ನಿಮ್ಮ ಬಳಿ ಇದೆ. ಇನ್ನೂ ಎಂಟು ಲಕ್ಷ ತಾನೇ ಹೇಗೋ ಆಗುತ್ತೆ ಬಿಡಿ’ ಎಂದುಬಿಟ್ಟರು. ಎಲ್ಲಾ ನೀವೆ ಕೊಟ್ಟಿರುವಾಗ ನಾನ್ಯಾಕೆ ಯೋಚನೆ ಮಾಡಲಿ ಎಂದು ಸುಮ್ಮನಾಗಿದ್ದೆ. ಇದಾಗಿ ಕೆಲ ದಿವಸದಲ್ಲಿ ನಾನು ಮತ್ತು ನನ್ನಣ್ಣ ಪಾರ್ಟನರ್‌ಶಿಪ್ ನಲ್ಲಿ ತೆಗೆದುಕೊಂಡ ಜಾಗವೊಂದು ಅನಿರೀಕ್ಷಿತವಾಗಿ ಮಾರಾಟವಾಗಿತ್ತು. ಸರಿಯಾಗಿ ಎಂಟು ಲಕ್ಷ ರೂಪಾಯಿಗಳು ಗುರುನಾಥರು ಹೇಳಿದಂತೆ ಲಾಭ ಬಂದಿತ್ತು. ಹೀಗೆ ಮತ್ತೊಂದು ಸಾರಿಯೂ ಗುರುನಾಥರ ಭಜನೆ ಮಾಡುತ್ತಾ ಕುಳಿತಿದ್ದೆ. ಫೋನು ರಿಂಗಣಿಸಿತು. ಅತ್ತಲಿಂದ 'ಏನ್ಸಾರ್ ಇಷ್ಟೊಂದು ನನ್ನನ್ನು ಬಯ್ಯುತ್ತಿದ್ದೀರಲ್ಲಾ, ಅಂದ ಹಾಗೆ ಒಂದು ಮೂರು ಲಕ್ಷ ಬರುತ್ತಿರುವಂತೆ ಕಾಣ್ತಿದೆಯಲ್ಲಾ ಸಾರ್’ ಎಂದಿತು ಆ ದನಿ. ಗುರುಬಾಂಧವರೇ ಈ ದನಿಗೆ ಉತ್ತರಿಸುತ್ತಾ, 'ನಾನ್ಯಾಕೆ ಬಯ್ಯಲಿ ಗುರುವೆ ತಮ್ಮ ಭಜನೆ ಮಾಡುತ್ತಿದ್ದೆ' ಎಂದೆ. ಈ ದನಿ ಮತ್ತಾರದ್ದಾಗಲು ಸಾಧ್ಯ ಹೇಳಿ? ಆ ಮಮತೆಯ ಸೆಲೆ ಸಖರಾಯಪಟ್ನದ ವೆಂಕಟಾಚಲ ಗುರುನಾಥರದ್ದಾಗಿತ್ತು ಎಂದು ಮತ್ತೆ ಹೇಳಬೇಕಿಲ್ಲವಲ್ಲ? ಮುಂದೆ ಗುರುನಾಥರು ಒಮ್ಮೆ ನನಗೆ ‘ನಾಳೆ ಬೆಳಿಗ್ಗೆಯಿಂದ ತುಳಸಿ ಕಟ್ಟೆ ಹಿಡಿದು ಈ ಮಂತ್ರ ಹೇಳಿಕೊಂಡು ಒಳ ಬನ್ನಿ’ ಎಂದರು. ಇದಾದ ಮೇಲೆ ಒಂದು ದಿನ ತುಳಸಿ ಕಟ್ಟೆಗೆ ನಮಿಸುತ್ತಿದ್ದೆ. ಒಬ್ಬ ವಯೋವೃದ್ದರು ಬಂದರು. ರಾಮ್‌ರಾವ್ ಎನ್ನುವವರು ಅವರು. ನಮ್ಮ ಮನೆಯಿಂದ ಮೂರನೇ ಕ್ರಾಸಿನಲ್ಲಿದ್ದರು. ತಮ್ಮ ಒಬ್ಬಳೇ ಮಗಳು ಅಮೇರಿಕಾದಲ್ಲಿದ್ದುದರಿಂದ ಅವರು ತಮ್ಮ ಸೊತ್ತಿನ ಟ್ಯಾಕ್ಸ್ ಕಟ್ಟಬೇಕಿತ್ತು. ಅಚಾನಕ್ ನಮ್ಮ ಮನೆಗೆ ಬಂದು ವಿಚಾರಿಸಿದರು. ಅವರೂ ಅಮೇರಿಕಾಗೆ ಹೋಗುವವರಿದ್ದರು. ತಮ್ಮ ಸ್ವತ್ತನ್ನು ಮಾರುವ ಇರಾದೆ ತಿಳಿಸಿದರು. ಆ ವಯೋವೃದ್ದರನ್ನು ಮನೆಯೊಳಗೆ ಕೂರಿಸಿದೆ. ಮುಂದೆ ಅವರು ತಮ್ಮ ರೇಟನ್ನು ತಿಳಿಸಿ ಯಾರಾದರೂ ಸಿಕ್ಕರೆ ತಿಳಿಸಲೂ ಹೇಳಿದರು. “ಹಾಗಾದರೆ ನನ್ಗೇ ಇರಲಿ ಬಿಡಿ ಸಾರ್” ಎಂದಾಗ ಅವರೂ ಒಪ್ಪಿದರು. ಕೂಡಲೇ ಅಡ್ವಾನ್ಸ್ ಆಗಿ ಒಂದು ಲಕ್ಷವನ್ನು ಕೊಟ್ಟುಬಿಟ್ಟೆ. ಮುಂದೆ ಅವರು ಅಮೇರಿಕಾಗೆ ಹೋದರು. ಯಾವುದೇ ಬರಹವಾಗಲಿ, ಅಗ್ರಿಮೆಂಟ್ ಆಗಲಿ ಮಾಡಿಕೊಂಡಿರಲಿಲ್ಲ. ನಾನು ಅಮೇರಿಕಾಗೆ ಹೋಗಿ ಬಂದ ಮೇಲೆ ನಿಮಗೆ ರಿಜಿಸ್ಟರ್ ಮಾಡಿಕೊಡ್ತೀವಿ ಎಂದಂದು ನಡೆದೇಬಿಟ್ಟರು. ಅವರು ಮತ್ತೆ ಅಮೇರಿಕಾದಿಂದ ಬರುವುದರಲ್ಲಿ ಆರು ತಿಂಗಳಾಗಿತ್ತು. ಆ ಸೈಟನ್ನು ಮತ್ತೊಬ್ಬರು ತಮಗೆ ಬೇಕೆಂದು ನನ್ನಿಂದ ಖರೀದಿಸಿದರು. ಗುರುನಾಥರು ಹೇಳಿದಂತೆ ನನಗೆ ಮೂರು ಲಕ್ಷಗಳು ಆದಾಯ ಬಂದಿತ್ತು. ಗುರುನಾಥರೆಂದರೆ ಕಡಿಮೆನಾ ಸಾರ್? ನಮ್ಮನ್ನ ಒಂದೊಂದು ಇಂಚು ಇಂಚಿಗೂ ಕಾಯ್ತ ಬಂದಿದ್ದಾರೆ. ಇವತ್ತೇನಾದರೂ ನಾವು ಸಂತಸದಿಂದ ಜೀವಿಸುತ್ತಿದ್ದರೆ ಅದು ಗುರುನಾಥರಿತ್ತ ಭಿಕ್ಷೆ, ಅವರ ಕೃಪೆ. ಆ ಕೃಪಾಸಾಗರದ ಛತ್ರದಡಿಯಲ್ಲಿ ಜೀವನ ನಡೆದಿದೆ” ಎನ್ನುತ್ತಾರೆ ತನ್ಮಯರಾಗಿ. ಬೆಂಗಳೂರಿನ ಅನಂತಣ್ಣನವರು ಗುರುಕೃಪಾಛತ್ರ ಸಿಕ್ಕಮೇಲೆ ಆನಂದವೇ ಆನಂದವಲ್ಲವೇ? ಎಲ್ಲವನ್ನೂ ಅವನಿಗೊಪ್ಪಿಸಿದ ಮೇಲೆ ಚಿಂತೆಯ ಭಾರವೆಲ್ಲಿದೆ?

ಪ್ರಿಯ ಗುರು ಬಾಂಧವರೇ, ಸತ್ಸಂಗ ಪ್ರೇಮಿಗಳೇ... ನಾವು ನಮ್ಮ ಚಿಂತೆಗಳನ್ನೆಲ್ಲಾ ಗುರುವಿಗೆ ಅರ್ಪಿಸಿ, ಸತ್ಸಂಗದಲ್ಲಿ ನಿರಂತರ ನಿರಂತರಾಗೋಣ.... ನಾಳೆಯೂ ಬರುವಿರಲ್ಲಾ ಸತ್ಸಂಗಕ್ಕಾಗಿ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment