ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 30
ಮರಣವಾಗಲು ಪತಿಗೆನುತ ಪರಿ । ಪರಿಯ ಶೋಕವ ಮಾಳ್ಪ ಸತಿಗಾ ।
ಗುರುವು ಬೋಧನೆ ಇತ್ತನೈ ಮೂವತ್ತರಲಿ ನೋಡು || 30 ||
ಮಾಹುರಪುರದಲ್ಲಿ ಅತ್ಯಂತ ಧನಿಕನಾದ ಗೋಪಿನಾಥನೆಂಬುವನಿಗೆ ದತ್ತನೆಂಬ ಮಗನಿದ್ದನು. ದತ್ತನು ಸುಂದರ ಹೆಣ್ಣನ್ನು ಲಗ್ನವಾಗಿ ಸುಖದಿಂದಿರುವಾಗ ಆತನಿಗೆ ಗುಣಪಡಿಸಲಾರದ ರೋಗ ಬಂದಿತು. ಪತಿವ್ರತೆಯಾದ ಆತನ ಹೆಂಡತಿ ಗಂಡನಿಗಾಗಿ ಅನ್ನಾಹಾರ ಬಿಟ್ಟು ಸೇವೆ ಮಾಡಿದಳು. ಏನು ಮಾಡಿದರೂ ಪತಿಯು ಗುಣಮುಖನಾಗದಾಗ ಅತ್ತೆ ಮಾವಂದಿರು ಹೀಗೆ ಹೇಳಿದರು. 'ನೋಡು, ನಮ್ಮ ಮಕ್ಕಳೆಲ್ಲಾ ಹುಟ್ಟಿದಾಕ್ಷಣ ಸಾಯುತ್ತಿದ್ದರು. ದತ್ತ ಗುರುಗಳ ಮೊರೆ ಹೋದಾಗ ಈ ಮಗು ಬದುಕುಳಿಯಿತು. ಅದಕ್ಕಿವನ ಹೆಸರನ್ನು ದತ್ತನೆಂದು ಇಟ್ಟೆವು. ಆ ಗುರುವೇ ಇವನನ್ನು ಕಾಪಾಡಬೇಕು' ಎಂದರು. ಹಾಗಾದರೆ, 'ತಾನು ಗಾಣಗಾಪುರಕ್ಕೆ ಹೋಗಿ ಗುರು ನರಸಿಂಹ ಸರಸ್ವತಿಗಳ ದರ್ಶನ ಪಡೆದು, ನನ್ನ ಗಂಡನನ್ನು ನಿರೋಗಿಯಾಗಿಸಿಕೊಂಡು, ಗುರುಕೃಪೆಯಿಂದ ವಾಪಸ್ಸು ಬರುವೆವು. ನಮ್ಮನ್ನು ಆಶೀರ್ವದಿಸಿ ಕಳುಹಿಸಿಕೊಡಿ' ಎಂದು ಬೇಡಿದ ಪತ್ನಿಯು ದತ್ತನ ಸಹಿತ ಗುರುದರ್ಶನಕ್ಕೆ ಬಂದಳು. ಆದರೆ ಮಧ್ಯದಲ್ಲೇ ಪತಿಯು ಮರಣಿಸುತ್ತಾನೆ. ಗುರುವು ಬಂದು ಸಂಸಾರದ ನಶ್ವರತೆಯ ಬೋಧ ಮಾಡುವ ವಿಚಾರ ಮೂವತ್ತನೆಯ ಅಧ್ಯಾಯದಲ್ಲಿ ಬರುತ್ತದೆ.
ಮುಂದುವರಿಯುವುದು...
No comments:
Post a Comment