ಒಟ್ಟು ನೋಟಗಳು

Saturday, June 3, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 4
ಪರಕಾಯ ಪ್ರವೇಶ ಮಾಡಿಸಿದ ಗುರುನಾಥರು



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ತಮ್ಮ ಭಕ್ತರ ಮೂಲಕ ಗುರುನಾಥರು ಅದೇನೇನು ಮಾಡಿಸುತ್ತಾರೆ? ಅದು ಆವರೇ ಬಲ್ಲರು. ಬೆಂಗಳೂರಿನ ತಮ್ಮ ಭಕ್ತರೊಬ್ಬರನ್ನು ಖಾಯಿಲೆಯಲ್ಲಿ ಹಾಸಿಗೆಯ ಮೇಲೆ ಮಲಗಿಸಿದ್ದರೂ ಅವರಿಂದ ಆಪರೇಶನ್ ಮಾಡಿಸಿದ ಗುರುನಾಥರ ಚಮತ್ಕಾರವನ್ನು ನಾವಿಂದು ಸತ್ಸಂಗದಲ್ಲಿ ಕೇಳಬಹುದಾಗಿದೆ.

ಗುರುನಾಥರ ಭಕ್ತರ ಮನೆಗೊಬ್ಬ ಭಕ್ತರು ಬರುತ್ತಿದ್ದರು. ಅವರು ಕಿಮ್ಸ್‌ನಲ್ಲಿ ವೈದ್ಯರು. ಒಂದು ಮಗುವಿನ ಜನನದ ಸಂದರ್ಭ ಅದು ಸ್ವಲ್ಪ ಕ್ಲಿಷ್ಟಕರವಾದ ಆಪರೇಶನ್ ಡಾಕ್ಟರ್‌ಗಳಿಗೇ ಸಮಸ್ಯೆಯಾಗಿತ್ತಂತೆ. 

ಖಾಯಿಲೆ ಮಲಗಿದ ತಮ್ಮ ಭಕ್ತನಿಗೆ ಗುರುನಾಥರು  ಆಜ್ಞೆ ಇತ್ತರಂತೆ. “ಪರಕಾಯಪ್ರವೇಶ ಮಾಡಯ್ಯ ನೀನು”- “ಗುರುವೇ ಶಂಕರಾಚಾರ್ಯರು ಅರಿತ ಆ ವಿದ್ಯೆ ನನಗೆಲ್ಲಿ ಬರುತ್ತದೆ?” ಎಂದರು, ಭಯಭೀತರಾಗಿ ಶಿಷ್ಯರು, ಒಂದು ಕ್ಷಣದಲ್ಲಿ ಹಾಸಿಗೆಯ ಮೇಲೆ ಮಲಗಿದ ಆ ವ್ಯಕ್ತಿ (ಶಿಷ್ಯರು) ಪ್ರಜ್ಞೆ ತಪ್ಪಿದರಂತೆ, ಗುರುನಾಥರು ‘ಫಾಲೋಮಿ’ ಎಂದಾಜ್ಞಾಪಿಸಿದರಂತೆ. ಪರಕಾಯ ಪ್ರವೇಶ ಮಾಡಿದ ಆ ವ್ಯಕ್ತಿಗೆ ಏನೇನು ಮಾಡಬೇಕೆಂದು ವೈದ್ಯಕೀಯ ಶಸ್ತ್ರ ಚಿಕಿತ್ಸೆಗಳನ್ನು ಆಜ್ಞಾಪಿಸಿದರು. ಎಲ್ಲ ಸ್ವಲ್ಪ ಸಮಯದಲ್ಲಿ ಮುಗಿಯಿತು. ಆ ಪರಕಾಯ ಪ್ರವೇಶ ಮಾಡಿದ ಭಕ್ತರಿಗೆ ಅರ್ಧ ಗಂಟೆಯಲ್ಲಿ ಉಸಿರುಕಟ್ಟಿದ ಅನುಭವವಾಯ್ತುಂತೆ. “ವಾಪಾಸ್ಸು ಬಾ ನಿನ್ನ ಕೆಲಸ ಮುಗಿದಿದೆ” ಎಂದು ಗುರುನಾಥರ ಆಜ್ಞೆಯಾಯ್ತಂತೆ. ಇವರು ಮತ್ತೆ ತಮ್ಮ ಮನೆಯ ಹಾಸಿಗೆಯ ಮೇಲಿದ್ದವರು ಪ್ರಜ್ಞೆ ಮರಳಿ ಉಸಿರಾಡ ತೊಡಗಿದರಂತೆ.

ಮದನಮೋಹನರ ಮನೆಗೆ ಬರುತ್ತಿದ್ದ ಡಾಕ್ಟರಿಗೆ, ಗುರುನಾಥರೇ ಹೇಳಿ ಮಂತ್ರಾಕ್ಷತೆ ನೀಡಿಸಿ, ಅವರ ಮಗುವನ್ನು ರಕ್ಷಿಸುವ ಹೊಣೆ ಹೊತ್ತಿದ್ದರು. ಈ ಭಕ್ತರ ಮುಖೇನ ಉಳಿಸಿದರು..ಈಗ ಆ ಮಗು ಆರೋಗ್ಯವಾಗಿದೆ. ಐದಾರು ವರ್ಷಗಳದಕ್ಕೆ ನಿತ್ಯ ಗುರುನಾಥರ ಸ್ಮರಣೆಯಲ್ಲಿ ಆ ವೈದ್ಯರ ಕುಟುಂಬ ನೆಮ್ಮದಿಯ ಜೀವನ ನಡೆಸುತ್ತಿದೆ.

ಇಷ್ಟೆಲ್ಲಾ ಪವಾಡಗಳು ಇಲ್ಲಿ ಗುರುನಾಥರು ನಡೆಸುತ್ತಿದ್ದರೂ, ಸದಾ ಹಾಸಿಗೆಯ ಮೇಲೆ ಮಲಗಿರುವ ಇವರಿಗೆ ಪೀಠದಲ್ಲಿ ಡೆಡ್‌ಸ್ಕಿನ್ ಆಗಿದೆ. ಗುರುನಾಥರು ಮೊದಲೇ ತಿಳಿಸಿದ್ದರಂತೆ “ನಿನಗೆ ಕಿಡ್ನಿ ಪ್ರಾಬ್ಲಮ್ ಬರುತ್ತದೆ, ಸ್ಪೈನಲ್‌ಕಾರ್ಡ್ ಪ್ರಾಬ್ಲಮ್ ಬರುತ್ತದೆ. ಇದೆಲ್ಲಾ ನಿನ್ನ ಹಿರಿಯರು ಅನುಭವಿಸಬೇಕಾದ್ದು. ನೀನು ಅನುಭವಿಸುತ್ತೀಯೆ. ಅವರ ಶ್ರಾದ್ದ ಕಾರ್ಯಗಳನ್ನು ಮಾಡಿ ಅವರ ಆಶೀರ್ವಾದ ಪಡಿ ಎಲ್ಲ ಸರಿಯಾಗುತ್ತದೆ” ಎಂದಿದ್ದರಂತೆ. 

ಅದರಂತೆ ಹತ್ತು ವರ್ಷಗಳಾಯ್ತು ನವೆಂಬರ್ ಕಳೆದ ನಂತರ ಎಲ್ಲ ಸರಿಯಾಗುತ್ತದೆ. ಗುರುವಾಕ್ಯ ಎಂದೂ ಸತ್ಯ ಎನ್ನುವ  ಅವರ ಮಾತನ್ನು ಸತ್ಯ ಮಾಡುವುದು ಗುರುನಾಥರಿಗೇನೂ ಬಹು ದೊಡ್ಡ ಕೆಲಸವಲ್ಲವೇ ಅಲ್ಲ. ಜನ್ಮ ಜನ್ಮಾಂತರಗಳ ಹಿಂದೆ ಗುರುವಿನ ಬಂಧುವಾಗಿ, ಗುರುವಿಗಾಗಿ ಹದಿನೈದು ದಿನಗಳ ಉಪವಾಸವಿದ್ದು, ಸಹಕರಿಸಿದ ಈ ಬಂಧುವನ್ನು ರಕ್ಷಿಸುತ್ತಿದ್ದಾರೆಯೇ? ಗುರುನಾಥರೀಗ “ಒಂದು ಲೋಟ ನೀರು ಕುಡಿದರೆ ಏಳು ಜನ್ಮ ಪರ್ಯಂತ ರಕ್ಷಿಸೋ ಹೊಣೆ ನನ್ನ ಮೇಲಿರುತ್ತದಯ್ಯಾ” ಎಂದು ಪದೇ ಪದೇ ಹೇಳುತ್ತಿದ್ದ ಗುರುನಾಥರ ವಾಕ್ಯವಿಲ್ಲಿ ಸತ್ಯದರ್ಶನವಾಗಿದೆ. ಗುರುಬಾಂಧವರೇ ಬೆಂಗಳೂರಿನ ಮದನ್ ಮೋಹನ್ ಅವರ ಮನೆ ಗುರುಸ್ಥಾನವಾಗಿ, ಬರುವ ಅನೇಕ ಭಕ್ತರಿಗೆ ದೇವಾಲಯವೇ ಆಗಿದೆ. ಆದರೆ ಗುರುನಾಥರು ಮದನ್‌ಮೋಹನರಿಗೆ ಈ ಮೊದಲೇ ಎಚ್ಚರಿಸಿದ್ದಾರಂತೆ, “ಯಾರಿಂದ ಏನೂ ಅಪೇಕ್ಷಿಸಬೇಡ ನಿನ್ನ ರಕ್ಷಣೆ ನನ್ನ ಜವಾಬ್ದಾರಿ” ಎಂದು. ಹಾಗೆ ಸಾಗಿದೆಯಲ್ಲ ಅವರ ಜೀವನ.

 ಕೋರ್ಟಿಗೆ ಬಂದು ನಿನ್ನನ್ನು ಕಾಣೋಕೆ ಸಾಧ್ಯವೇನಯ್ಯಾ   

ಮದನ್ ಮೋಹನ್ ಅವರು ಗುರುಕೃಪೆಯಿಂದ ಮಾಸ್ಟರ್ ಆಫ್ ಲಾ ಪಾಸು ಮಾಡಿದರು ಅವರ ಇಚ್ಚೆ ಇದ್ದುದು ಕೋರ್ಟಿಗೆ ಹೋಗಿ ನ್ಯಾಯವಾದಿಗಳಾಗಿ ಬದುಕಬೇಕೆಂದು. ಆದರೆ ವಿಧಿ ವೈಚಿತ್ರವೆಂದರೆ ಹಾಸಿಗೆ ಬಿಟ್ಟು ಏಳಲಾಗದಂತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಶಾಂತವಾಗಿ, ನೆಮ್ಮದಿಯಿಂದ ಹೇಳುವುದೆಂದರೆ “ಅವನಿಚ್ಚೆಯ ಮುಂದೆ ನಮ್ಮದೇನು ನಡೆಯುತ್ತದೆ?   ನಮಗೆ ಯಾವುದು ಹಿತ ಯಾವುದು ಅಹಿತ ಎಂಬುದನ್ನು ಬಲ್ಲವರು ಗುರುನಾಥರು. ಹಾಗಾಗಿ ನ್ಯಾಯ ಮಾರ್ಗದಲ್ಲಿ ನಡೆಸಲು ಏನೇನೆಲ್ಲಾ ನಾಟಕವಾಡುತ್ತಾರೆ. ಒಮ್ಮೆ ನಾನು ಗುರುನಾಥರನ್ನು ಕೇಳಿದ್ದೆ, ‘ಏನಪ್ಪಾ ಇದೆಲ್ಲಾ ಇಷ್ಟೊಂದು ವಿದ್ಯೆಯನ್ನು ಕೊಟ್ಟು ನನ್ನನ್ನು ಹೀಗೆ ಕೂರಿಸಿಬಿಟ್ಟೆಯಲ್ಲಾ? ಎಂದು. ಅದಕ್ಕವರು ಕೊಟ್ಟ ಉತ್ತರವೆಂದರೆ “ ನಿನ್ನಿಂದ ಅನೇಕ ಜನರ ಸೇವೆಯಾಗಬೇಕು, ಸಮಸ್ಯೆಗಳು ಬಗೆಹರಿಯಬೇಕು. ನೀನಿಲ್ಲಿ ಕೋರ್ಟಿನಲ್ಲಿ ಕೋಟು ತೊಟ್ಟು ಕುಳಿತರೆ ಜನ ಅಲ್ಲಿಗೆ ಬರಲು ಸಾಧ್ಯವೇ. ಬೆಂಗಳೂರಿನ ಹೃದಯಸ್ಥಾನ ಇದು. ನೀನಿಲ್ಲಿದ್ದು ಜನರ ಹೃದಯದ ನೋವನ್ನು ಬಗೆಹರಿಸು.” ಎಂದಾಜ್ಞಾಪಿಸಿದರಂತೆ. ಇದು ಸಾಧು ಸಂತರ ಜಾಗವಾಗುತ್ತದೆಂದಿದ್ದಾರೆ. ನನ್ನನ್ನು ಸರಿಗೊಳಿಸಿ ಇನ್ನೂ ಸೇವೆಯನ್ನು ನನ್ನಿಂದ ತೆಗೆದುಕೊಳ್ಳುವೆ ಎಂದಿದ್ದಾರೆ. ನನಗೇನೂ ನೋವಿಲ್ಲ. ಗುರುನಾಥರ ಸ್ಮರಣೆಯಲ್ಲಿ ಆನಂದವಾಗಿದ್ದೇನೆ’ ಎನ್ನುತ್ತಾರೆ.

ಪ್ರಿಯ ಗುರುಬಾಂಧವರೇ, ಗುರುನಾಥರ ಸ್ಮರಣೆ‌ ಇತ್ತ ಶಕ್ತಿ, ಭಕ್ತಿ ಸಾಮರ್ಥ್ಯವನ್ನು ನೋಡಿ ಎಂತಹ ಅಪಾರವಾದುದು? ತಾವು ನೋವಿನಲ್ಲಿದ್ದು ಇತರರ ನೋವನ್ನು ಪರಿಹರಿಸುವ ಅಂತಃಕರಣ. ಇದೇ ಗುರುನಾಥರ ಜೀವನದ ಗುರಿಯೂ ಆಗಿತ್ತಲ್ಲವೇ?

ಸತ್ಸಂಗ ಪ್ರಿಯ ಗುರುಬಾಂಧವರೇ, ಮದನಮೋಹನರ ಸಹನಾ ಶಕ್ತಿ ಎಲ್ಲರಿಗೆ ಮಾರ್ಗದರ್ಶನವಾಗಲಿ. ಇಂತಹ ವಿಚಾರಗಳು, ಗುರುನಾಥರ ಮಹಾನತೆಯನ್ನು, ನಿತ್ಯ ಸತ್ಯತೆಯನ್ನು ಸಾಬೀತು ಪಡಿಸುತ್ತಿವೆ. ಗುರುಬಾಂಧವರಾದ ನಾವೆಲ್ಲಾ ಅವರಿಗಾಗಿ ಆ ಗುರುನಾಥರಲ್ಲಿ ಶೀಘ್ರ ಗುಣಮುಖರಾಗಲು ಪ್ರಾರ್ಥಿಸೋಣ.

ನಾಳಿನ ನಿತ್ಯ ಸತ್ಸಂಗದಲ್ಲಿ ಗುರುನಾಥರ ಮತ್ತಾವ ಲೀಲೆ ಪ್ರಕಟವಾಗುವುದೋ ನಾಳೆಯೂ ನಮ್ಮೊಂದಿಗಿರಿ ವಂದನೆಗಳು.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment