ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 7
ಗುರುಸೇವೆಯ ಸೌಭಾಗ್ಯ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಅಂದು ಪ್ರಸಿದ್ಧವಾದ ಗುರುಮಠ ಒಂದರಲ್ಲಿ ಜರುಗಬೇಕಿದ್ದ ದೊಡ್ಡ ಅವಗಢ ಒಂದು ನೂಲೆಳೆಯಲ್ಲಿ ತಪ್ಪಿತ್ತು. ಪುರಾತನವಾದ ಕಟ್ಟಡವದು. ಸರಿಯಾದ ದೇಖರೇಖೆ ಇಲ್ಲದೆ, ಮಾಡಿನ ಪ್ಲಾಸ್ಟರ್‌ಗಳು ಹಾಗಾಗೇ ಉದುರ ತೂಡಗಿದ್ದವು. ಅಂದು ಮಠದ ಯತಿಗಳು ಆ ಮಠದ ಒಂದು ಭಾಗದಿಂದ ಇತ್ತ ಬರುವಾಗ ದಢಾರ್ ಎಂದು ಛಾವಣಿಯ ಪ್ಲಾಸ್ಟರ್ ಬಿದ್ದು, ಎರಡಿಂಚಿನ ಅಂತರದಲ್ಲಿ ಆ ವೃದ್ಧ ಯತಿಗಳು ಆಗಬೇಕಿದ್ದ ಅವಘಡದಿಂದ ಪಾರಾಗಿದ್ಧರು. ತಪೋನಿಷ್ಟರು, ಜ್ಞಾನವೃದ್ಧರೂ, ವಯೋವೃದ್ಧರೂ ಆದ ಆ ಯತಿಗಳ ವಾಸಸ್ಧಳದ ದುಸ್ಧಿತಿಯನ್ನು ಅರಿತ ಗುರುನಾಥರು ಮಮ್ಮಲ ಮರುಗಿದರು. ಅದೇನು ನೆನೆದರೋ.......ಇಚ್ಚಿಸಿದರೋ, ಸಂಕಲ್ಪಿಸಿದರೋ ದೇವರೇ ಬಲ್ಲ. ಆ ಗುರುಮಠಕ್ಕೆ ಗುರುಬಲ ಕೂಡಿ ಬಂದಿರಬೇಕು. ಪುರಾತನ ಕಟ್ಟಡ ದುರಸ್ತಿಗೊಳ್ಳುವ ಸುಯೋಗ ಬಂದಿತು - ಗುರುನಾಥರಿಂದ.
ಎಂದಿನಂತೆ ಒಂದು ದಿನ ಗುರುನಾಥರ ಮನೆಗೆ ತಮ್ಮ ಬಳಿ ಬರುತ್ತಿದ್ದ ಭಕ್ತರಾದ ಅನಂತಣ್ಣನವರೂ ಅಂದಲ್ಲಿ ಬಂದಿದ್ದರು. ಗುರುನಾಥರು ಇದ್ದಕ್ಕಿದ್ದಂತೆ "ನಡೀರೀ ಸಾರ್ ಅರಸೀಕೆರೆಗೆ ಹೋಗೋಣ" ಎಂದರು. ಇವರೆಲ್ಲಾ ಅರಸೀಕೆರೆಯ ಕಾಂತು ಮಾವನ ಮನೆಯ ಬಳಿ ಬರುವಲ್ಲಿ, ಶಿವಮೊಗ್ಗದ ಗುರುಬಂಧುಗಳು ಅಲ್ಲಿಗೆ ಬಂದು ಸೇರಿದ್ದರು. ಎಲ್ಲಾ ಸೇರಿ ಮಾತನಾಡಿದ ಮೇಲೆ ಗುರುನಾಥರು ಅನಂತಣ್ಣನವರಿಗೆ "ನೀವೂಮ್ಮೆ ಕೂಡಲಿಗೆ ಹೋಗಿ ಯತಿಗಳ ನಿವಾಸದ ಸ್ಥಿತಿಗತಿಗಳನ್ನು ನೋಡಿಕೊಂಡು ಬರುತ್ತಿರಾ ಸಾರ್" ಎಂದು ಕೇಳಿದಾಗ ಅನಂತಣ್ಣನವರಿಗೆ, ಕೂಡಲಿ ಎಲ್ಲಿದೆ ಎಂದು ತಿಳಿಯದಿದ್ದರೂ ‘ಆಯ್ತು ಸಾರ್ ಹೋಗಿ ಬರುತ್ತೇನೆ’ ಎನ್ನುವುದನಿವಾರ‍್ಯವಾಯ್ತು. ಬೆಂಗಳೂರಿಗೆ ಬಂದ ಅನಂತಣ್ಣನವರು ತಮ್ಮ ಮಿತ್ರರ ಬಳಿ ‘ಕೂಡಲಿ’ಯ ಹೆಸರು ಹೇಳಿದಾಗ ‘ನಡೀರಿ ಸಾರ್ ನನಗೆಲ್ಲಾ ಗೊತ್ತು’ ಎಂದು ಅವರ ಮಿತ್ರರು ಅನಂತಣ್ಣನವರನ್ನು ಕಾರಿನಲ್ಲಿ ಕರೆತಂದರು. ಶಿವಮೊಗ್ಗದ ಗುರುಬಂಧುಗಳ ಮನೆಗೆ ಬಂದು ಕೂಡಲಿಗೆ ಹೋಗಬೇಕಿದೆಯಲ್ಲಾ ಎಂದಾಗ, ಊಟ ಮುಗಿಸಿ ರಾತ್ರಿಯೇ ಕೂಡಲಿಗೆ ಬಂದದ್ದಾಯ್ತು. ದೊಡ್ಡ ಕೆಲಸ ಒಂದಕ್ಕೆ ಕೈ ಹಾಕಲು ಗುರುನಾಥರ ಆಜ್ಞೆಯಾಗಿದೆ, ಮಠಕ್ಕೆ ಬಂದರೆ ಅಲ್ಲಿ ಅಂದು ಸಂಕಷ್ಟಹರ ಗಣಪತಿಯ ವ್ರತ ವಿಜೃಂಭಣೆಯಿಂದ ನಡಯುತ್ತಿದೆ. ಇದೇ ಗುರುಲೀಲೆ ಎಂದರೆ. ಬಂದ ಕೆಲಸ, ಹಿಡಿದ ಕೆಲಸ ನಿರ್ವಿಘ್ನವಾಗಿ ಸಾಗಲು ಗುರುನಾಥರು ಒಳಗೆ ಕುಳಿತೇ ಅದೇನೇನು ಪ್ಲಾನ್ ಮಾಡುತ್ತಾರೋ - ಯಾರೂ ಆರಿಯಲಾರರು. ಅದಕ್ಕೆ ಎಲ್ಲವನ್ನೂ ಅವರಿಗೇ ಬಿಟ್ಟು ನಾವು ಕೇವಲ ಸೂತ್ರಧಾರನ ಕೈ ಗೂಂಬೆಯೊಗಿದ್ದರೆ ಎಲ್ಲ ಸುಸೂತ್ರವಾಗುವುದು
ಮಠದಲ್ಲಿ ಸಂಕಷ್ಟಿ ವ್ರತವಾದ ಮೇಲೆ ಅನಂತಣ್ಣ ಮತ್ತವರ ಸಂಗಡಿಗರನ್ನು ಊಟಕ್ಕೆ ಕರೆದರು, ಮಠದಲಿ. ಮೊದಲೇ ಇವರದೆಲ್ಲಾ ಊಟ ಮುಗಿದಿತ್ತು. ವ್ರತದಲ್ಲಿ ಭಾಗಿಯಾದ ಇವರಿಗೆ ಭಾರಿ ಪ್ರಮಾಣದಲ್ಲಿ ಕರಿಗಡಬು, ಮೋದಕಗಳು ಒಂದವು -ಪ್ರಸಾದ ರೂಪವಾಗಿ. ಊಟ ಒಪ್ಪಭಾಗವಾದರೆ ಪಳಹಾರ ಮುಪ್‌ಭಾಗವೆಂಬಂತೆ. ಎಲ್ಲರೂ ರುಚಿಯಾದ ಕರಿಗಡಬನ್ನು ಸವಿಯುತ್ತ, ಅನಂತಣ್ಣ ತಮಷೆ ಮಾಡಿದರು “ಪ್ರಸಾದ ಬಿಡಬಾರದಪ್ಪ ಅದೂ ಗಣಪತಿಯದು, ತೆಗೆದು ಕಟ್ಟಿಟ್ಟುಕೊಳ್ಳಿ - ತುಂಬಾ ರುಚಿಯಾಗಿದೆ” ನಂತರ ಜಗದ್ಗುರುಗಳ ಭೇಟಿಯಾಯಿತು, ಅತ್ಯಂತ ಪ್ರೀತಿಯಿಂದ “ಓಹೋ ನೀವೆಲ್ಲಾ ಬಂದಿದೀರೋ.....ಸಂತೋಷ ...ಸಂತೋಷ... ಮಠದ ಸ್ಥಿತಿ ನೋಡಬೇಕೋ......ಎಲ್ಲಾ ಅವರದ್ದೇ ಅಪ್ಪಾ.....ವೆಂಕಟಾಚಲ ಅವಧೂತರು ಸಮರ್ಥರು... ಏನೂ ಮಾಡಿಸಬಲ್ಲರು....ಹೋಗಿ ಹೋಗಿ ಎಲ್ಲ ನೋಡಿಕೂಂಡು ಬನ್ನಿ”... ಪ್ರೀತಿಯ ಜಗದ್ಗುರುಗಳ ನುಡಿ, ಮತ್ತೆ ಗುರುನಾಥರನ್ನು ನೆನಪಿಸಿತ್ತು. ಎಲ್ಲಿ ಹೋದರೂ ತಮ್ಮ ಭಕ್ತರಿಗೆ ಇಂತಹಾ ಪ್ರೀತಿಯನ್ನು ದೊರಕಿಸಿಕೊಡುವುದೇ ಗುರುನಾಥರ ಒಂದು ವಿಶೇಷ ಕೃಪೆ.
ಮುದುಕಿಯನ್ನು ಸಿಂಗರಿಸಿದಂತೆ :
ಅನಂತಣ್ಣನವರು ಎಲ್ಲವನ್ನೂ ಕೂಲಂಕಶವಾಗಿ ಪರೀಕ್ಷಿಸಿದ ಮೇಲೆ ತೆಗೆದುಕೊಂಡ ನಿರ್ಧಾರವೆಂದರೆ ಶಿಥಿಲಗೊಂಡ ಛಾವಣಿಯ ಪ್ಲಾಸ್ಟರ್ ಗಳನ್ನು ಸರಿ ಮಾಡುವುದಕ್ಕಿಂತ ಮೇಲ್ಭಾಗದಲ್ಲಿ ಪಿಲ್ಲರ್ ಎತ್ತಿ ಒಂದು ಹೊಸ ಮೇಲ್ಚಾವಣಿ ಹಾಕಿದರೆ ವಿಶಾಲವಾದ ಜಾಗವೂ ಸಿಗುತ್ತದೆ, ಕಟ್ಟಡದ ಸುಭದ್ರತೆಯೂ ಆಗುತ್ತದೆ. ಅದು ಬಿಟ್ಟು ಸಣ್ಣ ಪುಟ್ಟ ರಿಪೇರಿ ಮಾಡಿದರೆ ಮುದುಕಿಯನ್ನು ಸಿಂಗರಿಸಿದಂತಾಗುತ್ತದೆ.
ಈ ರೀತಿ ತೀರ್ಮಾನಿಸಿ ಶಿವಮೊಗ್ಗದ ಗುರುಬಾಂಧವರಾದ ಬದರಿ ಭಾಗವತರ ಮನೆಗೆ ಬಂದು ಅವರಬಳಿ “ಸ್ವಾಮಿ ಆ ನನ್ನ ಭಗವಂತ ಗುರುನಾಥರು ಈ ದೇಹದಿಂದ ಏನಾದರೂ ಸೇವೆ ತೆಗೆದುಕೊಳ್ಳಬೇಕೆಂದು ಇಚ್ಚಿಸಿದ್ದೇ ಆದರೆ ಈ ಕೆಲಸಕ್ಕೆ ಬೇಕಾಗುವ ಮರಳು, ಸಿಮೆಂಟು, ಕಬ್ಬಿಣದ ವ್ಯವಸ್ಥೆ ಮಾಡುತ್ತೇನೆ” ಎಂದರು. ಇದು ಅನಂತಣ್ಣನವರ ಮಾತಾಗಿರಲಿಲ್ಲ ಗುರುನಾಥರದ್ದಾಗಿತ್ತು. ಏನು ವಿಚಿತ್ರ ನೋಡಿ “ದೇನೇವಾಲಾ ದೇತಾ ಹೈತೋ ಛಪ್ಪರ್ ಪಾಡಕೆ ದೇತಾ ಹೈ” ಎನ್ನುವ ಮಾತೊಂದಿದೆ. ಹಾಗೆಯೇ "ದೇನೇಕಾ ಸಮಯ್ ಆಗಯಾತೋ ಮನ ಭರ್ ಕೆ ದೇನೇ ತೈಯಾರ್ ರೆಹನಾಹೈ” ಅವನೇ ಎಲ್ಲ ಕೊಡುವಾಗ, ಅವನಿಗೆ ವಾಪಸ್ಸು ನೀಡಲು ನಾವೇಕೆ ಹಿಂಜರಿಯಬೇಕು ಅಲ್ಲವೇ? ಇದು ಕೆಲವರಿಗೆ ಮಾತ್ರಾ ಸಾಧ್ಯ ಅದಕ್ಕೂ ಗುರುವಿನಾಜ್ಞೆ ಬೇಕು.
ಮಾರನೇಯ ದಿವಸ ಶಿವಮೊಗ್ಗದ ಗುರುಬಂಧುಗಳು ಗುರುನಾಥರ ಬಳಿ ನಿಯೋಗ ಹೋಗಿ “ಗುರುವೆ ಅದಾರೋ ಬೆಂಗಳೂರಿನವರಂತೆ. ಮಠದ ದುರಸ್ಥಿ ಬಗ್ಗೆ ಹೀಗೆ ಹೇಳಿ ಹೋಗಿಬಿಟ್ಟರು” ಎಂದು ವರದಿ ತಲುಪಿಸಿದಾಗ, ಎಲ್ಲವರಿತ ಗುರುನಾಥರು “ಆಯ್ತು ನೋಡೋಣ ಗೋಪೀನಾಥರ ಮನೆಗೆ ಹೋಗೋಣವೆಂದು ಅಲ್ಲಿಗೆ ಹೋಗಿ “ಏನ್ರಪ್ಪಾ ಹೀಗೆ ಹೇಳಿ ಹೋಗಿದ್ದಾರೆ ಬೆಂಗಳೂರಿನವರು, ನೀವೂ ಒಂದು ಸಾರಿ ಹೋಗಿ, ನೋಡಿ ತಿಳಿಸಿಬಿಡಿ” ಎಂದರಂತೆ ಎಲ್ಲವರಿತ ಕಪಟನಾಟಕ ಸೂತ್ರಧಾರಿಯಾದ ಗುರುನಾಥರು.
ಗೋಪೀನಾಥರೂ ಅನಂತಣ್ಣನನ್ನು ಬಲ್ಲವರೇ. ಸರಿ ಕೂಡಲಿಗೆ ಹೋದ ಅವರು ಪೌಂಡೇಷನ್‌ನ ಫಿಟ್‌ನೆಸ್ ಬಗ್ಗೆ ಪರೀಕ್ಷಿಸಿ, ಮೇಲೆ ಕಟ್ಟುವುದೇ ಸರಿ ಎಂದು, ನೆಪಮಾತ್ರಕ್ಕೆ ತಮ್ಮ ಅಭಿಪ್ರಾಯವನ್ನು ತಿಳಿಸಿದರಂತೆ, ಎಲ್ಲಾ ನಾಟಕ. ಎಲ್ಲವನ್ನೂ ಮೊದಲೇ ತಾವೇ ನಿರ್ಧರಿಸಿದ್ದರೂ ಮತ್ತಾರದೋ ಮಾತಿನಂತೆ ನಡೆಯುವ ಗುರುನಾಥರ ವಿನೋದಕ್ಕೆ ಇದೊಂದು ಸಾಕ್ಷಿ.
ತಮ್ಮ ಆಪ್ತಶಿಷ್ಯರಿಗೆ ಗುರುಸೇವೆಯ ಅವಕಾಶ ನೀಡಿದ ರೀತಿ ಇದು. ಅಷ್ಟು ದೊಡ್ಡ ಕೆಲಸಕ್ಕೆ ಕೋಟಿಗಟ್ಟಲೆ ಹಣ, ಜನ ಸಹಾಯ.. ಎಲ್ಲ ಒದಗಿ ಬಂದದ್ದು ವಿಚಿತ್ರ. ಪ್ರಿಯ ಸತ್ಸಂಗಾಭಿಮಾನಿ ಗುರುಬಾಂಧವರೇ, ನಾಳೆಯೂ ನಮ್ಮೊಂದಿಗಿರಿ ಗುರುವಿನ ಪರೀಕ್ಷೆಗಳು, ಚಮತ್ಕಾರಗಳು, ಆಪತ್ತನ್ನು ಸೃಷ್ಟಿಸಿ ಅದರಿಂದ ತಮ್ಮ ಭಕ್ತರನ್ನು ಪಾರು ಮಾಡುವ ಗುರುವಿನ ಲೀಲಾಮೃತವನ್ನು ಸವಿಯೋಣ.....ಧನ್ಯರಾಗೋಣ. ನಾಳೆಯೂ ಬರುವಿರಲ್ಲ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment