ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 8
ವಿಜಯದಶಮಿ ಒಳಗೆ ಒಂದು ಮೌಲ್ಡಿಂಗ್ ಕಾಣುತ್ತೆ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಶಿಷ್ಯದ್ವಯರೂ, ಮಿತ್ರದ್ವಯರೂ ಆದ ಇಬ್ಬರು ಗುರುಬಾಂಧವರನ್ನು ಕೂಡಲಿ ಮಠವೆಂಬ ಬಂಡಿಗೆ, ಎರಡು ಎತ್ತುಗಳನ್ನಾಗಿ ಹೂಡಿ, ಮರೆಯಲ್ಲಿ ತಾವು ಬಂಡಿ ನಡೆಸಿ ಅತ್ಯಂತ ಸುವ್ಯವಸ್ಥಿತ ರೀತಿಯಲ್ಲಿ ಅತಿ ಶೀಘ್ರವಾಗಿ ಗುರುಮಠವನ್ನು ಕಟ್ಟಿದ ಗುರುಲೀಲೆಯೇ ಇಂದಿನ ನಿತ್ಯಸತ್ಸಂಗದ ವಿಷಯ.
ಕೂಡಲಿಯ ಮಠದ ಕೆಲಸಕ್ಕೆ ಕೈಹಾಕಿದ ಮತ್ತೊಬ್ಬ ಶಿಷ್ಯರಿಗೆ, ಮೊದಲೇ ಒಪ್ಪಿಕೊಂಡ ಎರಡು ಮೂರು ಕೆಲಸಗಳ ಬದ್ಧತೆ ಇದ್ದಿತಂತೆ. ಆಯುಧ ಪೂಜೆಗೆ ಇನ್ನು ಹದಿನೆಂಟು ದಿನವಿದೆ. ಮಠದ ಪೌಂಡೇಷನ್ ಭದ್ರತೆ ನೋಡಿ ಕೆಲಸ ಮಾಡಲು ಒಪ್ಪಿದ ಗೋಪಣ್ಣ “ಅಣ್ಣ ಆಯುಧ ಪೂಜೆ, ವಿಜಯದಶಮಿ ಎಲ್ಲಾ ಮುಗಿಸಿಕೊಂಡು ಮಠದ ಕೆಲಸ ಪ್ರಾರಂಭಿಸೋಣ” ವೆಂದು ಹೇಳಿದಾಗ - ಅನಂತಣ್ಣ ತಮ್ಮ ಊರಿಗೆ ತೆರಳಿದರು. ಇದಾದ ನಂತರ ಸಕ್ಕರಾಯಪಟಣ್ಣಕ್ಕೆ ಬಂದ ಗೋಪೀನಾಥರು ಗುರುನಾಥರಿಗೆ ತಾವು ಆನಂತರ ಕೆಲಸ ಪ್ರಾರಂಭಿಸಲಿರುವುದನ್ನು ತಿಳಿಸಿದಾಗ, ಗುರುನಾಥರು “ಯಾಕೋ ನನಗೆ ವಿಜಯದಶಮಿಯೊಳಗೆ ಒಂದು ಮೌಲ್ಡಿಂಗ್ ಆಗಬಹುದು ಎಂದು ಕಾಣುತ್ತದೆ” ಎಂದುಬಿಟ್ಟರಂತೆ ಗುರುವಾಕ್ಯಕ್ಕೆ ಹುಸಿ ಉಂಟೆ?
ಗೋಪೀನಾಥರು ಚಿಕ್ಕಮಗಳೂರಿಗೆ ಬಂದರು. ಅವರ ಕ್ಲೈಂಟ್ ಒಬ್ಬರು ಬಂದವರೆ ‘ಅಣ್ಣಾವರೆ ನಮ್ಮ ಬಿಲ್ಡಿಂಗ್ ಕೆಲಸ ಮಾಡಬೇಕಿತ್ತಲ್ಲ, ಸ್ವಲ್ಪ ಹಣದ ಅಡಚಣೆಯಾಗಿದೆ, ಒಂದೆರೆಡುಮೂರು ತಿಂಗಳು ಬೇಕು, ಹಣ ಜೋಡಿಸಿಕೊಂಡು ಕೆಲಸ ಪ್ರಾರಂಭಿಸೋಣ” ಎಂದರಂತೆ. ಕೆಲಸದ ಒತ್ತಡವಿಳಿಸಿದರೇನೋ ಗುರುನಾಥರು. ಗುರುಮಠದ ಕೆಲಸ ಮಾಡಲು ಕೂಡಲೇ ಗೋಪೀನಾಥರು ಬೆಂಗಳೂರಿಗೆ ಪೋನಾಯಿಸಿದರು “ಗುರುನಾಥರ ಮನಸ್ಸಿನಂತೆ ನಾವೀಗಲೇ ಮಠದ ಕೆಲಸ ಶುರುಮಾಡೋಣ ಬನ್ನಿ” ಎಂದು. ಯಾವುದೇ ತಯಾರಿ ಇಲ್ಲದೆ ಗುರು ಕೆಲಸ ಪ್ರಾರಂಭಿಸುವ ಸಂದರ್ಭವೇನೋ ಬಂತು. ದುಡ್ಡು ಬೇಕಲ್ಲ. ಅನಂತಣ್ಣನವರು ತೊಡಗಿಸಿದ ಒಂದು ಚೀಟಿಯ ಕೈ ಇತ್ತಂತೆ. ತಮ್ಮ ಮಿತ್ರರಿಗೆ ಪೋನು ಮಾಡಿದ ಅನಂತಣ್ಣ “ಒಂದು ಗುರು ಕೆಲಸವಾಗಬೇಕಿದೆ, ನನಗೆ ಅರ್ಜೆಂಟ್ ಹಣಬೇಕು. ಒಳ್ಳೆಯ ಮನಸ್ಸಿನಲ್ಲಿ ನನ್ನ ಹೆಸರು ಬರೆದು ಹಾಕಿ....ನನ್ನ ಚೀಟಿಯನ್ನೇ ಗುರುನಾಥರು ಎತ್ತಿಸುತ್ತಾರೆ”. ಅಂದದ್ದು ಹಾಗೆಯೇ ಆಯಿತಂತೆ. ಗುರುಕೃಪೆಯಿಂದ ಎಲ್ಲಾ ಸದಸ್ಯರ ಹೆಸರು ಬರೆದ ಚೀಟಿಯನ್ನು ಹಾಕಿ ಕಲಕಿ ಒಂದು ಚೀಟಿ ಎತ್ತುವುದು. ಹೆಸರು ಬಂದವರಿಗೆ ಹಣ ನೀಡುವ ಪದ್ದತಿಯ ಆ ಚೀಟಿಯಲ್ಲಿ ಅನಂತಣ್ಣನವರ ಹೆಸರೇ ಬಂದಿತ್ತು. ಸಂಜೆಯ ಒಳಗೆ ಅನಂತಣ್ಣನವರ ದುಡ್ಡು ಅವರ ಕೈ ಸೇರಿತ್ತು. ಕೂಡಲೇ ಕೂಡಲಿಗೆ ಪ್ರಯಾಣ ಬೆಳೆಸಿದರು. ಶಿವಮೊಗ್ಗದ ಗುರುಬಂದುಗಳ ಸಹಾಯದಿಂದ ಮಂಜಣ್ಣ ಎಂಬುವ ಸಜ್ಜನರು ಸಿಕ್ಕರು, ಜೆಲ್ಲಿ ಮರಳು ತರಿಸುವ ಜವಾಬ್ದಾರಿ ಹೊತ್ತರು. ಸಿಮೆಂಟ್ ಕಬ್ಬಿಣಕ್ಕೆ ಸಿದ್ಥತೆಯಾಗಿತ್ತು. ಮತ್ತೆ ಗುರುಕೆಲಸಕ್ಕೆ ಅಡ್ಡಿ ಎಲ್ಲಿ? “ನಿನ್ನನೇ ನಂಬಿದೆ ಗುರುನಾಥನೆ.... ನೀನೇ ಕಾಪಾಡಿದೆ” ಎಂಬಂತೆ ಕಾರ‍್ಯ ಪ್ರಾರಂಭವಾಯ್ತು. ಪರಮಾತ್ಮನ ಕಾರ‍್ಯವೆಂದರೆ, ಗುರುನಾಥರು ಆಜ್ಞೆ ಮಾಡಿದರೆಂದರೆ ಅದೆಷ್ಟು ದೊಡ್ಡ ಕೆಲಸವಾದರೇನು? ಹೂವಿನ ಸರವೆತ್ತಿದಂತೆ ನಡೆದು ಹೋಗುತ್ತದೆ. ಅನಂತಣ್ಣನವರೆನ್ನುತ್ತಾರೆ “ನಲವತ್ತೈದು ಚದುರದ ಕೆಲಸ ಸಾರ್.... ಅದೇನು ಅಷ್ಟು ಸುಲಭದ್ದಲ್ಲ, ಸಣ್ಣ ಪುಟ್ಟದ್ದಲ್ಲ. ಕೂಡಲಿಯಂತಹ ಒಂದು ಪರ‍್ಯಾಯ ದ್ವೀಪದ ಊರಲ್ಲಿ - ಎಲ್ಲಾ ವಸ್ತುಗಳು, ಕಾರ್ಮಿಕರು ಎಲ್ಲ ಸಿಕ್ಕು, ಮಂಜುನಾಥರಂತಹ ಉಪಕಾರಿಗಳೂ ದೊರೆತು ವಿಜಯದಶಮಿ ಇನ್ನೂ ಎರಡು ದಿನವಿದೆ ಎಂಬಷ್ಟರಲ್ಲಿ ಮೌಲ್ಡಿಂಗ್ ಕೆಲಸ ಮುಗಿದೇ ಹೋಯ್ತು. ಅದು ಹೇಗಾಯ್ತು, ಎಂತಾಯ್ತು ಎಂಬುದಂತೂ ನನಗೇ ಇಂದೂ ಊಹಿಸಿಕೊಳ್ಳಲೂ ಅಸಾಧ್ಯ. ಆದರೆ ಗುರುನಾಥರ ಮಾತು “ವಿಜಯದಶಮಿ ಒಳಗೆ ನನಗೆ ಒಂದು ಮೌಲ್ಡಿಂಗ್ ಕಾಣಿಸ್ತಿದೆಯಲ್ಲಾ ಸಾರ್” ಎಂದವರಾಡಿದ್ದನ್ನು, ಅವರೇ ನೆಡೆಸಿಕೊಳ್ಳುತ್ತಾರೆಂಬ ನಂಬಿಕೆ ನನಗಿತ್ತು. ಅದ್ಯಾರ‍್ಯಾರ ಹೃದಯದಲ್ಲಿ ಗುರುನಾಥರು ಕುಳಿತು ಪ್ರೇರೇಪಿಸಿದರೋ, ಕಾರ‍್ಯ ನೆಡೆಸಿದರೋ? ಅದು ಅವರೇ ಬಲ್ಲರು” ಎನ್ನುವಾಗ ಅನಂತಣ್ಣನವರ ಮುಖದಲ್ಲಿ ಗುರುಸಾಮರ್ಥ್ಯದ ದೃಢ ನಂಬಿಕೆ ಎದ್ದು ಕಾಣುತ್ತಿತ್ತು. ಒಂದು ಹಂತದ ಕೆಲಸವೇನೋ ಮುಗಿಯಿತು. ಗುರುನಾಥರೇ ನಿಂತು ನೆಡೆಸಿದರೆಂಬ ತೃಪ್ತಿ ನಮ್ಮ ಅನಂತಣ್ಣನವರಲ್ಲಿ ಗೋಪೀನಾಥರವರಲ್ಲಿ ನೆಲೆಸಿತ್ತು. ಸ್ವಲ್ಪ ಉಸಿರಾಡಬಹುದೆನಿಸಿ, ನೆಮ್ಮದಿಯ ಉಸಿರು ತೆಗೆದುಕೊಂಡರು. ಕೆಲಸ ಇನ್ನೂ ಬಹಳಷ್ಟಿದೆ. ಕಾಯುವ ಗುರು ನಿರಂತರ ಕಾಯುತ್ತಾನೆ, ಆದರೆ ಪರೀಕ್ಷಿಸುವ ಗುರುವಿನ ಪರೀಕ್ಷೆಗಳನ್ನು ದಾಟುವುದು ಅಷ್ಟು ಸುಲಭವಲ್ಲ. ಏಕೆಂದರೆ ಆ ಪರೀಕ್ಷೆಗಳು ಒಂದೆರಡು ತೆರನಾದವುಗಳಲ್ಲ. ನಮ್ಮ ಊಹೆಗೂ ಮೀರಿದದವುಗಳು. ಎಲ್ಲ ಆಗಿಬಿಟ್ಟಿತು, ಎಲ್ಲ ಸಿದ್ಧವಾಗಿದೆ ಎಂದು ಕಾರ್ಯೋನ್ಮುಖರಾದವರಿಗೆ ಮತ್ತಾವುದೋ, ಕನಸು ಮನಸಿನಲ್ಲಿ ನೆನೆಸದ ಸಮಸ್ಯೆ ಧಡೀರ್ ಎಂದು ಉದ್ಭವಿಸಿದರೆ ಮಾಡುವುದೇನು? ಭಯಕೃದ್ ಭಯನಾಶಕನವನೇ’ ಎಂದು ನಂಬಿದರೂ ತತ್ಕಾಲದಲ್ಲಿ ತಾಕಲಾಟವನ್ನುಂಟುಮಾಡಿ, ನೋಡಿ ನಗುವ ಆ ಸಮರ್ಥನ ಎದುರಾರು? ನಾವು ಅಸಮರ್ಥರಾಗುತ್ತೇವೆ. ಲಾರಿ ಸ್ಟ್ರೈಕ್‌ನಿಂದಾಗಿ ಅಂದು ಬರುವ ಸಿಮೆಂಟ್ ಲಾರಿ ಬರುವುದಿಲ್ಲವೆಂಬ ಸುದ್ದಿ ಬಂದಾಗ, 80 ರಿಂದ 100 ಜನ ಕೆಲಸಕ್ಕ ಬಂದು ನಿಂತಾಗ... ಮುಂದೇನು ಮಾಡಬೇಕೆಂದೇ ದಿಕ್ಕು ತೋಚದಾದಾಗ...ಏನಾದೀತು? ಗುರುನಾಥರು ಹೇಗೆ ಪಾರು ಮಾಡಿದರು? ಎಂಬೆಲ್ಲಾ ವಿಚಾರವರಿಯಲು..... ಪ್ರಿಯ ಗುರುಬಾಂಧವರೇ ನಮ್ಮೊಂದಿಗೆ ನಾಳೆಯೂ ತಪ್ಪದೆ ಬನ್ನಿ.. ಗುರುಕರುಣೆಯ ಸತ್ಯಘಟನೆಯನ್ನಾಲಿಸಿ.....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment