ಗುರುನಾಥ ಗಾನಾಮೃತ
ತೂಗಿರೇ ಗುರುನಾಥನ ತೂಗಿರೇ ಅವಧೂತನ
ರಚನೆ: ಅಂಬಾಸುತ
ತೂಗಿರೇ ಗುರುನಾಥನ ತೂಗಿರೇ ಅವಧೂತನ
ತೂಗಿರೇ ಸಖರಾಯಪುರವಾಸನಾ
ತೂಗಿರೇ ಶಾರದಾ ಶ್ರೀನಿವಾಸನ ಸುತನಾ
ತೂಗಿರೇ ಶ್ರೀವೇಂಕಟಾಚಲನಾ ||ಪ||
ಆರನು ಮೀರಿದವನಾ ಆನಂದ ರೂಪನಾ
ಅಗಣಿತಗುಣ ಮಹಿಮನ ತೂಗೀರೇ
ಅರಳಿದ ಮಲ್ಲಿಗೆಯಂಥಾ ಮುದ್ದು ಮುಖದವನಾ
ಅಮೃತದಾಯಕನಾ ತೂಗೀರೇ||೧||
ಪರಮಾತ್ಮನನು ತೋರಿ ಪರಮಾನಂದವ ನೀಡೋ
ಪರಮ ಪಾವನನಾ ತೂಗೀರೇ
ಪದಕೆ ನಿಲುಕಾದವನಾ ಪೂರ್ಣಸ್ವರೂಪನಾ
ಪರಶಿವ ಅವತಾರಿಯ ತೂಗೀರೇ ||೨||
ದಾರಿದ್ರ್ಯ ಕಳೆವವನಾ ದುರಿತಾ ವಿನಾಶನಾ
ಅನಾಥ ನಾಥನಾ ತೂಗೀರೇ
ಕಂಬನಿಯಾ ಒರೆಸೀ ಕರುಣಾಮೃತ ಸುರಿಸೀ
ಕನಿಕರಿಸುವವನಾ ತೂಗೀರೇ ||೩||
ಗುರುಮಹಿಮೆಯ ಹೇಳೀ ಗುರುರೂಪ ತೋರೀ
ಕತ್ತಲೆಯಾ ಕಳೆವವನಾ ತೂಗೀರೇ
ಗತಿಸ್ಥಿತಿಗೆ ಕಾರಣನಾದಾ ಗುರುವರನಾ
ಗುಣಮಹಿಮೆಯ ಪಾಡೀ ತೂಗೀರೇ ||೪||
ಶಿಷ್ಟಪರಿಪಾಲಕನಾ ತೂಗೀರೇ
ಭಿನ್ನತನ ಸಿಟ್ಟವನಾ ಬಿರುದುಗಳಾ ಬಿಟ್ಟವನಾ
ಭವಪಾಶ ಹರಿಸುವವನಾ ತೂಗೀರೇ ||೫||
ಚಿನುಮಯಾತ್ಮಕನಾ ಚಿದ್ಘನರೂಪನಾ
ಚಿನ್ನಾದ ತೊಟ್ಟಿಲೊಳೂ ತೂಗೀರೇ
ಮುತ್ತಿನಂಥಾ ಮಾತುಗಳನಾಡುವವನಾ
ಮುತ್ತಿನಾ ತೊಟ್ಟಿಲೊಳೂ ತೂಗೀರೇ ||೬||
ಸ್ವಾತ್ಮಾರಾಮನ ರಾಕೇಂದುವದನನಾ
ರನ್ನದಾ ತೊಟ್ಟಿಲೊಳೂ ತೂಗೀರೇ
ಮಂಗಳರೂಪನಾ ಮಂಗಳಕಾರನಾ
ಮಾಣಿಕ್ಯದ ತೊಟ್ಟಿಲೊಳೂ ತೂಗಿರೇ ||೭||
ಅಂಬಾಸುತನಾ ಅನವರತಾ ಪೋಷಿಸುವವನಾ
ಅತಿಷಯ ಪ್ರೇಮದಿ ತೂಗೀರೇ
ಕೃಷ್ಣಯೋಗೀಂದ್ರನ ಅವತಾರಿಕನಾದವನಾ
ಕಿಂಕರರೆಲ್ಲರೂ ತೂಗೀರೇ ||೮||
No comments:
Post a Comment